Bible 2 India Mobile
[VER] : [KANNADA]     [PL]  [PB] 
 <<  Isaiah 62 >> 

1ಚೀಯೋನಿನ ಧರ್ಮವು ಪ್ರಕಾಶಗೊಳ್ಳುವ ತನಕ, ಯೆರೂಸಲೇಮಿನ ರಕ್ಷಣೆಯು ದೀವಿಟಿಗೆಯಂತೆ ಪ್ರಜ್ವಲಿಸುವವರೆಗೆ, ನಾನು ಮೌನವಾಗಿರದೆ ಚೀಯೋನಿನ ಹಿತವನ್ನು ಲಕ್ಷಿಸುತ್ತಿರುವೆನು; ಮೌನವಾಗಿರದೆ ಯೆರೂಸಲೇಮಿನ ಕ್ಷೇಮವನ್ನು ಚಿಂತಿಸುತ್ತಿರುವೆನು.

2ಜನಾಂಗಗಳು ನಿನ್ನ ಧರ್ಮವನ್ನು, ಸಕಲ ರಾಜರು ನಿನ್ನ ವೈಭವವನ್ನು ನೋಡುವರು; ಯೆಹೋವನ ಬಾಯಿ ನೇಮಿಸಿದ ಹೊಸ ಹೆಸರು ನಿನಗೆ ದೊರೆಯುವುದು.

3ನೀನು ಯೆಹೋವನ ಕೈಯಲ್ಲಿ ಸುಂದರವಾದ ಕಿರೀಟವಾಗಿಯೂ, ನಿನ್ನ ದೇವರ ಹಸ್ತದಲ್ಲಿ ರಾಜಶಿರೋಭೂಷಣವಾಗಿಯೂ ಇರುವಿ.

4ನೀನು ಇನ್ನು ಮೇಲೆ <<ತ್ಯಜಿಸಲ್ಪಟ್ಟವಳು>> ಎನಿಸಿಕೊಳ್ಳುವುದಿಲ್ಲ, ನಿನ್ನ ಸೀಮೆಗೆ <<ನಿರ್ಜನ ಪ್ರದೇಶ>> ಎಂಬ ಹೆಸರು ಇನ್ನು ಇರದು; ನೀನು <<ನನ್ನ ಉಲ್ಲಾಸಿನಿ>> ಎನಿಸಿಕೊಳ್ಳುವಿ, ನಿನ್ನ ಸೀಮೆಗೆ <<ವಿವಾಹಿತೆ>> ಎಂಬ ಹೆಸರಾಗುವುದು; ಏಕಂದರೆ ಯೆಹೋವನು ನಿನ್ನಲ್ಲಿ ಉಲ್ಲಾಸಗೊಳ್ಳುತ್ತಾನೆ, ನಿನ್ನ ಸೀಮೆಗೆ ವಿವಾಹವಾಗುವುದು.

5ಯುವಕನು ಯುವತಿಯನ್ನು ವರಿಸುವಂತೆ, ನಿನ್ನ ಮಕ್ಕಳು ನಿನ್ನನ್ನು ವರಿಸುವರು; ವರನು ವಧುವಿನಲ್ಲಿ ಆನಂದಿಸುವ ಹಾಗೆ ನಿನ್ನ ದೇವರು ನಿನ್ನಲ್ಲಿ ಆನಂದಿಸುವನು.

6ಯೆರೂಸಲೇಮೇ, ನಾನು ನಿನ್ನ ಪೌಳಿಗೋಡೆಗಳಲ್ಲಿ ಕಾವಲುಗಾರರನ್ನು ನೇಮಿಸಿದ್ದೇನೆ; ಅವರು ಹಗಲೂ, ಇರುಳೂ ಮೌನವಾಗಿರರು. ಯೆಹೋವನನ್ನು ಸ್ಮರಿಸುವವರೇ,

7ಆತನು ಯೆರೂಸಲೇಮನ್ನು ಭದ್ರಪಡಿಸಿ, ಲೋಕಪ್ರಸಿದ್ಧಿಗೆ ತರುವ ತನಕ ನಿಮಗೂ ವಿರಾಮ ಇಲ್ಲದಿರಲಿ, ಅತನಿಗೂ ವಿರಾಮ ಇಲ್ಲದಿರಲಿ.

8ಯೆಹೋವನು ತನ್ನ ಬಲಗೈಯ ಮೇಲೆಯೂ, ತನ್ನ ಭುಜಬಲದ ಮೇಲೆಯೂ ಆಣೆಯಿಟ್ಟು, <<ನಿನ್ನ ದವಸವನ್ನು ನಿನ್ನ ಶತ್ರುಗಳ ಆಹಾರಕ್ಕೆ ಇನ್ನು ಕೊಡುವುದೇ ಇಲ್ಲ. ನೀನು ಶ್ರಮಿಸಿ ಪಡೆದು ದ್ರಾಕ್ಷಾರಸವನ್ನು ಅನ್ಯರು ಕುಡಿಯುವುದೇ ಇಲ್ಲ;

9ನಿನ್ನ ಬೆಳೆಯನ್ನು ಕೊಯ್ದು ಕುಪ್ಪೆಹಾಕಿದವರೇ ಅದನ್ನು ಊಟಮಾಡಿ ಯೆಹೋವನನ್ನು ಸ್ತುತಿಸುವರು. ನಿನ್ನ ದ್ರಾಕ್ಷೆಯನ್ನು ಕಿತ್ತು ತಂದವರೇ ಅದರ ರಸವನ್ನು ನನ್ನ ಪವಿತ್ರಾಲಯದ ಪ್ರಾಕಾರಗಳಲ್ಲಿ ಕುಡಿಯುವರು>> ಎಂದು ಹೇಳಿದ್ದಾನೆ.

10ಊರ ಬಾಗಿಲುಗಳಲ್ಲಿ ಹಾದು ಬನ್ನಿರಿ, ಹಾದು ಬನ್ನಿರಿ, ಜನರಿಗೆ ದಾರಿಯನ್ನು ಸರಿಮಾಡಿರಿ, ರಾಜಮಾರ್ಗವನ್ನು ಎತ್ತರಿಸಿರಿ, ಸರಿಪಡಿಸಿರಿ. ಕಲ್ಲುಗಳನ್ನು ತೆಗೆದುಹಾಕಿರಿ, ಜನಾಂಗಗಳಲ್ಲಿ ಧ್ವಜವನ್ನೆತ್ತಿರಿ!

11<<ಇಗೋ, ನಿನ್ನ ರಕ್ಷಣೆಯು ಸಮೀಪವಾಯಿತು, ಯೆಹೋವನು ದಯಪಾಲಿಸುವ ಬಹುಮಾನವು ಆತನ ಮುಂದಿದೆ ಎಂದು ಚೀಯೋನೆಂಬಾಕೆಗೆ ಹೇಳಿರಿ>> ಎಂಬುದಾಗಿ ಯೆಹೋವನು ಭೂಮಿಯ ಕಟ್ಟಕಡೆಯವರೆಗೂ ಅಪ್ಪಣೆಮಾಡಿದ್ದಾನೆ.

12ನಿನ್ನ ಜನರು, <<ಪರಿಶುದ್ಧಜನರು, ಯೆಹೋವನು ವಿಮೋಚಿಸಿದವರು>> ಎಂದು ಅನ್ನಿಸಿಕೊಳ್ಳುವರು, ನಿನಗೋ, <<ಪತಿಯು ವರಿಸಿ, ತ್ಯಜಿಸದ ಪಟ್ಟಣ>> ಎಂದು ಹೆಸರು ಬರುವುದು.


  Share Facebook  |  Share Twitter

 <<  Isaiah 62 >> 


Bible2india.com
© 2010-2024
Help
Dual Panel

Laporan Masalah/Saran