Bible 2 India Mobile
[VER] : [KANNADA]     [PL]  [PB] 
 <<  Revelation 10 >> 

1ತರುವಾಯ ಬಲಿಷ್ಠನಾದ ಮತ್ತೊಬ್ಬ ದೇವದೂತನು ಪರಲೋಕದಿಂದ ಇಳಿದುಬರುವುದನ್ನು ಕಂಡೆನು. ಅವನು ಮೇಘವನ್ನು ಧರಿಸಿಕೊಂಡಿದ್ದನು. ಅವನ ತಲೆಯ ಮೇಲೆ ಕಾಮನಬಿಲ್ಲು ಇತ್ತು. ಅವನ ಮುಖವು ಸೂರ್ಯನೊಪಾದಿಯಲ್ಲಿತ್ತು. ಅವನ ಪಾದಗಳು ಬೆಂಕಿಯ ಕಂಬಗಳಂತಿದ್ದವು.

2ಅವನ ಕೈಯಲ್ಲಿ ಬಿಚ್ಚಿದ್ದ ಒಂದು ಚಿಕ್ಕ ಸುರುಳಿ ಇತ್ತು. ಅವನು ಬಲಗಾಲನ್ನು ಸಮುದ್ರದ ಮೇಲೆಯೂ ಎಡಗಾಲನ್ನು ಭೂಮಿಯ ಮೇಲೆಯೂ ಇಟ್ಟು,

3ಸಿಂಹವು ಘರ್ಜಿಸುವ ಪ್ರಕಾರ ಮಹಾಶಬ್ದದಿಂದ ಕೂಗಿದನು. ಕೂಗಿದಾಗ ಏಳು ಗುಡುಗುಗಳು ಒಂದೊಂದಾಗಿ ಧ್ವನಿಕೊಟ್ಟವು.

4ಆ ಏಳು ಗುಡುಗುಗಳು ನುಡಿದಾಗ ನಾನು ಬರೆಯಬೇಕೆಂದಿದ್ದೆನು. ಆದರೆ, <<ಆ ಏಳು ಗುಡುಗುಗಳು ನುಡಿದಿದ್ದನ್ನು ನೀನು ಬರೆಯದೆ ಗುಪ್ತವಾಗಿಡು>> ಎಂದು ಹೇಳುವ ದೈವವಾಣಿಯನ್ನು ಕೇಳಿದೆನು.

5ಅನಂತರ ಸಮುದ್ರದ ಮೇಲೆಯೂ, ಭೂಮಿಯ ಮೇಲೆಯೂ ನಿಂತಿರುವವನಾಗಿ ನನಗೆ ಕಾಣಿಸಿದ ದೇವದೂತನು ತನ್ನ ಬಲಗೈಯನ್ನು ಪರಲೋಕದ ಕಡೆಗೆ ಎತ್ತಿ,

6ಪರಲೋಕವನ್ನೂ ಅದರಲ್ಲಿರುವ ಸಮಸ್ತವನ್ನೂ, ಭೂಮಿಯನ್ನೂ ಅದರಲ್ಲಿರುವ ಸಮಸ್ತವನ್ನೂ, ಸಮುದ್ರವನ್ನೂ ಅದರಲ್ಲಿರುವ ಸಮಸ್ತವನ್ನೂ ಸೃಷ್ಟಿಸಿ, ಯುಗಯುಗಾಂತರಗಳಲ್ಲಿಯೂ ಜೀವಿಸುವಾತನ ಮೇಲೆ ಆಣೆಯಿಟ್ಟು, <<ಇನ್ನು ತಡಮಾಡದೆ,

7ಏಳನೆಯ ದೇವದೂತನು ಶಬ್ದಮಾಡುವ ದಿನಗಳಲ್ಲಿ ಅಂದರೆ ಅವನು ತುತ್ತೂರಿಯನ್ನು ಊದುವುದಕ್ಕಿರುವ ಸಮಯದಲ್ಲಿ ದೇವರು ಇದುವರೆಗೆ ಗುಪ್ತವಾಗಿಟ್ಟಿದ್ದ ದೇವರ ಮರ್ಮವನ್ನು ತನ್ನ ದಾಸರಾದ ಪ್ರವಾದಿಗಳಿಗೆ ತಿಳಿಸಿದ್ದ ಪ್ರಕಾರ ನೆರವೇರುವುದು>> ಎಂದು ಹೇಳಿದನು.

8ಅನಂತರ ಪರಲೋಕದಿಂದ ನನಗೆ ಕೇಳಿಸಿದ್ದ ಶಬ್ದವು ಮತ್ತೊಮ್ಮೆ ನನ್ನೊಂದಿಗೆ ಮಾತನಾಡಿ, <<ನೀನು ಹೋಗಿ ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ನಿಂತುಕೊಂಡಿರುವ ದೂತನ ಕೈಯಲ್ಲಿರುವ ಆ ಬಿಚ್ಚಿದ ಸುರುಳಿಯನ್ನು ತೆಗೆದುಕೊ>> ಎಂದು ಹೇಳಿತು.

9ನಾನು ಆ ದೂತನ ಬಳಿಗೆ ಹೋಗಿ, <<ಆ ಚಿಕ್ಕ ಸುರುಳಿಯನ್ನು ನನಗೆ ಕೊಡು ಎಂದು ಕೇಳಲು ಅವನು ನನಗೆ, ನೀನು ಅದನ್ನು ತೆಗೆದುಕೊಂಡು ತಿಂದು ಬಿಡು, ಅದು ನಿನ್ನ ಹೊಟ್ಟೆಯನ್ನು ಕಹಿಯಾಗುವಂತೆ ಮಾಡುವುದು, ಆದರೆ ನಿನ್ನ ಬಾಯಿ ಜೇನಿನಂತೆ ಸಿಹಿಯಾಗಿರುವುದು>> ಎಂದು ಹೇಳಿದನು.

10ಆಗ ನಾನು ಆ ಚಿಕ್ಕ ಸುರುಳಿಯನ್ನು ಆ ದೂತನ ಕೈಯಿಂದ ತೆಗೆದುಕೊಂಡು ತಿಂದುಬಿಟ್ಟೆನು. ಅದು ನನ್ನ ಬಾಯಲ್ಲಿ ಜೇನಿನಂತೆ ಸಿಹಿಯಾಗಿತ್ತು, ಅದನ್ನು ತಿಂದ ನಂತರ ನನ್ನ ಹೊಟ್ಟೆಯು ಕಹಿಯಾಯಿತು.

11ಅನಂತರ ಆ ದೂತನು ನನಗೆ, <<ನೀನು ಇನ್ನೂ ಅನೇಕರನ್ನು, ಭಾಷೆಗಳನ್ನೂ, ಅರಸರನ್ನೂ ಕುರಿತು ಪ್ರವಾದನೆ ಹೇಳಬೇಕು>> ಎಂದು ಆಜ್ಞಾಪಿಸಿದನು.



 <<  Revelation 10 >> 


Bible2india.com
© 2010-2025
Help
Single Panel

Laporan Masalah/Saran