Bible 2 India Mobile
[VER] : [KANNADA]     [PL]  [PB] 
 <<  Psalms 60 >> 

1ದೇವರೇ, ನೀನು ನಮ್ಮನ್ನು ಕೋಪದಿಂದ ತಳ್ಳಿ ಕೆಡವಿಬಿಟ್ಟಿದ್ದೀ; ನಮ್ಮ ರಕ್ಷಣಾ ಸಾಧನವನ್ನು ಮುರಿದುಬಿಟ್ಟಿದ್ದೀ; ನಮ್ಮನ್ನು ಪುನಃ ಸ್ಥಿರವಾಗಿ ನಿಲ್ಲಿಸು.

2ನೀನು ದೇಶವನ್ನು ಕಂಪನಗೊಳಿಸಿ ಒಡೆದುಬಿಟ್ಟಿದ್ದೀ; ಅದು ನಡುಗುತ್ತಿರುವುದಲ್ಲಾ. ಅದರ ಒಡಕುಗಳನ್ನು ಸರಿಮಾಡು;

3ನಿನ್ನ ಜನರನ್ನು ಸಂಕಟಕ್ಕೆ ಗುರಿಪಡಿಸಿದ್ದೀ; ನೀನು ನಮಗೆ ರೋಷವೆಂಬ ಪಾತ್ರೆಯಿಂದ ಪಾನಮಾಡಿಸಿದಿ.

4ನೀನು ನಿನ್ನ ಭಕ್ತರಿಗೆ ಧ್ವಜವನ್ನು ಕೊಟ್ಟಿದ್ದು, ಅವರು ಬಿಲ್ಲುಗಾರರಿಗೆ ಹೆದರಿ ಓಡುವುದಕ್ಕೋ? ಸೆಲಾ

5ನಿನ್ನ ಪ್ರಿಯರಾದ ನಮ್ಮ ಮೊರೆಯನ್ನು ಲಾಲಿಸಿ ರಕ್ಷಿಸು. ನಿನ್ನ ಭುಜಬಲದಿಂದ ನಮ್ಮನ್ನು ಜಯಗೊಳಿಸು.

6ದೇವರು ತನ್ನ ಪವಿತ್ರತ್ವವನ್ನು ಸಾಕ್ಷಿಯಾಗಿ ನುಡಿದಿದ್ದಾನೆ. ಜಯಘೋಷಮಾಡುವೆನು; ಶೆಖೆಮ್ ಪ್ರದೇಶವನ್ನು ಹಂಚುವೆನು. ಸುಖೋತ್ ಬಯಲನ್ನು ಅಳೆದುಕೊಡುವೆನು.

7ಗಿಲ್ಯಾದ್ ಸೀಮೆಯೂ ಮತ್ತು ಮನಸ್ಸೆಯ ದೇಶವೂ ನನ್ನವು; ಎಫ್ರಾಯೀಮ್ ಗೋತ್ರವು ನನಗೆ ಶಿರಸ್ತ್ರಾಣ. ನನ್ನ ರಾಜದಂಡವು ಯೆಹೂದಕುಲವೇ.

8ಮೋವಾಬ್ ಪ್ರದೇಶವು ನನ್ನ ಸ್ನಾನಪಾತ್ರೆಯು; ಎದೋಮ್ ಸೀಮೆ ನನ್ನ ಪಾದರಕ್ಷೆಗಳನ್ನು ಬಿಡುವ ಸ್ಥಳ. ಫಿಲಿಷ್ಟಿಯರು ನನ್ನ ವಿಷಯವಾಗಿ ಕೂಗಿಕೊಳ್ಳಲಿ.

9ಕೋಟೆಕೊತ್ತಲುಗಳುಳ್ಳ ನಗರಕ್ಕೆ ನನ್ನನ್ನು ಕರೆದುಕೊಂಡು ಹೋಗುವವರು ಯಾರು? ಎದೋಮ್ ಪ್ರಾಂತ್ಯದೊಳಗೆ ನನ್ನನ್ನು ಸೇರಿಸುವವರು ಯಾರು?

10ದೇವರೇ, ನೀನು ನಮ್ಮ ಸೈನ್ಯಗಳ ಸಂಗಡ ಬರಲಿಲ್ಲವಲ್ಲಾ! ದೇವರೇ, ನಮ್ಮನ್ನು ಕೈಬಿಟ್ಟಿರುವೆಯಾ?

11ನಮಗೆ ಕೈನೀಡಿ ಶತ್ರುಬಾಧೆಯಿಂದ ಪಾರುಮಾಡು; ಮನುಷ್ಯರ ಸಹಾಯವು ವ್ಯರ್ಥ.

12ದೇವರ ಸಹಾಯದಿಂದ ಶೂರಕೃತ್ಯಗಳನ್ನು ನಡೆಸುವೆವು; ನಮ್ಮ ವೈರಿಗಳನ್ನು ತುಳಿದುಬಿಡುವವನು ಆತನೇ.


  Share Facebook  |  Share Twitter

 <<  Psalms 60 >> 


Bible2india.com
© 2010-2024
Help
Dual Panel

Laporan Masalah/Saran