Bible 2 India Mobile
[VER] : [KANNADA]     [PL]  [PB] 
 <<  1 Peter 5 >> 

1ಸಭೆಯ ಹಿರಿಯರೇ, ಜೊತೆಹಿರಿಯವನಾದ ನಾನು ಕ್ರಿಸ್ತನ ಬಾಧೆಗಳನ್ನು ಕಣ್ಣಾರೆ ಕಂಡವನೂ, ಇನ್ನು ಮುಂದೆ ಪ್ರತ್ಯಕ್ಷವಾಗುವ ಮಹಿಮೆಯಲ್ಲಿ ಪಾಲುಗಾರನೂ ಆಗಿದ್ದು ನಿಮ್ಮನ್ನು ಪ್ರೋತ್ಸಾಹಿಸಿ ಹೇಳುವುದೇನಂದರೆ,

2ನಿಮ್ಮ ಮೇಲ್ವಿಚಾರಣೆಯಲ್ಲಿರುವ ದೇವರ ಮಂದೆಯನ್ನು ಕಾಯಿರಿ. ಬಲವಂತದಿಂದಲ್ಲ ದೇವರ ಚಿತ್ತಾನುಸಾರ ಇಷ್ಟಪೂರ್ವಕವಾಗಿ, ನೀಚವಾದ ದ್ರವ್ಯಾಶೆಯಿಂದಲ್ಲ, ಸಿದ್ಧ ಮನಸ್ಸಿನಿಂದಲೇ ಮೇಲ್ವಿಚಾರಣೆ ಮಾಡಿರಿ.

3ನಿಮ್ಮ ವಶಕ್ಕೆ ಒಪ್ಪಿಸಿಕೊಟ್ಟಿರುವವರ ಮೇಲೆ ದೊರೆತನಮಾಡುವವರಂತೆ ನಡೆಯದೆ ಮಂದೆಗೆ ಮಾದರಿಯಾಗಿಯೇ ನಡೆದುಕೊಳ್ಳಿರಿ.

4ಪ್ರಧಾನ ಕುರುಬನು ಪ್ರತ್ಯಕ್ಷನಾಗುವಾಗ ನೀವು ಎಂದಿಗೂ ಬಾಡದ ಮಹಿಮೆಯ ಕಿರೀಟವನ್ನು ಹೊಂದುವಿರಿ.

5ಯೌವನಸ್ಥರೇ, ಅದೇ ರೀತಿಯಾಗಿ ಹಿರಿಯರಿಗೆ ಅಧೀನರಾಗಿರಿ. ನೀವೆಲ್ಲರೂ ದೀನಮನಸ್ಸೆಂಬ ವಸ್ತ್ರವನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಸೇವೆ ಮಾಡಿರಿ. ಏಕೆಂದರೆ <<ದೇವರು ಅಹಂಕಾರಿಗಳನ್ನು ವಿರೋಧಿಸುತ್ತಾನೆ. ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.>>

6ಹೀಗಿರುವುದರಿಂದ ದೇವರ ಬಲವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ. ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ಎತ್ತುವನು.

7ನಿಮ್ಮ ಚಿಂತಾಭಾರವನ್ನೆಲ್ಲಾ ಆತನ ಮೇಲೆ ಹಾಕಿರಿ ಆತನು ನಿಮಗೋಸ್ಕರ ಚಿಂತಿಸುತ್ತಾನೆ.

8ಸ್ವಸ್ಥಚಿತ್ತರಾಗಿರಿ ಎಚ್ಚರವಾಗಿರಿ. ನಿಮ್ಮ ವಿರೋಧಿಯಾಗಿರುವ ಸೈತಾನನು ಘರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗಾಡುತ್ತಿದ್ದಾನೆ.

9ನೀವು ನಂಬಿಕೆಯಲ್ಲಿ ದೃಢವಾಗಿದ್ದು ಅವನನ್ನು ಎದುರಿಸಿರಿ. ಲೋಕದಲ್ಲಿರುವ ನಿಮ್ಮ ಸಹೋದರರೂ ಅಂಥ ಬಾಧೆಗಳನ್ನೇ ಅನುಭವಿಸುತ್ತಿದ್ದಾರೆಂಬುದು ನಿಮಗೆ ತಿಳಿದಿದೆ.

10ಕ್ರಿಸ್ತನಲ್ಲಿ ನಿಮ್ಮನ್ನು ತನ್ನ ನಿತ್ಯ ಮಹಿಮೆಗೆ ಕರೆದ ಕೃಪಾಪೂರ್ಣನಾದ ದೇವರು ತಾನೇ, ನೀವು ಸ್ವಲ್ಪ ಕಾಲ ಬಾಧೆಪಟ್ಟ ಮೇಲೆ ನಿಮ್ಮನ್ನು ಯಥಾಸ್ಥಿತಿಗೆ ತಂದು ಸ್ಥಿರಪಡಿಸಿ ಬಲಪಡಿಸುವನು.

11ಆತನಿಗೆ ಅಧಿಪತ್ಯವು ಯುಗಯುಗಾಂತರಗಳಲ್ಲಿಯೂ ಇರಲಿ. ಆಮೆನ್.

12ನಿಮ್ಮನ್ನು ಪ್ರೋತ್ಸಾಹಿಸುವುದಕ್ಕೂ ಇದೇ ದೇವರ ನಿಜವಾದ ಕೃಪೆ ಎಂದು ಸಾಕ್ಷಿ ಹೇಳುವುದಕ್ಕೂ ನಾನು ಸಂಕ್ಷೇಪವಾಗಿ ಬರೆದು, ನಂಬಿಗಸ್ತನಾದ ಸಹೋದರನೆಂದು ನಾನು ಎಣಿಸುವ ಸಿಲ್ವಾನನ ಕೈಯಲ್ಲಿ ಇದನ್ನು ಕಳುಹಿಸಿದ್ದೇನೆ. ಈ ನಿಜವಾದ ಕೃಪೆಯಲ್ಲಿ ನಿಲ್ಲಿರಿ.

13ದೇವರು ನಿಮ್ಮೊಂದಿಗೆ ಆರಿಸಿಕೊಂಡಂಥ ಬಾಬೆಲೋನಿನಲ್ಲಿರುವ ಸಭೆಯು ನಿಮಗೆ ವಂದಿಸುತ್ತದೆ. ನನ್ನ ಮಗನಾದ ಮಾರ್ಕನು ಸಹ ನಿಮ್ಮನ್ನು ವಂದಿಸುತ್ತಾನೆ.

14ಪ್ರೀತಿಯಿಂದ ಮುದ್ದಿಟ್ಟು ಒಬ್ಬರನೊಬ್ಬರು ವಂದಿಸಿರಿ. ಕ್ರಿಸ್ತನಲ್ಲಿರುವ ನಿಮ್ಮೆಲ್ಲರಿಗೂ ಸಮಾಧಾನವುಂಟಾಗಲಿ.



 <<  1 Peter 5 >> 


Bible2india.com
© 2010-2025
Help
Single Panel

Laporan Masalah/Saran