Bible 2 India Mobile
[VER] : [KANNADA]     [PL]  [PB] 
 <<  2 Corinthians 4 >> 

1ಆದ್ದರಿಂದ ದೇವರ ಕರುಣೆಯಿಂದ ಈ ಸೇವೆಯನ್ನು ಹೊಂದಿದವರಾದ ನಾವು ಧೈರ್ಯಗೆಟ್ಟು ಹಿಂಜರಿಯುವುದಿಲ್ಲ.

2ನಾಚಿಕೆಪಡುವಂತಹ ಗುಪ್ತಕಾರ್ಯಗಳನ್ನು ಬಿಟ್ಟು ಕುತಂತ್ರದಲ್ಲಿ ನಡೆಯದೆ ದೇವರ ವಾಕ್ಯವನ್ನು ಬೆರಕೆ ಮಾಡದೆ, ಸತ್ಯವನ್ನು ಪ್ರಾಮಾಣಿಕವಾಗಿ ಬೋಧಿಸುತ್ತಾ ನಾವು ನೀತಿವಂತರೆಂದು ಪ್ರತಿ ಮನುಷ್ಯನ ಮನಸಾಕ್ಷಿಯು ದೇವರ ಮುಂದೆ ಒಪ್ಪಬೇಕಾದ ರೀತಿಯಲ್ಲಿ ನಡೆಯುತ್ತೇವೆ.

3ನಾವು ಸಾರುವ ಸುವಾರ್ತೆಯು ಕೆಲವರಿಗೆ ಮರೆಯಾಗಿರುವುದಾದರೆ ನಾಶಮಾರ್ಗದಲ್ಲಿರುವವರಿಗೇ ಅದು ಮರೆಯಾಗಿರುವುದು.

4ಇವರಲ್ಲಿ ದೇವರ ಪ್ರತಿರೂಪವಾಗಿರುವ ಕ್ರಿಸ್ತನ ತೇಜಸ್ಸನ್ನು ತೋರಿಸುವ ಸುವಾರ್ತೆಯ ಬೆಳಕನ್ನು ನೋಡಬಾರದೆಂದು ಈ ಲೋಕದ ದೇವರು ನಂಬಿಕೆಯಿಲ್ಲದವರ ಮನಸ್ಸನ್ನು ಕುರುಡು ಮಾಡಿದ್ದಾನೆ.

5ನಮ್ಮನ್ನೇ ನಾವು ಪ್ರಚಾರಮಾಡಿಕೊಳ್ಳದೆ ನಮ್ಮನ್ನು ಯೇಸುವಿನ ನಿಮಿತ್ತ ನಿಮ್ಮ ದಾಸರೆಂತಲೂ ಕ್ರಿಸ್ತೇಸುವನ್ನೇ ಕರ್ತನೆಂತಲೂ ಘೋಷಿಸುತ್ತೇವೆ.

6ಯಾಕೆಂದರೆ <<ಕತ್ತಲೆಯೊಳಗಿನಿಂದ ಬೆಳಕು ಪ್ರಕಾಶಿಸಲಿ>> ಎಂದು ಹೇಳಿದ ದೇವರು ತಾನೇ ಯೇಸು ಕ್ರಿಸ್ತನ ಮುಖದಲ್ಲಿ ತೋರುವ ದೇವಮಹಿಮೆಯ ಜ್ಞಾನವೆಂಬ ಪ್ರಕಾಶವು ಅನೇಕರಿಗೆ ಉಂಟಾಗುವುದಕ್ಕಾಗಿ ನಮ್ಮ ಹೃದಯಗಳಲ್ಲಿ ಪ್ರಕಾಶಿಸಿದನು.

7ಮಣ್ಣಿನ ಮಡಿಕೆಯಂತಿರುವ ನಮ್ಮಲ್ಲಿ ಈ ನಿಕ್ಷೇಪವನ್ನು ಇಟ್ಟಿರುವುದರಿಂದ ಇಂತಹ ಮಹಾಶಕ್ತಿಯು ದೇವರದೇ ಹೊರತು ನಮ್ಮೊಳಗಿಂದ ಬಂದದ್ದಲ್ಲವೆಂಬುದು ಸ್ಪಷ್ಟವಾಗಿದೆ.

8ಎಲ್ಲಾದರಲ್ಲಿಯೂ ನಮಗೆ ಇಕ್ಕಟ್ಟು ಇದ್ದರೂ ನಾವು ಸಂಕಟಪಡುವವರಲ್ಲ. ನಾವು ಗೊಂದಲಕ್ಕೀಡಾಗಿದ್ದರೂ ಹತಾಶರಾಗುವವರಲ್ಲ.

9ಹಿಂಸೆಪಡುವವರಾಗಿದ್ದರೂ ಕೈಬಿಡಲ್ಪಟ್ಟವರಲ್ಲ. ಕೆಡವಲ್ಪಟ್ಟವರಾಗಿದ್ದರೂ ನಶಿಸಿಹೊಗುವವರಲ್ಲ.

10ಯೇಸುವಿನ ಜೀವವು ನಮ್ಮ ದೇಹದಲ್ಲಿ ಉಂಟೆಂದು ಪ್ರಕಟಪಡಿಸುವುದಕ್ಕಾಗಿ ಯೇಸುವಿನ ಮರಣಾವಸ್ಥೆಯನ್ನು ನಾವು ಯಾವಾಗಲೂ ದೇಹದಲ್ಲಿ ಅನುಭವಿಸುವವರಾಗಿದ್ದೇವೆ.

11ಯೇಸುವಿನ ಜೀವವು ನಮ್ಮ ಮರ್ತ್ಯ ಶರೀರದಲ್ಲಿ ಉಂಟೆಂದು ತೋರಿಬರುವುದಕ್ಕಾಗಿ ಬದುಕಿರುವ ನಾವು ಯೇಸುವಿನ ನಿಮಿತ್ತ ಯಾವಾಗಲೂ ಮರಣಕ್ಕೆ ಒಪ್ಪಿಸಲ್ಪಡುತ್ತಾ ಇದ್ದೇವೆ.

12ಹೀಗೆ ನಮ್ಮಲ್ಲಿ ಮರಣವು ನಿಮ್ಮಲ್ಲಿ ಜೀವವು ವ್ಯಾಪಿಸುತ್ತಿದೆ.

13<<ನಾನು ನಂಬಿದೆನು. ಆದ್ದರಿಂದ ಮಾತನಾಡಿದೆನು.>> ಎಂಬ ಶಾಸ್ತ್ರೋಕ್ತಿಯಲ್ಲಿ ಕಾಣುವಹಾಗೆ ನಂಬಿಕೆಯ ಅದೇ ಆತ್ಮನು ನಮ್ಮಲ್ಲಿರುವುದರಿಂದ ನಾವು ನಂಬಿದವರಾಗಿ ಮಾತನಾಡುತ್ತೇವೆ.

14ಕರ್ತನಾದ ಯೇಸುವನ್ನು ಎಬ್ಬಿಸಿದಾತನು ನಮ್ಮನ್ನು ಸಹ ಯೇಸುವಿನೊಂದಿಗೆ ಎಬ್ಬಿಸಿ ನಿಮ್ಮ ಜೊತೆಯಲ್ಲಿ ತನ್ನ ಮುಂದೆ ನಿಲ್ಲಿಸುವನೆಂದು ತಿಳಿದವರಾಗಿದ್ದೇವೆ.

15ಆ ಬಾಧೆಗಳೆಲ್ಲಾ ನಿಮ್ಮ ಹಿತಕ್ಕಾಗಿಯೇ ನಮಗೆ ಸಂಭವಿಸುತ್ತವೆ. ಅವುಗಳಲ್ಲಿ ಅಧಿಕವಾಗಿ ದೊರಕುವ ದೈವಕೃಪೆಯು ಬಹು ಜನರೊಳಗೆ ಕೃತಜ್ಞತೆಯನ್ನು ಹುಟ್ಟಿಸುವುದರಿಂದ ದೇವರ ಮಹಿಮೆಗೆ ಅಧಿಕವಾದ ಸ್ತುತಿ ಸ್ತೋತ್ರಗಳು ಉಂಟಾಗುವುದು.

16ಆದ್ದರಿಂದ ನಾವು ಧೈರ್ಯಗೆಡುವುದಿಲ್ಲ. ನಮ್ಮ ದೇಹವು ನಾಶವಾಗುತ್ತಾ ಇದ್ದರೂ ನಮ್ಮ ಅಂತರಂಗವು ದಿನೇ ದಿನೇ ಹೊಸದಾಗುತ್ತಾ ಬರುತ್ತದೆ.

17ಹೇಗೆಂದರೆ ಕ್ಷಣಮಾತ್ರವಿರುವ ನಮ್ಮ ಈ ಸ್ವಲ್ಪ ಸಂಕಟವು ಅತ್ಯಂತಾಧಿಕವಾಗಿ ಪ್ರತಿಫಲವನ್ನು ಉಂಟುಮಾಡಿ ನಮಗೆ ನಿರಂತರವಾಗಿರುವ ಅತಿಶ್ರೇಷ್ಟ ತೇಜಸ್ಸನ್ನು ದೊರಕಿಸುತ್ತದೆ.

18ನಾವು ಕಾಣುವಂಥದ್ದನ್ನು ಲೆಕ್ಕಿಸದೇ ಕಾಣದಿರುವಂಥದ್ದನ್ನು ಎದುರು ನೋಡದೆ ಕಾಣದಿರುವಂಥದ್ದನ್ನು ಲೆಕ್ಕಿಸುವವರಾಗಿದ್ದೇವೆ. ಕಾಣುವಂಥದ್ದು ಸ್ವಲ್ಪ ಕಾಲ ಮಾತ್ರ ಇರುವುದು ಕಾಣದಿರುವಂಥದ್ದು ಸದಾಕಾಲವೂ ಇರುವುದು. ನಿತ್ಯನಿರಂತರವಾದುದೂ ಆಗಿದೆ.



 <<  2 Corinthians 4 >> 


Bible2india.com
© 2010-2025
Help
Single Panel

Laporan Masalah/Saran