Bible 2 India Mobile
[VER] : [KANNADA]     [PL]  [PB] 
 <<  Zechariah 2 >> 

1ನಾನು ಕಣ್ಣಿತ್ತಿ ನೋಡಲು ಇಗೋ, ಕೈಯಲ್ಲಿ ಅಳತೆಯ ನೂಲನ್ನು ಹಿಡಿದುಕೊಂಡಿದ್ದವನು ಕಾಣಿಸಿದನು.

2ನಾನು ಅವನನ್ನು, <<ಎಲ್ಲಿಗೆ ಹೋಗುತ್ತಿ?>> ಎಂದು ಕೇಳಲು ಅವನು ನನಗೆ, <<ಯೆರೂಸಲೇಮಿನ ಅಗಲ, ಉದ್ದ ಎಷ್ಟಿರಬೇಕೆಂದು ಅಳೆದು ನೋಡುವುದಕ್ಕೆ ಹೋಗುತ್ತಿದ್ದೇನೆ>> ಎಂದು ಹೇಳಿದನು.

3ನನ್ನ ಸಂಗಡ ಮಾತನಾಡಿದ ದೇವದೂತನು ಬರುತ್ತಿರಲು ಇನ್ನೊಬ್ಬ ದೂತನು ಅವನನ್ನು ಎದುರುಗೊಂಡು ಹೀಗೆ ಹೇಳಿದನು,

4<<ನೀನು ಓಡು, ಆ ಯುವಕನಿಗೆ ಈ ಮಾತನ್ನು ತಿಳಿಸು, <ಯೆರೂಸಲೇಮಿನಲ್ಲಿರುವ ಜನ ಮತ್ತು ಪಶುಗಳ ಸಂಖ್ಯೆಯು ಅಪಾರವಾಗಿರುವುದರಿಂದ ಅದು ಪೌಳಿಗೋಡೆಯಿಲ್ಲದ ಹಳ್ಳಿಪಳ್ಳಿಗಳಂತೆ ಹರಡಿಕೊಂಡು ನೆಲೆಯಾಗಿರುವುದು.

5ನಾನೇ, ಅದರ ಸುತ್ತಮುತ್ತಲೂ ಅಗ್ನಿಪ್ರಾಕಾರವಾಗಿ, ಅದರೊಳಗೆ ವೈಭವವೂ ಆಗಿರುವೆನು> >> ಎಂಬುದು ಯೆಹೋವನ ನುಡಿ.

6ಎಲೈ, ಎಲೈ ಉತ್ತರದೇಶದಿಂದ ಓಡಿ ಬನ್ನಿರಿ; ಇದು ಯೆಹೋವನ ನುಡಿ; ಚತುರ್ದಿಕ್ಕಿನ ಗಾಳಿಗಳಂತೆ ನಿಮ್ಮನ್ನು ಚದುರಿಸಿದ್ದೆನಲ್ಲಾ; ಇದು ಯೆಹೋವನ ನುಡಿ.

7ಎಲೈ, ಬಾಬೆಲ್ ಪುರಿಯಲ್ಲಿ ವಾಸಿಸುವ ಚೀಯೋನಿನವರೇ, ತಪ್ಪಿಸಿಕೊಂಡು ಬನ್ನಿರಿ.

8ನಿಮ್ಮನ್ನು ತಾಕುವವನು ಯೆಹೋವನ ಕಣ್ಣು ಗುಡ್ಡೆಯನ್ನು ತಾಕುವವನಾಗಿದ್ದಾನೆ. ಆದಕಾರಣ ತನ್ನ ಪ್ರಸಿದ್ಧಿಗಾಗಿ ನನ್ನನ್ನು ಕಳುಹಿಸಿದ ಸೇನಾಧೀಶ್ವರ ಯೆಹೋವನು ನಿಮ್ಮನ್ನು ಸೂರೆಮಾಡಿದ ಜನಾಂಗಗಳ ವಿಷಯವಾಗಿ,

9<<ಆಹಾ, ನಾನು ಇವರ ಮೇಲೆ ಕೈಬೀಸುವೆನು; ಇವರು ತಮಗೆ ಅಡಿಯಾಳಾದವರಿಗೆ ಸೂರೆಯಾಗುವರು>> ಎಂದು ಹೇಳುತ್ತಾನೆ. ಆಗ ಸೇನಾಧೀಶ್ವರ ಯೆಹೋವನು ನನ್ನನ್ನು ಕಳುಹಿಸಿದ್ದಾನೆಂಬುದು ನಿಮಗೆ ಗೊತ್ತಾಗುವುದು.

10ಯೆಹೋವನು ಇಂತೆನ್ನುತ್ತಾನೆ, <<ಚೀಯೋನ್ ನಗರಿಯೇ, ಉಲ್ಲಾಸಗೊಳ್ಳು, ಹರ್ಷಧ್ವನಿಗೈ! ಇಗೋ, ನಾನು ಬಂದು ನಿನ್ನ ಮಧ್ಯದಲ್ಲಿ ವಾಸಿಸುವೆನು.

11ಆ ಕಾಲದಲ್ಲಿ ಬಹು ಜನಾಂಗಗಳು ಯೆಹೋವನಾದ ನನ್ನನ್ನು ಆಶ್ರಯಿಸಿಕೊಂಡು ನನ್ನ ಜನವಾಗುವರು; ನಾನು ನಿಮ್ಮ ಮಧ್ಯದಲ್ಲಿ ವಾಸಿಸುವೆನು>> ಆಗ, ಸೇನಾಧೀಶ್ವರನಾದ ಯೆಹೋವನೇ ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆಂಬುದು ನಿನಗೆ ಗೊತ್ತಾಗುವುದು.

12ಯೆಹೋವನು ಮೀಸಲಾದ ದೇಶದಲ್ಲಿ ಯೆಹೂದವನ್ನು ತನ್ನ ಸ್ವಾಸ್ತ್ಯವನ್ನಾಗಿ ಅನುಭವಿಸುವನು, ಯೆರೂಸಲೇಮನ್ನು ಮತ್ತೆ ತನಗಾಗಿ ಆರಿಸಿಕೊಳ್ಳುವನು.

13ಯೆಹೋವನು ತನ್ನ ಪರಿಶುದ್ಧ ನಿವಾಸದಿಂದ ಎದ್ದು ಹೊರಟಿದ್ದಾನೆ; ನರಮಾನವರೇ, ನೀವೆಲ್ಲಾ ಆತನ ಮುಂದೆ ಮೌನವಾಗಿರಿ.


  Share Facebook  |  Share Twitter

 <<  Zechariah 2 >> 


Bible2india.com
© 2010-2024
Help
Dual Panel

Laporan Masalah/Saran