Bible 2 India Mobile
[VER] : [KANNADA]     [PL]  [PB] 
 <<  Isaiah 15 >> 

1ಮೋವಾಬಿನ ಬಗ್ಗೆ ದೈವೋಕ್ತಿ. ಒಂದು ರಾತ್ರಿಯಲ್ಲಿ ಮೋವಾಬಿನ ಆರ್ ಪಟ್ಟಣವು ಹಾಳಾಗಿ ನಿರ್ಮೂಲವಾಯಿತು; ಹೌದು, ಒಂದು ರಾತ್ರಿಯಲ್ಲಿ ಮೋವಾಬಿನ ಕೀರ್ ಪಟ್ಟಣವೂ ಹಾಳಾಗಿ ನಿರ್ಮೂಲವಾಯಿತು.

2ಬಯಿತ್ ಮತ್ತು ದೀಬೋನ್ ಊರಿನವರು ಆಳುವುದಕ್ಕಾಗಿ, ತಮ್ಮ ಎತ್ತರವಾದ ಪೂಜಾ ಸ್ಥಳಗಳಿಗೆ ಹೋಗುತ್ತಾರೆ. ನೆಬೋವಿನಲ್ಲಿಯೂ, ಮೇದೆಬದಲ್ಲಿಯೂ ಮೋವಾಬ್ಯರು ಗೋಳಾಡುತ್ತಾರೆ. ಎಲ್ಲರ ತಲೆಯು ಬೋಳಾಗಿರುವುದು, ಎಲ್ಲರ ಗಡ್ಡವು ವಿಕಾರವಾಗಿ ಕತ್ತರಿಸಲ್ಪಡುವುದು.

3ಬೀದಿಗಳಲ್ಲಿ ತಿರುಗುವವರು ನಡುವಿಗೆ ಗೋಣಿತಟ್ಟನ್ನು ಸುತ್ತಿಕೊಂಡಿದ್ದಾರೆ ಮತ್ತು ತಮ್ಮ ಮಾಳಿಗೆಗಳ ಮೇಲೆಯೂ, ಚೌಕಗಳಲ್ಲಿಯೂ ಎಲ್ಲರು ಅರಚುತ್ತಾ ಕಣ್ಣೀರನ್ನು ಸುರಿಸಿ ಸುರಿಸಿ ಗೋಳಾಡುತ್ತಾ ಇಳಿದು ಹೋಗಿದ್ದಾರೆ.

4ಹೆಷ್ಬೋನ್ ಮತ್ತು ಎಲೆಯಾಲೆ ಕೂಗುತ್ತವೆ, ಇವುಗಳ ರೋಧನವು ಯಹಜಿನ ಪಟ್ಟಣದವರೆಗೂ ಕೇಳಿಸುತ್ತದೆ. ಇದರಿಂದ ಮೋವಾಬಿನ ಯುದ್ಧಭಟರು ಕಿರಚಿಕೊಳ್ಳುತ್ತಾರೆ; ಅವರ ಹೃದಯಗಳು ಭಯದಿಂದ ತತ್ತರಿಸುತ್ತದೆ.

5ನನ್ನ ಹೃದಯವು ಮೋವಾಬಿನ ನಿಮಿತ್ತವಾಗಿ ಮೊರೆಯಿಡುತ್ತದೆ, ಅಲ್ಲಿಂದ ಪಲಾಯನವಾದವರು ಚೋಯರಿಗೂ, ಎಗ್ಲತ್ ಶೆಲಿಶೀಯಕ್ಕೂ ಓಡಿಹೋಗುತ್ತಾರೆ, ಅಳುತ್ತಾ ಲೂಹೀಥ್‌ ದಿಣ್ಣೆಯನ್ನು ಹತ್ತುತ್ತಾರೆ, ಹೊರೊನಯಿಮಿನ ದಾರಿಯಲ್ಲಿ ನಡೆಯುತ್ತಾ ನಾಶವಾದೆವಲ್ಲಾ ಎಂದು ಧ್ವನಿಗೈಯುತ್ತಾರೆ.

6ನಿಮ್ರೀಮ್ ಹೊಳೆಯು ಹಾಳಾಯಿತು, ಹಸಿಹುಲ್ಲು ಬಾಡಿತು, ಮೇವು ತೀರಿತು, ಯಾವ ಹಸಿರೂ ಇಲ್ಲ.

7ಆದಕಾರಣ ತಾವು ಸಂಪಾದಿಸಿದ ಆಸ್ತಿಯನ್ನೂ, ಕೂಡಿಸಿಟ್ಟ ಸೊತ್ತನ್ನೂ ನೀರವಂಜಿಯ ಹೊಳೆಯ ಆಚೆಗೆ ಹೊತ್ತುಕೊಂಡು ಹೋಗುತ್ತಾರೆ.

8ಪ್ರಲಾಪವು ಮೋವಾಬಿನ ಎಲ್ಲೆಗಳ ತನಕ ಹಬ್ಬಿದೆ, ಅದರ ಅರಚಾಟವು ಎಗ್ಲಯಿಮಿನವರೆಗೂ, ಬೆಯೇರ್ ಏಲೀಮಿನ ಪರ್ಯಂತರವೂ ವ್ಯಾಪಿಸಿದೆ.

9ದೀಮೋನಿನ ನೀರೆಲ್ಲಾ ರಕ್ತವಾಯಿತು. ಆದರೆ ದೀಮೋನಿನ ಮೇಲೆ ಹೆಚ್ಚು ಬಾಧೆಯನ್ನು, ಅಂದರೆ ಮೋವಾಬ್ಯರಲ್ಲಿ ತಪ್ಪಿಸಿಕೊಂಡವರ ಮೇಲೆಯೂ, ದೇಶದಲ್ಲಿ ಉಳಿದವರ ಮೇಲೆಯೂ ಸಿಂಹವನ್ನು ಬರಮಾಡುವೆನು.



 <<  Isaiah 15 >> 


Bible2india.com
© 2010-2025
Help
Single Panel

Laporan Masalah/Saran