Bible 2 India Mobile
[VER] : [KANNADA]     [PL]  [PB] 
 <<  Joshua 4 >> 

1ಜನರೆಲ್ಲರು ಯೊರ್ದನಿನ ಆಚೆಗೆ ದಾಟಿದ ಮೇಲೆ ಯೆಹೋವನು ಯೆಹೋಶುವನಿಗೆ

2<<ನೀನು ಜನರೊಳಗಿಂದ ಕುಲಕ್ಕೆ ಒಬ್ಬನಂತೆ ಹನ್ನೆರಡು ಮಂದಿಯನ್ನು ಆರಿಸಿಕೊಂಡು

3ಯೊರ್ದನಿನ ಮಧ್ಯದಲ್ಲಿ ಯಾಜಕರು ನಿಂತಿದ್ದ ಸ್ಥಳದಿಂದ ಹನ್ನೆರಡು ಕಲ್ಲುಗಳನ್ನು ಎತ್ತಿ ಅವುಗಳನ್ನು ನಿಮ್ಮ ಸಂಗಡ ಈಚೇ ದಡಕ್ಕೆ ತಂದು ನೀವು ಈ ರಾತ್ರಿ ತಂಗುವ ಸ್ಥಳದಲ್ಲಿ ನಿಲ್ಲಿಸಿರಿ>> ಎಂದು ಆಜ್ಞಾಪಿಸು ಎಂದನು.

4ಆಗ ಯೆಹೋಶುವನು ತಾನು ಇಸ್ರಾಯೇಲ್ಯರೊಳಗಿಂದ ಕುಲಕ್ಕೆ ಒಬ್ಬನಂತೆ ಆರಿಸಿಕೊಂಡ ಹನ್ನೆರಡು ಮಂದಿಯನ್ನು ಕರೆದು ಅವರಿಗೆ

5<<ನೀವು ನಿಮ್ಮ ದೇವರಾದ ಯೆಹೋವನ ಮಂಜೂಷದ ಮುಂದಾಗಿ ಯೊರ್ದನಿನ ಮಧ್ಯಕ್ಕೆ ಹೋಗಿ ಇಸ್ರಾಯೇಲರ ಕುಲಗಳ ಸಂಖ್ಯೆಗೆ ಸರಿಯಾಗುವಂತೆ ಪ್ರತಿಯೊಬ್ಬನು ಒಂದೊಂದು ಕಲ್ಲನ್ನು ಹೆಗಲ ಮೇಲೆ ಹೊತ್ತುಕೊಂಡು ಬನ್ನಿರಿ.

6ಅವು ನಿಮ್ಮ ಮಧ್ಯದಲ್ಲಿ ಗುರುತಾಗಿರುವವು. ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು <ಈ ಕಲ್ಲುಗಳು ಏನು ಸೂಚಿಸುತ್ತವೆ?> ಎಂದು ನಿಮ್ಮನ್ನು ಕೇಳುವಾಗ

7ನೀವು ಅವರಿಗೆ ಯೆಹೋವನ ಒಡಂಬಡಿಕೆಯ ಮುಂಜೂಷವು ಯೊರ್ದನ್ ನದಿ ದಾಟುವಾಗ ಅದರ ಮುಂದೆ ಯೊರ್ದನಿನ ನೀರು ನಿಂತುಹೋಯಿತೆಂದು ಹೇಳಿರಿ. ಯೊರ್ದನಿನ ನೀರು ನಿಂತು ಹೋಯಿತೆಂಬುದಕ್ಕೆ ಈ ಕಲ್ಲುಗಳು ಇಸ್ರಾಯೇಲ್ಯರಿಗೆ ಸದಾಕಾಲಕ್ಕೂ ಸಾಕ್ಷಿಗಳಾಗಿರುವವು>> ಅಂದನು.

8ಇಸ್ರಾಯೇಲ್ಯರು ಯೆಹೋಶುವನು ಆಜ್ಞಾಪಿಸಿದಂತೆಯೇ ಮಾಡಿದರು. ಯೆಹೋವನು ಯೆಹೋಶುವನಿಗೆ ಹೇಳಿದ ಪ್ರಕಾರ ಅವರು ಇಸ್ರಾಯೇಲ್ಯರ ಕುಲಸಂಖ್ಯೆಗೆ ಅನುಸಾರವಾಗಿ ಯೊರ್ದನಿನ ಮಧ್ಯದಿಂದ ಹನ್ನೆರಡು ಕಲ್ಲುಗಳನ್ನು ಎತ್ತಿ ತಾವು ಇಳುಕೊಳ್ಳುವ ಸ್ಥಳಕ್ಕೆ ತಂದು ಅಲ್ಲಿ ಅವುಗಳನ್ನು ನಿಲ್ಲಿಸಿದರು.

9ಇದಲ್ಲದೆ ಯೆಹೋಶುವನು ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು, ಯೊರ್ದನಿನ ಮಧ್ಯದಲ್ಲಿ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ನಿಂತಿದ್ದ ಸ್ಥಳದಲ್ಲಿ ನಿಲ್ಲಿಸಿದನು. ಅವು ಇಂದಿನವರೆಗೂ ಅಲ್ಲಿಯೇ ಇವೆ.

10ಮೋಶೆಯು ಆಜ್ಞಾಪಿಸಿದಂತೆ ಯೆಹೋಶುವನು ಜನರಿಗೆ ತಿಳಿಸಿದ ಯೆಹೋವನ ಅಪ್ಪಣೆಗಳನ್ನೆಲ್ಲಾ ಅವರು ನೆರವೇರಿಸುವ ತನಕ ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿನ ಮಧ್ಯದಲ್ಲೇ ನಿಂತರು.

11ಜನರು ಬೇಗನೆ ಹೊಳೆ ದಾಟಿದರು. ಅವರೆಲ್ಲರು ಆಚೆ ದಡ ಸೇರಿದ ಮೇಲೆ ಯಾಜಕರು ಯೆಹೋವನ ಮಂಜೂಷಸಹಿತವಾಗಿ ಹೊಳೆ ದಾಟಿ ಜನರ ಎದುರಿನಲ್ಲಿ ಹೋದರು.

12ರೂಬೇನ್ಯರೂ, ಗಾದ್ಯರೂ, ಮನಸ್ಸೆ ಕುಲದ ಅರ್ಧ ಗೋತ್ರದವರೂ ಮೋಶೆಯು ತಮಗೆ ಆಜ್ಞಾಪಿಸಿದಂತೆ ಯುದ್ಧಸನ್ನದ್ದರಾಗಿ ಇಸ್ರಾಯೇಲ್ಯರ ಮುಂದಾಗಿ ಹೊರಟು ಹೊಳೆದಾಟಿದರು.

13ಸುಮಾರು ನಾಲ್ವತ್ತು ಸಾವಿರ ಭಟರು ಯುದ್ಧಮಾಡುವುದಕ್ಕಾಗಿ ಯೆಹೋವನ ಸಮ್ಮುಖದಲ್ಲಿ ಯೆರಿಕೋವಿನ ಬೈಲಿಗೆ ಬಂದರು:

14ಆ ದಿನದಲ್ಲಿ ಯೆಹೋವನು ಯೆಹೋಶುವನನ್ನು ಎಲ್ಲಾ ಇಸ್ರಾಯೇಲ್ಯರ ಮುಂದೆ ಘನಪದಿಸಿದನು. ಅವರು ಮೋಶೆಗೆ ಹೇಗೆ ನಡೆದುಕೊಂಡರೋ ಹಾಗೆಯೇ ಯೆಹೊಶುವನು ಭಯ ಮತ್ತು ಗೌರವದಿಂದ ನಡೆದುಕೊಂಡರು .

15-16 ಯೆಹೋವನು ಯೆಹೋಶುವನ ಸಂಗಡ ಮಾತನಾಡಿ <<ಆಜ್ಞಾಶಾಸನಗಳ ಮಂಜೂಷವನ್ನು ಹೊತ್ತ ಯಾಜಕರಿಗೆ ಯೊರ್ದನಿನ ಹೊಳೆಯಿಂದ ಮೇಲೆ ಬರಬೇಕೆಂದು ಆಜ್ಞಾಪಿಸು>> ಎಂದನು.

17ಆಗ ಯೆಹೋಶುವನು ಆ ಯಾಜಕರಿಗೆ ಯೊರ್ದನ ಹೊಳೆಯಿಂದ ಹೊರಕ್ಕೆ ಬರಬೇಕೆಂದು ಆಜ್ಞಾಪಿಸಿದನು.

18ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿನಿಂದ ಮೇಲೆ ಬಂದು ಒಣನೆಲದಲ್ಲಿ ತಮ್ಮ ಕಾಲುಗಳನ್ನಿಟ್ಟ ಕೂಡಲೇ ನೀರು ಮೊದಲಿನಂತೆ ಬಂದು, ಯೊರ್ದನ್ ಹೊಳೆಯು ದಡಮೀರಿ ಹರಿಯಿತು.

19ಜನರು ಮೊದಲನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಯೊರ್ದನನ್ನು ದಾಟಿ ಬಂದು ಯೆರಿಕೋವಿನ ಪೂರ್ವ ಗಡಿಯಲ್ಲಿರುವ ಗಿಲ್ಗಾಲಿನಲ್ಲಿ ಬಂದು ತಂಗಿದರು.

20ಯೆಹೋಶುವನು ಇಸ್ರಾಯೇಲರು ಯೊರ್ದನಿನಿಂದ ತೆಗೆದುಕೊಂಡು ಬಂದಿದ್ದ ಹನ್ನೆರಡು ಕಲ್ಲುಗಳನ್ನು ಗಿಲ್ಗಾಲಿನಲ್ಲೇ ನಿಲ್ಲಿಸಿದನು.

21ಇಸ್ರಾಯೇಲ್ಯರಿಗೆ, <<ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು ಈ ಕಲ್ಲುಗಳನ್ನು ಏಕೆ ಹೀಗೆ ನಿಲ್ಲಿಸಿದ್ದಾರೆಂದು ನಿಮ್ಮನ್ನು ಕೇಳಿದರೆ ನೀವು ಅವರಿಗೆ

22<ಇಸ್ರಾಯೇಲ್ಯರು ಒಣನೆಲವಾಗಿದ್ದ ಈ ಯೊರ್ದನನ್ನು ದಾಟಿ ಬಂದ್ದದರ ಗುರುತು> ಎಂದು ಹೇಳಿರಿ.

23ನಿಮ್ಮ ದೇವರಾದ ಯೆಹೋವನು ನಮ್ಮಕಣ್ಣು ಮುಂದೆ ಕೆಂಪುಸಮುದ್ರವನ್ನು ಬತ್ತಿಸಿ, ನಮ್ಮನ್ನು ದಾಟಿಸಿದಂತೆ ಈಗ ನಿಮ್ಮ ಕಣ್ಣು ಮುಂದೆಯೇ ಈ ಯೊರ್ದನನ್ನು ಬತ್ತಿಸಿ, ನಿಮ್ಮನ್ನು ದಾಟಿಸಿದ್ದಾನೆ.

24ಇದರಿಂದ ಭೂನಿವಾಸಿಗಳೆಲ್ಲರೂ ಯೆಹೋವನ ಹಸ್ತವು ಪರಾಕ್ರಮವುಳ್ಳದ್ದೆಂದು ತಿಳಿದುಕೊಳ್ಳುವ ಹಾಗೆಯೂ ನಿಮ್ಮ ದೇವರಾದ ಯೆಹೋವನಿಗೆ ಯಾವಾಗಲೂ ಭಯಪಡುವವರಾಗಿರುವರು>> ಎಂದನು.


  Share Facebook  |  Share Twitter

 <<  Joshua 4 >> 


Bible2india.com
© 2010-2024
Help
Dual Panel

Laporan Masalah/Saran