Bible 2 India Mobile
[VER] : [KANNADA]     [PL]  [PB] 
 <<  Zechariah 3 >> 

1ಅನಂತರ ಮಹಾಯಾಜಕನಾದ ಯೆಹೋಶುವನು ಯೆಹೋವನ ದೂತನ ಮುಂದೆ ನಿಂತಿರುವುದನ್ನು ಯೆಹೋವನು ನನಗೆ ತೋರಿಸಿದನು. ಸೈತಾನನು ಯೆಹೋಶುವನಿಗೆ ಪ್ರತಿವಾದಿಯಾಗಿ ಅವನ ಬಲಗಡೆಯಲ್ಲಿ ನಿಂತಿದ್ದನು.

2ಆಗ ಯೆಹೋವನ ದೂತನು ಸೈತಾನನಿಗೆ, <<ಯೆಹೋವನು ನಿನ್ನನ್ನು ಖಂಡಿಸಲಿ ಹೌದು, ಯೆರೂಸಲೇಮನ್ನು ಆರಿಸಿಕೊಂಡಿರುವ ಯೆಹೋವನು ನಿನ್ನನ್ನು ಖಂಡಿಸಲಿ! ಅದು ಉರಿಯುವ ಬೆಂಕಿಯಿಂದ ಎಳೆದ ಕೊಳ್ಳಿಯಾಗಿದೆಯಲ್ಲಾ?>> ಎಂದು ಹೇಳಿದನು.

3ಯೆಹೋಶುವನು ದೇವದೂತನ ಮುಂದೆ ಕೊಳೆಯಾದ ಬಟ್ಟೆಯನ್ನು ಧರಿಸಿ ನಿಂತಿರಲು,

4ದೇವದೂತನು ತನ್ನ ಸೇವಕರಿಗೆ, <<ಇವನ ಕೊಳೆಬಟ್ಟೆಗಳನ್ನು ತೆಗೆದುಬಿಡಿರಿ>> ಎಂದು ಅಪ್ಪಣೆ ಕೊಟ್ಟು ಅವನಿಗೆ, <<ಇಗೋ, ನಿನ್ನ ದೋಷವನ್ನು ನಿನ್ನಿಂದ ತೊಲಗಿಸಿದ್ದೇನೆ, ನಿನಗೆ ಶ್ರೇಷ್ಠವಸ್ತ್ರವನ್ನು ತೊಡಿಸುವೆನು>> ಎಂದು ಹೇಳಿದನು.

5<<ಇವನ ತಲೆಗೆ ಶುಭ್ರವಾದ ಮುಂಡಾಸವನ್ನು ಸುತ್ತಿರಿ>> ಎಂದು ಅವನು ಅಪ್ಪಣೆಕೊಡಲು ಅವರು ಅವನ ತಲೆಗೆ ಶುಭ್ರವಾದ ಮುಂಡಾಸವನ್ನು ಸುತ್ತಿ ಅವನಿಗೆ ವಸ್ತ್ರಗಳನ್ನು ತೊಡಿಸಿದರು, ಆಗ ಯೆಹೋವನ ದೂತನು ಎದ್ದು ನಿಂತನು.

6ಆಗ ಯೆಹೋವನ ದೂತನು ಯೆಹೋಶುವನಿಗೆ ಈ ಮಾತನ್ನು ಕೊಟ್ಟನು.

7ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, <<ನೀನು ನನ್ನ ಮಾರ್ಗಗಳಲ್ಲಿ ನಡೆದು, ನಾನು ನಿನಗೆ ವಹಿಸಿದ ಪಾರುಪತ್ಯವನ್ನು ನೆರವೇರಿಸಿದರೆ ನನ್ನ ಆಲಯದ ಮುಖ್ಯಾಧಿಕಾರಿಯಾಗಿ ನನ್ನ ಪ್ರಾಕಾರಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನೀಡುವೆ; ನನ್ನ ಸನ್ನಿಧಾನದೂತರ ನಡುವೆ ಪ್ರವೇಶಿಸುವ ಹಕ್ಕನ್ನು ನಿನಗೆ ಕೊಡುವೆನು.

8ಮಹಾಯಾಜಕನಾದ ಯೆಹೋಶುವನೇ, ನೀನೂ, ನಿನ್ನ ಮುಂದೆ ಕುಳಿತುಕೊಳ್ಳುವ ನಿನ್ನ ಸಂಗಡಿಗರೂ ಕೇಳಿರಿ. ಇಗೋ, ಮೊಳಕೆ ಎಂಬ ನನ್ನ ಸೇವಕನನ್ನು ಹೊರಡಿಸುತ್ತೆನೆಂಬುದಕ್ಕೆ ಇವರೇ ಮುಂಗುರುತು.

9ನಾನು ಯೆಹೋಶುವನ ಮುಂದೆ ಇಟ್ಟಿರುವ ಕಲ್ಲನ್ನು ನೋಡಿರಿ; ಆ ಒಂದೇ ಕಲ್ಲಿನಲ್ಲಿ ಏಳು ಕಣ್ಣುಳ್ಳಾತನ ದೃಷ್ಟಿಯು ಬಿದ್ದಿದೆ; ಇಗೋ ನಾನೇ ಅದರಲ್ಲಿ ಕೆತ್ತನೆ ಕೆತ್ತುವೆನು. ಇದು ಸೇನಾಧೀಶ್ವರನಾದ ಯೆಹೋವನ ನುಡಿ. <ಒಂದೇ ದಿನದೊಳಗೆ ಈ ದೇಶದ ಪಾಪವನ್ನು ಪರಿಹರಿಸುವೆನು.>

10<<ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, <ಆ ದಿನದಲ್ಲಿ ನೀವೆಲ್ಲರೂ ನಿಮ್ಮ ನಿಮ್ಮ ನೆರೆಹೊರೆಯವರನ್ನು ದ್ರಾಕ್ಷಾಲತೆ, ಅಂಜೂರಗಿಡ ಇವುಗಳ ನೆರಳಿನಲ್ಲಿ ನೆಮ್ಮದಿಯಿಂದ ವಿಶ್ರಮಿಸಲು ಕರೆಯುವಿರಿ.> >>


  Share Facebook  |  Share Twitter

 <<  Zechariah 3 >> 


Bible2india.com
© 2010-2024
Help
Dual Panel

Laporan Masalah/Saran