Bible 2 India Mobile
[VER] : [KANNADA]     [PL]  [PB] 
 <<  Nahum 1 >> 

1ನಿನವೆ ಪಟ್ಟಣದ ಬಗ್ಗೆ ದೈವೋಕ್ತಿ. ಎಲ್ಕೋಷ್ ಊರಿನ ನಹೂಮ ಎಂಬ ಪ್ರವಾದಿಗೆ ಆದ ದೈವದರ್ಶನದ ಗ್ರಂಥ.

2ಯೆಹೋವನು ಸ್ವಗೌರವವನ್ನು ಕಾಪಾಡಿಕೊಳ್ಳುವ ದೇವರು. ಆತನು ಮುಯ್ಯಿತೀರಿಸುವವನು; ಹೌದು ಯೆಹೋವನು ಮುಯ್ಯಿತೀರಿಸುವವನು, ಕೋಪಭರಿತನು; ಯೆಹೋವನು ತನ್ನ ವಿರೋಧಿಗಳಿಗೆ ಮುಯ್ಯಿತೀರಿಸುತ್ತಾನೆ. ತನ್ನ ಶತ್ರುಗಳ ಮೇಲೆ ದೀರ್ಘರೋಷವಿಡುತ್ತಾನೆ.

3ಯೆಹೋವನು ದೀರ್ಘಶಾಂತನಾಗಿದ್ದರೂ ಆತನ ಶಕ್ತಿಯು ಅಪಾರ, ಅಪರಾಧಿಗಳನ್ನು ಶಿಕ್ಷಿಸದೆ ಬಿಡನು; ಯೆಹೋವನು ಬಿರುಗಾಳಿಯಲ್ಲಿಯೂ, ತೂಫಾನಿನಲ್ಲಿಯೂ ನಡೆಯುತ್ತಾನೆ; ಮೋಡಗಳು ಆತನ ಹೆಜ್ಜೆಯಿಂದೇಳುವ ಧೂಳು.

4ಆತನು ಸಮುದ್ರವನ್ನು ಗದರಿಸಿ ಒಣಗಿಸುತ್ತಾನೆ, ಸಕಲನದಿಗಳನ್ನು ಬತ್ತಿಸುತ್ತಾನೆ; ಬಾಷಾನೂ ಮತ್ತು ಕರ್ಮೆಲ್ ಹೊಲಗಳು ಕಂದುತ್ತವೆ. ಲೆಬನೋನಿನ ಚಿಗುರು ಬಾಡುತ್ತದೆ.

5ಆತನ ಮುಂದೆ ಬೆಟ್ಟಗಳು ಅದರುತ್ತವೆ, ಗುಡ್ಡಗಳು ಕರಗುತ್ತವೆ; ಆತನ ದರ್ಶನಕ್ಕೆ ಭೂಮಿಯು ಕಂಪಿಸುತ್ತದೆ, ಹೌದು, ಲೋಕವೂ ಲೋಕನಿವಾಸಿಗಳೆಲ್ಲರೂ ತಲ್ಲಣಿಸುತ್ತವೆ.

6ಆತನ ಸಿಟ್ಟಿಗೆ ಯಾರು ಎದುರು ನಿಲ್ಲಲ್ಲುಸಾದ್ಯ? ಆತನ ರೋಷಾಗ್ನಿಯ ಎದುರು ಯಾರು ನಿಂತಾರು? ಆತನ ರೌದ್ರವು ಜ್ವಾಲಾಪ್ರವಾಹದಂತೆ ಹರಿಯುತ್ತದೆ. ಬಂಡೆಗಳು ಆತನಿಂದ ಕೆಡವಲ್ಪಟ್ಟಿವೆ.

7ಯೆಹೋವನು ಒಳ್ಳೆಯವನು; ಇಕ್ಕಟ್ಟಿನ ದಿನದಲ್ಲಿ ಆಶ್ರಯದುರ್ಗವಾಗಿದ್ದಾನೆ; ತನ್ನ ಮೊರೆಹೊಕ್ಕವರನ್ನು ಬಲ್ಲನು.

8ಆದರೆ ತುಂಬಿತುಳುಕುವ ಜಲಪ್ರವಾಹದಿಂದಲೋ ಎಂಬಂತೆ ನಿನವೆಯ ಸ್ಥಾನವನ್ನು ತೀರಾ ಹಾಳುಮಾಡಿ ತನ್ನ ವಿರೋಧಿಗಳನ್ನು ಹಿಂದಟ್ಟಿ ಅಂಧಕಾರಕ್ಕೆ ತಳ್ಳುವನು.

9ನೀವು ಯೆಹೋವನಿಗೆ ವಿರುದ್ಧವಾಗಿ ಯಾವ ಕುಯುಕ್ತಿಯನ್ನು ಕಲ್ಪಿಸುತ್ತೀರಿ? ಆತನು ಸಂಪೂರ್ಣವಾಗಿ ಹಾಳುಮಾಡುವನು; ಅಪಾಯವು ಎರಡನೆಯ ಸಾರಿ ಉಂಟಾಗಬೇಕಾಗಿಲ್ಲ.

10ಆತನ ವೈರಿಗಳು ಮುಳ್ಳುಗಳಂತೆ ಹೆಣೆದುಕೊಂಡಿದ್ದರೂ, ತಮ್ಮ ಮಧ್ಯದಲ್ಲಿ ಮುಳುಗಿದ್ದರೂ ಒಣಗಿದ ಕೂಳೆಯಂತೆ ಬೆಂಕಿಗೆ ತುತ್ತಾಗುವರು.

11ನಿನವೆಯೇ, ಯೆಹೋವನಿಗೆ ವಿರುದ್ಧವಾಗಿ ದುಷ್ಟಆಲೋಚನೆ ಮಾಡಿ ಕೇಡನ್ನು ಕಲ್ಪಿಸುವವನು ನಿನ್ನೊಳಗಿಂದ ಹೊರಟಿದ್ದಾನೆ.

12ಯೆಹೋವನು ಇಂತೆನ್ನುತ್ತಾನೆ, <<ನಿನ್ನ ಶತ್ರುಗಳು ಎಷ್ಟು ಪ್ರಬಲವಾಗಿದ್ದರೂ, ಅವರ ಸಂಖ್ಯೆ ಎಷ್ಟು ಹೆಚ್ಚಿದ್ದರೂ ಅವರು ಕಡಿಯಲ್ಪಡುವರು. ಆ ದುರಾಲೋಚಕನು ಇಲ್ಲವಾಗುವನು. ನಿನ್ನನ್ನು ಬಾಧಿಸಿದ್ದೇನೆ, ಆದರೆ ಇನ್ನು ಬಾಧಿಸೆನು.

13ಅವನು ಹೇರಿದ ನೊಗವನ್ನು ಈಗ ನಿನ್ನ ಮೇಲಿನಿಂದ ಮುರಿದು ಕಟ್ಟಿದ್ದ ಕಣ್ಣಿಗಳನ್ನು ಕಿತ್ತುಹಾಕುವೆನು.>>

14ಅಶ್ಯೂರವೇ, ನಿನ್ನ ಹೆಸರಿನ ಸಂತಾನ ಬೀಜವು ಇನ್ನು ಬಿತ್ತಲ್ಪಡಬಾರದೆಂದು ಯೆಹೋವನಾದ ನಾನು ಆಜ್ಞಾಪಿಸಿದ್ದೇನೆ; ನಿನ್ನ ದೇವರ ಮಂದಿರದೊಳಗಿಂದ ಕೆತ್ತಿದ ವಿಗ್ರಹವನ್ನೂ, ಎರಕದ ಬೊಂಬೆಯನ್ನೂ ಕಡಿದುಬಿಡುವೆನು; ನಿನಗೆ ಸಮಾಧಿಯನ್ನು ಸಿದ್ಧಮಾಡುವೆನು; ನಿನ್ನ ಪಾಪಗಳು ದುರ್ವಾಸನೆ ಬೀರುತ್ತಿವೆ.

15ನೋಡಿರಿ ಆ ಶುಭಸಮಾಚಾರವನ್ನು ತಂದು, ಸಮಾಧಾನವನ್ನು ಪರ್ವತಗಳ ಮೇಲೆ ಸಾರುವ ದೂತನ ಪಾದಗಳು ಮೇಲೆ ತ್ವರೆಪಡುತ್ತವೆ! ಯೆಹೂದವೇ, ನಿನ್ನ ಹಬ್ಬಗಳನ್ನು ಆಚರಿಸಿಕೋ, ನಿನ್ನ ಹರಕೆಗಳನ್ನು ಸಲ್ಲಿಸು; ಆ ದುಷ್ಟರು ಇನ್ನು ಮುಂದೆ ನಿನ್ನನ್ನು ಮುತ್ತಿಗೆ ಹಾಕಿ ಸೋಲಿಸಲು ಸಾಧ್ಯವಿಲ್ಲ, ಏಕೆಂದರೆ ಅವನು ಸಂಪೂರ್ಣ ನಾಶವಾಗಿದ್ದಾನೆ.


  Share Facebook  |  Share Twitter

 <<  Nahum 1 >> 


Bible2india.com
© 2010-2024
Help
Dual Panel

Laporan Masalah/Saran