Bible 2 India Mobile
[VER] : [KANNADA]     [PL]  [PB] 
 <<  Psalms 77 >> 

1ದೇವರಿಗೆ ಮೊರೆಯಿಡುವೆನು, ಕೂಗಿ ಮೊರೆಯಿಡುವೆನು; ಆತನು ನನಗೆ ಕಿವಿಗೊಡುವನು.

2ಇಕ್ಕಟ್ಟಿನಲ್ಲಿ ಸ್ವಾಮಿಯನ್ನು ಕರೆದೆನು; ಬೇಸರವಿಲ್ಲದೆ ರಾತ್ರಿಯೆಲ್ಲಾ ಕೈಚಾಚಿಕೊಂಡೇ ಇದ್ದೆನು. ನನ್ನ ಮನಸ್ಸು ಶಾಂತಿಯನ್ನು ಹೊಂದಲೊಲ್ಲದೆ ಇತ್ತು.

3ನಾನು ವ್ಯಥೆಪಡುತ್ತಾ ದೇವರನ್ನು ಸ್ಮರಿಸುವೆನು; ಮನಗುಂದಿದವನಾಗಿಯೇ ಹಂಬಲಿಸುವೆನು.

4ನಾನು ರೆಪ್ಪೆಗಳನ್ನು ಮುಚ್ಚದಂತೆ ನೀನು ಮಾಡಿದಿ. ತಳಮಳಗೊಂಡು ಮಾತನಾಡಲಾರದೆ ಇದ್ದೆನು.

5ಹಳೆಯ ದಿನಗಳನ್ನೂ, ಪುರಾತನ ವರುಷಗಳನ್ನೂ ಜ್ಞಾಪಕಮಾಡಿಕೊಂಡೆನು.

6ನಾನು ರಾತ್ರಿಯಲ್ಲಿ ಮಾಡುತ್ತಿದ್ದ ಗಾನವನ್ನು ನೆನಪಿಸಿಕೊಳ್ಳುವೆನು, ನನ್ನ ಆಂತರ್ಯದಲ್ಲಿ ಮಾತನಾಡಿಕೊಳ್ಳುವೆನು ಅಂದುಕೊಂಡು ನನ್ನ ಮನಸ್ಸಿನಲ್ಲಿ,

7<<ಕರ್ತನು ಸದಾಕಾಲಕ್ಕೂ ಬಿಟ್ಟೇಬಿಡುವನೋ? ಆತನು ಪುನಃ ಪ್ರಸನ್ನನಾಗುವುದಿಲ್ಲವೋ?

8ಆತನ ಕೃಪಾವಾತ್ಸಲ್ಯವು ನಿಂತೇ ಹೋಯಿತೋ? ಆತನ ವಾಗ್ದಾನವು ಎಂದೆಂದಿಗೂ ಬಿದ್ದೇ ಹೋಯಿತೋ?

9ದೇವರು ದಯೆ ತೋರಿಸಲಿಕ್ಕೆ ಮರೆತುಬಿಟ್ಟನೋ? ಕೋಪದಿಂದ ತನ್ನ ಕರಳುಗಳನ್ನು ಬಿಗಿಹಿಡಿದಿದ್ದಾನೋ?>> ಎಂದು ಅಂದುಕೊಂಡೆನು ಸೆಲಾ

10ಪುನಃ ನಾನು, <<ಹೀಗೆ ನೆನಸುವುದು ನನ್ನ ಬಲಹೀನತೆಯೇ. ಪರಾತ್ಪರನ ಭುಜಬಲವು ಪ್ರಕಟವಾದ ವರುಷಗಳನ್ನು ಜ್ಞಾಪಿಸಿಕೊಳ್ಳುವೆನು.

11ಯೆಹೋವನ ಕೃತ್ಯಗಳನ್ನು ವರ್ಣಿಸುವೆನು; ಪೂರ್ವದಿಂದ ನೀನು ನಡೆಸಿದ ಅದ್ಭುತಗಳನ್ನು ನೆನಪು ಮಾಡಿಕೊಳ್ಳುವೆನು.

12ನಿನ್ನ ಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು; ನಿನ್ನ ಪ್ರವರ್ತನೆಗಳನ್ನು ಸ್ಮರಿಸುವೆನು>> ಅಂದುಕೊಂಡೆನು.

13ದೇವರೇ, ನಿನ್ನ ಮಾರ್ಗವು ಪರಿಶುದ್ಧವಾದುದು. ನಮ್ಮ ದೇವರಂತೆ ಮಹತ್ವವುಳ್ಳ ದೇವರು ಯಾರು?

14ಅದ್ಭುತಗಳನ್ನು ನಡೆಸುವ ದೇವರು ನೀನೇ; ಜನಾಂಗಗಳಲ್ಲಿ ಪರಾಕ್ರಮವನ್ನು ತೋರ್ಪಡಿಸಿದಿ.

15ಯಾಕೋಬ ಮತ್ತು ಯೋಸೇಫರ ವಂಶದವರಾದ ನಿನ್ನ ಪ್ರಜೆಯನ್ನು, ಭುಜಬಲದಿಂದ ಬಿಡುಗಡೆಮಾಡಿದಿ. ಸೆಲಾ

16ದೇವರೇ, ಜಲರಾಶಿಗಳು ನಿನ್ನನ್ನು ಕಂಡವು; ಕಾಣುತ್ತಲೇ ತಳಮಳಗೊಂಡು ತಳದ ವರೆಗೂ ಅಲ್ಲಕಲ್ಲೋಲವಾದವು.

17ಮೇಘಮಂಡಲವು ಮಳೆಗರೆಯಿತು; ಆಕಾಶವು ಗರ್ಜಿಸಿತು; ನಿನ್ನ ಬಾಣಗಳು ಎಲ್ಲಾ ಕಡೆಯೂ ಹಾರಿದವು.

18ಬಿರುಗಾಳಿಯಲ್ಲಿ ನಿನ್ನ ಗುಡುಗು ಕೇಳಿಸಿತು; ಮಿಂಚುಗಳು ಭೂಮಂಡಲವನ್ನು ಬೆಳಗಿಸಿದವು; ಭೂಮಿಯು ಅಲ್ಲಾಡಿ ಕಂಪಿಸಿತು.

19ನೀನು ಸಮುದ್ರದಲ್ಲಿ ಮಾರ್ಗಮಾಡಿದಿ; ಮಹಾಜಲರಾಶಿಗಳನ್ನು ದಾಟಿದಿ; ನಿನ್ನ ಹೆಜ್ಜೆ ಗುರುತು ಕಾಣಲಿಲ್ಲ.

20ಕುರುಬನು ಕುರಿಹಿಂಡನ್ನು ಹೇಗೋ, ಹಾಗೆಯೇ ನೀನು ಮೋಶೆ ಮತ್ತು ಆರೋನರ ಮುಖಾಂತರ, ನಿನ್ನ ಪ್ರಜೆಯನ್ನು ಮುನ್ನಡೆಸಿದಿ.


  Share Facebook  |  Share Twitter

 <<  Psalms 77 >> 


Bible2india.com
© 2010-2024
Help
Dual Panel

Laporan Masalah/Saran