1ಮರುವರುಷ ವಸಂತ ಕಾಲದಲ್ಲಿ ಅರಸರು ಯುದ್ಧಕ್ಕೆ ಹೊರಡುವ ಸಮಯದಲ್ಲಿ ಯೋವಾಬನು ಬಲವಾದ ಸೈನ್ಯವನ್ನು ಯುದ್ಧಕ್ಕೆ ಮುನ್ನಡೆಸಿ, ಅಮ್ಮೋನಿಯರ ಪ್ರಾಂತ್ಯಗಳನ್ನು ವಶಪಡಿಸಿಕೊಂಡು ರಬ್ಬಕ್ಕೆ ಹೋಗಿ ಮುತ್ತಿಗೆ ಹಾಕಿದನು. ದಾವೀದನು ಯೆರೂಸಲೇಮಿನಲ್ಲಿಯೇ ಇದ್ದನು. ಯೋವಾಬನು ರಬ್ಬ ಪಟ್ಟಣವನ್ನು ಸ್ವಾಧೀನಮಾಡಿಕೊಂಡನು.
2ದಾವೀದನು ಮಲ್ಕಾಮ್ ಮೂರ್ತಿಯ ತಲೆಯ ಮೇಲಿದ್ದ ಬಂಗಾರದ ಕಿರೀಟವನ್ನು ತೆಗೆದುಕೊಂಡನು. ಅದು ನಾಲ್ಕು ಸಾವಿರ ತೊಲ ತೂಕದ್ದು. ಅದರಲ್ಲಿದ್ದ ಅಮೂಲ್ಯವಾದ ಮಣಿಗಳನ್ನು ದಾವೀದನು ತನ್ನ ಶಿರಸ್ಸಿನಲ್ಲಿ ಧರಿಸಿಕೊಂಡನು. ಅವನು ಆ ಪಟ್ಟಣದಿಂದ ದೊಡ್ಡ ಕೊಳ್ಳೆಯನ್ನು ತೆಗೆದುಕೊಂಡು ಹೋದನು.
3ಊರಿನ ನಿವಾಸಿಗಳನ್ನು ಹಿಡಿದು ಗರಗಸ, ಗುದ್ದಲಿ, ಕೊಡಲಿಗಳಿಂದ ಮಾಡುವ ಕೆಲಸಕ್ಕೆ ನೇಮಿಸಿದನು. ಅಮ್ಮೋನಿಯರ ಎಲ್ಲಾ ಪಟ್ಟಣದವರಿಗೂ ಇದೇ ಗತಿಯಾಯಿತು. ಅನಂತರ ದಾವೀದನು ಸರ್ವಸೈನಿಕರೊಡನೆ ಯೆರೂಸಲೇಮಿಗೆ ಬಂದನು.
4ಅನಂತರ ಫಿಲಿಷ್ಟಿಯರ ಸಂಗಡ ಗೆಜೆರಿನಲ್ಲಿ ಯುದ್ಧ ನಡೆಯಿತು. ಆಗ ಹುಷ ಊರಿನವನಾದ ಸಿಬ್ಬೆಕೈ ಎಂಬುವವನು ರೆಫಾಯನಾದ ಸಿಪ್ಪೈ ಎಂಬುವವನನ್ನು ಕೊಲ್ಲಲು ಫಿಲಿಷ್ಟಿಯರು ಕುಗ್ಗಿಹೋದರು.
5ಫಿಲಿಷ್ಟಿಯರೊಡನೆ ಇನ್ನೊಮ್ಮೆ ಯುದ್ಧ ನಡೆದಾಗ ಯಾಯೀರನ ಮಗನಾದ ಎಲ್ಹಾನಾನನು ಗಿತ್ತೀಯನಾದ ಗೊಲ್ಯಾತನ ತಮ್ಮನಾದ ಲಹ್ಮೀಯನನ್ನು ಕೊಂದನು. ಲಹ್ಮೀಯನ ಬರ್ಜಿಯ ಹಿಡಿಕೆಯು ನೇಕಾರರು ಉಪಯೋಗಿಸುವ ದಂಡಿನಷ್ಟು ಗಾತ್ರವಿತ್ತು.
6ಮತ್ತೊಂದು ಸಾರಿ ಗತ್ ಊರಿನಲ್ಲಿ ಯುದ್ಧನಡೆಯಿತು. ಅಲ್ಲಿ ಒಬ್ಬ ಎತ್ತರವಾದ ಪುರುಷನಿದ್ದನು ಅವನ ಕೈಕಾಲುಗಳಿಗೆ ಆರಾರು ಬೆರಳುಗಳಿದ್ದವು. ಅವನೂ ರೆಫಾಯನು.
7ಅವನು ಇಸ್ರಾಯೇಲರನ್ನು ನಿಂದಿಸಿದಾಗ ದಾವೀದನ ಅಣ್ಣನಾದ ಶಿಮ್ಮನ ಮಗ ಯೋನಾತಾನನು ಅವನನ್ನು ಕೊಂದುಹಾಕಿದನು.
8ಗತ್ ಊರಿನವರಾದ ಈ ರೆಫಾಯರು ದಾವೀದನಿಂದಲೂ ಅವನ ಸೇವಕರಿಂದಲೂ ಹತರಾದರು.
<< 1 Chronicles 20 >>