Bible 2 India Mobile
[VER] : [KANNADA]     [PL]  [PB] 
 <<  Ruth 4 >> 

1ಬೋವಜನು ಊರಬಾಗಿಲಿನ ಬಳಿಗೆ ಹೋಗಿ ಅಲ್ಲಿ ಕುಳಿತುಕೊಂಡನು. ತಾನು ಹೇಳಿದ್ದ ಸಮೀಪಬಂಧುವು ಆ ಮಾರ್ಗವಾಗಿ ಹೋಗುತ್ತಿದ್ದುದನ್ನು ಕಂಡು, ಬೋವಜನು ಅವನಿಗೆ <<ಬಾರಪ್ಪಾ, ಇಲ್ಲಿ ಬಂದು ಕುಳಿತುಕೋ>> ಎಂದು ಕರೆಯಲು ಅವನು ಬಂದು ಕುಳಿತುಕೊಂಡನು.

2ಇದಲ್ಲದೆ ಅವನು ಊರಿನ ಹಿರಿಯರಲ್ಲಿ ಹತ್ತು ಮಂದಿಯನ್ನು ಕರೆದಾಗ ಅವರೂ ಬಂದು ಕುಳಿತುಕೊಂಡರು.

3ಆಗ ಅವನು ಆ ಸಮೀಪಬಂಧುವಿಗೆ, <<ಮೋವಾಬ್ ದೇಶದಿಂದ ಹಿಂದಿರುಗಿ ಬಂದಿರುವ ನೊವೊಮಿಯು ನಮ್ಮ ಸಹೋದರನಾದ ಎಲೀಮೆಲೆಕನ ಪಾಲಿಗೆ ಬಂದ ಹೊಲವನ್ನು ಮಾರಬೇಕೆಂದಿದ್ದಾಳೆ.

4ನಾನು ನಿನಗೆ ಹೇಳಬೇಕೆಂದಿರುವುದೇನಂದರೆ <ನಿನಗೆ ಅದನ್ನು ಕೊಂಡುಕೊಳ್ಳುವ ಮನಸ್ಸಿದ್ದರೆ ಇಲ್ಲಿ ಕುಳಿತಿರುವ ಊರಿನ ಹಿರಿಯರ ಮುಂದೆಯೇ ಕೊಂಡುಕೋ.> ಇಲ್ಲದಿದ್ದರೆ ನನಗೆ ತಿಳಿಸು; ಇದು ನನಗೆ ಗೊತ್ತಾಗಬೇಕು. ನೀನೂ, ನಿನ್ನ ತರುವಾಯ ನಾನೂ ಅಲ್ಲದೆ ಅದನ್ನು ಕೊಂಡುಕೊಳ್ಳತಕ್ಕ ಬಾಧ್ಯರು ಬೇರೆ ಯಾರೂ ಇಲ್ಲ>> ಎಂದು ಹೇಳಲು ಅವನು <<ನಾನೇ ಕೊಂಡುಕೊಳ್ಳುತ್ತೇನೆ>> ಅಂದನು.

5ಆಗ ಬೋವಜನು <<ನೀನು ನೊವೊಮಿಯಿಂದ ಆ ಹೊಲವನ್ನು ತೆಗೆದುಕೊಳ್ಳುವ ದಿನದಲ್ಲಿ, ಹೊಲದ ಖಾತೆಯೂ ಆಕೆಯ ಸತ್ತುಹೋದ ಮಗನ ಹೆಸರಿನಲ್ಲೇ ಉಳಿಯುದಿರುವಂತೆ, ಅವನ ಹೆಂಡತಿ ಮೋವಾಬ್ಯಳಾದ ರೂತಳನ್ನೂ ತೆಗೆದುಕೊಳ್ಳಬೇಕು>> ಎಂದು ತಿಳಿಸಿದನು.

6ಅದಕ್ಕೆ ಆ ಸಮೀಪಬಂಧುವು <<ಹಾಗಾದರೆ ಅದನ್ನು ಕೊಂಡುಕೊಂಡು ನನ್ನ ಆಸ್ತಿಯನ್ನು ನಷ್ಟಪಡಿಸಿಕೊಳ್ಳಲಾರೆನು; ಆ ಬಾಧ್ಯತೆಯನ್ನು ನೀನೇ ವಹಿಸಿಕೋ; ನನ್ನಿಂದಾಗದು>> ಅಂದನು.

7ಯಾವುದಾದರೊಂದು ವಸ್ತುವನ್ನು ಬಿಡಿಸಿಕೊಳ್ಳುವಾಗಲೂ, ತೆಗೆದುಕೊಳ್ಳುವಾಗಲೂ, ಕೊಡುವಾಗಲೂ ಮಾತನ್ನು ದೃಢಪಡಿಸುವುದಕ್ಕೋಸ್ಕರ ಇಸ್ರಾಯೇಲ್ಯರಲ್ಲಿ ಪೂರ್ವಕಾಲದಿಂದ ಇದ್ಧ ಪದ್ಧತಿ ಯಾವುದಂದರೆ, ಕೊಡುವವನು ತೆಗೆದುಕೊಳ್ಳುವವನಿಗೆ ತನ್ನ ಕೆರವನ್ನು ಬಿಚ್ಚಿ ಕೊಡಬೇಕು; ಇದರಿಂದ ಮಾತು ದೃಢವಾಯಿತೆಂದು ಇಸ್ರಾಯೇಲ್ಯರು ತಿಳಿದುಕೊಳ್ಳುವರು.

8ಹಾಗೆಯೇ ಆ ಸಮೀಪಬಂಧುವು ಬೋವಜನಿಗೆ <<ನೀನೇ ತೆಗೆದುಕೋ>> ಎಂದು ಹೇಳಿ ತನ್ನ ಕೆರವನ್ನು ತೆಗೆದುಕೊಟ್ಟನು.

9ಆಗ ಬೋವಜನು ಹಿರಿಯರಿಗೂ, ಎಲ್ಲಾ ಜನರಿಗೂ <<ನಾನು ಎಲೀಮೆಲೆಕ್, ಕಿಲ್ಯೋನ್, ಮಹ್ಲೋನ್ ಎಂಬುವರಿಗಿದ್ದದ್ದನ್ನೆಲ್ಲಾ ನೊವೊಮಿಯಿಂದ ತೆಗೆದುಕೊಂಡಿದ್ದೇನೆ;

10ಇದಲ್ಲದೆ ಹೊಲದ ಖಾತೆಯು ಸತ್ತುಹೋದ ಮಹ್ಲೋನನ ಹೆಸರಿನಲ್ಲೇ ಉಳಿದು, ಅವನ ಬಂಧುಗಳಲ್ಲಿಯೂ ಊರಲ್ಲಿಯೂ ಅವನ ಸಂತಾನವು ಉಳಿಯುವಂತೆ ಅವನ ಹೆಂಡತಿಯಾಗಿದ್ದ ಮೋವಾಬ್ಯಳಾದ ರೂತಳನ್ನು ನನ್ನ ಹೆಂಡತಿಯನ್ನಾಗಿ ತೆಗೆದುಕೊಂಡಿದ್ದೇನೆ ಇದಕ್ಕೆ ನೀವೇ ಸಾಕ್ಷಿಗಳು>> ಎಂದು ಹೇಳಿದನು.

11ಅದಕ್ಕೆ ಊರ ಬಾಗಿಲಲ್ಲಿ ಕೂಡಿ ಬಂದಿದ್ದ ಹಿರಿಯರೂ, ಎಲ್ಲಾ ಜನರೂ <<ಹೌದು, ನಾವೇ ಸಾಕ್ಷಿಗಳು; ಯೆಹೋವನು ಇಸ್ರಾಯೇಲನ ಮನೆಯನ್ನು ಕಟ್ಟಿದ. ರಾಹೇಲ್, ಲೇಯಾ ಎಂಬ ಸ್ತ್ರೀಯರನ್ನು ಹೇಗೋ ಹಾಗೆಯೇ ನಿನ್ನ ಮನೆಗೆ ಬರುವ ಈ ಸ್ತ್ರೀಯನ್ನೂ ಅಭಿವೃದ್ಧಿಪಡಿಸಲಿ. ಎಫ್ರಾತದಲ್ಲಿ ಅಭಿವೃದ್ಧಿ ಹೊಂದು, ಬೇತ್ಲೆಹೇಮಿನಲ್ಲಿ ಪ್ರಸಿದ್ಧನಾಗು.

12ಯೆಹೋವನು ಈ ಸ್ತ್ರೀಯ ಮೂಲಕ ನಿನಗೆ ಅನುಗ್ರಹಿಸುವ ಸಂತಾನದಿಂದ ನಿನ್ನ ಮನೆಯು ಯೆಹೂದನಿಗೆ ತಾಮಾರಳಿಂದ ಹುಟ್ಟಿದ ಪೆರೆಚನ ಮನೆಗೆ ಸಮಾನವಾಗಲಿ>> ಅಂದರು.

13ಬೋವಜನು ರೂತಳನ್ನು ಹೆಂಡತಿಯನ್ನಾಗಿ ಪರಿಗ್ರಹಿಸಿದ್ದರಿಂದ ಆಕೆಯು ಯೆಹೋವನ ಅನುಗ್ರಹದಿಂದ ಗರ್ಭಿಣಿಯಾಗಿ ಮಗನನ್ನು ಹೆತ್ತಳು.

14ಆಗ ಹೆಂಗಸರು ನೊವೊಮಿಗೆ <<ಈ ಹೊತ್ತು ನಿನಗೆ ಬಾಧ್ಯಸ್ಥನನ್ನು ದಯಪಾಲಿಸಿದ ಯೆಹೋವನಿಗೆ ಸ್ತೋತ್ರವಾಗಲಿ. ಈ ಮಗನು ಇಸ್ರಾಯೇಲ್ಯರಲ್ಲಿ ಪ್ರಖಾತ್ಯನಾಗಲಿ.

15ಇವನು ನಿನಗೆ ನವಚೈತನ್ಯ ನೀಡಿ ಪುನರ್ಜನ್ಮ ಹೊಂದುವಂತೆ ಮಾಡುವನು, ವೃದ್ಧಾಪ್ಯದಲ್ಲಿ ನಿನಗೆ ಸಂರಕ್ಷಕನಾಗಿರುವನು. ನಿನ್ನನ್ನು ಬಹಳವಾಗಿ ಪ್ರೀತಿಸುತ್ತಾ ಏಳು ಮಂದಿ ಮಕ್ಕಳಿಗಿಂತ ಹೆಚ್ಚಾಗಿ ನಿನ್ನನ್ನು ಪ್ರೀತಿಸಿ ಗೌರವಿಸುವ ನಿನ್ನ ಸೊಸೆಯು ಇವನನ್ನು ಹೆತ್ತಳಲ್ಲಾ>> ಎಂದು ಹೇಳಿದರು.

16ನೊವೊಮಿಯೇ ಆ ಮಗುವನ್ನು ಮಡಿಲಲ್ಲಿಟ್ಟುಕೊಂಡು ಸಾಕುತ್ತಿದ್ದಳು.

17ನೆರೆಹೊರೆಯ ಹೆಂಗಸರು ನೊವೊಮಿಗೆ <<ಒಬ್ಬ ಮಗನು ಹುಟ್ಟಿದ್ದಾನೆಂದು>> ಹೇಳಿ ಅವನಿಗೆ ಓಬೇದನೆಂದು ಹೆಸರಿಟ್ಟರು. ಇವನೇ ಇಷಯನಿಗೆ ತಂದೆಯೂ, ದಾವೀದನಿಗೆ ಅಜ್ಜನೂ ಆದನು.

18ಪೆರೆಚನ ವಂಶಾವಳಿ: ಪೆರೆಚನು ಹೆಚ್ರೋನನನ್ನು ಪಡೆದನು;

19ಹೆಚ್ರೋನನು ರಾಮನನ್ನು ಪಡೆದನು; ರಾಮನು ಅಮ್ಮೀನಾದಾಬನನ್ನು ಪಡೆದನು;

20ಅಮ್ಮೀನಾದಾಬನು ನಹಶೋನನನ್ನು ಪಡೆದನು; ನಹಶೋನನು ಸಲ್ಮೋನನನ್ನು ಪಡೆದನು;

21ಸಲ್ಮೋನನು ಬೋವಜನನ್ನು ಪಡೆದನು; ಬೋವಜನು ಓಬೇದನನ್ನು ಪಡೆದನು;

22ಓಬೇದನು ಇಷಯನನ್ನು ಪಡೆದನು; ಇಷಯನು ದಾವೀದನನ್ನು ಪಡೆದನು.


  Share Facebook  |  Share Twitter

 <<  Ruth 4 >> 


Bible2india.com
© 2010-2024
Help
Dual Panel

Laporan Masalah/Saran