Bible 2 India Mobile
[VER] : [KANNADA]     [PL]  [PB] 
 <<  Psalms 141 >> 

1ಯೆಹೋವನೇ, ಮೊರೆಯಿಡುತ್ತೇನೆ, ಬೇಗನೆ ಬಾ, ನಾನು ಮೊರೆಯಿಡುವಾಗ ನನ್ನ ಕೂಗನ್ನು ಲಾಲಿಸು.

2ನನ್ನ ಪ್ರಾರ್ಥನೆಯು ಧೂಪದಂತೆಯೂ, ನಾನು ಕೈಯೆತ್ತುವುದು ಸಂಧ್ಯಾನೈವೇದ್ಯದಂತೆಯೂ ನಿನಗೆ ಸಮರ್ಪಕವಾಗಲಿ.

3ಯೆಹೋವನೇ, ನನ್ನ ಬಾಯಿಗೆ ಕಾವಲಿರಿಸು, ನನ್ನ ತುಟಿಗಳೆಂಬ ಕದವನ್ನು ಕಾಯಿ.

4ನನ್ನ ಹೃದಯವು ದುರಾಚಾರವನ್ನು ಮೆಚ್ಚದಂತೆಯೂ, ನಾನು ದುಷ್ಟರೊಡನೆ ಸೇರಿ ಕೆಟ್ಟ ಕೆಲಸಗಳನ್ನು ನಡೆಸದಂತೆಯೂ ನನ್ನನ್ನು ಕಾಪಾಡು. ಅವರ ಮೃಷ್ಟಾನ್ನವು ನನಗೆ ಬೇಡವೇ ಬೇಡ.

5ನೀತಿವಂತರು ನನ್ನನ್ನು ಹೊಡೆಯಲಿ, ಅದು ನನಗೆ ಉಪಕಾರ, ಅವರು ನನ್ನನ್ನು ಶಿಕ್ಷಿಸಲಿ, ಅದು ನನ್ನ ತಲೆಗೆ ಎಣ್ಣೆಯಂತಿದೆ, ನನ್ನ ತಲೆಯು ಅದನ್ನು ಬೇಡವೆನ್ನದಿರಲಿ. ಆದರೆ ದುಷ್ಟರ ಕೆಟ್ಟತನಕ್ಕೆ ವಿರುದ್ಧವಾಗಿ ದೇವರನ್ನು ಪ್ರಾರ್ಥಿಸುತ್ತಿರುವೆನು.

6ಅವರ ಪ್ರಮುಖರು ಕಡುಬಂಡೆಯಿಂದ ಕೆಳಕ್ಕೆ ದೊಬ್ಬಲ್ಪಟ್ಟ ಮೇಲೆ, ಜನರು ನನ್ನ ಮಾತುಗಳಿಗೆ ಕಿವಿಗೊಡುವರು, ಅವು ಅವರಿಗೆ ಹಿತವಾಗಿರುವವು.

7ಒಬ್ಬನು ಹೊಲವನ್ನು ಉಳುತ್ತಾ, ಹೆಂಟೆಗಳನ್ನು ಒಡೆದು ಚದರಿಸುವ ಪ್ರಕಾರವೇ, ನಮ್ಮ ಎಲುಬುಗಳು ಪಾತಾಳದ್ವಾರದಲ್ಲಿ ಚದರಿಸಲ್ಪಟ್ಟಿರುತ್ತವೆ.

8ಕರ್ತನೇ, ಯೆಹೋವನೇ, ನನ್ನ ದೃಷ್ಟಿ ನಿನ್ನಲ್ಲಿದೆ, ನಿನ್ನನ್ನು ಆಶ್ರಯಿಸಿಕೊಂಡಿದ್ದೇನೆ, ನನ್ನ ಪ್ರಾಣವನ್ನು ಮರಣಕ್ಕೆ ಒಪ್ಪಿಸಬೇಡ.

9ಕೆಡುಕರ ಉರುಲಿನಲ್ಲಿ ಸಿಕ್ಕಿಬೀಳದಂತೆ ನನ್ನನ್ನು ಕಾಪಾಡು, ಅವರು ಬೀಸಿಟ್ಟಿರುವ ಬಲೆಯಿಂದ ನನ್ನನ್ನು ತಪ್ಪಿಸು.

10ದುಷ್ಟರು ತಮ್ಮ ಬಲೆಯಲ್ಲಿ ತಾವೇ ಬಿದ್ದುಹೋಗಲಿ, ಆಗ ನಾನು ತಪ್ಪಿಸಿಕೊಳ್ಳುವೆನು.



 <<  Psalms 141 >> 


Bible2india.com
© 2010-2025
Help
Single Panel

Laporan Masalah/Saran