Bible 2 India Mobile
[VER] : [KANNADA]     [PL]  [PB] 
 <<  Deuteronomy 21 >> 

1ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗಿ ಕೊಡುವ ದೇಶದಲ್ಲಿ ಹತನಾದ ಮನುಷ್ಯನ ಶವವು ಅಡವಿಯಲ್ಲಿ ಬಿದ್ದಿರುವುದನ್ನು ನೀವು ಕಂಡರೆ ಮತ್ತು ಅವನನ್ನು ಕೊಂದವನು ಯಾರೆಂಬುವುದು ತಿಳಿಯದೆ ಹೋದರೆ,

2ನಿಮ್ಮ ಹಿರಿಯರೂ ಮತ್ತು ನ್ಯಾಯಾಧಿಪತಿಗಳೂ ಬಂದು ಹತನಾದವನ ಶವದ ಸುತ್ತಲಿರುವ ಊರುಗಳಲ್ಲಿ ಯಾವುದು ಹತ್ತಿರವೆಂದು ತಿಳಿದುಕೊಳ್ಳುವುದಕ್ಕೆ ಅಳತೆಮಾಡಬೇಕು.

3ಯಾವ ಊರು ಹತ್ತಿರವಾಗಿದೆಯೋ ಆ ಊರಿನ ಹಿರಿಯರು ಇನ್ನೂ ನೊಗಕ್ಕೆ ಕಟ್ಟಲ್ಪಡದೆಯೂ, ಯಾವ ಕೆಲಸವನ್ನೂ ಮಾಡದೆಯೂ ಇರುವ ಒಂದು ಮಣಕವನ್ನು ತೆಗೆದುಕೊಳ್ಳಬೇಕು.

4ಅವರು ಅದನ್ನು ಎಂದಿಗೂ ವ್ಯವಸಾಯಕ್ಕೆ ಉಪಯೋಗಿಸದಂಥ ಅಥವಾ ನೀರು ಯಾವಾಗಲೂ ಹರಿಯುವಂಥ ತಗ್ಗಿಗೆ ತೆಗೆದುಕೊಂಡು ಹೋಗಿ, ಅಲ್ಲಿ ಅದರ ಕುತ್ತಿಗೆಯನ್ನು ಮುರಿದು ಕೊಲ್ಲಬೇಕು.

5ಲೇವಿಕುಲದವರಾದ ಯಾಜಕರಲ್ಲಿ ಕೆಲವರು ಹತ್ತಿರ ಬರಬೇಕು. ನಿಮ್ಮ ದೇವರಾದ ಯೆಹೋವನು ಅವರನ್ನೇ ತನ್ನ ಸಾನ್ನಿಧ್ಯಸೇವೆಯನ್ನು ಮಾಡುವುದಕ್ಕೂ ಮತ್ತು ತನ್ನ ಹೆಸರಿನಿಂದ ಜನರನ್ನು ಆಶೀರ್ವದಿಸುವುದಕ್ಕೂ ಆರಿಸಿಕೊಂಡಿದ್ದಾನಲ್ಲಾ; ಅನುಮಾನವಾದ ಎಲ್ಲಾ ವ್ಯಾಜ್ಯಗಳ ಮತ್ತು ಹೊಡೆದಾಟಗಳ ವಿಷಯದಲ್ಲಿ ಅವರೇ ತೀರ್ಮಾನಿಸುವವರು, ಅವರ ಮಾತುಗಳನ್ನು ಕೇಳಿರಿ.

6ಹತನಾದ ಮನುಷ್ಯನಿಗೆ ಹತ್ತಿರುವಿರುವ ಗ್ರಾಮದ ಹಿರಿಯರು, ತಗ್ಗಿನಲ್ಲಿ ಕುತ್ತಿಗೆ ಮುರಿಯಲ್ಪಟ್ಟ ಆ ಮಣಕದ ಮೇಲೆ ತಮ್ಮ ಕೈಗಳನ್ನು ತೊಳೆದುಕೊಂಡು,

7<<ನಮ್ಮ ಕೈಗಳು ಈ ಹತ್ಯವನ್ನು ಮಾಡಲಿಲ್ಲ, ನಮ್ಮ ಕಣ್ಣುಗಳು ನೋಡಲಿಲ್ಲ.

8ಯೆಹೋವನೇ ನೀನು ಬಿಡುಗಡೆಮಾಡಿದ ನಿನ್ನ ಜನರನ್ನು ಕ್ಷಮಿಸಬೇಕು; ಅನ್ಯಾಯವಾದ ನರಹತ್ಯದೋಷ ಫಲವು ನಿನ್ನ ಜನರಾದ ಇಸ್ರಾಯೇಲರಿಗೆ ತಗಲದಿರಲಿ>> ಎಂದು ಹೇಳಬೇಕು.

9ಆಗ ಆ ರಕ್ತಾಪರಾಧವು ಕ್ಷಮಿಸಲ್ಪಡುವುದು. ಹೀಗೆ ಯೆಹೋವನ ದೃಷ್ಟಿಯಲ್ಲಿ ಸರಿಯಾದುದನ್ನು ಮಾಡುವುದರಿಂದ ನೀವೇ ಅನ್ಯಾಯವಾದ ನರಹತ್ಯದೋಷವನ್ನು ನಿಮ್ಮ ಮಧ್ಯದಿಂದ ತೆಗೆದುಹಾಕುವಿರಿ.

10ನೀವು ಶತ್ರುಗಳೊಡನೆ ಯುದ್ಧಮಾಡಲಾಗಿ ನಿಮ್ಮ ದೇವರಾದ ಯೆಹೋವನ ಅನುಗ್ರಹದಿಂದ ಅವರನ್ನು ಸೋಲಿಸಿದಾಗ ನೀವು ಅವರನ್ನು ಸೆರೆಯಾಗಿ ಒಯ್ಯಬೇಕು.

11ನಿಮ್ಮಲ್ಲಿ ಯಾವನಾದರೂ ಸೆರೆಯವರಲ್ಲಿ ಸುಂದರ ಸ್ತ್ರೀಯನ್ನು ಕಂಡು ಮೋಹಿಸಿ ಮದುವೆಮಾಡಿಕೊಳ್ಳಬೇಕೆಂದು ಅಪೇಕ್ಷಿಸಿದರೆ,

12ಅವಳನ್ನು ಮನೆಗೆ ಕರೆದುಕೊಂಡು ಬರಲಿ, ತರುವಾಯ ಅವಳು ಕ್ಷೌರಮಾಡಿಸಿಕೊಂಡು, ಉಗುರುಗಳನ್ನು ಕತ್ತರಿಸಿಕೊಳ್ಳುವಳು.

13ಅವಳು ಸೆರೆಯ ಬಟ್ಟೆಗಳನ್ನು ತೆಗೆದಿಟ್ಟು, ಅವನ ಮನೆಯಲ್ಲಿ ಒಂದು ತಿಂಗಳಿನ ವರೆಗೆ ತಾಯಿ ಮತ್ತು ತಂದೆಗಳ ವಿಯೋಗದ ನಿಮಿತ್ತ ಹಂಬಲಿಸಲಿ. ಆಮೇಲೆ ಅವನು ಅವಳನ್ನು ಹೆಂಡತಿಯನ್ನಾಗಿ ಮಾಡಿಕೊಳ್ಳಬಹುದು.

14ತರುವಾಯ ಅವಳು ಅವನಿಗೆ ಇಷ್ಟವಾಗದೆಹೋದರೆ ಅವನು ಅವಳನ್ನು ಅವಳ ಮನಸ್ಸು ಬಂದಲ್ಲಿಗೆ ಕಳುಹಿಸಿಬಿಡಬೇಕು. ಅವಳನ್ನು ಸಂಗಮಿಸಿದ್ದರಿಂದ ಹಣ ಕೊಟ್ಟು ದಾಸತ್ವಕ್ಕೆ ಮಾರಲೂ ಬಾರದು, ದಾಸಿಯಂತೆ ನಡಿಸಲೂ ಬಾರದು.

15ಯಾವನಾದರು ಇಬ್ಬರು ಹೆಂಡತಿಯರನ್ನು ಮಾಡಿಕೊಂಡು ಅವರಲ್ಲಿ ಒಬ್ಬಳನ್ನು ಪ್ರೀತಿಸಿ, ಮತ್ತೊಬ್ಬಳನ್ನು ತಿರಸ್ಕರಿಸುವ ಸಂದರ್ಭ ಬಂದಾಗ ಅವರಿಬ್ಬರೂ ಅವನಿಂದ ಮಕ್ಕಳನ್ನು ಪಡೆದಿದ್ದರೆ, ಚೊಚ್ಚಲು ಮಗನು ತಿರಸ್ಕರಿಸಲ್ಪಟ್ಟವಳಲ್ಲಿಯೇ ಹುಟ್ಟಿದ್ದರೆ,

16ತಂದೆಯಾದವನು ತನ್ನ ಆಸ್ತಿಯನ್ನು ಮಕ್ಕಳಿಗೆ ಸ್ವಾಸ್ತ್ಯವಾಗಿ ಕೊಡುವಾಗ ಆ ತಿರಸ್ಕರಿಸಲ್ಪಟ್ಟವಳ ಮಗನನ್ನು ತಳ್ಳಿಬಿಟ್ಟು ತಾನು ಪ್ರೀತಿಸುವ ಹೆಂಡತಿಯ ಮಗನನ್ನೇ ಚೊಚ್ಚಲನೆಂದು ಭಾವಿಸಬಾರದು.

17ತಿರಸ್ಕರಿಸಲ್ಪಟ್ಟವಳ ಮಗನೇ ಚೊಚ್ಚಲನೆಂದು ಒಪ್ಪಿ, ಅವನಿಗೆ ಎರಡು ಭಾಗಗಳನ್ನು ಕೊಡಬೇಕು. ಅವನೇ ತಂದೆಯ ವೀರ್ಯಕ್ಕೆ ಪ್ರಥಮಫಲವೂ ಮತ್ತು ಚೊಚ್ಚಲುತನದ ಹಕ್ಕಿಗೆ ಬಾಧ್ಯನೂ ಆಗಿದ್ದಾನಲ್ಲಾ.

18ಒಬ್ಬ ಮಗನು ತಂದೆತಾಯಿಗಳ ಆಜ್ಞೆಗೆ ಒಳಗಾಗದೆ ಶಿಕ್ಷಿಸಲ್ಪಟ್ಟರೂ, ಮೊಂಡನೂ ಮತ್ತು ಅವಿಧೇಯನೂ ಆಗಿ,

19ಅವರ ಮಾತನ್ನು ಕೇಳದೆಹೋದರೆ ತಂದೆತಾಯಿಗಳು ಅವನನ್ನು ಹಿಡಿದು,

20ಊರು ಬಾಗಿಲಿಗೆ ಹಿರಿಯರ ಮುಂದೆ ತಂದು ಅವರಿಗೆ, <<ಈ ನಮ್ಮ ಮಗನು ನಮ್ಮ ಮಾತನ್ನು ಕೇಳುವುದೇ ಇಲ್ಲ, ಆಜ್ಞೆಗೆ ಒಳಗಾಗುವುದಿಲ್ಲ; ಇವನು ಮೊಂಡ, ಕುಡುಕ ಮತ್ತು ಹೊಟ್ಟೆಬಾಕ>> ಎಂದು ಸಾಕ್ಷಿಹೇಳಬೇಕು.

21ಆಗ ಊರಿನವರೆಲ್ಲರೂ ಅವನನ್ನು ಕಲ್ಲೆಸೆದು ಕೊಲ್ಲಬೇಕು. ಹೀಗೆ ನೀವು ಆ ದುಷ್ಟತ್ವವನ್ನು ನಿಮ್ಮ ಮಧ್ಯದೊಳಗಿಂದ ತೆಗೆದುಹಾಕಿಬಿಡಬೇಕು. ಇಸ್ರಾಯೇಲರೆಲ್ಲರೂ ಇದನ್ನು ಕೇಳಿ ಭಯಪಡುವರು.

22ಅಪರಾಧ ಮಾಡಿದವನು ಮರಣಶಿಕ್ಷೆಯನ್ನು ಹೊಂದಿದ ಮೇಲೆ ನೀವು ಅವನ ಶವವನ್ನು ಮರದ ಕಂಬಕ್ಕೆ ತೂಗುಹಾಕಿದರೆ,

23ಅದು ರಾತ್ರಿಯೆಲ್ಲಾ ಮರದ ಮೇಲೆ ಇರಬಾರದು; ಅದೇ ದಿನದಲ್ಲಿ ಅದನ್ನು ನೆಲದಲ್ಲಿ ಹೂಣಿಡಬೇಕು. ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವುದಕ್ಕೆ ಕೊಡುವ ದೇಶವು ಅಪವಿತ್ರವಾಗಬಾರದು. ಮರಕ್ಕೆ ತೂಗಹಾಕಲ್ಪಟ್ಟವನು ದೇವರ ಶಾಪವನ್ನು ಹೊಂದಿದವನಾಗಿರುತ್ತಾನೆ.


  Share Facebook  |  Share Twitter

 <<  Deuteronomy 21 >> 


Bible2india.com
© 2010-2024
Help
Dual Panel

Laporan Masalah/Saran