Bible 2 India Mobile
[VER] : [KANNADA]     [PL]  [PB] 
 <<  Psalms 148 >> 

1ಯೆಹೋವನಿಗೆ ಸ್ತೋತ್ರ! ಆಕಾಶಮಂಡಲದಿಂದ ಯೆಹೋವನಿಗೆ ಸ್ತುತಿಯುಂಟಾಗಲಿ, ಮಹೋನ್ನತದಲ್ಲಿ ಆತನ ಸ್ತೋತ್ರವು ಕೇಳಿಸಲಿ.

2ಆತನ ಎಲ್ಲಾ ದೂತರೇ, ಆತನನ್ನು ಸ್ತುತಿಸಿರಿ, ಆತನ ಎಲ್ಲಾ ಸೈನ್ಯಗಳೇ, ಆತನನ್ನು ಸ್ತುತಿಸಿರಿ.

3ಸೂರ್ಯ ಮತ್ತು ಚಂದ್ರರೇ, ಆತನನ್ನು ಸ್ತುತಿಸಿರಿ, ಹೊಳೆಯುವ ಎಲ್ಲಾ ನಕ್ಷತ್ರಗಳೇ, ಆತನನ್ನು ಸ್ತುತಿಸಿರಿ.

4ಉನ್ನತೋನ್ನತವಾದ ಆಕಾಶವೇ, ಅದರ ಮೇಲಿರುವ ಜಲರಾಶಿಗಳೇ, ಆತನನ್ನು ಸ್ತುತಿಸಿರಿ.

5ಅವು ಯೆಹೋವನ ನಾಮವನ್ನು ಸ್ತುತಿಸಲಿ, ಆತನು ಅಪ್ಪಣೆಕೊಡಲು ಅವು ಉಂಟಾದವು.

6ಆತನು ಅವುಗಳನ್ನು ಯುಗಯುಗಾಂತರಕ್ಕೂ ಸ್ಥಾಪಿಸಿದ್ದಾನೆ, ಆತನು ಎಂದಿಗೂ ಮೀರಲಾಗದಂಥ ಕಟ್ಟಳೆಯನ್ನು ವಿಧಿಸಿದ್ದಾನೆ.

7ಭೂಮಂಡಲದಿಂದ ಯೆಹೋವನಿಗೆ ಸ್ತುತಿಯುಂಟಾಗಲಿ. ತಿಮಿಂಗಿಲಗಳು, ಆದಿಸಾಗರಗಳು

8ಬೆಂಕಿ, ಕಲ್ಮಳೆ, ಹಿಮ, ಹಬೆ ಇವುಗಳು, ಆತನ ಅಪ್ಪಣೆಯನ್ನು ನೆರವೇರಿಸುವ ಬಿರುಗಾಳಿಯು,

9ಬೆಟ್ಟಗಳು, ಎಲ್ಲಾ ಗುಡ್ಡಗಳು, ಹಣ್ಣಿನ ಮರಗಳು, ಎಲ್ಲಾ ತುರಾಯಿ ಮರಗಳು,

10ಎಲ್ಲಾ ಮೃಗ, ಪಶು, ಪಕ್ಷಿ, ಕ್ರಿಮಿಕೀಟಗಳು,

11ಭೂರಾಜರು, ಎಲ್ಲಾ ಜನಾಂಗಗಳು, ಪ್ರಭುಗಳು, ಸರ್ವದೇಶಾಧಿಪತಿಗಳು,

12ಪ್ರಾಯಸ್ಥರಾದ ಸ್ತ್ರೀಪುರುಷರು, ಮುದುಕರು, ಹುಡುಗರು

13ಯೆಹೋವನನ್ನು ಕೊಂಡಾಡಲಿ. ಆತನ ನಾಮವೊಂದೇ ಮಹತ್ವವುಳ್ಳದ್ದು, ಆತನ ಪ್ರಭಾವವು ಭೂಮ್ಯಾಕಾಶಗಳಲ್ಲಿ ಪ್ರಸರಿಸಿದೆ.

14ಆತನು ತನ್ನ ಪ್ರಜೆಗೋಸ್ಕರ ಘನದ ಕೊಂಬನ್ನು ಎಬ್ಬಿಸಿದ್ದಾನೆ. ಆದುದರಿಂದ ಆತನ ಎಲ್ಲಾ ಭಕ್ತರು, ಆತನ ಸಮೀಪ ಪ್ರಜೆಗಳಾದ ಇಸ್ರಾಯೇಲರು ಹಿಗ್ಗುತ್ತಾರೆ. ಯೆಹೋವನಿಗೆ ಸ್ತೋತ್ರ!



 <<  Psalms 148 >> 


Bible2india.com
© 2010-2025
Help
Single Panel

Laporan Masalah/Saran