Bible 2 India Mobile
[VER] : [KANNADA]     [PL]  [PB] 
 <<  Ezekiel 8 >> 

1ಯೆಹೋಯಾಖೀನನು ಸೆರೆಯಾದ ಆರನೆಯ ವರುಷದ, ಆರನೆಯ ತಿಂಗಳಿನ, ಐದನೆಯ ದಿನದಲ್ಲಿ ನಾನೂ ಮತ್ತು ಯೆಹೂದದ ಹಿರಿಯರೂ ನನ್ನ ಮನೆಯೊಳಗೆ ಎದುರಾಗಿ ಕುಳಿತಿರಲು ಕರ್ತನಾದ ಯೆಹೋವನ ಹಸ್ತಸ್ಪರ್ಶದಿಂದ ನಾನು ಪರವಶನಾದೆನು.

2ಇಗೋ, ನಾನು ನೋಡಲಾಗಿ ಬೆಂಕಿಯು ಉರಿಯುತ್ತದೋ ಎಂಬಂತೆ ನನಗೆ ತೇಜೋರೂಪವು ಕಾಣಿಸಿತು; ಸೊಂಟದ ಹಾಗೆ ತೋರುವ ಅದರ ಮಧ್ಯಭಾಗದಿಂದ ಕೆಳಗಡೆ ಬೆಂಕಿಯು ಉರಿಯುತ್ತಿತ್ತು; ಅದರ ಮಧ್ಯಭಾಗದಿಂದ ಮೇಲ್ಗಡೆ ಸುವರ್ಣವು ಥಳಥಳಿಸುತ್ತದೋ ಎಂಬಂತೆ ಅದ್ಭುತಕಾಂತಿಯು ಹೊಳೆಯಿತು.

3ಆಗ ಆ ತೇಜೋರೂಪಿಯು ಮನುಷ್ಯ ಹಸ್ತದಂಥ ಹಸ್ತವನ್ನು ಚಾಚಿ ನನ್ನ ತಲೆಯ ಕೂದಲಿನಿಂದ ಹಿಡಿಯಲು ದೇವರಾತ್ಮವು ನನ್ನನ್ನು ಎತ್ತಿಕೊಂಡು ಭೂಮ್ಯಾಕಾಶಗಳ ನಡುವೆ ಯೆರೂಸಲೇಮಿನವರೆಗೆ ಒಯ್ದು, ಒಳಗಣ ಪ್ರಾಕಾರದ ಉತ್ತರ ಬಾಗಿಲ ಮುಂದೆ, ದೇವರನ್ನು ರೋಷಗೊಳಿಸುವ ವಿಗ್ರಹವು ಮೊದಲಿದ್ದ ಸ್ಥಳದಲ್ಲಿ ನಿಲ್ಲಿಸಿದ ಹಾಗೆ ಆ ದೇವದರ್ಶನದಲ್ಲಿ ನನಗೆ ಕಂಡು ಬಂದಿತು.

4ಆಹಾ, ಇಸ್ರಾಯೇಲಿನ ದೇವರ ಮಹಿಮೆಯ ದರ್ಶನವು ಬಯಲು ಸೀಮೆಯಲ್ಲಿ ಆದಂತೆ ಇಲ್ಲಿಯೂ ನನಗಾಯಿತು.

5ಆಗ ಆತನು ನನಗೆ, <<ನರಪುತ್ರನೇ, ಉತ್ತರ ದಿಕ್ಕಿಗೆ ಕಣ್ಣೆತ್ತಿ ನೋಡು>> ಎಂದು ಹೇಳಿದನು; ಹಾಗೆ ನಾನು ಉತ್ತರ ದಿಕ್ಕಿಗೆ ಕಣ್ಣೆತ್ತಿ ನೋಡಲು, ಇಗೋ, ದೇವರನ್ನು ರೋಷಗೊಳಿಸುವ ಆ ವಿಗ್ರಹವು ಯಜ್ಞವೇದಿಯ ಉತ್ತರದಿಕ್ಕಿನ ಬಾಗಿಲಿನ ಪ್ರವೇಶದ್ವಾರದ ಮುಂದೆ ನಿಂತಿತ್ತು.

6ಆಗ ಆತನು ನನಗೆ, <<ನರಪುತ್ರನೇ, ಇವರು ಮಾಡುವುದನ್ನು ನೋಡಿದೆಯಾ? ಇಸ್ರಾಯೇಲ್ ವಂಶದವರು ಇಲ್ಲಿ ನಡೆಸುವ ಅಧಿಕ ದುರಾಚಾರಗಳನ್ನು ಕಂಡೆಯಾ? ಇದರಿಂದ ನಾನು ನನ್ನ ಪವಿತ್ರಾಲಯವನ್ನು ಬಿಟ್ಟು ದೂರ ಹೋಗಬೇಕಾಯಿತು. ಬಾ, ಇವುಗಳಿಗಿಂತ ಇನ್ನು ಹೆಚ್ಚಾದ ದುರಾಚಾರಗಳನ್ನು ನೋಡುವೆ>> ಎಂದು ಹೇಳಿದನು.

7ಆಮೇಲೆ ಆತನು ನನ್ನನ್ನು ಪ್ರಾಕಾರದ ಬಾಗಿಲಿಗೆ ಬರ ಮಾಡಿದನು; ಇಗೋ, ಆ ಗೋಡೆಯಲ್ಲಿ ಒಂದು ರಂಧ್ರವು ನನಗೆ ಕಾಣಿಸಿತು.

8ಆಗ ಆತನು ನನಗೆ, <<ನರಪುತ್ರನೇ, ಗೋಡೆಯನ್ನು ತೋಡು>> ಎಂದು ಹೇಳಿದನು. ನಾನು ಗೋಡೆಯನ್ನು ತೋಡಲಾಗಿ ಅಲ್ಲಿ, ಒಂದು ಬಾಗಿಲು ಕಾಣಿಸಿತು.

9ಆತನು ನನಗೆ, <<ನೀನು ಒಳಕ್ಕೆ ಹೋಗಿ ಜನರು ಇಲ್ಲಿ ನಡೆಸುವ ಅಸಹ್ಯವಾದ ದುಷ್ಕಾರ್ಯಗಳನ್ನು ನೋಡು>> ಎಂದು ಹೇಳಿದಾಗ ನಾನು ಹೋಗಿ ನೋಡಿದೆನು.

10ಇಗೋ, ಎಲ್ಲಾ ಜಾತಿಯ ಕ್ರಿಮಿಕೀಟಗಳೂ, ಅಸಹ್ಯ ಮೃಗಗಳೂ ಮತ್ತು ಇಸ್ರಾಯೇಲ್ ವಂಶದವರು ಪೂಜಿಸುವ ಸಕಲ ಮೂರ್ತಿಗಳೂ ಆ ಗೋಡೆಯ ಸುತ್ತಲೂ ಚಿತ್ರಿಸಲ್ಪಟ್ಟಿದ್ದವು.

11ಇಸ್ರಾಯೇಲ್ ವಂಶದ ಎಪ್ಪತ್ತು ಮಂದಿ ಹಿರಿಯರೂ ಮತ್ತು ಅವರ ಮಧ್ಯದಲ್ಲಿ ಶಾಫಾನನ ಮಗನಾದ ಯಾಜನ್ಯನೂ ತಮ್ಮ ತಮ್ಮ ಕೈಗಳಲ್ಲಿ ಧೂಪಾರತಿಗಳನ್ನು ಹಿಡಿದುಕೊಂಡು ಆ ಚಿತ್ರಗಳ ಮುಂದೆ ನಿಂತಿದ್ದರು; ಧೂಪದ ಸುವಾಸನೆಯ ಧೂಮವು ಮೇಘವಾಗಿ ಏರುತ್ತಿತ್ತು.

12ಆಗ ಆತನು ನನಗೆ, <<ನರಪುತ್ರನೇ, ಇಸ್ರಾಯೇಲ್ ವಂಶದ ಹಿರಿಯರೆಲ್ಲರೂ ನಾನಾ ರೂಪಗಳಿಂದ ಚಿತ್ರಿಸಲ್ಪಟ್ಟ ತಮ್ಮ ತಮ್ಮ ಕೋಣೆಗಳೊಳಗೆ ಕತ್ತಲೆಯಲ್ಲಿ ನಡೆಸುವ ಕೆಲಸವನ್ನು ನೋಡಿದೆಯಾ? <ಯೆಹೋವನು ನಮ್ಮನ್ನು ನೋಡುವುದಿಲ್ಲ, ಯೆಹೋವನು ದೇಶವನ್ನು ತೊರೆದುಬಿಟ್ಟಿದ್ದಾನೆ> ಎಂದು ಮಾತನಾಡಿಕೊಳ್ಳುತ್ತಾರಷ್ಟೆ>> ಎಂಬುದಾಗಿ ಹೇಳಿದನು.

13ಆಮೇಲೆ ಆತನು ನನಗೆ, <<ಇವುಗಳಿಗಿಂತ ಇನ್ನೂ ಹೆಚ್ಚಾದ ದುರಾಚಾರಗಳನ್ನು ನೋಡುವಿ>> ಎಂದು ಹೇಳಿದನು.

14ಆತನು ನನ್ನನ್ನು ಯೆಹೋವನ ಆಲಯದ ಉತ್ತರದ ಬಾಗಿಲ ಮುಂದಕ್ಕೆ ಕರೆತಂದನು; ಇಗೋ, ಅಲ್ಲಿ ಸ್ತ್ರೀಯರು <<ತಮ್ಮೂಜ್>> ದೇವತೆಗಾಗಿ ಅಳುತ್ತಾ ಕುಳಿತಿದ್ದರು.

15ಇದಾದ ಮೇಲೆ ಆತನು ನನಗೆ, <<ನರಪುತ್ರನೇ, ಇದನ್ನು ನೋಡಿದೆಯಾ? ಇವುಗಳಿಗಿಂತ ಇನ್ನೂ ಹೆಚ್ಚಾದ ದುರಾಚಾರಗಳನ್ನು ನೋಡುವೆ>> ಎಂದು ಹೇಳಿದನು.

16ಆತನು ಯೆಹೋವನ ಆಲಯದ ಒಳಗಣ ಪ್ರಾಕಾರದೊಳಕ್ಕೆ ನನ್ನನ್ನು ಕರೆತಂದನು; ಇಗೋ, ಯೆಹೋವನ ಆಲಯದ ಬಾಗಿಲ ಮುಂದೆ ಮಂಟಪಕ್ಕೂ ಮತ್ತು ಯಜ್ಞವೇದಿಗೂ ನಡುವೆ ಸುಮಾರು ಇಪ್ಪತ್ತೈದು ಜನರು ಯೆಹೋವನ ಆಲಯಕ್ಕೆ ಬೆನ್ನು ಮಾಡಿ ಪೂರ್ವದ ಕಡೆಗೆ ಮುಖ ಮಾಡಿ ಉದಯಕಾಲದ ಸೂರ್ಯನನ್ನು ಪೂಜಿಸುತ್ತಿದ್ದರು.

17ಆಗ ಆತನು ನನಗೆ, <<ನರಪುತ್ರನೇ, ಇದನ್ನು ನೋಡಿದೆಯಾ? ಯೆಹೂದ ವಂಶದವರು ತಾವು ಇಲ್ಲಿ ನಡೆಸುವ ಅಸಹ್ಯಕಾರ್ಯಗಳು ಅಲ್ಪವೆಂದು ಭಾವಿಸಿದ್ದಾರೋ? ದೇಶವನ್ನು ಹಿಂಸೆಯಿಂದ ತುಂಬಿಸಿದ್ದಲ್ಲದೆ, ನನ್ನನ್ನು ಕೆಣಕಬೇಕೆಂದೇ ಮತ್ತೆ ಯತ್ನಿಸುತ್ತಿದ್ದಾರೆ; ನೋಡು, ಕೊಂಬೆಗಳನ್ನು ಮೂಗಿಗೆ ಒತ್ತಿಕೊಳ್ಳುತ್ತಾರೆ.

18ಆದಕಾರಣ ನಾನು ಕೋಪೋದ್ರೇಕದಿಂದ ವರ್ತಿಸುವೆನು, ಕಟಾಕ್ಷಿಸುವುದಿಲ್ಲ, ಉಳಿಸುವುದಿಲ್ಲ; ಅವರು ಕೂಗಿಕೊಳ್ಳುವ ಮಹಾ ಶಬ್ದವು ನನ್ನ ಕಿವಿಗೆ ಬಿದ್ದರೂ ಆಲಿಸುವುದಿಲ್ಲ.>>


  Share Facebook  |  Share Twitter

 <<  Ezekiel 8 >> 


Bible2india.com
© 2010-2024
Help
Dual Panel

Laporan Masalah/Saran