Bible 2 India Mobile
[VER] : [KANNADA]     [PL]  [PB] 
 <<  Psalms 19 >> 

1ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ.

2ದಿನವು ದಿನಕ್ಕೆ ದೇವರ ಮಹಿಮೆಯನ್ನು ತಿಳಿಸುತ್ತಿರುವುದು; ರಾತ್ರಿಯು ರಾತ್ರಿಗೆ ಜ್ಞಾನವನ್ನು ಪ್ರಕಟಿಸುತ್ತಿರುವುದು.

3ಶಬ್ದವಿಲ್ಲ, ಮಾತಿಲ್ಲ, ಅವುಗಳ ಸ್ವರ ಕೇಳಿಸುವುದಿಲ್ಲ.

4ಆದರೂ ಅವುಗಳ ಪ್ರಭುತ್ವವು ಭೂಮಿಯಲ್ಲೆಲ್ಲಾ ಪ್ರಸರಿಸಿದೆ; ಅವುಗಳ ನುಡಿಗಳು ಲೋಕದ ಕಟ್ಟಕಡೆಯವರೆಗೂ ವ್ಯಾಪಿಸಿರುತ್ತವೆ. ಅಲ್ಲಿ ದೇವರು ಸೂರ್ಯನಿಗೋಸ್ಕರ ಗುಡಾರವನ್ನು ಏರ್ಪಡಿಸಿದ್ದಾನೆ.

5ಅವನು ತನ್ನ ಮಂಟಪದೊಳಗಿಂದ ಬರುವ ಮದಲಿಂಗನೋ ಎಂಬಂತೆ ಹೊರಟುಬರುವನು. ಅವನು ಶೂರನಂತೆ ತನಗೆ ನೇಮಕವಾದ ಮಾರ್ಗದಲ್ಲಿ ಓಡುವುದಕ್ಕೆ ಉಲ್ಲಾಸಗೊಂಡಿದ್ದಾನೆ.

6ಆಕಾಶದ ಒಂದು ಕಡೆಯಿಂದ ಹೊರಟು ಮತ್ತೊಂದು ಕಡೆಗೆ ಬರುತ್ತಾನೆ; ಅವನ ಬಿಸಿಲಿಗೆ ಮರೆಯಾದದ್ದು ಒಂದೂ ಇಲ್ಲ.

7ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು; ಅದು ಪ್ರಾಣವನ್ನು ಉಜ್ಜೀವಿಸಮಾಡುವಂಥದ್ದು. ಯೆಹೋವನ ಕಟ್ಟಳೆಗಳು ನಂಬಿಕೆಗೆ ಯೋಗ್ಯವಾದದ್ದು; ಅವು ಬುದ್ಧಿಹೀನರಿಗೆ ವಿವೇಕಪ್ರದವಾಗಿದೆ.

8ಯೆಹೋವನ ಆಜ್ಞೆಗಳು ನೀತಿಯುಳ್ಳವುಗಳಾಗಿವೆ; ಮನಸ್ಸನ್ನು ಹರ್ಷಪಡಿಸುತ್ತವೆ. ಯೆಹೋವನ ಆಜ್ಞೆ ಪವಿತ್ರವಾದದ್ದು; ಕಣ್ಣುಗಳನ್ನು ಕಳೆಗೊಳಿಸುತ್ತದೆ.

9ಯೆಹೋವನ ಭಯ ಪರಿಶುದ್ಧವಾಗಿದೆ; ಅದು ಶಾಶ್ವತವಾದದ್ದೇ. ಯೆಹೋವನ ಕಟ್ಟಳೆಗಳು ಯಥಾರ್ಥವಾದವುಗಳು; ಅವು ಕೇವಲ ನ್ಯಾಯವಾಗಿವೆ.

10ಅವು ಬಂಗಾರಕ್ಕಿಂತಲೂ, ಅಪರಂಜಿರಾಶಿಗಿಂತಲೂ ಅಪೇಕ್ಷಿಸತಕ್ಕವುಗಳು. ಅವು ಜೇನಿಗಿಂತಲೂ, ಶೋಧಿಸಿದ ಜೇನುತುಪ್ಪಕ್ಕಿಂತಲೂ ಸಿಹಿಯಾಗಿವೆ.

11ಅವುಗಳ ಮೂಲಕ ನಿನ್ನ ದಾಸನಿಗೆ ವಿವೇಚನೆ ಉಂಟಾಗುತ್ತದೆ; ಅವುಗಳನ್ನು ಕೈಕೊಳ್ಳುವುದರಿಂದ ಬಹಳ ಫಲ ದೊರೆಯುತ್ತದೆ.

12ತನ್ನ ತಪ್ಪುಗಳನ್ನೆಲ್ಲಾ ತಿಳಿದುಕೊಳ್ಳುವವನು ಯಾರು? ಮರೆಯಾದ ದೋಷಗಳಿಂದ ನನ್ನನ್ನು ನಿರ್ಮಲಮಾಡು.

13ಅದಲ್ಲದೆ ಬೇಕೆಂದು ಪಾಪಮಾಡದಂತೆ ನಿನ್ನ ದಾಸನನ್ನು ಕಾಪಾಡು. ಅಂಥ ಪಾಪಗಳು ನನ್ನನ್ನು ಆಳದಿರಲಿ. ಆಗ ನಾನು ತಪ್ಪಿಲ್ಲದವನಾಗಿ ಮಹಾದ್ರೋಹಕ್ಕೆ ಒಳಗಾಗುವುದಿಲ್ಲ.

14ಯೆಹೋವನೇ ನನ್ನ ಶರಣನೇ, ನನ್ನ ವಿಮೋಚಕನೇ, ನನ್ನ ಮಾತುಗಳೂ ಮತ್ತು ನನ್ನ ಹೃದಯದ ಧ್ಯಾನವೂ ನಿನಗೆ ಸಮರ್ಪಕವಾಗಿರಲಿ.



 <<  Psalms 19 >> 


Bible2india.com
© 2010-2025
Help
Single Panel

Laporan Masalah/Saran