Bible 2 India Mobile
[VER] : [KANNADA]     [PL]  [PB] 
 <<  Zephaniah 3 >> 

1ಅಯ್ಯೋ, ಅವಿಧೇಯತೆ ಮಲೀನವೂ ಆದ ದಬ್ಬಾಳಿಕೆ ನಡೆಸುವ ನಗರದ ಗತಿಯನ್ನು ಏನು ಹೇಳಲಿ!

2ಅದು ದೇವರ ವಾಕ್ಯಕ್ಕಾಗಲೀ ಆತನ ತಿದ್ದುಪಾಟಿಗಾಗಲಿ ಕಿವಿಗೊಡಲಿಲ್ಲ, ಶಿಕ್ಷಣೆಗೆ ಒಳಪಡಲೇ ಇಲ್ಲ, ಯೆಹೋವನಲ್ಲಿ ಭರವಸವಿಡಲಿಲ್ಲ, ತನ್ನ ದೇವರ ಸನ್ನಿಧಿಗೆ ಸಮೀಪಿಸಲಿಲ್ಲ.

3ಅವರೊಳಗಿನ ಮುಖ್ಯಾಧಿಕಾರಿಗಳು ಗರ್ಜಿಸುವ ಸಿಂಹಗಳು; ಅದರ ನ್ಯಾಯಾಧಿಪತಿಗಳು ಸಂಜೆಯ ತೋಳಗಳು; ಮರುದಿನ ಬೆಳಗ್ಗೆ ಕಡಿಯುವುದಕ್ಕೆ ಎಲುಬು ಸಹಾ ಬಿಡದ ಕ್ರೂರರು.

4ಅಲ್ಲಿರುವ ಪ್ರವಾದಿಗಳು ಬಡಾಯಿ ಕೊಚ್ಚಿಕೊಳ್ಳುವವರು, ವಿಸ್ವಾಸ ದ್ರೋಹಿಗಳು; ಅದರ ಯಾಜಕರು ಪವಿತ್ರಾಲಯವನ್ನು ಹೊಲೆಗೆಡಿಸಿದ್ದಾರೆ, ಧರ್ಮವಿಧಿಗಳನ್ನು ಭಂಗಮಾಡಿದ್ದಾರೆ.

5ಅದರ ಮಧ್ಯ ನೆಲೆಗೊಂಡಿರುವ ಯೆಹೋವನು ನೀತಿಸ್ವರೂಪನು; ಎಂದಿಗೂ ಅನ್ಯಾಯವನ್ನು ಮಾಡನು; ಪ್ರತಿ ಬೆಳಿಗ್ಗೆ ತನ್ನ ನ್ಯಾಯವನ್ನು ತಪ್ಪದೆ ಪ್ರಕಾಶಗೊಳಿಸುವನು; ಅನ್ಯಾಯಗಾರನೋ ನಾಚಿಕೆಪಡವುದಿಲ್ಲ.

6ಯೆಹೋವನು ಇಂತೆನ್ನುತ್ತಾನೆ, <<ನಾನು ಜನಾಂಗಗಳನ್ನು ಧ್ವಂಸಪಡಿಸಿದ್ದೇನೆ, ಅವುಗಳ ಕೋಟೆ ಕೊತ್ತಲುಗಳು ಪಾಳು ಬಿದ್ದವು; ಅವುಗಳ ಬೀದಿಗಳನ್ನು ಹಾಳುಮಾಡಿದ್ದೇನೆ; ಯಾರೂ ಹಾದುಹೋಗರು; ಅವುಗಳ ಪಟ್ಟಣಗಳು ನಾಶವಾದವು, ಜನರೇ ಇಲ್ಲ, ನಿರ್ನಾಮವಾಗಿವೆ.

7ಇದರಿಂದ ಯೆರೂಸಲೇಮೇ, ನೀನು ನನಗೆ ನಿಶ್ಚಯವಾಗಿ ಭಯಪಡುವಿ, ಶಿಕ್ಷಣಕ್ಕೆ ಒಳಪಡುವಿ, ನಿನ್ನ ನಿವಾಸವು ನಾಶವಾಗದು, ನಾನು ನಿನಗೆ ವಿಧಿಸಿದ್ದೊಂದೂ ತಗಲದು>> ಎಂದು ಅಂದುಕೊಂಡೆನು; ಅವರಾದರೋ ಆತುರಗೊಂಡು ತಮ್ಮ ನಡತೆಯನ್ನೆಲ್ಲಾ ಕೆಡಿಸಿಕೊಂಡರು.

8ಯೆಹೋವನು ಇಂತೆನ್ನುತ್ತಾನೆ; <<ಹೀಗಿರಲು ನನಗಾಗಿ ಕಾದುಕೊಂಡಿರಿ, ನಾನು ಬೇಟೆಹಿಡಿಯಲಿಕ್ಕೆ ಏಳುವ ದಿನವನ್ನು ಎದುರುನೋಡಿರಿ; ಜನಾಂಗರಾಜ್ಯಗಳ ಮೇಲೆ ನನ್ನ ರೌದ್ರವನ್ನು, ಹೌದು, ನನ್ನ ಉಗ್ರಕೋಪವನ್ನೆಲ್ಲಾ ಹೊಯ್ದು ಬಿಡುವುದಕ್ಕಾಗಿ ಆ ಜನಾಂಗಗಳನ್ನು ಸೇರಿಸಿ ಆ ರಾಜ್ಯಗಳನ್ನು ಕೂಡಿಸಬೇಕೆಂದು ತೀರ್ಮಾನಿಸಿಕೊಂಡಿದ್ದೇನೆ; ಲೋಕವೆಲ್ಲಾ ನನ್ನ ರೋಷಾಗ್ನಿಗೆ ತುತ್ತಾಗುವುದಷ್ಟೇ.

9<<ಆಗ ಎಲ್ಲರೂ ಒಂದೇ ಮನಸ್ಸಿನಿಂದ ಯೆಹೋವನನ್ನು ಸೇವಿಸಿ ಆತನ ಹೆಸರನ್ನೆತ್ತಿ ಪ್ರಾರ್ಥಿಸುವಂತೆ ಜನಾಂಗಗಳವರ ತುಟಿಗಳನ್ನು ಮಾರ್ಪಡಿಸಿ ಶುದ್ಧಿಮಾಡುವೆನು.

10ಚದರಿಹೋಗಿರುವ ನನ್ನ ಜನರು, ನನ್ನ ಭಕ್ತರು, ಕೂಷಿನ ನದಿಗಳ ಆಚೆಯಿಂದಲೂ ನನಗೆ ಕಾಣಿಕೆಯನ್ನು ತಂದು ಸಮರ್ಪಿಸುವರು.

11<<ನೀನು ನನಗೆ ಮಾಡಿದ ನಾನಾ ದುಷ್ಕೃತ್ಯಗಳು ಮುಂದಿನ ಆ ಕಾಲದಲ್ಲಿ ನಿನಗೆ ನಾಚಿಕೆಗೆ ಈಡಾಗುವುದು; ಆಗ ಅತೀಗರ್ವದಿಂದ ಮೆರೆಯುವವರನ್ನು ನಿನ್ನೊಳಗಿಂದ ತೊಲಗಿಸಿಬಿಡುವೆನು; ಅಂದಿನಿಂದ ನನ್ನ ಪವಿತ್ರಪರ್ವತದಲ್ಲಿ ಗರ್ವಪಡದೆ ಇರುವಿ.

12ದೀನದರಿದ್ರ ಜನರನ್ನು ನಿನ್ನಲ್ಲಿ ಉಳಿಸುವೆನು; ಅವರು ಯೆಹೋವನ ನಾಮವನ್ನು ಆಶ್ರಯಿಸಿಕೊಳ್ಳುವರು,

13ಇಸ್ರಾಯೇಲಿನಲ್ಲಿ ಉಳಿದವರು ಅನ್ಯಾಯವನ್ನು ಮಾಡರು, ಸುಳ್ಳಾಡರು; ಅವರ ಬಾಯಲ್ಲಿ ಮೋಸದ ನಾಲಿಗೆಯು ಇರದು; ಕುರಿ ಮಂದೆಯಂತೆ ಮೇದು ಮಲಗಿಕೊಳ್ಳುವರು, ಅವರನ್ನು ಯಾರೂ ಹೆದರಿಸರು.>>

14ಚೀಯೋನ್ ನಗರಿಯೇ, ಹರ್ಷಧ್ವನಿಗೈ! ಇಸ್ರಾಯೇಲೇ, ಜಯಘೋಶಮಾಡು! ಯೆರೂಸಲೇಮ್ ಪುರಿಯೇ, ಹೃದಯಪೂರ್ವಕವಾಗಿ ಆನಂದಿಸು, ಉಲ್ಲಾಸಿಸು!

15ನಿನಗೆ ವಿಧಿಸಿದ ದಂಡನೆಯನ್ನು ಯೆಹೋವನು ತಪ್ಪಿಸಿದ್ದಾನೆ, ನಿನ್ನ ಶತ್ರುವನ್ನು ತಳ್ಳಿಬಿಟ್ಟಿದ್ದಾನೆ; ಇಸ್ರಾಯೇಲಿನ ಅರಸನಾದ ಯೆಹೋವನು ನಿನ್ನ ಮಧ್ಯದಲ್ಲಿದ್ದಾನೆ; ಇನ್ನು ಕೇಡಿಗೆ ಅಂಜದಿರುವಿ.

16ಆ ದಿನದಲ್ಲಿ ಯೆರೂಸಲೇಮಿಗೆ, <<ಚೀಯೋನೇ, ಭಯಪಡಬೇಡ, ನಿನ್ನ ಕೈಗಳು ಜೋಲುಬೀಳದಿರಲಿ;

17ನಿನ್ನ ದೇವರಾದ ಯೆಹೋವನು ನಿನ್ನ ಮಧ್ಯದಲ್ಲಿ ಶೂರನಾಗಿದ್ದಾನೆ, ನಿನ್ನನ್ನು ರಕ್ಷಿಸುವನು; ನಿನ್ನಲ್ಲಿ ಉಲ್ಲಾಸಿಸೇ ಉಲ್ಲಾಸಿಸುವನು; ತನ್ನ ಪ್ರೀತಿಯಲ್ಲಿ ನಿನ್ನನ್ನು ಮುಣುಗಿಸಿ ಪುನಃ ಚೇತನ ಗೊಳಿಸುವನು; ನಿನ್ನಲ್ಲಿ ಆನಂದಿಸಿ ಹರ್ಷಧ್ವವನಿಗೈಯುವನು.

18ಅವಮಾನವು ನಮ್ಮ ಪಟ್ಟಣದ ಮೇಲೆ ಹೊರೆಯಾಗಿ ಕಾಡುತ್ತಿದೆ ಎಂದು ತಿಳಿದು ಹಬ್ಬ ಉತ್ಸಹಗಳಿಗೆ ದೂರವಾಗಿ ಕುಳಿತು ಶೋಕಿಸುತ್ತಿರುವ ನಿನ್ನವರನ್ನು ಒಟ್ಟಿಗೆ ಬರಮಾಡುವೆನು.

19ಆಹಾ, ಆ ಕಾಲದಲ್ಲಿ ನಿನ್ನನ್ನು ಬಾಧಿಸುವವರಿಗೆ ತಕ್ಕದ್ದನ್ನು ಮಾಡುವೆನು; ನಿನ್ನಲ್ಲಿ ಕುಂಟುವವರನ್ನು ರಕ್ಷಿಸುವೆನು, ಚದರಿ ಹೋದವರನ್ನು ಕೂಡಿಸುವೆನು; ಅಂತು ಲೋಕದಲ್ಲೆಲ್ಲಾ ಅವಮಾನಪಟ್ಟವರಿಗೆ ಸ್ತೋತ್ರ ಕೀರ್ತನೆಗಳನ್ನು ಉಂಟುಮಾಡುವೆನು.

20ಆ ಕಾಲದಲ್ಲಿ ನಿಮ್ಮನ್ನು ಕರೆದು ತರುವೆನು, ಹೌದು, ಆ ಕಾಲದಲ್ಲಿ ನಿಮ್ಮನ್ನು ಒಟ್ಟುಗೂಡಿಸುವೆನು. ನಾನು ನಿಮ್ಮ ದುರವಸ್ಥೆಯನ್ನು ನಿಮ್ಮ ಕಣ್ಣೆದುರಿಗೆ ತಪ್ಪಿಸುವಾಗ ನಿಮ್ಮನ್ನು ಲೋಕದ ಸಕಲ ಜನಾಂಗಗಳಲ್ಲಿ ಕೀರ್ತಿ ಸ್ತೋತ್ರಗಳಿಗೆ ಗುರಿಮಾಡುವೆನು>> ಇದು ಯೆಹೋವನ ನುಡಿ.


  Share Facebook  |  Share Twitter

 <<  Zephaniah 3 >> 


Bible2india.com
© 2010-2024
Help
Dual Panel

Laporan Masalah/Saran