Bible 2 India Mobile
[VER] : [KANNADA]     [PL]  [PB] 
 <<  Zechariah 7 >> 

1ಅರಸನಾದ ದಾರ್ಯಾವೆಷನ ಆಳ್ವಿಕೆಯ ನಾಲ್ಕನೆಯ ವರುಷದ ಕಿಸ್ಲೇವ್ ಎಂಬ ಒಂಭತ್ತನೆಯ ತಿಂಗಳಿನ ನಾಲ್ಕನೆಯ ದಿನದಲ್ಲಿ ಯೆಹೋವನು ಜೆಕರ್ಯನಿಗೆ ಒಂದು ವಾಕ್ಯವನ್ನು ದಯಪಾಲಿಸಿದನು.

2ಅಷ್ಟರೊಳಗೆ ಬೇತೇಲಿನವರು ಸೆರೆಚರನನ್ನೂ, ರೆಗೆಮ್ ಮೆಲೆಕನನ್ನೂ, ಅವನ ಪರಿಜನರನ್ನೂ ಯೆಹೋವನ ಪ್ರಸನ್ನತೆಯ ಪ್ರಾರ್ಥನೆಗಾಗಿ ಕಳುಹಿಸಿದ್ದರು.

3ಆಗ, <<ನಾವು ಬಹು ವರುಷಗಳಿಂದ ಮಾಡಿಕೊಂಡು ಬಂದಂತೆ ಮುಂದೆಯೂ ಐದನೆಯ ತಿಂಗಳಿನಲ್ಲಿ ಉಪವಾಸ ಮಾಡಿ ಅಳಬೇಕೋ? ಎಂದು ಪ್ರವಾದಿಗಳ ಮತ್ತು ಸೇನಾಧೀಶ್ವರನಾದ ಯೆಹೋವನ ಆಲಯದ ಯಾಜಕರ ಹತ್ತಿರ ವಿಚಾರಿಸಿಕೊಂಡು ಬನ್ನಿರಿ>> ಎಂಬುದಾಗಿ ಅವರಿಗೆ ಅಪ್ಪಣೆಕೊಟ್ಟು ಕಳುಹಿಸಿದರು.

4ಹೀಗಿರಲು ಸೇನಾಧೀಶ್ವರ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು.

5<<ನೀನು ಯಾಜಕರಿಗೂ ದೇಶದ ಸಕಲ ಜನರಿಗೂ ಹೀಗೆ ನುಡಿ, <ನೀವು ಈ ಎಪ್ಪತ್ತು ವರುಷಗಳಿಂದಲೂ ಐದನೆಯ ಮತ್ತು ಏಳನೆಯ ತಿಂಗಳುಗಳಲ್ಲಿ ಉಪವಾಸಮಾಡಿ ಗೋಳಾಡುತ್ತಿದ್ದಾಗ, ಆ ನಿಮ್ಮ ಉಪವಾಸವು ನನಗಾಗಿಯೇ ಮಾಡಿದ್ದೋ?

6ನೀವು ಭೋಜನ ಮಾಡುವಾಗಲೂ, ಪಾನಮಾಡುವಾಗಲೂ ಆ ನಿಮ್ಮ ಭೋಜನಪಾನಗಳು ನಿಮ್ಮವುಗಳಾಗಿಯೇ ಇರುವುದಲ್ಲವೇ.

7ಯೆರೂಸಲೇಮು ಸುತ್ತಣ ಪಟ್ಟಣಗಳ ಸಮೇತ ಜನಭರಿತವಾಗಿಯೂ, ನೆಮ್ಮದಿಯಾಗಿಯೂ ಇದ್ದು, ದಕ್ಷಿಣ ಪ್ರಾಂತ್ಯದಲ್ಲಿಯೂ, ಇಳಕಲಿನ ಪ್ರದೇಶದಲ್ಲಿಯೂ ಜನರು ತುಂಬಿದ್ದಾಗ ಆ ಪೂರ್ವಕಾಲದ ಪ್ರವಾದಿಗಳ ಮೂಲಕ ಯೆಹೋವನು ಪ್ರಕಟಿಸಿದ ಮಾತುಗಳನ್ನು ನೀವು ಕೇಳಿಲ್ಲವೇ?> >>

8ಅಲ್ಲದೆ ಯೆಹೋವನು ಜೆಕರ್ಯನಿಗೆ ಈ ವಾಕ್ಯವನ್ನು ದಯಪಾಲಿಸಿ,

9<<ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ, <ನಿಷ್ಠೆಯಿಂದ ನ್ಯಾಯತೀರಿಸಿರಿ,

10ಒಬ್ಬರಿಗೊಬ್ಬರು ಪ್ರೀತಿ,ಕರುಣೆಗಳನ್ನು ತೋರಿಸಿರಿ; ವಿಧವೆ, ಅನಾಥ, ವಿದೇಶಿ, ದರಿದ್ರರಿಗೂ ಅನ್ಯಾಯಮಾಡಬೇಡಿರಿ; ನಿಮ್ಮಲ್ಲಿ ಯಾವನೂ ತನ್ನ ಸಹೋದರನಿಗೆ ಕೇಡನ್ನು ಬಗೆಯದಿರಲಿ.>

11<<ನಿಮ್ಮ ಪಿತೃಗಳಾದರೋ ಗಮನಿಸದೆ ಹೆಗಲುಕೊಡದೇ ಹೋದರು, ಕೇಳಬಾರದೆಂದು ಕಿವಿಮಂದಮಾಡಿಕೊಂಡರು.

12ಧರ್ಮೋಪದೇಶವನ್ನೂ, ಸೇನಾಧೀಶ್ವರ ಯೆಹೋವನು ಪೂರ್ವಕಾಲದ ಪ್ರವಾದಿಗಳ ಮೂಲಕ ತನ್ನ ಆತ್ಮನಿಂದ ಹೇಳಿಸಿದ ಮಾತುಗಳನ್ನೂ ಕೇಳಬಾರದೆಂದು ತಮ್ಮ ಹೃದಯಗಳನ್ನು ವಜ್ರದಷ್ಟು ಕಠಿಣಪಡಿಸಿಕೊಂಡರು. ಆದಕಾರಣ ಸೇನಾಧೀಶ್ವರ ಯೆಹೋವನ ಕೋಪಕ್ಕೆ ಗುರಿಯಾದರು.

13<<ಆಗ ಸೇನಾಧೀಶ್ವರ ಯೆಹೋವನು ಇಂತೆಂದನು, <ನಾನು ಕೂಗಿದರೂ ಅವರು ಹೇಗೆ ಕೇಳಲಿಲ್ಲವೋ ಹಾಗೆ ಅವರು ಕೂಗಿದರೂ ನಾನು ಕೇಳುವುದಿಲ್ಲ.

14ಅವರು ನೋಡದ ಎಲ್ಲಾ ಜನಾಂಗಗಳ ಮಧ್ಯಕ್ಕೆ ಅವರನ್ನು ತೂರಿಬಿಡುವೆನು. ಯೆಹೋವನ ಈ ಮಾತಿನಂತೆ ಅವರು ಚದರಿದ ಮೇಲೆ ದೇಶವು ಹಾಳಾಯಿತು. ಅದರಲ್ಲಿ ಯಾರೂ ಹೋಗುತ್ತಿರಲಿಲ್ಲ, ಬರುತ್ತಿರಲಿಲ್ಲ; ಆ ರಮ್ಯ ದೇಶವನ್ನು ಹಾಳುಮಾಡಿದರು.> >>


  Share Facebook  |  Share Twitter

 <<  Zechariah 7 >> 


Bible2india.com
© 2010-2024
Help
Dual Panel

Laporan Masalah/Saran