Bible 2 India Mobile
[VER] : [KANNADA]     [PL]  [PB] 
 <<  2 Corinthians 6 >> 

1ದೇವರೊಡನೆ ದುಡಿಯುತ್ತಿರುವ ನಾವು ನಿಮ್ಮಲ್ಲಿ ವಿಜ್ಞಾಪಿಸುವುದೆನೆಂದರೆ; ದೇವರಿಂದ ಪಡೆದ ಕೃಪೆಯನ್ನು ವ್ಯರ್ಥಮಾಡಬೇಡಿರಿ.

2<<ಸುಪ್ರಸನ್ನತೆಯ ಕಾಲದಲ್ಲಿ ನಿನ್ನ ಮನವಿಯನ್ನು ಕೇಳಿದೆನು, ರಕ್ಷಣೆಯ ದಿನದಲ್ಲಿ ನಿನಗೆ ಸಹಾಯ ಮಾಡಿದೆನು>> ಎಂದು ದೇವರು ಹೇಳುತ್ತಾನಲ್ಲಾ. ನೋಡಿ, ಈಗಲೇ ಆ ಸುಪ್ರಸನ್ನತೆಯ ಕಾಲವು; ಇಂದೇ ಆ ರಕ್ಷಣೆಯ ದಿನ.

3ನಮ್ಮ ಸೇವೆಯು ಯಾರ ಮುಂದೆಯೂ ಅವಹೇಳನಕ್ಕೆ ಗುರಿಯಾಗದಂತೆ, ನಾವು ಯಾರಿಗೂ ಅಡ್ಡಿಯನ್ನು ಒಡ್ಡಲಿಲ್ಲ.

4ಬದಲಾಗಿ, ಎಲ್ಲಾ ವಿಷಯಗಳಲ್ಲಿ ದೇವರ ಸೇವಕರೆಂದು ನಮ್ಮ ಸೇವೆಯನ್ನು ಸಮ್ಮತ ಮಾಡಿಕೊಂಡು, ನಾವು ಸಂಕಟದಲ್ಲಿಯೂ, ಕೊರತೆಗಳಲ್ಲಿಯೂ, ಇಕ್ಕಟ್ಟುಗಳಲ್ಲಿಯೂ, ಪೆಟ್ಟುಗಳಲ್ಲಿಯೂ,

5ದೊಂಬಿ, ಕಲಹ, ಸೆರೆಮನೆ, ಶಿಕ್ಷೆ ಇವುಗಳನ್ನು ಅನುಭವಿಸಿದ್ದೇವೆ. ಮೈಮುರಿದು ಕೆಲಸ ಮಾಡಿದ್ದೇವೆ. ನಿದ್ದೆಗೆಟ್ಟು ಬಳಲಿದ್ದೇವೆ; ಹಸಿವಿನಲ್ಲಿ ಸೊರಗಿದ್ದೇವೆ; ಈ ಎಲ್ಲಾ ವಿಷಯಗಳಲ್ಲಿ ಬಹು ಸಮಾಧಾನವನ್ನು ತೋರಿಸಿದ್ದೇವೆ.

6ಶುದ್ಧಮನಸ್ಸು, ಜ್ಞಾನ, ದೀರ್ಘಶಾಂತಿ, ದಯೆ, ಪವಿತ್ರಾತ್ಮನಲ್ಲಿ, ನಿಷ್ಕಪಟವಾದ ಪ್ರೀತಿ,

7ಸತ್ಯವಾಕ್ಯ, ದೇವರ ಮಹತ್ವ ಇವುಗಳಿಂದ ಕೂಡಿದವರಾಗಿ, ಎಡಬಲಗೈಗಳಲ್ಲಿ ನೀತಿಯೆಂಬ ಆಯುಧಗಳನ್ನು ಧರಿಸಿಕೊಂಡಿದ್ದೇವೆ.

8ನಾವು ಮಾನ ಮತ್ತು ಅವಮಾನ, ಕೀರ್ತಿ ಮತ್ತು ಅಪಕೀರ್ತಿಗಳಲ್ಲಿಯೂ ಸೇವೆಮಾಡಿದ್ದೇವೆ. ಸತ್ಯವಂತರಾದರೂ ಮೋಸಗಾರರೆನಿಸಿಕೊಂಡಿದ್ದೇವೆ.

9ನಾವು ಪ್ರಸಿದ್ಧರಾಗಿದ್ದರೂ ಅಪರಿಚಿತರೆನಿಸಿಕೊಂಡು ಸೇವೆ ಮಾಡಿದ್ದೇವೆ. ಸಾಯುವವರಾಗಿ ತೋರಿದರೂ, ಬದುಕಿದ್ದೇವೆ! ನೋಡಿ, ಶಿಕ್ಷೆಗೆ ಗುರಿಯಾದರೂ ಕೊಲ್ಲಲ್ಪಡದವರಾಗಿದ್ದೇವೆ,

10ದುಃಖಪಡುವವರಾಗಿದ್ದರೂ ಸೇವೆಯಲ್ಲಿ ಯಾವಾಗಲೂ ಸಂತೋಷಪಡುತ್ತೇವೆ, ಬಡವರಾಗಿದ್ದರೂ ಅನೇಕರನ್ನು ಐಶ್ವರ್ಯವಂತರಾಗಿ ಮಾಡಿದ್ದೇವೆ; ಏನೂ ಇಲ್ಲದವರಾಗಿದ್ದರೂ ಎಲ್ಲಾ ಹೊಂದಿದವರಾಗಿದ್ದೇವೆ.

11ಕೊರಿಂಥದವರೇ, ಬಿಚ್ಚುಮನದಿಂದಲೂ ತೆರೆದ ಹೃದಯದಿಂದಲೂ ನಾವು ನಿಮ್ಮೊಡನೆ ಮಾತನಾಡಿದ್ದೇವೆ.

12ನಮ್ಮಲ್ಲಿ ಸಂಕುಚಿತ ಭಾವನೆಯೇನೂ ಇಲ್ಲ. ಇದು ಇರುವುದಾದರೆ ನಿಮ್ಮಲ್ಲೇ.

13ಆದ್ದರಿಂದ ಮಕ್ಕಳಿಗೆ ಹೇಳುವಂತೆ ಹೇಳುತ್ತಿದ್ದೇವೆ; ನಾವು ನಿಮ್ಮನ್ನು ಪೂರ್ಣ ಹೃದಯದಿಂದ ಪ್ರೀತಿಸಿದಂತೆ, ನೀವು ನಮ್ಮನ್ನು ಪೂರ್ಣ ಹೃದಯದಿಂದ ಪ್ರೀತಿಸಿರಿ.

14ನೀವು ಕ್ರಿಸ್ತ ನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಿಯಾಗಬೇಡಿರಿ. ಧರ್ಮಕ್ಕೂ, ಅಧರ್ಮಕ್ಕೂ ಸಹವಾಸವೇನು?

15ಬೆಳಕಿಗೂ, ಕತ್ತಲೆಗೂ ಅನ್ಯೋನ್ಯತೆಯೇನು? ಕ್ರಿಸ್ತನಿಗೂ ಸೈತಾನನಿಗೂ ಒಪ್ಪಂದವೇನು? ವಿಶ್ವಾಸಿಗೂ ಅವಿಶ್ವಾಸಿಗೂ ಪಾಲುಗಾರಿಕೆಯೇನು?

16ದೇವ ಮಂದಿರಕ್ಕೂ, ವಿಗ್ರಹಗಳಿಗೂ ಒಪ್ಪಿಗೆಯೇನು? ನಾವು ದೇವರೇ ಹೇಳಿರುವಂತೆ ಜೀವಸ್ವರೂಪನಾದ ದೇವರ ಮಂದಿರವಾಗಿದ್ದೇವಲ್ಲಾ, <<ನನ್ನ ಜನರಲ್ಲೇ ನಾ ಮನೆಮಾಡುವೆನು, ಅವರ ನಡುವೆಯೇ ನಾ ತಿರುಗಾಡುವೆನು ಅವರಿಗೆ ನಾನೇ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು>> ಎಂದು ಹೇಳಿದ್ದಾನೆ.

17ಆದ್ದರಿಂದ, <<ಅನ್ಯಜನರನ್ನು ಬಿಟ್ಟು ಹೊರಬನ್ನಿರಿ ಅವರಿಂದ ಬೇರ್ಪಟ್ಟು ಬಾಳಿರಿ ಮಲಿನವಾದುದನ್ನು ಮುಟ್ಟದಿರಿ>> ಎಂದು ಕರ್ತನು ಹೇಳುತ್ತಾನೆ.

18ಇದಲ್ಲದೆ, <<ನಾನು ನಿಮ್ಮನ್ನು ಸ್ವೀಕರಿಸಿಕೊಂಡು ನಿಮಗೆ ತಂದೆಯಾಗಿರುವೆನು; ನೀವು ನನಗೆ ಕುಮಾರ, ಕುಮಾರಿಯರು ಆಗಿರುವಿರೆಂದು>> ಸರ್ವಶಕ್ತನಾದ ಕರ್ತನು ಹೇಳುತ್ತಾನೆ.



 <<  2 Corinthians 6 >> 


Bible2india.com
© 2010-2025
Help
Single Panel

Laporan Masalah/Saran