Bible 2 India Mobile
[VER] : [KANNADA]     [PL]  [PB] 
 <<  Ezekiel 25 >> 

1ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,

2<<ನರಪುತ್ರನೇ, ನೀನು ಅಮ್ಮೋನಿಗೆ ವಿರುದ್ಧವಾಗಿ, ಅದರ ವಿಷಯದಲ್ಲಿ ದೈವಸಂಕಲ್ಪವನ್ನು ಪ್ರವಾದಿಸುತ್ತಾ ಅದಕ್ಕೆ ಹೀಗೆ ನುಡಿ,

3<ಕರ್ತನಾದ ಯೆಹೋವನ ಮಾತನ್ನು ಕೇಳು> ಕರ್ತನಾದ ಯೆಹೋವನು ಇಂತೆನ್ನುತ್ತಾನೆ, <ಅಮ್ಮೋನೇ, ನನ್ನ ಪವಿತ್ರಾಲಯವು ಅಪವಿತ್ರವಾದದ್ದನ್ನು, ಇಸ್ರಾಯೇಲ್ ದೇಶವು ಹಾಳುಬಿದ್ದದನ್ನು, ಯೆಹೂದ ವಂಶದವರು ಸೆರೆಹೋದದ್ದನ್ನು ನೀನು ನೋಡಿ, <<ಅಹಾ!>> ಎಂದು ಹಿಗ್ಗಿಕೊಂಡೆ.

4ಆದುದರಿಂದ ಇಗೋ, ನಾನು ನಿನ್ನನ್ನು ಮೂಡಣದವರಿಗೆ ಬಾಧ್ಯವಾಗಿ ವಶಪಡಿಸುವೆನು; ಅವರು ನಿನ್ನಲ್ಲಿ ತಮ್ಮ ಗುಡಾರಗಳನ್ನು ಹಾಕಿ ಪಾಳೆಯಮಾಡಿಕೊಳ್ಳುವರು; ನಿನ್ನ ಹಣ್ಣನ್ನು ತಿಂದು, ನಿನ್ನ ಹಾಲನ್ನು ಕುಡಿದುಬಿಡುವರು.

5ನಾನು ರಬ್ಬಾ ಪಟ್ಟಣವನ್ನು ಒಂಟೆಗಳಿಗೆ ಲಾಯವನ್ನಾಗಿಯೂ, ಅಮ್ಮೋನ್ ಸೀಮೆಯನ್ನು ಹಿಂಡುಗಳಿಗೆ ತಂಗುವ ಸ್ಥಳವನ್ನಾಗಿಯೂ ಮಾಡುವೆನು. ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು.> >>

6ಕರ್ತನಾದ ಯೆಹೋವನು ಇಂತೆನ್ನುತ್ತಾನೆ, <<ನೀನು ಚಪ್ಪಾಳೆ ಹೊಡೆದು, ಕಾಲಿನಿಂದ ನೆಲವನ್ನು ಬಡಿದು, ಇಸ್ರಾಯೇಲ್ ದೇಶವನ್ನು ಮನಃಪೂರ್ವಕವಾಗಿ ತಿರಸ್ಕರಿಸಿ, ಅದರ ಗತಿಗೆ ಹಿಗ್ಗಿಕೊಂಡೆ.

7ಆದುದರಿಂದ ಇಗೋ, ನಾನು ನಿನ್ನ ಮೇಲೆ ಕೈಯೆತ್ತಿ ನಿನ್ನನ್ನು ಸುಲಿಗೆಗಾಗಿ ಮ್ಲೇಚ್ಛರಿಗೆ ವಶಪಡಿಸಿ, ಜನಾಂಗಗಳೊಳಗಿಂದ ಕಿತ್ತುಬಿಟ್ಟು, ದೇಶಗಳೊಳಗಿಂದ ನಿನ್ನ ಹೆಸರನ್ನು ಅಳಿಸಿ, ನಿನ್ನನ್ನು ಹಾಳುಮಾಡುವೆನು; ಆಗ ನಾನೇ ಯೆಹೋವನು ಎಂದು ನಿನಗೆ ಗೊತ್ತಾಗುವುದು.>>

8ಕರ್ತನಾದ ಯೆಹೋವನು ಇಂತೆನ್ನುತ್ತಾನೆ, <<ಆಹಾ, ಯೆಹೂದ ವಂಶವು ಎಲ್ಲಾ ಜನಾಂಗಗಳ ಹಾಗೆಯೇ ಇದೆ, ವಿಶೇಷವೇನು? ಎಂದು ಮೋವಾಬೂ ಮತ್ತು ಸೇಯೀರೂ ಅಂದುಕೊಂಡಿದೆ.

9ಆದುದರಿಂದ, ಇಗೋ, ದೇಶಭೂಷಣಗಳಾದ ಮೋವಾಬಿನ ಗಡಿಯ ಪಟ್ಟಣಗಳು, ಅಂದರೆ ಬೇತ್ ಯೆಷೀಮೋತ್, ಬಾಳ್ ಮೆಯೋನ್, ಕಿರ್ಯಾಥಯಿಮ್ ಎಂಬ ಪಟ್ಟಣಗಳು ಇರುವ ಕಡೆಯಲ್ಲಿ ನಾನು ಮೋವಾಬಿನ ಮೇರೆಯನ್ನು ಒಡೆದುಬಿಡುವೆನು.

10ಆ ಸೀಮೆಯನ್ನಲ್ಲದೆ, ಅಮ್ಮೋನನ್ನೂ ಮೂಡಣದವರಿಗೆ ಬಾಧ್ಯವಾಗಿ ಕೊಟ್ಟು, ಅಮ್ಮೋನ್ಯರು ಜನಾಂಗಗಳೊಳಗೆ ನಿರ್ನಾಮವಾಗಬೇಕೆಂಬ ನನ್ನ ಸಂಕಲ್ಪವನ್ನು ನೆರವೇರಿಸುವೆನು.

11ಮೋವಾಬ್ಯರಿಗೂ ದಂಡನೆಗಳನ್ನು ವಿಧಿಸಿ ತೀರಿಸುವೆನು. ಆಗ ನಾನೇ ಯೆಹೋವನು ಎಂದು ಅವರಿಗೆ ಗೊತ್ತಾಗುವುದು.>>

12ಕರ್ತನಾದ ಯೆಹೋವನು ಇಂತೆನ್ನುತ್ತಾನೆ, <<ಎದೋಮು ಯೆಹೂದ ವಂಶಕ್ಕೆ ಪ್ರತೀಕಾರಮಾಡಿದೆ; ಮುಯ್ಯಿಗೆ ಮುಯ್ಯಿ ತೀರಿಸಿ ಮಹಾಪರಾಧವನ್ನು ನಡೆಸಿದೆ.>>

13ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, <<ನಾನು ಎದೋಮಿನ ಮೇಲೆ ಕೈಯೆತ್ತಿ, ಅದರೊಳಗಿಂದ ಜನರನ್ನೂ ಮತ್ತು ಪಶುಗಳನ್ನೂ ನಿರ್ಮೂಲಮಾಡಿ, ತೇಮಾನಿನಿಂದ ದೆದಾನಿನವರೆಗೂ ಅದನ್ನು ಹಾಳುಮಾಡಿ, ಪ್ರಜೆಗಳನ್ನು ಖಡ್ಗಕ್ಕೆ ಸಿಕ್ಕಿಸುವೆನು.

14ನಾನು ಎದೋಮಿಗೆ ನನ್ನ ಜನರಾದ ಇಸ್ರಾಯೇಲರ ಕೈಯಿಂದ ಮುಯ್ಯಿ ತೀರಿಸುವೆನು; ಅವರು ನನ್ನ ಕೋಪರೋಷಗಳಿಗೆ ತಕ್ಕ ಹಾಗೆ ಅದಕ್ಕೆ ಮಾಡುವರು; ನನ್ನ ಪ್ರತೀಕಾರವು ಎದೋಮಿನ ಅನುಭವಕ್ಕೆ ಬರುವುದು>> ಇದು ಕರ್ತನಾದ ಯೆಹೋವನ ನುಡಿ.

15ಕರ್ತನಾದ ಯೆಹೋವನು ಇಂತೆನ್ನುತ್ತಾನೆ, <<ಫಿಲಿಷ್ಟಿಯರು ಯೆಹೂದಕ್ಕೆ ಪ್ರತೀಕಾರಮಾಡಿದ್ದಾರೆ; ಹೌದು, ಮುಯ್ಯಿಗೆಮುಯ್ಯಿ ತೀರಿಸುತ್ತಾ ಅದನ್ನು ಮನಃಪೂರ್ವಕವಾಗಿ ತಿರಸ್ಕರಿಸಿ ದೀರ್ಘದ್ವೇಷದಿಂದ ಹಾಳುಮಾಡಿದ್ದಾರೆ.>>

16ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, <<ಇಗೋ, ನಾನು ಫಿಲಿಷ್ಟಿಯರ ಮೇಲೆ ಕೈಯೆತ್ತುವೆನು; ಕೆರೇತಿಯರನ್ನು ಕತ್ತರಿಸಿಬಿಟ್ಟು, ಸಮುದ್ರತೀರದಲ್ಲಿನ ಜನಶೇಷವನ್ನು ನಿಶ್ಶೇಷಮಾಡುವೆನು.

17ಅವರೆಲ್ಲರನ್ನು ಬಲವಾಗಿ ಖಂಡಿಸಿ ಮುಯ್ಯಿಗೆಮುಯ್ಯಿ ತೀರಿಸುವೆನು; ಹೀಗೆ ಪ್ರತೀಕಾರಮಾಡುವುದರಿಂದ ನಾನೇ ಯೆಹೋವನು ಎಂದು ಅವರಿಗೆ ಗೊತ್ತಾಗುವುದು.>>


  Share Facebook  |  Share Twitter

 <<  Ezekiel 25 >> 


Bible2india.com
© 2010-2024
Help
Dual Panel

Laporan Masalah/Saran