Bible 2 India Mobile
[VER] : [KANNADA]     [PL]  [PB] 
 <<  Jonah 3 >> 

1ಯೆಹೋವನ ವಾಕ್ಯವು ಯೋನನಿಗೆ ಎರಡನೆಯ ಸಾರಿ ಉಂಟಾಯಿತು.

2ಅದೇನೆಂದರೆ <<ನೀನು ಹೊರಟು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ನಾನು ನಿನಗೆ ಆಜ್ಞಾಪಿಸುವ ಸಂದೇಶವನ್ನು ಸಾರು>> ಎಂದು ಹೇಳಿದನು.

3ಆಗ ಯೋನನು ಎದ್ದು ಯೆಹೋವನ ಅಪ್ಪಣೆಯಂತೆ ನಿನೆವೆಗೆ ಹೋದನು. ನಿನೆವೆಯು ಮೂರು ದಿನದ ಪ್ರಯಾಣದಷ್ಟು ಅತಿ ವಿಸ್ತಾರವಾದ ಮಹಾದೊಡ್ಡ ಪಟ್ಟಣವಾಗಿತ್ತು.

4ಯೋನನು ಪಟ್ಟಣವನ್ನು ಪ್ರವೇಶಿಸಿ ಒಂದು ದಿನದಷ್ಟು ದೂರ ಪ್ರಯಾಣಮಾಡಿದ ನಂತರ <<ನಲವತ್ತು ದಿನಗಳಾದ ಮೇಲೆ ನಿನೆವೆಯು ಕೆಡವಲ್ಪಡುವುದು>> ಎಂದು ಸಾರತೊಡಗಿದನು.

5ಇದನ್ನು ಕೇಳಿ ನಿನೆವೆಯವರು ದೇವರಲ್ಲಿ ನಂಬಿಕೆಯಿಟ್ಟು ಉಪವಾಸವನ್ನು ಮಾಡಬೇಕೆಂದು ಸಾರಿ ಹೇಳಿದರು; ದೊಡ್ಡವರು ಮೊದಲುಗೊಂಡು ಚಿಕ್ಕವರ ತನಕ ಎಲ್ಲರೂ ಗೋಣಿತಟ್ಟನ್ನು ಸುತ್ತಿಕೊಂಡರು.

6ಆ ಸುದ್ದಿಯು ನಿನೆವೆಯ ಅರಸನಿಗೆ ತಿಳಿಯಲು ಅವನು ಸಿಂಹಾಸನದಿಂದ ಎದ್ದು, ತನ್ನ ನಿಲುವಂಗಿಯನ್ನು ತೆಗೆದುಬಿಟ್ಟು, ಗೋಣಿತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕುಳಿತುಕೊಂಡನು.

7ಇದಲ್ಲದೆ ಅರಸನು ತನ್ನ ರಾಜ್ಯಾಜ್ಞೆಯನ್ನು ನಿನೆವೆಯಲ್ಲಿ ಹೊರಡಿಸಿ ಹೇಳಿದ್ದೇನೆಂದರೆ: <<ಜನ, ಪಶು, ಮಂದೆ, ಹಿಂಡು ಇವುಗಳು ಸಹ ಏನೂ ರುಚಿ ನೋಡುವುದಾಗಲೀ, ತಿನ್ನುವುದಾಗಲೀ, ಕುಡಿಯುವುದಾಗಲೀ ಮಾಡಬಾರದು.

8ಜನರಿಗೂ ಪಶುಗಳಿಗೂ ಗೋಣಿತಟ್ಟು ಹೊದಿಕೆಯಾಗಲಿ; ಎಲ್ಲರೂ ದೇವರಿಗೆ ಬಲವಾಗಿ ಮೊರೆಯಿಡಲಿ; ಒಬ್ಬೊಬ್ಬನು ತನ್ನ ತನ್ನ ದುರ್ಮಾರ್ಗಗಳನ್ನೂ, ತಾನು ನಡಿಸುತ್ತಿದ್ದ ಹಿಂಸೆಯನ್ನೂ ತೊರೆದು ಬಿಡಲಿ.

9ದೇವರು ಒಂದು ವೇಳೆ ಮನಮರುಗಿ, ಮನಸ್ಸನ್ನು ಬದಲಾಯಿಸಿಕೊಂಡು ತನ್ನ ಉಗ್ರಕೋಪವನ್ನು ತೊರೆದರೆ, ನಾವು ನಾಶವಾಗದೆ ಉಳಿದೇವು>> ಎಂಬುದನ್ನು ನಿನೆವೆಯಲ್ಲೆಲ್ಲಾ ಸಾರಿಸಿದನು.

10ದೇವರು ನಿನೆವೆಯವರ ಕೃತ್ಯಗಳನ್ನು ನೋಡಿ, ಅವರು ತಮ್ಮ ದುರ್ಮಾರ್ಗತನದಿಂದ ತಿರುಗಿಕೊಂಡರೆಂದು ತಿಳಿದು ತನ್ನ ಮನಸ್ಸನ್ನು ಬದಲಾಯಿಸಿ, ತಾನು ಅವರಿಗೆ ಮಾಡುವೆನೆಂದು ಪ್ರಕಟಿಸಿದ್ದ ಕೇಡನ್ನು ಮಾಡದೆ ಬಿಟ್ಟನು.


  Share Facebook  |  Share Twitter

 <<  Jonah 3 >> 


Bible2india.com
© 2010-2024
Help
Dual Panel

Laporan Masalah/Saran