Bible 2 India Mobile
[VER] : [KANNADA]     [PL]  [PB] 
 <<  Proverbs 2 >> 

1ಕಂದಾ, ನನ್ನ ಮಾತುಗಳನ್ನು ಅಂಗೀಕರಿಸಿ, ನನ್ನ ವಿಧಿಗಳನ್ನು ನಿಧಿಯಂತೆ ಕಾಪಾಡಿಕೋ,

2ನಿನ್ನ ಕಿವಿಯನ್ನು ಜ್ಞಾನದ ಕಡೆಗೂ, ಹೃದಯವನ್ನು ವಿವೇಕದ ಕಡೆಗೂ ತಿರುಗಿಸು;

3ಬುದ್ಧಿಗಾಗಿ ಮೊರೆಯಿಟ್ಟು, ವಿವೇಕಕ್ಕಾಗಿ ಕೂಗಿಕೋ.

4ಅದನ್ನು ಬೆಳ್ಳಿಯಂತೆಯು ಮತ್ತು ನಿಕ್ಷೇಪದಂತೆಯು ಹುಡುಕು;

5ಆಗ ನೀನು ಯೆಹೋವನ ಭಯವನ್ನು ಅರಿತು, ದೈವಜ್ಞಾನವನ್ನು ಪಡೆದುಕೊಳ್ಳುವಿ.

6ಯೆಹೋವನೇ ಜ್ಞಾನವನ್ನು ಕೊಡುವಾತನು, ಆತನ ಬಾಯಿಂದಲೇ ತಿಳುವಳಿಕೆಯೂ, ವಿವೇಕವೂ ಹೊರಟು ಬರುತ್ತವೆ.

7ಆತನು ಯಥಾರ್ಥಚಿತ್ತರಿಗಾಗಿ ಸುಜ್ಞಾನವನ್ನು ಕೂಡಿಸಿಡುವನು. ದೋಷವಿಲ್ಲದೆ ನಡೆಯುವವರಿಗೆ ಗುರಾಣಿಯಾಗಿದ್ದು,

8ನ್ಯಾಯಮಾರ್ಗವನ್ನು ರಕ್ಷಿಸುತ್ತಾ, ತನ್ನ ಭಕ್ತರ ದಾರಿಯನ್ನು ನೋಡಿಕೊಳ್ಳುವನು.

9ಹೀಗಿರಲು ನೀನು ನೀತಿ, ನ್ಯಾಯ, ಧರ್ಮವನ್ನೂ ಅಂದರೆ ಸಕಲ ಸನ್ಮಾರ್ಗಗಳನ್ನು ತಿಳಿದುಕೊಳ್ಳುವಿ.

10ಜ್ಞಾನವು ನಿನ್ನ ಹೃದಯದೊಳಗೆ ಪ್ರವೇಶಿಸುವುದು, ತಿಳುವಳಿಕೆಯು ನಿನ್ನ ಆತ್ಮಕ್ಕೆ ಹಿತಕರವಾಗಿರುವುದು.

11ಬುದ್ಧಿಯು ನಿನಗೆ ಕಾವಲಾಗಿರುವುದು, ವಿವೇಕವು ನಿನ್ನನ್ನು ಕಾಪಾಡುವುದು.

12ಇದರಿಂದ ನೀನು ದುರ್ಮಾರ್ಗದಿಂದಲೂ, ಕೆಟ್ಟ ಮಾತನಾಡುವವರಿಂದಲೂ ತಪ್ಪಿಸಿಕೊಳ್ಳುವಿ.

13ಅವರಾದರೋ ಕತ್ತಲೆಯ ಮಾರ್ಗಗಳನ್ನು ಹಿಡಿಯಬೇಕೆಂದು, ಧರ್ಮಮಾರ್ಗಗಳನ್ನು ತೊರೆದುಬಿಡುವರು.

14ಅವರು ಕೆಟ್ಟದ್ದನ್ನು ಮಾಡುವುದರಲ್ಲಿ ಸಂತೋಷಿಸಿ, ಕೆಟ್ಟವರ ದುಷ್ಟತನದಲ್ಲಿ ಆನಂದಿಸುವರು.

15ಅವರ ಮಾರ್ಗಗಳು ವಕ್ರವಾಗಿವೆ. ಅವರ ನಡತೆಗಳು ದುರ್ನಡತೆಗಳೇ.

16ವಿವೇಕವು ನಿನ್ನನ್ನು ಜಾರಳಿಂದ ಅಂದರೆ ಸವಿಮಾತನಾಡುವ ಪರಸ್ತ್ರೀಯಿಂದ ತಪ್ಪಿಸುವುದು.

17ಅವಳು ತನ್ನ ಯೌವನಕಾಲದ ಕಾಂತನನ್ನು ತ್ಯಜಿಸಿ, ತನ್ನ ದೇವರ ಮುಂದೆ ಮಾಡಿಕೊಂಡ ಒಡಂಬಡಿಕೆಯನ್ನು ಮರೆತುಬಿಟ್ಟಿದ್ದಾಳೆ.

18ಅವಳ ಮನೆಯು ಪಾತಾಳಕ್ಕೆ ಇಳಿಯುವ ದಾರಿ, ಅವಳ ಮಾರ್ಗಗಳು ಪ್ರೇತಲೋಕಕ್ಕೆ ಹೋಗುತ್ತವೆ.

19ಅವಳ ಬಳಿಗೆ ಹೋಗುವವರು ಯಾರೂ ಹಿಂದಿರುಗುವುದಿಲ್ಲ, ಅವರಿಗೆ ಜೀವದ ಮಾರ್ಗವು ದೊರೆಯುವುದೇ ಇಲ್ಲ.

20ಒಳ್ಳೆಯವರ ನಡತೆಯನ್ನು ಅನುಸರಿಸುವಂತೆ ವಿವೇಕವು ನಿನ್ನನ್ನು ಪ್ರೇರೇಪಿಸಿ, ನೀತಿವಂತರ ದಾರಿಗಳನ್ನು ಹಿಡಿಯುವ ಹಾಗೆ ಮಾಡುವುದು.

21ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು.

22ದುಷ್ಟರಾದರೋ ದೇಶದೊಳಗಿಂದ ತೆಗೆದುಹಾಕಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು.



 <<  Proverbs 2 >> 


Bible2india.com
© 2010-2025
Help
Single Panel

Laporan Masalah/Saran