Bible 2 India Mobile
[VER] : [KANNADA]     [PL]  [PB] 
 <<  Ezekiel 29 >> 

1ಹತ್ತನೆಯ ವರುಷದ, ಹತ್ತನೆಯ ತಿಂಗಳಿನ ಹನ್ನೆರಡನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,

2<<ನರಪುತ್ರನೇ, ನೀನು ಐಗುಪ್ತದ ಅರಸನಾದ ಫರೋಹನ ಕಡೆಗೆ ಮುಖಮಾಡಿ ಅವನ ವಿಷಯದಲ್ಲಿಯೂ, ಐಗುಪ್ತ್ಯರೆಲ್ಲರ ವಿಷಯದಲ್ಲಿಯೂ ಹೀಗೆ ಪ್ರವಾದಿಸು.

3<<ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಐಗುಪ್ತದ ಅರಸನಾದ ಫರೋಹನೇ, ನಿನ್ನ ನದಿಗಳ ಮಧ್ಯದಲ್ಲಿ ಮಲಗಿಕೊಂಡು, <ಈ ನದಿ ನನ್ನದೇ, ನನಗಾಗಿಯೇ ಅದನ್ನು ಮಾಡಿಕೊಂಡಿದ್ದೇನೆ> ಎಂದು ಹೇಳಿಕೊಳ್ಳುವ ದೊಡ್ಡ ಮೊಸಳೆಯೇ, ಇಗೋ, ನಾನು ನಿನ್ನ ವಿರುದ್ಧನವಾಗಿದ್ದೇನೆ.

4<<ನಾನು ನಿನ್ನ ದವಡೆಗಳಿಗೆ ಗಾಳ ಹಾಕಿ, ನಿನ್ನ ನದಿಗಳ ಮೀನುಗಳನ್ನು ನಿನ್ನ ಬೆನ್ನು ಚಿಪ್ಪುಗಳಿಗೆ ಅಂಟಿಕೊಳ್ಳುವಂತೆ ಮಾಡಿ, ಆ ಮೀನುಗಳ ಸಹಿತ ನಿನ್ನನ್ನು ನೈಲ್ ನದಿಯ ಮಧ್ಯದೊಳಗಿಂದ ಹೊರಗೆ ಎಳೆದು ಹಾಕುವೆನು.

5ನಿನ್ನನ್ನೂ, ನಿನ್ನ ನದಿಯ ಎಲ್ಲಾ ಮೀನುಗಳನ್ನೂ ಅರಣ್ಯದ ಪಾಲು ಮಾಡುವೆನು; ನೀನು ಬಯಲುಗಳ ಮೇಲೆ ಬಿದ್ದಿರುವಿ; ನಿನ್ನನ್ನು ಯಾರೂ ಹೂಣಿಡುವುದೂ ಇಲ್ಲ, ಸೇರಿಸುವುದೂ ಇಲ್ಲ; ನಾನು ನಿನ್ನನ್ನು ಭೂಜಂತುಗಳಿಗೂ, ಆಕಾಶದ ಪಕ್ಷಿಗಳಿಗೂ ಆಹಾರ ಮಾಡಿದ್ದೇನೆ.

6ಆಗ ಐಗುಪ್ತದ ಸಕಲ ನಿವಾಸಿಗಳು ನಾನೇ ಯೆಹೋವನು ಎಂದು ತಿಳಿಯವರು. ಅವರು ಇಸ್ರಾಯೇಲ್ ವಂಶದವರಿಗೆ ದಂಟಿನ ಊರುಗೋಲಾಗಿದ್ದರು.

7ಇಸ್ರಾಯೇಲರು ನಿನ್ನ ಮೇಲೆ ಕೈಯಿಡಲು, ನೀನು ಮುರಿದು ಅವರೆಲ್ಲರ ಹೆಗಲನ್ನು ಚುಚ್ಚಿದೆ; ಅವರು ನಿನ್ನ ಮೇಲೆ ಆತುಕೊಳ್ಳುವಾಗ, ನೀನು ಅವರನ್ನು ಒಡೆದು, ಅವರ ಕಾಲುಗಳಿಗೆ ಮತ್ತು ನಡುವಿಗೆ ನಡುಕವನ್ನು ಉಂಟುಮಾಡಿದೆ.

8<<ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, <ಇಗೋ, ನಾನು ನಿನ್ನ ಮೇಲೆ ಖಡ್ಗವನ್ನು ಬರಮಾಡಿ, ಜನರನ್ನೂ, ಪಶುಗಳನ್ನೂ ನಿನ್ನೊಳಗಿಂದ ನಿರ್ಮೂಲ ಮಾಡುವೆನು.

9ಈ ನದಿಯು ನನ್ನದೇ, ನಾನೇ ಅದನ್ನು ನಿರ್ಮಿಸಿದವನೆಂದು ಅಂದುಕೊಂಡ ಕಾರಣ ಐಗುಪ್ತ ದೇಶವು ಹಾಳಾಗುವುದು. ಆಗ ನಾನೇ ಯೆಹೋವನು> ಎಂದು ಅವರಿಗೆ ಗೊತ್ತಾಗುವುದು.

10<ಇಗೋ, ನಾನು ನಿನಗೂ, ನಿನ್ನ ನದಿಗೂ ವಿರುದ್ಧವಾಗಿ ಐಗುಪ್ತ ದೇಶವನ್ನು ಮಿಗ್ದೋಲಿನಿಂದ ಸೆವೇನಿಯ ತನಕ, ಹೌದು, ಕೂಷಿನ ಮೇರೆಯವರೆಗೂ ತೀರಾ ಹಾಳು ಮಾಡುವೆನು.

11<< <ಯಾವ ಮನುಷ್ಯನ ಪಾದವೂ ಅದರಲ್ಲಿ ಹಾದುಹೋಗುವುದಿಲ್ಲ; ಯಾವ ಪಶುವಿನ ಪಾದವೂ ಅದರಲ್ಲಿ ದಾಟಿಹೋಗುವುದಿಲ್ಲ; ನಲ್ವತ್ತು ವರುಷ ನಿರ್ಜನವಾಗಿರುವುದು.

12ಹಾಳು ಬಿದ್ದಿರುವ ದೇಶಗಳ ಮಧ್ಯದಲ್ಲಿ ಐಗುಪ್ತ ದೇಶವನ್ನೂ ಹಾಳುಮಾಡುವೆನು; ಪಾಳುಬಿದ್ದಿರುವ ಪಟ್ಟಣಗಳೊಳಗೆ ಅದರ ಪಟ್ಟಣಗಳನ್ನೂ ಪಾಳುಬೀಳಿಸುವೆನು; ನಲ್ವತ್ತು ವರುಷ ಹಾಗೆಯೇ ಇರುವುದು; ನಾನು ಐಗುಪ್ತ್ಯರನ್ನು ಜನಾಂಗಗಳಲ್ಲಿ ಚದುರಿಸಿ, ದೇಶದೇಶಗಳಲ್ಲಿ ಚದುರಿಸುವೆನು.> >>

13<<ಕರ್ತನಾದ ಯೆಹೋವನು ಇಂತೆನ್ನುತ್ತಾನೆ, <ನಲ್ವತ್ತು ವರುಷಗಳ ಮೇಲೆ ನಾನು ಐಗುಪ್ತ್ಯರನ್ನು ಅವರು ಚದುರಿ ಹೋಗಿದ್ದ ಜನಾಂಗಗಳೊಳಗಿಂದ ಅವರನ್ನು ಒಟ್ಟುಗೂಡಿಸುವೆನು.

14ಐಗುಪ್ತದ ದುರವಸ್ಥೆಯನ್ನು ತಪ್ಪಿಸಿ, ಅವರ ಜನ್ಮ ಭೂಮಿಯಾದ ಪತ್ರೋಸ್ ದೇಶಕ್ಕೆ ಪುನಃ ಬರಮಾಡುವೆನು; ಅಲ್ಲೇ ಅವರು ಕನಿಷ್ಠ ರಾಜ್ಯದವರಾಗಿರುವರು.

15ಆ ರಾಜ್ಯವು ಸಮಸ್ತ ರಾಜ್ಯಗಳಲ್ಲಿ ಕನಿಷ್ಠವೆನಿಸಿಕೊಳ್ಳುವುದು; ಮಿಕ್ಕ ಜನಾಂಗಗಳಿಗಿಂತ ತಾನು ದೊಡ್ಡದೆಂದು ಅದು ಇನ್ನು ತಲೆಯೆತ್ತದು; ಅದು ಜನಾಂಗಗಳ ಮೇಲೆ ಇನ್ನು ದೊರೆತನ ಮಾಡಲಾರದಂತೆ ನಾನು ಅದನ್ನು ಕ್ಷೀಣ ಸ್ಥಿತಿಗೆ ತರುವೆನು.

16ಐಗುಪ್ತವು ಇನ್ನು ಇಸ್ರಾಯೇಲ್ ವಂಶದವರ ಭರವಸೆಯಾಗದೆ, ಅದರ ಕಡೆಗೆ ಕಣ್ಣೆತ್ತುವ ದೇವದ್ರೋಹದ ನೆನಪು ಇಸ್ರಾಯೇಲರಲ್ಲಿ ಐಗುಪ್ತದಿಂದ ಇನ್ನು ಹುಟ್ಟುವುದಿಲ್ಲ. ನಾನೇ ಯೆಹೋವನು> >> ಎಂದು ಅವರಿಗೆ ತಿಳಿಯುವುದು.

17ಇಪ್ಪತ್ತೇಳನೆಯ ವರುಷದ, ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,

18<<ನರಪುತ್ರನೇ, ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ತೂರಿಗೆ ಮುತ್ತಿಗೆ ಹಾಕಿ, ತನ್ನ ಸೈನಿಕರಿಂದ ಅತಿ ಕ್ರೂರವಾಗಿ ಸೇವೆಯನ್ನು ಮಾಡಿಸಿದ್ದಾನೆ; ಪ್ರತಿಯೊಬ್ಬನ ತಲೆ ಬೋಳಾಗಿದೆ, ಪ್ರತಿಯೊಬ್ಬನ ಹೆಗಲು ಸುಲಿದು ಹೋಗಿದೆ. ಆದರೂ ಆ ಮುತ್ತಿಗೆಯಲ್ಲಿ ಅವನು ಪಟ್ಟ ಶ್ರಮಕ್ಕೆ ಅವನಿಗಾಗಲಿ, ಅವನ ಸೈನಿಕರಿಗಾಗಲಿ ತೂರಿನಿಂದ ಪ್ರತಿಫಲವೇನೂ ಸಿಕ್ಕಲಿಲ್ಲ.>>

19ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, <<ಇಗೋ, ನಾನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನಿಗೆ ಐಗುಪ್ತ ದೇಶವನ್ನು ಕೊಡುತ್ತೇನೆ; ಅವನು ಅದರ ಜನಸಮೂಹವನ್ನೂ, ಅದರ ಕೊಳ್ಳೆಯನ್ನೂ, ಅದರ ಸುಲಿಗೆಯನ್ನೂ ಸೂರೆಮಾಡುವನು; ಇದೇ ಅವನ ಸೈನ್ಯಕ್ಕೆ ಸಿಕ್ಕುವ ಪ್ರತಿಫಲವಾಗುವುದು.

20ಅವನು ಸೈನ್ಯ ಸಮೇತನಾಗಿ ನನಗೋಸ್ಕರ ಸೇವೆ ಮಾಡಿದ್ದರಿಂದ ಅವನು ಪಟ್ಟ ಶ್ರಮಕ್ಕೆ ಪ್ರತಿಫಲವಾಗಿ ನಾನು ಐಗುಪ್ತ ದೇಶವನ್ನು ಅವನಿಗೆ ಕೊಟ್ಟಿದ್ದೇನೆ>> ಇದು ಕರ್ತನಾದ ಯೆಹೋವನ ನುಡಿ.

21<<ಆ ದಿನದಲ್ಲಿ ನಾನು ಇಸ್ರಾಯೇಲ್ ವಂಶಕ್ಕೆ ಕೊಂಬನ್ನು ಮೊಳೆಯಿಸಿ, ಆ ವಂಶದವರ ಮಧ್ಯದಲ್ಲಿ ನಿನ್ನ ಬಾಯಿಯನ್ನು ತೆರೆಯುವಂತೆ ಮಾಡುವೆನು; ನಾನೇ ಯೆಹೋವನು ಎಂದು ಅವರಿಗೆ ನಿಶ್ಚಯವಾಗುವುದು.>>


  Share Facebook  |  Share Twitter

 <<  Ezekiel 29 >> 


Bible2india.com
© 2010-2024
Help
Dual Panel

Laporan Masalah/Saran