Bible 2 India Mobile
[VER] : [KANNADA]     [PL]  [PB] 
 <<  Haggai 1 >> 

1ಅರಸನಾದ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರುಷದ ಆರನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ಶೆಯಲ್ತೀಯೇಲನಿಗೆ ಹುಟ್ಟಿದ ಯೆಹೂದ ದೇಶಾಧಿಪತಿಯಾದ ಜೆರುಬ್ಬಾಬೆಲನಿಗೂ, ಯೆಹೋಚಾದಾಕನಿಗೆ ಜನಿಸಿದ ಮಹಾಯಾಜಕನಾದ ಯೆಹೋಶುವನಿಗೂ ಪ್ರವಾದಿಯಾದ ಹಗ್ಗಾಯನ ಮೂಲಕ ಹೇಳಿಕಳುಹಿಸಿದನು.

2ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, <<ಯೆಹೋವನ ಆಲಯವನ್ನು ಕಟ್ಟುವುದಕ್ಕೆ ಸಮಯವು ಇನ್ನು ಬಂದಿಲ್ಲ>> ಎಂದು ಜನರು ಅಂದುಕೊಳ್ಳುತ್ತಾರಲ್ಲಾ.

3ಯೆಹೋವನು ಪ್ರವಾದಿಯಾದ ಹಗ್ಗಾಯನ ಮೂಲಕ ಈ ವಾಕ್ಯವನ್ನು ಹೇಳಿದನು,

4<<ಈ ನನ್ನ ಆಲಯವು ಹಾಳು ಬಿದ್ದಿರುವಾಗ, ನೀವು ನಿಮ್ಮ ಒಳಗೋಡೆಗೆಲ್ಲಾ ಸುಂದರ ಹಲಿಗೆಹೊದಿಸಿಕೊಂಡ ಸ್ವಂತ ಮನೆಗಳಲ್ಲಿ ವಾಸಿಸುವುದಕ್ಕೆ ಈ ಸಮುಯವು ತಕ್ಕದ್ದೋ?>>

5ಈ ಸಮಯದಲ್ಲಿ ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ, <<ನಿಮ್ಮ ಗತಿ ಏನಾಗಿದೆಯೆಂದು ಮನಸ್ಸಿಗೆ ತಂದುಕೊಳ್ಳಿರಿ

6ನೀವು ಬಿತ್ತಿದ ಬೀಜವು ಬಹಳ, ತಂದ ಫಲವು ಸ್ವಲ್ಪ; ಅದನ್ನು ಸೇವಿಸುವಿರಿ ತೃಪ್ತಿಯಾಗದು, ಕುಡಿಯುತ್ತೀರಿ ಆನಂದವಾಗದು; ಹೊದ್ದುಕೊಳ್ಳುವಿರಿ ಬೆಚ್ಚಗಾಗದು; ಸಂಬಳಗಾರನು ಸಂಬಳಹಾಕುವ ಚೀಲವು ತೂತಾಗಿದೆ.>>

7ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ; <<ನಿಮ್ಮ ಗತಿ ಏನಾಗಿದೆಯೆಂದು ಮನಸ್ಸಿಗೆ ತಂದುಕೊಳ್ಳಿರಿ.

8ಮಲೆನಾಡಿಗೆ ಹೋಗಿ ಮರವನ್ನು ತಂದು ನನ್ನ ಆಲಯವನ್ನು ಕಟ್ಟಿರಿ; ನಾನು ಅದಕ್ಕೆ ಮೆಚ್ಚಿ ನನ್ನ ಪ್ರಭಾವವನ್ನು ಅಲ್ಲಿ ಪ್ರಕಾಶಗೊಳಿಸುವೆನು>> ಇದು ಯೆಹೋವನ ನುಡಿ.

9ನೀವು ಬಹು ಬೆಳೆಯನ್ನು ನಿರೀಕ್ಷಿಸಿದಿರಿ, ಆದರೆ, ಸ್ವಲ್ಪ ಮಾತ್ರ ಮನೆಗೆ ಸಾಗಿಸಲು ಸಾಧ್ಯವಾಯಿತು; ಯಾಕೆಂದರೆ ನಾನು ಅದನ್ನು ಫಲಿಸಲು ಬಿಡಲಿಲ್ಲ. ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, <<ಇದಕ್ಕೆಲ್ಲಾ ಕಾರಣವೇನು? ನನ್ನ ಆಲಯವು ಪಾಳು ಬಿದ್ದಿದೆ. ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಮನೆಯ ಕೆಲಸಕ್ಕೆ ತವಕಪಡುತ್ತಿದ್ದಾನೆ, ಇದೇ ಕಾರಣ.>>

10ನಿಮ್ಮ ನಿಮಿತ್ತವೇ ಆಕಾಶವು ಇಬ್ಬನಿಯನ್ನು ತಡೆದುಬಿಟ್ಟಿದೆ, ಭೂಮಿಯು ತನ್ನ ಫಲವನ್ನು ನಿಲ್ಲಿಸಿಬಿಟ್ಟಿದೆ;

11ಇದಲ್ಲದೆ ನಾನು ದೇಶ, ಬೆಟ್ಟ, ಧಾನ್ಯ, ದ್ರಾಕ್ಷಾರಸ, ಎಣ್ಣೆ, ಭೂಮಿಯ ಉತ್ಪತ್ತಿ, ಮನುಷ್ಯ, ಪಶು, ನಾನಾ ಕೈದುಡಿತ ಇವುಗಳಿಗೆಲ್ಲಾ ಕ್ಷಾಮವನ್ನು ತಂದಿದ್ದೇನೆ.

12ಆಗ ಶೆಯಲ್ತೀಯೇಲನ ಮಗನಾದ ಜೆರುಬ್ಬಾಬೆಲ್, ಯೆಹೋಚಾದಾಕನಿಗೆ ಹುಟ್ಟಿದ ಮಹಾಯಾಜಕನಾದ ಯೆಹೋಶುವ, ಸಮಸ್ತಜನಶೇಷ, ಇವರೆಲ್ಲಾ ಯೆಹೋವನೆಂಬ ತಮ್ಮ ದೇವರ ನುಡಿಗೂ, ಯೆಹೋವನೆಂಬ ತಮ್ಮ ದೇವರ ಅಪ್ಪಣೆಯ ಪ್ರಕಾರ ಪ್ರವಾದಿಯಾದ ಹಗ್ಗಾಯನು ಹೇಳಿದ ಮಾತುಗಳಿಗೂ ಕಿವಿಗೊಟ್ಟು ಯೆಹೋವನಲ್ಲಿ ಭಯಭಕ್ತಿಯುಳ್ಳವರಾದರು.

13ಯೆಹೋವನ ದೂತನಾದ ಹಗ್ಗಾಯನು ಯೆಹೋವನ ಸಂದೇಶವನ್ನು ಜನರಿಗೆ ಈ ರೀತಿಯಾಗಿ ನುಡಿದನು, <<ನಿಮ್ಮೊಂದಿಗೆ ಇದ್ದೇನೆ ಎಂದು ಯೆಹೋವನು ನುಡಿಯುತ್ತಿದ್ದಾನೆ>>

14ಕೂಡಲೇ ಶೆಯಲ್ತೀಯೇಲನು ಮಗನೂ, ಯೆಹೂದ ದೇಶಾಧಿಪತಿಯಾದ ಜೆರುಬ್ಬಾಬೆಲ್, ಯೆಹೋಚಾದಾಕನಿಗೆ ಹುಟ್ಟಿದ ಮಹಾಯಾಜಕನಾದ ಯೆಹೋಶುವ, ಮತ್ತು ಸಮಸ್ತ ಜನರರೆಲ್ಲರ ಮನಸ್ಸುಗಳನ್ನು ಸೇನಾಧೀಶ್ವರನಾದ ಯೆಹೋವನು ಪ್ರೇರೇಪಿಸಲು,

15ಅವರು ಅರಸನಾದ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರುಷದ ಆರನೆಯ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಬಂದು ತಮ್ಮ ದೇವರಾದ ಯೆಹೋವನ ಆಲಯದ ನಿರ್ಮಾಣ ಕಾರ್ಯಕ್ಕೆ ತೊಡಗಿದರು.


  Share Facebook  |  Share Twitter

 <<  Haggai 1 >> 


Bible2india.com
© 2010-2024
Help
Dual Panel

Laporan Masalah/Saran