Bible 2 India Mobile
[VER] : [KANNADA]     [PL]  [PB] 
 <<  Jeremiah 46 >> 

1ಯೆಹೋವನು ಜನಾಂಗಗಳ ವಿಷಯವಾಗಿ ಪ್ರವಾದಿಯಾದ ಯೆರೆಮೀಯನಿಗೆ ದಯಪಾಲಿಸಿದ ವಾಕ್ಯ.

2ಐಗುಪ್ತವನ್ನು ಕುರಿತದ್ದು; ಐಗುಪ್ತದ ಅರಸನಾದ ಫರೋಹ ನೆಕೋವಿನ ಸೈನ್ಯವು ಯೂಫ್ರೇಟೀಸ್ ನದಿಯ ಬಳಿ ಕರ್ಕೆಮೀಷಿನಲ್ಲಿರುವಾಗ ಯೋಷೀಯನ ಮಗನೂ ಯೆಹೂದದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರುಷದಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಆ ಸೈನ್ಯವನ್ನು ಹೊಡೆದ ವಿಷಯ:

3<<ಗುರಾಣಿ ಮತ್ತು ಖೇಡ್ಯಗಳನ್ನು ಸಿದ್ಧಮಾಡಿಕೊಂಡು ಯುದ್ಧಕ್ಕೆ ಹೊರಡಿರಿ!

4ರಥಾಶ್ವಗಳನ್ನು ಕಟ್ಟಿರಿ, ವಾಹನಾಶ್ವಗಳನ್ನು ಹತ್ತಿರಿ, ಶಿರಸ್ತ್ರಾಣಗಳನ್ನು ಹಾಕಿಕೊಂಡು ಯುದ್ಧಕ್ಕೆ ನಿಲ್ಲಿರಿ, ಭರ್ಜಿಗಳನ್ನು ಬೆಳಗಿರಿ, ಕವಚಗಳನ್ನು ಧರಿಸಿಕೊಳ್ಳಿರಿ.

5ಆಹಾ, ನನ್ನ ಕಣ್ಣಿಗೆ ಬಿದ್ದದ್ದೇನು? ಅವರು ಧೈರ್ಯಗೆಟ್ಟು ಬೆನ್ನುಕೊಟ್ಟಿದ್ದಾರೆ. ಅವರ ಶೂರರು ಪೆಟ್ಟುತಿಂದು ಹಿಂದಿರುಗದೆ ಓಡಿಹೋಗುತ್ತಾರೆ; ಸುತ್ತಮುತ್ತಲು ದಿಗಿಲು ಎಂದು ಯೆಹೋವನು ಅನ್ನುತ್ತಾನೆ.

6ವೇಗಶಾಲಿಗಳೂ ಓಡಿಹೋಗಲಾರರು, ಬಲಿಷ್ಠರೂ ತಪ್ಪಿಸಿಕೊಳ್ಳಲಾರರು. ಉತ್ತರ ದಿಕ್ಕಿನಲ್ಲಿ ಯೂಫ್ರೇಟೀಸ್ ನದಿಯ ಹತ್ತಿರ ಎಡವಿಬಿದ್ದಿದ್ದಾರೆ.

7ನೈಲ್ ನದಿಯಂತೆ ಉಬ್ಬಿಕೊಂಡಿರುವ ಇವರು ಯಾರು? ನೈಲ್ ನದಿಯ ಶಾಖೆಗಳ ಹಾಗೆ ತುಂಬಿತುಳುಕುವ ಈ ಪ್ರವಾಹವು ಯಾರದು?

8ಐಗುಪ್ತವೇ ನೈಲ್ ನದಿಯಂತೆ ಉಬ್ಬಿದೆ; ಐಗುಪ್ತವೆಂಬ ಪ್ರವಾಹವೇ ನೈಲ್ ನದಿಯ ಶಾಖೆಗಳ ಹಾಗೆ ತುಂಬಿ ತುಳುಕುತ್ತದೆ; <ನಾನು ಉಬ್ಬಿಕೊಂಡು ಲೋಕದಲ್ಲೆಲ್ಲಾ ಹಬ್ಬುವೆನು, ಪಟ್ಟಣವನ್ನು ಪಟ್ಟಣದ ನಿವಾಸಿಗಳನ್ನು ನಾಶಮಾಡುವೆನು> ಅಂದುಕೊಳ್ಳುತ್ತದೆ.

9ಅಶ್ವಗಳೇ, ಕುಣಿದಾಡಿರಿ! ರಥಗಳೇ, ರಭಸವಾಗಿರಿ! ಶೂರರು ಹೊರಡಲಿ! ಖೇಡ್ಯ ಸನ್ನದ್ಧರಾದ ಕೂಷ್ಯರು, ಪೂಟ್ಯರು, ಧನುರ್ಧಾರಿಗಳಾದ ಲೂದ್ಯರು ಮುಂದೆ ಹೋಗಲಿ!

10ಆದರೆ ಆ ಯುದ್ಧ ದಿನವು ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ತನ್ನ ಶತ್ರುಗಳಿಗೆ ಮುಯ್ಯಿತೀರಿಸುವ ದಿನವಾಗಿದೆ; ಅದು ದಂಡನೆಯ ದಿನ; ಆಗ ಖಡ್ಗವು ನುಂಗಿ ತಣಿಯುವುದು, ಅವರ ರಕ್ತವನ್ನು ತುಂಬಾ ಹೀರುವುದು. ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಉತ್ತರ ದಿಕ್ಕಿನಲ್ಲಿ ಯೂಫ್ರೇಟೀಸ್ ನದಿಯ ಹತ್ತಿರ ಬಲಿಮಾಡಬೇಕೆಂದಿದ್ದಾನಲ್ಲಾ.

11ಐಗುಪ್ತದ ಕುಮಾರಿಯೇ, ಯುವತಿಯೇ, ಗಿಲ್ಯಾದಿಗೆ ಹೋಗಿ ಔಷಧವನ್ನು ಸಂಪಾದಿಸು; ನೀನು ಬಗೆಬಗೆಯ ಔಷಧವನ್ನು ಉಪಯೋಗಿಸುವುದು ಪ್ರಯೋಜನವಿಲ್ಲ; ನಿನಗೆ ಗುಣವಾಗದು.

12ನಿನ್ನ ಅವಮಾನದ ಸುದ್ದಿಯು ಜನಾಂಗಗಳಿಗೆ ಕೇಳಿಬಂದಿದೆ, ನಿನ್ನ ಕೂಗಾಟವು ಲೋಕದಲ್ಲೆಲ್ಲಾ ತುಂಬಿದೆ; ವೀರನು ವೀರನನ್ನು ಎಡವಿ ಇಬ್ಬರೂ ಬಿದ್ದಿದ್ದಾರೆ.

13ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಬಂದು ಐಗುಪ್ತ ದೇಶವನ್ನು ಹೊಡೆಯುವನು>> ಎಂಬುದಾಗಿ ಯೆಹೋವನು ಪ್ರವಾದಿಯಾದ ಯೆರೆಮೀಯನಿಗೆ ನುಡಿದನು.

14<<ಐಗುಪ್ತದಲ್ಲಿ ಪ್ರಕಟಿಸಿರಿ, ಮಿಗ್ದೋಲ್, ತಹಪನೇಸ್, ನೋಫ್, ಎಂಬ ಪಟ್ಟಣಗಳಲ್ಲಿ ಪ್ರಚುರಪಡಿಸಿರಿ, <ಐಗುಪ್ತವೇ, ಸ್ಥಿರವಾಗಿ ನಿಂತುಕೊಂಡು ಸನ್ನದ್ಧವಾಗು! ಖಡ್ಗವು ನಿನ್ನ ಸುತ್ತಲು ನುಂಗಿಬಿಟ್ಟಿದೆ> ಎಂದು ಸಾರಿರಿ.

15ನಿನ್ನ ಬಸವ ಬಿದ್ದು ಹೋದದ್ದೇನು? ಯೆಹೋವನು ಅದನ್ನು ಕೆಡವಿದನು, ನಿಲ್ಲಲಾರದೆ ಹೋಯಿತು.

16ಬಹು ಜನರು ಮುಗ್ಗರಿಸುವಂತೆ ಮಾಡಿದನು; ಹೌದು, ಒಬ್ಬರಿಗೊಬ್ಬರು ಮೇಲೆ ಬಿದ್ದು; <ನಾವು ಎದ್ದು ಜನ್ಮಭೂಮಿಗೆ ಹೊರಟು ಸ್ವಜನರನ್ನು ಸೇರಿ ಹಿಂಸೆಯ ಖಡ್ಗದಿಂದ ತಪ್ಪಿಸಿಕೊಳ್ಳೋಣ> ಎಂದುಕೊಂಡರು.

17ಐಗುಪ್ತದ ಅರಸನಾದ ಫರೋಹನು ಧಡಮ್ಮನೆ ಬಿದ್ದವನು, ಸದವಕಾಶವನ್ನು ಉಪೇಕ್ಷಿಸಿದವನು>> ಎಂದು ಅಲ್ಲಿ ಕೂಗಿದರು.

18ಸೇನಾಧೀಶ್ವರನಾದ ಯೆಹೋವನೆಂಬ ನಾಮವುಳ್ಳ ರಾಜಾಧಿರಾಜನು ಇಂತೆನ್ನುತ್ತಾನೆ, <<ನನ್ನ ಜೀವದಾಣೆ, ಇಗೋ, ಪರ್ವತಗಳನ್ನು ಮೀರುವ ತಾಬೋರ್ ಬೆಟ್ಟದಂತೆಯೂ, ಸಮುದ್ರದಿಂದ ಎದ್ದಿರುವ ಕರ್ಮೆಲ್ ಬೆಟ್ಟದ ಹಾಗೂ ಉನ್ನತನಾದವನೊಬ್ಬನು ಬರುವನು.

19ಐಗುಪ್ತದಲ್ಲಿ ವಾಸಿಸುವ ಯುವತಿಯೇ, ಸೆರೆಗೆ ಬೇಕಾದ ಸಾಮಗ್ರಿಗಳನ್ನು ಒದಗಿಸಿಕೋ; ನೋಫ್ ಪಟ್ಟಣವು ಹಾಳಾಗಿ ಸುಟ್ಟು ನಿರ್ಜನವಾಗುವುದು.

20ಐಗುಪ್ತವು ಅಂದವಾದ ಕಡಸಾಗಿದೆ; ತೊಣಚೆಯ ಹುಳಗಳು ಉತ್ತರ ದಿಕ್ಕಿನಿಂದ ಅದರ ಮೇಲೆ ಬಂದಿದೆ.

21ಸಂಬಳಕ್ಕಾಗಿ ಐಗುಪ್ತವನ್ನು ಸೇರಿರುವ ದಂಡಾಳುಗಳು ಕೊಬ್ಬಿದ ಕರುಗಳಂತಿದ್ದಾರೆ; ಅವರೂ ಬೆನ್ನುಕೊಟ್ಟು ಓಡಿಹೋಗಿದ್ದಾರೆ; ನಿಲ್ಲಲೇ ಇಲ್ಲ. ಅವರಿಗೆ ವಿಪತ್ಕಾಲವು ಒದಗಿದೆ, ದಂಡನೆಯ ದಿನವು ಸಂಭವಿಸಿದೆ.

22ಐಗುಪ್ತವು ಓಡಿಹೋಗುವ ಶಬ್ದವು ಸರಿಯುವ ಸರ್ಪದ ಸಪ್ಪಳಕ್ಕೆ ಸಮನಾಗಿರುವುದು; ಶತ್ರುಗಳು ದಂಡೆತ್ತಿಬಂದು ಕಟ್ಟಿಗೆ ಕಡಿಯುವವರಂತೆ ಕೊಡಲಿಗಳಿಂದ ಅವರ ಮೇಲೆ ಬೀಳುವರು.

23ಅವರು ಮಿಡತೆಗಳಿಗಿಂತಲೂ ಅಸಂಖ್ಯಾತರಾಗಿ ದಾಟಲಾಗದ ಐಗುಪ್ತದ ದಟ್ಟವಾದ ಕಾಡನ್ನು ಕಡಿದುಹಾಕುವರು, ಇದು ಯೆಹೋವನ ನುಡಿ.

24ಐಗುಪ್ತವೆಂಬ ಯುವತಿಯು ಅವಮಾನಕ್ಕೆ ಗುರಿಯಾಗುವಳು; ಉತ್ತರ ದಿಕ್ಕಿನವರ ಕೈವಶವಾಗುವಳು>> ಎಂಬುದೇ.

25ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, <<ಇಗೋ, ನಾನು ನೋ ಎಂಬ ಪಟ್ಟಣದಲ್ಲಿನ ಆಮೋನ್ ದೇವತೆ, ಫರೋಹ, ಐಗುಪ್ತ, ಐಗುಪ್ತದ ದೇವತೆಗಳು, ಅಲ್ಲಿನ ಅರಸರು, ಅಂತು ಫರೋಹನನ್ನೂ, ಅವನಲ್ಲಿ ನಂಬಿಕೆಯಿಟ್ಟವರನ್ನೂ ದಂಡಿಸುವೆನು.

26ಅವರ ಪ್ರಾಣವನ್ನು ಹುಡುಕುವ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಮತ್ತು ಅವನ ಸೇವಕರ ಕೈಗೆ ಕೊಟ್ಟುಬಿಡುವೆನು; ಅನಂತರ ಅಲ್ಲಿ ಪೂರ್ವಕಾಲದ ಹಾಗೆ ಜನರು ವಾಸಿಸುವರು. ಇದು ಯೆಹೋವನ ನುಡಿ.

27ನನ್ನ ಸೇವಕ ಯಾಕೋಬೇ, ಭಯಪಡಬೇಡ! ಇಸ್ರಾಯೇಲೇ, ಅಂಜಬೇಡ! ಇಗೋ, ನಾನು ನಿನ್ನನ್ನು ದೂರದೇಶದಿಂದ ಉದ್ಧರಿಸುವೆನು, ನಿನ್ನ ಸಂತಾನವನ್ನು ಸೆರೆಹೋದ ಸೀಮೆಯಿಂದ ರಕ್ಷಿಸುವೆನು; ಯಾಕೋಬು ಹಿಂದಿರುಗಿ ನೆಮ್ಮದಿಯಾಗಿಯೂ, ಹಾಯಾಗಿಯೂ ಇರುವುದು; ಯಾರೂ ಅದನ್ನು ಹೆದರಿಸರು.

28ನನ್ನ ಸೇವಕನಾದ ಯಾಕೋಬೇ, ಭಯಪಡಬೇಡ, ನಾನು ನಿನ್ನೊಂದಿಗಿದ್ದೇನೆ; ನಾನು ಯಾವ ಜನಾಂಗಗಳಲ್ಲಿಗೆ ನಿನ್ನನ್ನು ಅಟ್ಟಿದ್ದೇನೋ ಆ ಜನಾಂಗಗಳನ್ನೆಲ್ಲಾ ನಿರ್ಮೂಲಮಾಡುವೆನು; ನಿನ್ನನ್ನೋ ನಿರ್ಮೂಲಮಾಡೆನು. ಮಿತಿಮೀರಿ ಶಿಕ್ಷಿಸೆನು, ಆದರೆ ಶಿಕ್ಷಿಸದೆ ಬಿಡುವುದಿಲ್ಲ. ಇದು ಯೆಹೋವನ ನುಡಿ.>>


  Share Facebook  |  Share Twitter

 <<  Jeremiah 46 >> 


Bible2india.com
© 2010-2024
Help
Dual Panel

Laporan Masalah/Saran