Bible 2 India Mobile
[VER] : [KANNADA]     [PL]  [PB] 
 <<  Psalms 41 >> 

1ದಿಕ್ಕಿಲ್ಲದವನನ್ನು ಪರಾಂಬರಿಸುವವನು ಧನ್ಯನು; ಯೆಹೋವನು ಅವನನ್ನು ಆಪತ್ಕಾಲದಲ್ಲಿ ರಕ್ಷಿಸುವನು.

2ಯೆಹೋವನು ಅವನ ಪ್ರಾಣವನ್ನು ಕಾಪಾಡಿ ಉಳಿಸುವನು; ಅವನು ದೇಶದಲ್ಲಿ ಧನ್ಯನೆನಿಸಿಕೊಳ್ಳುವನು; ಯೆಹೋವನು ಅವನನ್ನು ಶತ್ರುಗಳ ಅಧೀನಕ್ಕೆ ಕೊಡುವುದಿಲ್ಲ!

3ಅವನು ಅಸ್ವಸ್ಥನಾಗಿ ಬಿದ್ದುಕೊಂಡಿರುವಾಗ, ಯೆಹೋವನು ಅವನನ್ನು ಉದ್ಧರಿಸುವನು; ಅವನ ರೋಗವನ್ನೆಲ್ಲಾ ಪರಿಹರಿಸಿ, ಆರೋಗ್ಯವನ್ನು ಅನುಗ್ರಹಿಸಿದ್ದಿಯಲ್ಲಾ ಸ್ವಾಮೀ.

4ನಾನಂತೂ, <<ಯೆಹೋವನೇ, ನಿನ್ನ ಆಜ್ಞೆಯನ್ನು ಮೀರಿ ಪಾಪಮಾಡಿದ್ದೇನೆ; ನನ್ನನ್ನು ಕರುಣಿಸಿ ಸ್ವಸ್ಥಮಾಡು>> ಅಂದೆನು.

5ನನ್ನ ಹಾನಿಯನ್ನು ಅಪೇಕ್ಷಿಸುವ ಶತ್ರುಗಳು, <<ಅವನು ಯಾವಾಗ ಸತ್ತಾನು? ಅವನ ಹೆಸರು ಯಾವಾಗ ಇಲ್ಲದೆ ಹೋದೀತು?>> ಎಂದು ಹೇಳಿಕೊಳ್ಳುತ್ತಾರೆ.

6ಅವರಲ್ಲೊಬ್ಬನು ನನ್ನನ್ನು ನೋಡುವುದಕ್ಕೆ ಬಂದರೆ ಕಪಟದ ಮಾತನ್ನಾಡುವನು; ಮನಸ್ಸಿನಲ್ಲಿ ಕುಯುಕ್ತಿಗಳನ್ನು ಕಲ್ಪಿಸಿಕೊಂಡು ಹೋಗಿ ಹೊರಗೆ ಪ್ರಕಟಿಸುತ್ತಾನೆ.

7ನನ್ನ ಹಗೆಯವರೆಲ್ಲರು ನನಗೆ ವಿರುದ್ಧವಾಗಿ ಕಿವಿಗಳಲ್ಲಿ ಗುಜುಗುಜು ಮಾತನಾಡಿಕೊಳ್ಳುತ್ತಾರೆ; ನನಗೆ ಕೇಡನ್ನು ಕಲ್ಪಿಸುತ್ತಾರೆ.

8<<ಅವನನ್ನು ಅಸಾಧ್ಯರೋಗ ಹಿಡಿದಿದೆ; ಅವನು ಹಾಸಿಗೆಯನ್ನು ಬಿಟ್ಟು ತಿರುಗಿ ಏಳುವುದೇ ಇಲ್ಲ>> ಎಂದು ಹೇಳಿಕೊಳ್ಳುತ್ತಾರೆ.

9ನಾನು ಯಾರನ್ನು ನಂಬಿದ್ದೆನೋ, ಯಾರು ನನ್ನ ಮನೆಯಲ್ಲಿ ಅನ್ನಪಾನಗಳನ್ನು ತೆಗೆದುಕೊಂಡನೋ, ಅಂತಹ ಆಪ್ತಸ್ನೇಹಿತನು ನನಗೆ ಕಾಲನ್ನು ಅಡ್ಡಗೊಟ್ಟಿದ್ದಾನೆ.

10ಯೆಹೋವನೇ, ನೀನಾದರೋ ಕರುಣಿಸಿ ನನ್ನನ್ನು ಏಳುವಂತೆ ಮಾಡು; ಆಗ ನಾನು ಅವರಿಗೆ ಮುಯ್ಯಿತೀರಿಸುವೆನು.

11ಶತ್ರುಗಳ ಜಯಧ್ವನಿ ಇಲ್ಲದ್ದರಿಂದಲೇ ನಿನ್ನ ಒಲುಮೆ ನನಗುಂಟೆಂದು ತಿಳಿದುಕೊಳ್ಳುವೆನು.

12ನಿರ್ದೋಷಿಯಾದ ನನ್ನನ್ನಾದರೋ ನೀನು ಉದ್ಧಾರಮಾಡಿ, ನಿನ್ನ ಸನ್ನಿಧಿಯಲ್ಲಿ ಶಾಶ್ವತವಾಗಿ ನಿಲ್ಲಿಸುವಿ.

13ಇಸ್ರಾಯೇಲರ ದೇವರಾದ ಯೆಹೋವನಿಗೆ ಯುಗಯುಗಾಂತರಗಳವರೆಗೂ ಕೊಂಡಾಟವಾಗಲಿ. ಆಮೆನ್. ಆಮೆನ್.


  Share Facebook  |  Share Twitter

 <<  Psalms 41 >> 


Bible2india.com
© 2010-2024
Help
Dual Panel

Laporan Masalah/Saran