Bible 2 India Mobile
[VER] : [KANNADA]     [PL]  [PB] 
 <<  Zechariah 8 >> 

1ಸೇನಾಧೀಶ್ವರ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು.

2ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ, <<ಚೀಯೋನಿಗೆ ಅವಮಾನವಾಯಿತಲ್ಲಾ ಎಂದು ಬಹಳವಾಗಿ ಕುದಿಯುತ್ತೇನೆ. ಅತಿರೋಷಗೊಂಡು ಕುದಿಯುತ್ತೇನೆ.>>

3ಯೆಹೋವನು ಇಂತೆನ್ನುತ್ತಾನೆ, <<ನಾನು ಚೀಯೋನಿಗೆ ಹಿಂದಿರುಗಿದ್ದೇನೆ, ಯೆರೂಸಲೇಮಿನ ಮಧ್ಯದಲ್ಲಿ ವಾಸಿಸುವೆನು; ಆಗ ಯೆರೂಸಲೇಮ್ ಸತ್ಯದ ಪಟ್ಟಣವೆಂದು ಅನ್ನಿಸಿಕೊಳ್ಳುವುದು, ಸೇನಾಧೀಶ್ವರ ಯೆಹೋವನ ಪರ್ವತಕ್ಕೆ ಪರಿಶುದ್ಧ ಪರ್ವತವೆಂಬ ಹೆಸರು ಬರುವುದು.>>

4ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, <<ಇನ್ನು ಮುಂದೆ ಯೆರೂಸಲೇಮಿನ ಚೌಕಗಳಲ್ಲಿ ಮುದುಕ ಮತ್ತು ಮುದುಕಿಯರು ಸೇರುವರು. ಅತಿ ವೃದ್ಧಾಪ್ಯದ ನಿಮಿತ್ತ ಪ್ರತಿಯೊಬ್ಬ ಮುದುಕನ ಕೈಯಲ್ಲಿ ಊರುಗೋಲಿರುವುದು.

5ಆ ಪಟ್ಟಣದ ಚೌಕಗಳಲ್ಲಿ ಆಟವಾಡುವ ಬಾಲಕ ಮತ್ತು ಬಾಲಕಿಯರು ತುಂಬಿಕೊಂಡಿರುವರು.>>

6ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, <<ಆ ಕಾಲದ ಸ್ಥಿತಿಯು ಈ ಜನಶೇಷದವರ ದೃಷ್ಟಿಗೆ ಅತ್ಯಾಶ್ಚರ್ಯವಾದರೂ ನನ್ನ ದೃಷ್ಟಿಗೆ ಅತ್ಯಾಶ್ಚರ್ಯವೋ?>> ಇದು ಸೇನಾಧೀಶ್ವರ ಯೆಹೋವನು ನುಡಿ.

7ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, <<ಇಗೋ, ನಾನು ನನ್ನ ಜನರನ್ನು ಪೂರ್ವದಿಕ್ಕಿನ ದೇಶದಿಂದಲೂ, ಪಶ್ಚಿಮದಿಕ್ಕಿನ ದೇಶದಿಂದಲೂ ಪಾರುಮಾಡಿ ಬರಗೊಳಿಸುವೆನು,

8ಅವರು ಯೆರೂಸಲೇಮಿನೊಳಗೆ ವಾಸಿಸುವರು; ಸತ್ಯಸಂಧತೆಯಿಂದಲೂ ಮತ್ತು ಸದ್ಧರ್ಮದಿಂದಲೂ ಅವರು ನನಗೆ ಪ್ರಜೆಯಾಗಿರುವರು. ಹಾಗೆಯೇ ನಾನು ಅವರಿಗೆ ದೇವರಾಗಿರುವೆನು.>>

9ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, <<ದೇವಾಲಯವನ್ನು ಕಟ್ಟುವ ಉದ್ದೇಶದಿಂದ ಸೇನಾಧೀಶ್ವರ ಯೆಹೋವನ ಆ ಮಂದಿರದ ಅಸ್ತಿವಾರವನ್ನು ಹಾಕಿದ ಕಾಲದಲ್ಲಿಯೂ ಇದ್ದ ಪ್ರವಾದಿಗಳ ಬಾಯಿಂದ ಈ ಮಾತುಗಳನ್ನು ಈಗ ಕೇಳುವವರೇ, ನಿಮ್ಮ ಕೈಗಳು ಬಲಗೊಳ್ಳಲಿ!

10ಆ ಕಾಲಕ್ಕೆ ಮುಂಚೆ ಮನುಷ್ಯನಿಗಾಗಲಿ, ಪಶುವಿಗಾಗಲಿ ದುಡಿತದಿಂದ ಏನೂ ಜೀವನವಾಗುತ್ತಿರಲಿಲ್ಲ; ಹೋಗಿ ಬರುವವರಿಗೆ ಶತ್ರುಗಳ ದೆಸೆಯಿಂದ ಭಯವಿಲ್ಲದೆ ಇರಲಿಲ್ಲ; ಒಬ್ಬರನೊಬ್ಬರು ಎದುರಿಸುವಂತೆ ಎಲ್ಲರನ್ನೂ ಪ್ರೇರೇಪಿಸುತ್ತಿದ್ದರು.

11ಇಂದಿನಿಂದಲೋ ಈ ಜನಶೇಷದವರ ವಿಷಯದಲ್ಲಿ ನಾನು ಪೂರ್ವಕಾಲದಲ್ಲಿ ಇದ್ದಂತೆ ಇರುವುದಿಲ್ಲ>> ಇದು ಸೇನಾಧೀಶ್ವರನಾದ ಯೆಹೋವನ ನುಡಿ.

12<<ನೆಮ್ಮದಿಯ ಬೆಳೆಯಾಗುವುದು; ದ್ರಾಕ್ಷಾಲತೆಯು ಹಣ್ಣುಬಿಡುವುದು, ಭೂಮಿಯು ಧಾನ್ಯವನ್ನೀಯುವುದು, ಆಕಾಶವು ಇಬ್ಬನಿಯನ್ನು ಸುರಿಸುವುದು; ಈ ಜನಶೇಷದವರು ಇವುಗಳನ್ನೆಲ್ಲಾ ಅನುಭವಿಸುವಂತೆ ಅನುಗ್ರಹಿಸುವೆನು.

13ಯೆಹೂದ ಕುಲವೇ, ಇಸ್ರಾಯೇಲ್ ವಂಶವೇ, ನಿಮ್ಮ ಹೆಸರು ಹೇಗೆ ಜನಾಂಗಗಳಲ್ಲಿ ಶಾಪದ ಮಾತಾಗಿ ಸಲ್ಲುತ್ತಿತ್ತೋ, ಹಾಗೆಯೇ ನಾನು ನಿಮ್ಮನ್ನು ರಕ್ಷಿಸಿ ಆಶೀರ್ವದಿಸುವೆನು; ಹೆದರಬೇಡಿರಿ, ನಿಮ್ಮ ಕೈಗಳು ಬಲಗೊಳ್ಳಲಿ!>>

14ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, <<ನಿಮ್ಮ ಪಿತೃಗಳು ನನಗೆ ಸಿಟ್ಟೆಬ್ಬಿಸಿದಾಗ ನಿಮಗೆ ಕೇಡುಮಾಡಬೇಕೆಂದು ನಾನು ಕರುಣೆಯಿಲ್ಲದೆ ಸಂಕಲ್ಪಸಿದಂತೆ

15ಈ ಕಾಲದಲ್ಲಿಯೂ ಯೆರೂಸಲೇಮಿಗೂ, ಯೆಹೂದ ಕುಲಕ್ಕೂ ಮೇಲುಮಾಡಬೇಕೆಂದು ಹೊಸ ಸಂಕಲ್ಪ ಮಾಡಿಕೊಂಡಿದ್ದೇನೆ; ಹೆದರಬೇಡಿರಿ. ಇದು ಸೇನಾಧೀಶ್ವರನಾದ ಯೆಹೋವನು ನುಡಿ.

16<<ನೀವು ಮಾಡಬೇಕಾದ ಕಾರ್ಯಗಳು ಇವೇ. ಪ್ರತಿಯೊಬ್ಬನೂ ತನ್ನ ನೆರೆಯವನ ಸಂಗಡ ನಿಜವನ್ನೇ ಆಡಲಿ; ನಿಮ್ಮ ಚಾವಡಿಗಳಲ್ಲಿ ಸತ್ಯವನ್ನೂ, ಸಮಾಧಾನವಾದ ನ್ಯಾಯವನ್ನೂ ಸ್ಥಾಪಿಸಿರಿ;

17ನಿಮ್ಮಲ್ಲಿ ಯಾವನೂ ತನ್ನ ಹೃದಯದಲ್ಲಿ ನೆರೆಯವನಿಗೆ ಕೇಡನ್ನು ಬಗೆಯದಿರಲಿ; ಸುಳ್ಳು ಸಾಕ್ಷಿಗೆ ಎಂದೂ ಸಂತೋಷಪಡಬೇಡಿರಿ; ನಾನು ಇವುಗಳನ್ನೆಲ್ಲಾ ದ್ವೇಷಿಸುವವನಾಗಿದ್ದೇನೆ; ಇದು ಯೆಹೋವನ ನುಡಿ.>>

18<<ಸೇನಾಧೀಶ್ವರ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು.

19ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, <ನಾಲ್ಕನೆಯ ತಿಂಗಳಿನ ಉಪವಾಸ, ಐದನೆಯ ತಿಂಗಳಿನ ಉಪವಾಸ, ಏಳನೆಯ ತಿಂಗಳಿನ ಉಪವಾಸ, ಹತ್ತನೆಯ ತಿಂಗಳಿನ ಉಪವಾಸ ಇವು ಯೆಹೂದ ವಂಶಕ್ಕೆ ವಿಶೇಷವಾದ ಹಬ್ಬಗಳಾಗಿ ಹರ್ಷೋಲ್ಲಾಸಗಳನ್ನು ಉಂಟುಮಾಡುವವು; ಹೀಗಿರಲು ಸತ್ಯವನ್ನೂ, ಸಮಾಧಾನವನ್ನೂ ಪ್ರೀತಿಸಿರಿ.> >>

20ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, <<ಇನ್ನು ಮುಂದೆ ಜನಾಂಗಗಳೂ, ದೊಡ್ಡ ಪಟ್ಟಣಗಳ ನಿವಾಸಿಗಳೂ ಬರುವರು;

21ಒಂದು ಊರಿನವರು ಇನ್ನೊಂದು ಊರಿಗೆ ಹೋಗಿ, <ಯೆಹೋವನ ಪ್ರಸನ್ನತೆಯನ್ನು ಬೇಡುವುದಕ್ಕೂ, ಸೇನಾಧೀಶ್ವರ ಯೆಹೋವನನ್ನು ಆಶ್ರಯಿಸುವುದಕ್ಕೂ ಹೋಗೋಣ ಬನ್ನಿರಿ, ನಾವೂ ಹೋಗುತ್ತೇವೆ> ಎಂದು ಹೇಳುವರು.

22ಹೀಗೆ ಬಹು ದೇಶಗಳವರೂ, ಬಲವಾದ ಜನಾಂಗಗಳವರೂ ಯೆರೂಸಲೇಮಿನಲ್ಲಿ ಸೇನಾಧೀಶ್ವರ ಯೆಹೋವನನ್ನು ಆಶ್ರಯಿಸುವುದಕ್ಕೂ ಯೆಹೋವನ ಪ್ರಸನ್ನತೆಯನ್ನು ಬೇಡುವುದಕ್ಕೂ ಬರುವರು.>>

23ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, <<ಆ ಕಾಲದಲ್ಲಿ ಜನಾಂಗಗಳ ವಿವಿಧ ಬಾಷೆಗಳವರಾದ ಹತ್ತು ಜನರು ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡು, <ನಾವು ನಿಮ್ಮೊಂದಿಗೆ ಬರುವೆವು, ಏಕೆಂದರೆ ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ> >> ಎಂದು ಹೇಳುವರು.


  Share Facebook  |  Share Twitter

 <<  Zechariah 8 >> 


Bible2india.com
© 2010-2024
Help
Dual Panel

Laporan Masalah/Saran