Bible 2 India Mobile
[VER] : [KANNADA]     [PL]  [PB] 
 <<  Romans 6 >> 

1ಹಾಗಾದರೆ ಏನು ಹೇಳೋಣ? ದೇವರ ಕೃಪೆಯು ಹೆಚ್ಚಾಗಲಿ ಎಂದು ನಾವು ಇನ್ನೂ ಪಾಪವನ್ನು ಮಾಡುತ್ತಲೇ ಇರಬೇಕೋ? ಹಾಗೆ ಎಂದಿಗೂ ಹಾಗಾಗಬಾರದು.

2ಪಾಪದ ಪಾಲಿಗೆ ಸತ್ತವರಾದ ನಾವು ಇನ್ನು ಅದರಲ್ಲೇ ಬದುಕುವುದು ಹೇಗೆ?

3ಕ್ರಿಸ್ತ ಯೇಸುವಿನೊಂದಿಗೆ ಸೇರುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡವರಾದ ನಾವೆಲ್ಲರೂ ಆತನ ಮರಣದಲ್ಲಿ ಪಾಲುಗಾರರಾಗುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡೆವೆಂದು ನಿಮಗೆ ತಿಳಿಯದೋ?

4ಹೀಗಿರಲಾಗಿ ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಆತನ ಮರಣದಲ್ಲಿ ಪಾಲುಗಾರರಾಗಿ ಆತನೊಂದಿಗೆ ಹೂಣಲ್ಪಟ್ಟೆವು. ಆದ್ದರಿಂದ ಕ್ರಿಸ್ತನು ಸತ್ತು ತಂದೆಯ ಮಹಿಮೆಯಿಂದ ಜೀವಿತನಾಗಿ ಎಬ್ಬಿಸಲ್ಪಟ್ಟಂತೆಯೇ ನಾವು ಕೂಡ ಜೀವದಿಂದೆದ್ದು ನೂತನ ಜೀವದಲ್ಲಿ ನಡೆದುಕೊಳ್ಳಬೇಕು.

5ಹೇಗಂದರೆ ನಾವು ಆತನ ಮರಣಕ್ಕೆ ಸದೃಶ್ಯವಾದ ಮರಣವನ್ನು ಹೊಂದಿ ಆತನಲ್ಲಿ ಐಕ್ಯವಾಗಿದ್ದರೆ ಆತನ ಪುನರುತ್ಥಾನಕ್ಕೆ ಸದೃಶವಾದ ಪುನರುತ್ಥಾನವನ್ನೂ ಹೊಂದಿ ಆತನಲ್ಲಿ ಐಕ್ಯವಾಗುವೆವು.

6ನಮಗೆ ತಿಳಿದಿರುವಂತೆ, ನಮ್ಮ ಪಾಪಾಧೀನಸ್ವಭಾವವು ನಾಶವಾಗಿ, ನಾವು ಇನ್ನೂ ಪಾಪದ ವಶದಲ್ಲಿರದಂತೆ ನಮ್ಮ ಪೂರ್ವಸ್ವಭಾವವು ಕ್ರಿಸ್ತನ ಕೂಡ ಶಿಲುಬೆಗೆ ಹಾಕಲ್ಪಟ್ಟಿದೆ.

7ಸತ್ತವನು ಪಾಪದ ವಶದಿಂದ ಬಿಡುಗಡೆ ಹೊಂದಿದ್ದಾನೆ.

8ಇದಲ್ಲದೆ ನಾವು ಕ್ರಿಸ್ತನೊಡನೆ ಸತ್ತ ಪಕ್ಷದಲ್ಲಿ ಆತನೊಡನೆ ಜೀವಿಸುವೆವೆಂದು ನಂಬುತ್ತೇವೆ.

9ನಮಗೆ ತಿಳಿದಿರುವಂತೆ, ಕ್ರಿಸ್ತನು ಸತ್ತ ಮೇಲೆ ಜೀವಿತನಾಗಿ ಎದ್ದು ಬಂದದ್ದರಿಂದ ಆತನು ಇನ್ನು ಮುಂದೆ ಸಾಯತಕ್ಕವನಲ್ಲ, ಮರಣವು ಆತನ ಮೇಲೆ ಆಳ್ವಿಕೆ ನಡಿಸುವುದಿಲ್ಲ.

10ಆತನು ಸತ್ತದ್ದು ಒಂದೇ ಸಾರಿ ಅದು ಪಾಪದ ಪಾಲಿಗೆ; ಆತನು ಜೀವಿಸುವುದು ದೇವರಿಗಾಗಿಯೇ,

11ಅದೇ ಪ್ರಕಾರ ನೀವು ಸಹ ನಿಮ್ಮನ್ನು ಕ್ರಿಸ್ತ ಯೇಸುವಿನ ಐಕ್ಯದಿಂದ ಪಾಪದ ಪಾಲಿಗೆ ಸತ್ತವರೂ, ದೇವರಿಗಾಗಿ ಜೀವಿಸುವವರೂ ಎಂದು ಎಣಿಸಿಕೊಳ್ಳಿರಿ.

12ಹೀಗಿರುವುದರಿಂದ ಸಾವಿಗೆ ಒಳಗಾಗುವ ಈ ನಿಮ್ಮ ದೇಹದ ಮೇಲೆ ಪಾಪವನ್ನು ಆಳಗೊಡಿಸಿ ನೀವು ದೇಹದ ದುರಾಶೆಗಳಿಗೆ ಒಳಪಡಬೇಡಿರಿ.

13ಇದು ಮಾತ್ರವಲ್ಲದೆ ನೀವು ನಿಮ್ಮ ದೇಹದ ಅಂಗಗಳನ್ನು ಪಾಪಕ್ಕೆ ಒಪ್ಪಿಸುವವರಾಗಿದ್ದು, ಅವುಗಳನ್ನು ದುಷ್ಟತ್ವವನ್ನು ನಡಿಸುವ ಸಾಧನಗಳಾಗಿ ಮಾಡಬೇಡಿರಿ; ನೀವು ಸತ್ತವರೊಳಗಿಂದ ಜೀವಿತರಾಗಿರಲಾಗಿ ನಿಮ್ಮನ್ನು ದೇವರಿಗೆ ಒಪ್ಪಿಸಿಕೊಟ್ಟು, ನಿಮ್ಮ ದೇಹದ ಅಂಗಗಳನ್ನು ನೀತಿಯ ಆಯುಧಗಳನ್ನಾಗಿ ಆತನಿಗೆ ಸಮರ್ಪಿಸಿರಿ.

14ಯಾಕೆಂದರೆ ಪಾಪವು ನಿಮ್ಮ ಮೇಲೆ ಅಧಿಕಾರ ನಡೆಸದು; ನೀವು ಧರ್ಮಶಾಸ್ತ್ರಕ್ಕೆ ಅಧೀನರಲ್ಲ, ಕೃಪೆಗೆ ಅಧೀನರಾಗಿದ್ದೀರಿ.

15ಹಾಗಾದರೇನು? ನಾವು ಧರ್ಮಶಾಸ್ತ್ರಾಧೀನರಲ್ಲ, ಕೃಪೆಗೆ ಅಧೀನರಾಗಿದ್ದೇವೆಂದು ಪಾಪವನ್ನು ಮಾಡಬಹುದೋ? ಎಂದಿಗೂ ಮಾಡಬಾರದು.

16ನೀವು ಯಾವನಿಗೆ ದಾಸರಂತೆ ವಿಧೇಯರಾಗುತ್ತೇವೆಂದು ನಿಮ್ಮನ್ನು ನೀವು ಒಪ್ಪಿಸಿ ಕೊಡುತ್ತೀರೋ ಆ ಯಜಮಾನನಿಗೆ ದಾಸರಾಗಿಯೇ ಇರುವಿರೆಂಬುದು ನಿಮಗೆ ಗೊತ್ತಿಲ್ಲವೋ? ಪಾಪಕ್ಕೆ ದಾಸರಾದರೆ ಮರಣವೇ ಫಲ; ನಂಬಿಕೆಯೆಂಬ ವಿಧೇಯತ್ವಕ್ಕೆ ದಾಸರಾದರೆ ನೀತಿಯೇ ಫಲ

17ಆದರೆ ನೀವು ಮೊದಲು ಪಾಪಕ್ಕೆ ದಾಸರಾಗಿದ್ದರೂ ನಿಮಗೆ ಕಲಿಸಿಕೊಟ್ಟ ಬೋಧನೆಗೆ ನೀವು ಮನಃಪೂರ್ವಕವಾಗಿ ಅಧೀನರಾದ್ದರಿಂದಲೂ,

18ಪಾಪದಿಂದ ಬಿಡುಗಡೆಯನ್ನು ಹೊಂದಿ ನೀತಿಗೆ ದಾಸರಾದ್ದರಿಂದಲೂ ದೇವರಿಗೆ ಸ್ತೋತ್ರವಾಗಲಿ.

19ನಿಮ್ಮ ಶರೀರ ಭಾವದ ಬಲಹೀನತೆಯ ದೆಸೆಯಿಂದ ನಾನು ಲೋಕದ ರೀತಿಯಾಗಿ ಮಾತನಾಡುತ್ತೇನೆ. ದುಷ್ಟತನವನ್ನು ಮಾಡುವುದಕ್ಕಾಗಿ ನಿಮ್ಮ ಅಂಗಗಳನ್ನು ಬಂಡುತನಕ್ಕೂ, ದುಷ್ಟತನಕ್ಕೂ ದಾಸರನ್ನಾಗಿ ಒಪ್ಪಿಸಿ ಕೊಟ್ಟಿದ್ದಂತೆಯೇ ಈಗ ಪರಿಶುದ್ಧರಾಗುವುದಕ್ಕಾಗಿ ನಿಮ್ಮ ಅಂಗಗಳನ್ನು ನೀತಿಗೆ ದಾಸರನ್ನಾಗಿ ಒಪ್ಪಿಸಿಕೊಡಿರಿ.

20ನೀವು ಪಾಪಕ್ಕೆ ದಾಸರಾಗಿದ್ದಾಗ ನೀತಿಗೆ ಒಳಗಾಗಿರಲಿಲ್ಲ.

21ಆದರೆ ನೀವು ಮೊದಲು ಮಾಡಿದ್ದ ಕೃತ್ಯಗಳಿಂದ ನಿಮಗುಂಟಾದ ಫಲವೇನು? ಈಗ ಅವುಗಳ ವಿಷಯದಲ್ಲಿ ನಿಮಗೆ ನಾಚಿಕೆಯಾಗುತ್ತಿದೆ. ಕೊನೆಗೆ ಅವುಗಳಿಂದ ಬರುವುದು ಮರಣವಲ್ಲವೇ?

22ಈಗಲಾದರೋ ನೀವು ಪಾಪದಿಂದ ಬಿಡುಗಡೆಯನ್ನು ಹೊಂದಿ ದೇವರಿಗೆ ದಾಸರಾದ್ದರಿಂದ ನಿಮಗೆ ಶುದ್ಧೀಕರಣವೆಂಬ ಫಲವು ದೊರಕಿರುವುದಲ್ಲದೆ ಅಂತ್ಯದಲ್ಲಿ ನಿತ್ಯ ಜೀವವನ್ನು ಹೊಂದುವಿರಿ.

23ಯಾಕೆಂದರೆ ಪಾಪವು ಕೊಡುವ ಸಂಬಳ ಮರಣ; ದೇವರ ಕೃಪಾವರವು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿರುವ ನಿತ್ಯಜೀವವೇ ಆಗಿದೆ.


  Share Facebook  |  Share Twitter

 <<  Romans 6 >> 


Bible2india.com
© 2010-2024
Help
Dual Panel

Laporan Masalah/Saran