Bible 2 India Mobile
[VER] : [KANNADA]     [PL]  [PB] 
 <<  1 Thessalonians 1 >> 

1ತಂದೆಯಾದ ದೇವರಲ್ಲಿಯೂ ಕರ್ತನಾದ ಯೇಸು ಕ್ರಿಸ್ತನಲ್ಲಿಯೂ ಇರುವ ಥೆಸಲೋನಿಕದ ಸಭೆಗೆ ಪೌಲ ಸಿಲ್ವಾನ, ತಿಮೊಥೆಯ ಎಂಬ ನಾವು ಬರೆಯುವುದೇನಂದರೆ, ನಿಮಗೆ ಕೃಪೆಯೂ ಶಾಂತಿಯೂ ಉಂಟಾಗಲಿ.

2-3 ನಾವು ನಂಬಿಕೆಯ ಫಲವಾದ ನಿಮ್ಮ ಕಾರ್ಯವನ್ನೂ, ಪ್ರೀತಿಪೂರ್ವಕವಾದ ನಿಮ್ಮ ಪ್ರಯಾಸವನ್ನೂ ಮತ್ತು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೇಲಿನ ನೀವಿಟ್ಟಿರುವ ಅಚಲವಾದ ನಿರೀಕ್ಷೆಯನ್ನೂ ನಮ್ಮ ತಂದೆಯಾದ ದೇವರ ಮುಂದೆ ಎಡೆಬಿಡದೆ ಜ್ಞಾಪಕ ಮಾಡಿಕೊಂಡು, ನಾವು ಪ್ರಾರ್ಥಿಸುವಾಗಲೆಲ್ಲಾ ನಿಮ್ಮನ್ನು ಸ್ಮರಿಸುತ್ತಾ, ನಿಮ್ಮೆಲ್ಲರಿಗಾಗಿ ದೇವರಿಗೆ ಯಾವಾಗಲೂ ಕೃತಜ್ಞತಾಸ್ತುತಿ ಮಾಡುತ್ತೇವೆ.

4ದೇವರಿಂದ ಪ್ರೀತಿಸಲ್ಪಟ್ಟಿರುವ ಸಹೋದರರೇ, ಆತನು ನಿಮ್ಮನ್ನು ಆರಿಸಿಕೊಂಡನೆಂಬದನ್ನೂ ಬಲ್ಲೆವು.

5ಯಾಕೆಂದರೆ ನಾವು ನಿಮ್ಮಲ್ಲಿ ಸಾರಿದ ಸುವಾರ್ತೆಯು ಬರೀ ಮಾತಾಗಿ ಬಾರದೆ ಶಕ್ತಿಯೊಡನೆಯೂ ಪವಿತ್ರಾತ್ಮದೊಡನೆಯೂ ಮತ್ತು ಬಹು ನಿಶ್ಚಯದೊಡನೆಯೂ ಬಂತೆಂಬುದನ್ನು ನೀವೂ ಬಲ್ಲಿರಿ. ಯಾಕೆಂದರೆ ನಾವು ನಿಮ್ಮಲ್ಲಿದ್ದುಕೊಂಡು ನಿಮಗೋಸ್ಕರ ಹೇಗೆ ವರ್ತಿಸಿದ್ದೇವೆಂಬುದನ್ನು ನೀವು ಗಮನಿಸಿದ್ದೀರಿ.

6ಇದಲ್ಲದೆ ನೀವು ಬಹಳ ಹಿಂಸೆಯನ್ನು ಅನುಭವಿಸಬೇಕಾಗಿ ಬಂದಿದ್ದರೂ ಪವಿತ್ರಾತ್ಮನಿಂದುಂಟಾದ ಆನಂದದೊಡನೆ ದೇವರ ವಾಕ್ಯವನ್ನು ಅಂಗೀಕರಿಸಿ, ನಮ್ಮನ್ನು ಮತ್ತು ಕರ್ತನಾದ ಯೇಸುವನ್ನು ಅನುಸರಿಸುವವರಾದಿರಿ.

7ಹೀಗೆ ಮಕೆದೋನ್ಯದಲ್ಲಿಯೂ ಅಖಾಯದಲ್ಲಿಯೂ ಕ್ರಿಸ್ತನನ್ನು ನಂಬುವವರೆಲ್ಲರಿಗೆ ಮಾದರಿಯಾದಿರಿ.

8ಕರ್ತನ ವಾಕ್ಯವು ನಿಮ್ಮಿಂದಲೇ ಮಕೆದೋನ್ಯದಲ್ಲಿಯೂ ಅಖಾಯದಲ್ಲಿಯೂ ಘೋಷಿತವಾದದಲ್ಲದೆ, ದೇವರ ಮೇಲೆ ನೀವು ಇಟ್ಟಿರುವ ನಂಬಿಕೆಯು ಎಲ್ಲಾ ಸ್ಥಳಗಳಲ್ಲಿಯೂ ಪ್ರಸಿದ್ಧವಾಯಿತು. ಆದುದರಿಂದ ಆ ವಿಷಯದಲ್ಲಿ ನಾವು ಏನನ್ನೂ ಹೇಳಬೇಕಾಗಿಲ್ಲ.

9ನಾವು ನಿಮ್ಮಲ್ಲಿಗೆ ಬಂದಾಗ ನೀವು ನಮ್ಮನ್ನು ಹೇಗೆ ಸ್ವಾಗತಿಸಿದಿರಿ; ನೀವು ವಿಗ್ರಹಗಳನ್ನು ತೊರೆದು ದೇವರ ಕಡೆಗೆ ತಿರುಗಿಕೊಂಡು ಜೀವಸ್ವರೂಪನಾದ ಸತ್ಯ ದೇವರನ್ನು ಸೇವಿಸುವವರಾಗಿದ್ದೀರಿ

10ಮತ್ತು ಆತನು ಸತ್ತವರೊಳಗಿಂದ ಎಬ್ಬಿಸಿದ, ಆಕಾಶದೊಳಗಿಂದ ಬರಲಿಕ್ಕಿರುವಂಥ ಆತನ ಕುಮಾರನನ್ನು ಕಾದುಕುಳಿತಿರುವಿರೆಂತಲೂ ಆ ಜನರೇ ಹೇಳುತ್ತಾರೆ. ಈ ಯೇಸು ಮುಂದೆ ಬರುವ ದೈವಕೋಪದಿಂದ ನಮ್ಮನ್ನು ತಪ್ಪಿಸುವಾತನು.



 <<  1 Thessalonians 1 >> 


Bible2india.com
© 2010-2025
Help
Single Panel

Laporan Masalah/Saran