Bible 2 India Mobile
[VER] : [KANNADA]     [PL]  [PB] 
 <<  2 Thessalonians 1 >> 

1ನಮ್ಮ ತಂದೆಯಾದ ದೇವರಲ್ಲಿಯೂ ಕರ್ತನಾದ ಯೇಸು ಕ್ರಿಸ್ತನಲ್ಲಿಯೂ ಇರುವ ಥೆಸಲೋನಿಕದವರ ಸಭೆಗೆ ಪೌಲ, ಸಿಲ್ವಾನ, ಮತ್ತು ತಿಮೊಥೆ ಎಂಬ ನಾವು ಬರೆಯುವುದೇನಂದರೆ,

2ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಲಭಿಸಲಿ.

3ಸಹೋದರರೇ, ನಾವು ಯಾವಾಗಲೂ ನಿಮ್ಮನ್ನು ಕುರಿತು ದೇವರಿಗೆ ಕೃತಜ್ಞತಾಸ್ತುತಿ ಮಾಡುವುದಕ್ಕೆ ಬದ್ಧರಾಗಿದ್ದೇವೆ, ಹಾಗೆ ಮಾಡುವುದು ಯೋಗ್ಯವಾಗಿದೆ. ಏಕೆಂದರೆ ನೀವು ನಂಬಿಕೆಯಲ್ಲಿ ಬಹಳ ಅಭಿವೃದ್ಧಿ ಹೊಂದುತ್ತಾ, ಪರಸ್ಪರವಾದ ಪ್ರೀತಿ ನಿಮ್ಮೆಲ್ಲರಲ್ಲಿಯೂ ಹೆಚ್ಚಾಗುತ್ತಿದೆ.

4ಹೀಗಿರುವುದರಿಂದ ನಿಮಗೆ ಬಂದಿರುವ ಎಲ್ಲಾ ಹಿಂಸೆಗಳಲ್ಲಿಯೂ ನೀವು ಅನುಭವಿಸುತ್ತಿರುವ ಎಲ್ಲಾ ಸಂಕಟಗಳಲ್ಲಿಯೂ ತೋರಿಬಂದ ನಿಮ್ಮ ತಾಳ್ಮೆ ನಂಬಿಕೆಗಳ ನಿಮಿತ್ತ ದೇವ ಜನರ ಸಭೆಗಳಲ್ಲಿ ನಾವೇ ಹೆಮ್ಮೆಯಿಂದ ಮಾತನಾಡುತ್ತೇವೆ.

5ದೇವರ ನೀತಿಯುಳ್ಳ ತೀರ್ಪಿಗೆ ಪ್ರಮಾಣ ಯಾವುದೆಂದರೆ, ನೀವು ಪ್ರಯಾಸಪಡುತ್ತಿರುವ ದೇವರ ರಾಜ್ಯಕ್ಕೆ ನಿಮ್ಮನ್ನು ಯೋಗ್ಯರನ್ನಾಗಿಸುವುದು.

6ನಿಮ್ಮನ್ನು ಸಂಕಟಪಡಿಸುವವರಿಗೆ ಪ್ರತಿಯಾಗಿ ಸಂಕಟವನ್ನೂ, ಸಂಕಟಪಡುವವರಾದ ನಿಮಗೆ ನಮ್ಮೊಡನೆ ಉಪಶಮನವನ್ನೂ ಕೊಡುವುದು ದೇವರ ಎಣಿಕೆಯಲ್ಲಿ ನ್ಯಾಯವಾಗಿದೆಯಷ್ಟೆ.

7ಯೇಸು ಕರ್ತನು ತನ್ನ ಶಕ್ತಿಯುತ ದೇವದೂತರೊಂದಿಗೆ ಅಗ್ನಿ ಜ್ವಾಲೆಗಳ ಮೂಲಕ ಪರಲೋಕದಿಂದ ಪ್ರತ್ಯಕ್ಷನಾಗುವ ಕಾಲದಲ್ಲಿ ಅದನ್ನು ಕೊಡುವನು.

8ಆಗ ನಮ್ಮ ಕರ್ತನಾದ ಯೇಸುವು ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ವಿಧೇಯರಾಗದವರಿಗೂ ಪ್ರತಿಕಾರ ಮಾಡುವನು.

9ಅವರು ಕರ್ತನ ಸಮ್ಮುಖಕ್ಕೂ ಆತನ ಪರಾಕ್ರಮದ ವೈಭವಕ್ಕೂ ದೂರವಾಗಿ ನಿತ್ಯನಾಶನವೆಂಬ ದಂಡನೆಯನ್ನು ಅನುಭವಿಸುವರು.

10ಆ ದಿನದಲ್ಲಿ ಆತನು ಬರುವಾಗ ತನ್ನ ಪರಿಶುದ್ಧ ಜನರಿಂದ ಮಹಿಮೆ ಹೊಂದಿದವನಾಗಿಯೂ ಮತ್ತು ನಾವು ನಿಮಗೆ ಹೇಳಿದ ಸಾಕ್ಷಿಯನ್ನು ನಂಬಿದವರೆಲ್ಲರ ಮೂಲಕ ತನ್ನ ವಿಷಯದಲ್ಲಿ ಆಶ್ಚರ್ಯ ಹುಟ್ಟಿಸುವನು.

11ಆದುದರಿಂದ ನಿಮಗೋಸ್ಕರ ಯಾವಾಗಲೂ ಪ್ರಾರ್ಥನೆಮಾಡಿ, ನಮ್ಮ ದೇವರು ನಿಮ್ಮನ್ನು ಕರೆದದ್ದಕ್ಕೆ ತಾನೇ ನಿಮ್ಮನ್ನು ಯೋಗ್ಯರೆಂದು ಎಣಿಸಬೇಕೆಂತಲೂ, ಸತ್ಕ್ರಿಯೆಗಳಿಗಾಗಿರುವ ನಿಮ್ಮ ಸಕಲ ಆಸೆಗಳನ್ನೂ, ನಂಬಿಕೆಯ ಫಲವಾದ ನಿಮ್ಮ ಕೆಲಸವನ್ನೂ ಶಕ್ತಿಪೂರ್ವಕವಾಗಿ ಈಡೇರಿಸಬೇಕೆಂತಲೂ ಬೇಡಿಕೊಳ್ಳುತ್ತೇವೆ.

12ಹೀಗಿರಲಾಗಿ ನಮ್ಮ ದೇವರು ಮತ್ತು ಕರ್ತನಾದ ಯೇಸು ಕ್ರಿಸ್ತನ ಕೃಪೆಗೆ ಅನುಸಾರವಾಗಿ ನಮ್ಮ ಕರ್ತನಾದ ಯೇಸುಕ್ರಿಸ್ತನ ಹೆಸರು ನಿಮ್ಮಲ್ಲಿ ಮಹಿಮೆಯ ಹೊಂದುವುದು ನೀವೂ ಆತನಲ್ಲಿ ಮಹಿಮೆಯ ಹೊಂದುವಿರಿ.



 <<  2 Thessalonians 1 >> 


Bible2india.com
© 2010-2025
Help
Single Panel

Laporan Masalah/Saran