Bible 2 India Mobile
[VER] : [KANNADA]     [PL]  [PB] 
 <<  Psalms 35 >> 

1ಯೆಹೋವನೇ, ನನ್ನ ಸಂಗಡ ವ್ಯಾಜ್ಯ ಮಾಡುವವರೊಡನೆ ವ್ಯಾಜ್ಯಮಾಡು; ನನ್ನ ಮೇಲೆ ಯುದ್ಧ ಮಾಡುವವರ ಸಂಗಡ ಯುದ್ಧ ಮಾಡು.

2ಖೇಡ್ಯ ಮತ್ತು ಗುರಾಣಿಯನ್ನು ಹಿಡಿದುಕೊಂಡು, ನನಗೆ ಸಹಾಯಕನಾಗಿ ನಿಲ್ಲು.

3ನೀನು ಭರ್ಜಿಯನ್ನೂ ಹಾಗೂ ಯುದ್ಧದ ಕೊಡಲಿಯನ್ನೂ ಹಿಡಿದು, ನನ್ನನ್ನು ಹಿಂದಟ್ಟುವ ವೈರಿಗಳನ್ನು ಎದುರಿಸು; <<ನಾನೇ ನಿನ್ನ ರಕ್ಷಣೆ>> ಎಂದು ಅಭಯಕೊಡು.

4ನನ್ನ ಪ್ರಾಣವನ್ನು ತೆಗೆಯಬೇಕೆಂದಿರುವವರು ಆಶಾಭಂಗಪಟ್ಟು ಅವಮಾನಹೊಂದಲಿ; ನನಗೆ ಕೇಡನ್ನು ಕಲ್ಪಿಸುವವರು ಕಳವಳದಿಂದ ಹಿಂದಿರುಗಿ ಓಡಲಿ.

5ಅವರು ಗಾಳಿ ಹಾರಿಸುವ ಹೊಟ್ಟಿನಂತಾಗಲಿ; ಯೆಹೋವನ ದೂತನು ಅವರನ್ನು ಅಟ್ಟಿಬಿಡಲಿ.

6ಕತ್ತಲೆಯೂ, ಜಾರಿಕೆಯೂ ಇರುವ ದಾರಿಯಲ್ಲಿ ಯೆಹೋವನ ದೂತನು ಅವರನ್ನು ಹಿಂದಟ್ಟಲಿ.

7ಅವರು ನಿಷ್ಕಾರಣವಾಗಿ ನನಗೆ ಬಲೆಯೊಡ್ಡಿದ್ದಾರೆ; ಕಾರಣವಿಲ್ಲದೆ ನನ್ನ ಪ್ರಾಣವನ್ನು ತೆಗೆಯಬೇಕೆಂದು ಗುಂಡಿಯನ್ನು ತೋಡಿದ್ದಾರೆ.

8ಅವನಿಗೆ ನಾಶನವು ಅಕಸ್ಮತ್ತಾಗಿ ಬರಲಿ; ತಾನು ಹಾಸಿದ ಬಲೆಯಲ್ಲಿ ತಾನೇ ಸಿಕ್ಕಿಬೀಳಲಿ. ತಾನು ತೋಡಿದ ಕುಣಿಯಲ್ಲಿ ತಾನೇ ಬಿದ್ದುಹೋಗಲಿ.

9ಆಗ ನನ್ನ ಮನಸ್ಸಿಗೆ ಯೆಹೋವನ ದೆಸೆಯಿಂದ ಹರ್ಷವುಂಟಾಗುವುದು; ಆತನಿಂದಾದ ರಕ್ಷಣೆಯ ನಿಮಿತ್ತ ಆನಂದಪಡುವೆನು.

10ಯೆಹೋವನೇ, ಕುಗ್ಗಿದವನನ್ನು ಬಲಾತ್ಕಾರಿಯಿಂದಲೂ, ದಿಕ್ಕಿಲ್ಲದ ಬಡವನನ್ನು ಸೂರೆಮಾಡುವವನಿಂದಲೂ ತಪ್ಪಿಸಿ ರಕ್ಷಿಸುವಾತನೇ, <<ನಿನಗೆ ಸಮಾನರು ಯಾರಿದ್ದಾರೆ?>> ಎಂದು ನನ್ನ ಎಲುಬುಗಳೆಲ್ಲಾ ಹೇಳುವವು.

11ನ್ಯಾಯವಿರುದ್ಧ ಸಾಕ್ಷಿಗಳು ನನಗೆ ವಿರುದ್ಧವಾಗಿ ಎದ್ದಿದ್ದಾರೆ; ನಾನರಿಯದ ಸಂಗತಿಗಳ ವಿಷಯದಲ್ಲಿ ನನ್ನನ್ನು ವಿಚಾರಿಸುತ್ತಾರೆ.

12ಅವರು ಉಪಕಾರಕ್ಕೆ ಅಪಕಾರವನ್ನೇ ಮಾಡುತ್ತಾರೆ; ನಾನು ದಿಕ್ಕಿಲ್ಲದವನಾದೆನು.

13ನಾನಾದರೋ ಅವರ ಅಸ್ವಸ್ಥಕಾಲದಲ್ಲಿ ಗೋಣಿ ತಟ್ಟನ್ನೇ ಕಟ್ಟಿಕೊಂಡಿದ್ದೆನು; ಉಪವಾಸದಿಂದ ನನ್ನ ಆತ್ಮವನ್ನು ನೋಯಿಸಿದೆನು. ನನ್ನ ತಲೆಬಾಗಿಸಿ ಪ್ರಾರ್ಥಿಸಿದೆನು.

14ಅಸ್ವಸ್ಥನಾದವನನ್ನು ಸ್ನೇಹಿತನೋ, ಅಣ್ಣನೋ ಎಂದು ಭಾವಿಸಿ ನಡೆದುಕೊಂಡೆನು; ತಾಯಿ ಸತ್ತದ್ದಕ್ಕಾಗಿ ದುಃಖಿಸುವವನಂತೆ ನಾನು ತಲೆಬಾಗಿ ಅಳುತ್ತಿದ್ದೆನು.

15ಆದರೂ ನನಗೆ ಆಪತ್ತು ಬಂದಾಗ, ಅವರು ಸಂತೋಷಿಸುತ್ತಾ ಕೂಡಿಕೊಂಡರು; ನಿರಾಕಾರಣವಾಗಿ ಈ ಭ್ರಷ್ಟರು ನನಗೆ ವಿರುದ್ಧವಾಗಿ ಕೂಡಿ ಕೊಂಡಾಡಿದರು, ಸೂರೆ ಮಾಡುವುದನ್ನು ಬಿಡಲೇ ಇಲ್ಲ.

16ಆಹಾರಕ್ಕೋಸ್ಕರ ಪರಿಹಾಸ್ಯಮಾಡುವ ಮೂರ್ಖರ ಸಂಗಡ, ನನ್ನ ಮೇಲೆ ಹಲ್ಲುಕಡಿಯುತ್ತಾರೆ.

17ಕರ್ತನೇ, ಇನ್ನೆಷ್ಟರ ವರೆಗೆ ಸುಮ್ಮನೆ ನೋಡುತ್ತಾ ಇರುವಿ? ಅವರ ಅಪಾಯದಿಂದ ನನ್ನ ಪ್ರಾಣವನ್ನು ಬಿಡಿಸು; ನನ್ನ ಪರಮಪ್ರಿಯ ಪ್ರಾಣವನ್ನು ಆ ಸಿಂಹಗಳ ಬಾಯಿಗೆ ಸಿಕ್ಕದಂತೆ ತಪ್ಪಿಸು.

18ಆಗ ನಾನು ಮಹಾಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು; ಬಹುಜನರ ಮುಂದೆ ಸ್ತುತಿಸುವೆನು.

19ಅವಶ್ಯವಿಲ್ಲದ ವಿರೋಧಿಗಳು ನನ್ನ ವಿಷಯದಲ್ಲಿ ಹಿಗ್ಗುವುದಕ್ಕೆ ಅವಕಾಶಕೊಡಬೇಡ; ನಿಷ್ಕಾರಣ ವೈರಿಗಳ ಕಣ್ಣುಸನ್ನೆಗೆ ಆಸ್ಪದಕೊಡಬೇಡ.

20ಅವರ ಮಾತುಗಳು ಸಮಾಧಾನಕರವಾದವುಗಳಲ್ಲ; ದೇಶದ ಸಾಧುಜನರನ್ನು ಕೆಡಿಸುವುದಕ್ಕೆ ಮೋಸವನ್ನು ಕಲ್ಪಿಸುತ್ತಾರೆ.

21ಅವರು ನನ್ನನ್ನು ನೋಡಿ ಬಾಯಿಕಿಸಿದು, <<ಆಹಾ, ಆಹಾ, ನಮ್ಮ ಕಣ್ಣು ಕಂಡಿತಲ್ಲಾ>> ಎಂದು ಅನ್ನುತ್ತಾರೆ.

22ಯೆಹೋವನೇ, ನೀನೇ ನೋಡಿದಿಯಲ್ಲವೇ; ಸುಮ್ಮನಿರಬೇಡ; ನನ್ನ ಒಡೆಯನೇ, ನನ್ನಿಂದ ದೂರವಾಗಿರುವುದೇಕೆ?

23ನನ್ನ ದೇವರೇ, ಎದ್ದು ನನಗಾಗಿ ನ್ಯಾಯವನ್ನು ನಿರ್ಣಯಿಸು; ನನ್ನ ಕರ್ತನೇ, ಎಚ್ಚತ್ತು ನನ್ನ ವಿವಾದವನ್ನು ವಿಚಾರಿಸು.

24ಯೆಹೋವನೇ, ನನ್ನ ದೇವರೇ, ನಿನ್ನ ನೀತಿಗನುಸಾರವಾಗಿ ನನಗೆ ತೀರ್ಪುಕೊಡು; ನನ್ನ ವಿಷಯದಲ್ಲಿ ಹಿಗ್ಗುವುದಕ್ಕೆ ಶತ್ರುಗಳಿಗೆ ಆಸ್ಪದವಿರಬಾರದು.

25ಆಹಾ, ನಮ್ಮ ಆಶೆ ನೆರವೇರಿತು ಅಂದುಕೊಳ್ಳುವುದಕ್ಕೆ ಅವರಿಗೆ ಅವಕಾಶವಿರಬಾರದು; ಅವನನ್ನು ನುಂಗಿಬಿಟ್ಟಿದ್ದೇವೆಂದು ಅವರು ಕೊಚ್ಚಿಕೊಳ್ಳಬಾರದು.

26ನನ್ನ ಕೇಡಿನಲ್ಲಿ ಹಿಗ್ಗುವವರೆಲ್ಲರು ಆಶಾಭಂಗಪಟ್ಟು ಅವಮಾನಹೊಂದಲಿ; ನನ್ನನ್ನು ಹೀಯಾಳಿಸಿ ಆತ್ಮಸ್ತುತಿಮಾಡಿಕೊಳ್ಳುವವರು, ಅವಮಾನವನ್ನೂ, ಅಪಕೀರ್ತಿಯನ್ನೂ ಹೊಂದಲಿ.

27ನನ್ನ ನ್ಯಾಯಸ್ಥಾಪನೆಯನ್ನು ಬಯಸುವವರು ಆನಂದದೊಡನೆ ಜಯಧ್ವನಿಮಾಡಲಿ; ತನ್ನ ಸೇವಕನ ಹಿತವನ್ನು ಕೋರುವ ಯೆಹೋವನಿಗೆ ಸ್ತೋತ್ರ ಎಂದು ಯಾವಾಗಲೂ ಹೇಳುವವರಾಗಲಿ.

28ನನ್ನ ನಾಲಿಗೆಯು ನಿನ್ನ ನೀತಿಯನ್ನೂ ಮಹಿಮೆಯನ್ನೂ ದಿನವೆಲ್ಲಾ ವರ್ಣಿಸುವುದು.


  Share Facebook  |  Share Twitter

 <<  Psalms 35 >> 


Bible2india.com
© 2010-2024
Help
Dual Panel

Laporan Masalah/Saran