Bible 2 India Mobile
[VER] : [KANNADA]     [PL]  [PB] 
 <<  John 10 >> 

1<<ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಕುರಿಹಟ್ಟಿಯೊಳಗೆ ಬಾಗಿಲಿನಿಂದ ಬಾರದೆ, ಬೇರೆ ಕಡೆಯಿಂದ ಹತ್ತಿ ಬರುವವನು ಕಳ್ಳನೂ, ದರೋಡೆಕೋರನೂ ಆಗಿದ್ದಾನೆ.

2ಆದರೆ ಬಾಗಿಲಿನ ಮೂಲಕ ಪ್ರವೇಶಿಸುವವನೇ ಆ ಕುರಿಗಳ ಕುರುಬನು.

3ಬಾಗಿಲು ಕಾಯುವವನು ಅವನಿಗೆ ಬಾಗಿಲನ್ನು ತೆರೆಯುತ್ತಾನೆ; ಕುರಿಗಳು ಅವನ ಸ್ವರಕ್ಕೆ ಕಿವಿಗೊಡುತ್ತವೆ. ಅವನು ತನ್ನ ಸ್ವಂತ ಕುರಿಗಳ ಹೆಸರು ಹೇಳಿ ಕರೆದು ಅವುಗಳನ್ನು ಹೊರಗೆ ಬಿಡುತ್ತಾನೆ.

4ತನ್ನ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ಮೇಲೆ ತಾನು ಅವುಗಳ ಮುಂದೆ ಹೋಗುತ್ತಾನೆ. ಕುರಿಗಳು ಅವನ ಸ್ವರವನ್ನು ತಿಳಿದಿರುವುದರಿಂದ ಅವನನ್ನು ಹಿಂಬಾಲಿಸುತ್ತವೆ.

5ಆದರೆ ಅವು ಅಪರಿಚಿತನನ್ನು ಹಿಂಬಾಲಿಸದೇ ಅವನ ಬಳಿಯಿಂದ ಓಡಿಹೋಗುವುದಿಲ್ಲ. ಏಕೆಂದರೆ ಅವು ಅಪರಿಚಿತರ ಸ್ವರವನ್ನು ಗುರುತಿಸುವುದಿಲ್ಲ>> ಎಂದು ನಿಮಗೆ ಹೇಳುತ್ತೇನೆ.

6ಈ ಸಾಮ್ಯವನ್ನು ಯೇಸು ಅವರಿಗೆ ಹೇಳಿದನು. ಆದರೂ ಆತನು ಹೇಳಿದ ವಿಷಯಗಳ ಅರ್ಥ ಏನೆಂಬುದು ಅವರು ಗ್ರಹಿಸಲಿಲ್ಲ.

7ಆಗ ಯೇಸು ಪುನಃ ಅವರಿಗೆ, <<ನಿಮಗೆ ನಿಜನಿಜವಾಗಿ ಹೇಳುತ್ತೇನೆ; ಕುರಿಗಳಿಗೆ ನಾನೇ ಬಾಗಿಲಾಗಿದ್ದೇನೆ,

8ನನಗಿಂತ ಮೊದಲು ಬಂದವರೆಲ್ಲರು ಕಳ್ಳರೂ, ದರೋಡೆಕೋರರೂ ಆಗಿದ್ದರು. ಆದರೆ ಕುರಿಗಳು ಅವರಿಗೆ ಕಿವಿಗೊಡಲಿಲ್ಲ.

9ನಾನೇ ಆ ಬಾಗಿಲು. ನನ್ನ ಮುಖಾಂತರವಾಗಿ ಯಾವನಾದರೂ ಒಳಗೆ ಪ್ರವೇಶಿಸಿದರೆ ಅವನು ಸುರಕ್ಷಿತನಾಗಿದ್ದು ಒಳಗೆ ಹೋಗುವನು, ಹೊರಗೆ ಬರುವನು ಮತ್ತು ಮೇವನ್ನು ಕಂಡುಕೊಳ್ಳುವನು.

10ಕಳ್ಳನಾದರೋ ಕದ್ದುಕೊಳ್ಳುವುದಕ್ಕೂ, ಕೊಯ್ಯುವುದಕ್ಕೂ ಮತ್ತು ನಾಶಮಾಡುವುದಕ್ಕೂ ಬರುತ್ತಾನೆಯೇ ಹೊರತು ಮತ್ತಾವುದಕ್ಕೂ ಬರುವುದಿಲ್ಲ. ನಾನಾದರೋ ಅವುಗಳಿಗೆ ಜೀವವು ಇರಬೇಕೆಂತಲೂ ಅದು ಸಮೃದ್ಧಿಯಾಗಿರಬೇಕೆಂತಲೂ ಬಂದೆನು.

11<<ನಾನೇ ಒಳ್ಳೆಯ ಕುರುಬನು. ಒಳ್ಳೆಯ ಕುರುಬನು ತನ್ನ ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ.

12ಕೂಲಿಯಾಳು ಕುರಿಗಳ ಕುರುಬನೂ ಒಡೆಯನೂ ಆಗಿರದೆ, ಅವನು ತೋಳ ಬರುವುದನ್ನು ನೋಡುತ್ತಲೇ ಕುರಿಗಳನ್ನು ಬಿಟ್ಟು ಓಡಿ ಹೋಗುತ್ತಾನೆ. ಆಗ ತೋಳವು ಕುರಿಗಳನ್ನು ಹಿಡಿದುಕೊಂಡು ಮಂದೆಯನ್ನು ಚದರಿಸುತ್ತದೆ.

13ಅವನು ಕೇವಲ ಕೂಲಿಯಾಳಾಗಿರುವುದರಿಂದ, ಕುರಿಗಳ ಚಿಂತೆ ಅವನಿಗಿಲ್ಲದೆ ಓಡಿ ಹೋಗುತ್ತಾನೆ.

14ನಾನೇ ನಿಜವಾದ ಒಳ್ಳೆಯ ಕುರುಬನು. ನನ್ನ ಕುರಿಗಳನ್ನು ನಾನು ಬಲ್ಲವನಾಗಿದ್ದೇನೆ. ನನ್ನ ಕುರಿಗಳು ನನ್ನನ್ನು ಬಲ್ಲವು.

15ತಂದೆಯು ನನ್ನನ್ನು ತಿಳಿದಿರುವಂತೆಯೇ, ನಾನು ತಂದೆಯನ್ನು ತಿಳಿದಿದ್ದೇನೆ; ಮತ್ತು ನಾನು ಕುರಿಗಳಿಗೋಸ್ಕರ ನನ್ನ ಪ್ರಾಣವನ್ನೇ ಕೊಡುತ್ತೇನೆ.

16ಇದಲ್ಲದೆ ಈ ಮಂದೆಗೆ ಸೇರದಿರುವ ಇನ್ನೂ ಬೇರೆ ಕುರಿಗಳು ನನಗಿವೆ, ಅವುಗಳನ್ನೂ ಸಹ ನಾನು ಕರೆ ತರಬೇಕು. ಅವು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಆಗ ಒಂದೇ ಕುರಿಹಿಂಡು ಆಗುವುದು ಮತ್ತು ಒಬ್ಬನೇ ಕುರುಬನು ಇರುವನು.

17ತಂದೆಯು ನನ್ನನ್ನು ಪ್ರೀತಿಸುತ್ತಾನೆ ಏಕೆಂದರೆ, ನಾನು ನನ್ನ ಪ್ರಾಣವನ್ನು ಮರಳಿ ಪಡೆದುಕೊಳ್ಳುವಂತೆ ಅದನ್ನು ಕೊಡುತ್ತಿದ್ದೇನೆ.

18ನನ್ನ ಪ್ರಾಣವನ್ನು ಯಾರೂ ನನ್ನಿಂದ ತೆಗೆದುಕೊಳ್ಳುವುದಿಲ್ಲ. ಆದರೆ ನನ್ನಷ್ಟಕ್ಕೆ ನಾನೇ ಅದನ್ನು ಕೊಡುತ್ತೇನೆ. ಅದನ್ನು ಕೊಡುವುದಕ್ಕೆ ನನಗೆ ಅಧಿಕಾರ ಉಂಟು. ಅದನ್ನು ಪುನಃ ಪಡೆದುಕೊಳ್ಳುವುದಕ್ಕೂ ನನಗೆ ಅಧಿಕಾರವಿದೆ. ಈ ಆಜ್ಞೆಯನ್ನು ನಾನು ನನ್ನ ತಂದೆಯಿಂದ ಹೊಂದಿದ್ದೇನೆ>> ಎಂದನು.

19ಈ ಮಾತುಗಳ ದೆಸೆಯಿಂದ ಯೆಹೂದ್ಯರ ಮಧ್ಯದಲ್ಲಿ ಪುನಃ ಬೇಧ ಉಂಟಾಯಿತು.

20ಅವರಲ್ಲಿ ಅನೇಕರು ಆತನಿಗೆ, <<ದೆವ್ವ ಹಿಡಿದಿದೆ, ಹುಚ್ಚನಾಗಿದ್ದಾನೆ, ನೀವು ಏಕೆ ಆತನ ಮಾತುಗಳನ್ನು ಕೇಳುತ್ತೀರಿ?>> ಎಂದರು.

21ಇನ್ನು ಕೆಲವರು, <<ಇವು ದೆವ್ವಹಿಡಿದವನ ಮಾತುಗಳಲ್ಲ, ದೆವ್ವವು ಕುರುಡನ ಕಣ್ಣುಗಳನ್ನು ತೆರೆಯಲು ಸಾಧ್ಯವೇ?>> ಎಂದರು.

22ಆನಂತರ ಯೆರೂಸಲೇಮಿನಲ್ಲಿ ದೇವಾಲಯದ ಪ್ರತಿಷ್ಠೆಯ ಹಬ್ಬವು ನಡೆಯಿತು. ಅದು ಚಳಿಗಾಲವಾಗಿತ್ತು.

23ಯೇಸು ದೇವಾಲಯದೊಳಗೆ ಸೊಲೊಮೋನನ ಮಂಟಪದಲ್ಲಿ ತಿರುಗಾಡುತ್ತಾ ಇರುವಾಗ,

24ಯೆಹೂದ್ಯರು ಆತನನ್ನು ಸುತ್ತುವರೆದು ಆತನಿಗೆ, <<ಇನ್ನು ಎಷ್ಟು ಕಾಲ ನಮ್ಮನ್ನು ಸಂದಿಗ್ಧದಲ್ಲಿ ಇಡುತ್ತಿ? ನೀನು ಕ್ರಿಸ್ತನಾಗಿದ್ದರೆ ಅದನ್ನು ನಮಗೆ ಸ್ಪಷ್ಟವಾಗಿ ಹೇಳು>> ಎಂದರು.

25ಅದಕ್ಕೆ ಯೇಸು, <<ನಾನು ನಿಮಗೆ ಹೇಳಿದೆನು, ಆದರೆ ನೀವು ನಂಬುವುದಿಲ್ಲ. ನನ್ನ ತಂದೆಯ ಹೆಸರಿನಲ್ಲಿ ನಾನು ಮಾಡುವ ಕ್ರಿಯೆಗಳೇ ನನ್ನ ವಿಷಯವಾಗಿ ಸಾಕ್ಷಿಯಾಗಿವೆ.

26ಆದರೂ, ನೀವು ನಂಬದೆ ಇದ್ದೀರಿ, ಏಕೆಂದರೆ ನೀವು ನನ್ನ ಕುರಿಗಳಲ್ಲ.

27ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ನಾನು ಅವುಗಳನ್ನು ಬಲ್ಲೆನು. ಅವು ನನ್ನನ್ನು ಹಿಂಬಾಲಿಸುತ್ತವೆ.

28ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ. ಅವು ಎಂದೆಂದಿಗೂ ನಾಶವಾಗುವುದೇ ಇಲ್ಲ. ಅವುಗಳನ್ನು ಯಾರೂ ನನ್ನ ಕೈಯಿಂದ ಕಸಿದುಕೊಳ್ಳಲಾರರು.

29ಅವುಗಳನ್ನು ನನಗೆ ಕೊಟ್ಟ ನನ್ನ ತಂದೆಯು ಎಲ್ಲರಿಗಿಂತ ಮಹೋನ್ನತನು. ಅವುಗಳನ್ನು ನನ್ನ ತಂದೆಯ ಕೈಯಿಂದ ಯಾರೂ ಕಸಿದುಕೊಳ್ಳಲಾರರು.

30ನಾನೂ ಮತ್ತು ನನ್ನ ತಂದೆಯೂ ಒಂದಾಗಿದ್ದೇವೆ>> ಎಂದನು.

31ಆಗ ಯೆಹೂದ್ಯರು ಆತನನ್ನು ಕೊಲ್ಲಬೇಕೆಂದು ತಿರುಗಿ ಕಲ್ಲುಗಳನ್ನು ತೆಗೆದುಕೊಂಡರು,

32ಯೇಸು ಅವರಿಗೆ, <<ನನ್ನ ತಂದೆಯಿಂದ ಅನೇಕ ಒಳ್ಳೆಯ ಕ್ರಿಯೆಗಳನ್ನು ನಿಮಗೆ ತೋರಿಸಿದ್ದೇನೆ. ಅವುಗಳಲ್ಲಿ ಯಾವ ಕ್ರಿಯೆಗಳ ನಿಮಿತ್ತ ನೀವು ನನ್ನ ಮೇಲೆ ಕಲ್ಲೆಸೆಯಬೇಕೆಂದಿದ್ದೀರಿ?>> ಎಂದು ಕೇಳಿದ್ದಕ್ಕೆ,

33ಯೆಹೂದ್ಯರು, <<ನಾವು ನಿನ್ನ ಮೇಲೆ ಕಲ್ಲೆಸೆಯುವುದು ಒಳ್ಳೆಯ ಕಾರ್ಯಗಳಿಗಾಗಿ ಅಲ್ಲ, ಆದರೆ ದೇವದೂಷಣೆಗಾಗಿಯೂ ಮತ್ತು ನೀನು ಮನುಷ್ಯನಾಗಿದ್ದು ನಿನ್ನನ್ನು ನೀನೇ ದೇವರನ್ನಾಗಿ ಮಾಡಿಕೊಳ್ಳುವುದಕ್ಕಾಗಿಯೂ ನಾವು ನಿನ್ನ ಮೇಲೆ ಕಲ್ಲೆಸೆಯುತ್ತೇವೆ>> ಎಂದು ಉತ್ತರ ಕೊಟ್ಟರು.

34ಅದಕ್ಕೆ ಯೇಸು, << <ನೀವು ದೇವರುಗಳೇ ಆಗಿದ್ದೀರಿ ಎಂದು ನಾನು ಹೇಳಿದೆನು> ಎಂಬುದಾಗಿ ನಿಮ್ಮ ಧರ್ಮಶಾಸ್ತ್ರದಲ್ಲಿ ಬರೆದಿಲ್ಲವೋ?

35ಧರ್ಮಶಾಸ್ತ್ರವು ನಿರಾರ್ಥಕವೇನೂ ಅಲ್ಲ. ದೇವರ ವಾಕ್ಯವನ್ನು ಹೊಂದಿರುವವರಿಗೆ <ದೇವರುಗಳೆಂದೂ,> ಆತನು ಕರೆದಿರುವುದಾದರೆ

36ತಂದೆಯು ಪ್ರತಿಷ್ಠೆಮಾಡಿ ಲೋಕಕ್ಕೆ ಕಳುಹಿಸಿಕೊಟ್ಟವನಾದ <ನಾನು ದೇವರ ಮಗನಾಗಿದ್ದೇನೆಂದು> ಹೇಳಿದ್ದಕ್ಕೆ <ನೀನು ದೇವದೂಷಣೆ ಮಾಡುತ್ತೀ ಎಂದು ನೀವು ನನಗೆ ಹೇಳುತ್ತಿರಲ್ಲಾ?>

37ನಾನು ನನ್ನ ತಂದೆಯ ಕ್ರಿಯೆಗಳನ್ನು ಮಾಡದಿದ್ದರೆ ನನ್ನನ್ನು ನಂಬಬೇಡಿರಿ

38ನಾನು ಮಾಡಿದ್ದರಿಂದ ನೀವು ನನ್ನನ್ನು ನಂಬದೆ ಇದ್ದರೂ, ಈ ಕಾರ್ಯಗಳನ್ನಾದರೂ ನಂಬಿರಿ. ಆಗ ನನ್ನಲ್ಲಿ ತಂದೆಯು ಇದ್ದಾನೆಂತಲೂ, ತಂದೆಯಲ್ಲಿ ನಾನು ಇದ್ದೇನೆಂತಲೂ ನಿಮಗೆ ತಿಳಿಯುವುದು ಮತ್ತು ಮನದಟ್ಟಾಗುವುದು>> ಎಂದನು.

39ಅವರು ಪುನಃ ಆತನನ್ನು ಹಿಡಿಯುವುದಕ್ಕೆ ಪ್ರಯತ್ನಿಸಿದರು, ಆದರೆ ಆತನು ಅವರ ಕೈಯಿಂದ ತಪ್ಪಿಸಿಕೊಂಡು ಹೋದನು.

40ಆ ಮೇಲೆ ಆತನು ಯೊರ್ದನ್ ಹೊಳೆಯನ್ನು ದಾಟಿ, ಯೋಹಾನನು ಮೊದಲು ದೀಕ್ಷಾಸ್ನಾನ ಮಾಡಿಸುತ್ತಿದ್ದ ಸ್ಥಳಕ್ಕೆ ಹೋಗಿ ಅಲ್ಲಿ ಉಳಿದು ಕೊಂಡನು.

41ಆಗ ಅನೇಕರು ಆತನ ಬಳಿಗೆ ಬಂದು, <<ಯೋಹಾನನು ಒಂದು ಸೂಚಕಕಾರ್ಯವನ್ನೂ ಮಾಡಲಿಲ್ಲ, ಆದರೆ ಈತನ ವಿಷಯವಾಗಿ ಯೋಹಾನನು ಹೇಳಿದ್ದೆಲ್ಲಾ ಸತ್ಯವಾಗಿದೆ>> ಎಂದು ಮಾತನಾಡುತ್ತಿದ್ದರು.

42ಅಲ್ಲಿ ಅನೇಕರು ಯೇಸುವಿನಲ್ಲಿ ನಂಬಿಕೆ ಇಟ್ಟರು.


  Share Facebook  |  Share Twitter

 <<  John 10 >> 


Bible2india.com
© 2010-2024
Help
Dual Panel

Laporan Masalah/Saran