Bible 2 India Mobile
[VER] : [KANNADA]     [PL]  [PB] 
 <<  Psalms 29 >> 

1ದೇವದೂತರುಗಳಿರಾ, ಪರಮಪ್ರಭಾವವು, ಯೆಹೋವನದೇ, ಯೆಹೋವನದೇ ಎಂದು ಹೇಳಿ ಕೊಂಡಾಡಿರಿ.

2ಯೆಹೋವನ ನಾಮಕ್ಕೆ ಯೋಗ್ಯವಾದ ಘನತೆಯನ್ನು ಸಲ್ಲಿಸಿರಿ; ಪರಿಶುದ್ಧತ್ವವೆಂಬ ಭೂಷಣದೊಡನೆ ಯೆಹೋವನಿಗೆ ಅಡ್ಡಬೀಳಿರಿ.

3ಯೆಹೋವನ ಮಹಾಧ್ವನಿಯು ಮೇಘಮಂಡಲದಲ್ಲಿ ಕೇಳಿಸುತ್ತದೆ; ಪ್ರಭಾವಸ್ವರೂಪನಾದ ದೇವರು ಗುಡುಗುತ್ತಾನೆ; ಯೆಹೋವನು ಆಕಾಶದ ಜಲರಾಶಿಗಳ ಮೇಲೆ ಇದ್ದಾನೆ.

4ಯೆಹೋವನ ಧ್ವನಿಯು ಎಷ್ಟೋ ಬಲವುಳ್ಳದ್ದು, ಎಷ್ಟೋ ಗಂಭೀರವಾದದ್ದು.

5ಯೆಹೋವನ ಗರ್ಜನೆಗೆ ದೇವದಾರು ವೃಕ್ಷಗಳು ದಡಲ್ ಎಂದು ಮುರಿದು ಬೀಳುತ್ತವೆ; ಯೆಹೋವನು ಲೆಬನೋನ್ ಪರ್ವತದಲ್ಲಿನ ಮಹಾದೇವದಾರುಗಳನ್ನೂ ಮುರಿದುಬಿಡುತ್ತಾನೆ.

6ಲೆಬನೋನ್ ಪರ್ವತವು ಕರುವಿನೋಪಾದಿಯಲ್ಲಿಯೂ, ಸಿರ್ಯೋನ್ ಬೆಟ್ಟವು ಕಾಡುಕೋಣದ ಮರಿಯಂತೆಯೂ ಹಾರಾಡುವ ಹಾಗೆ ಮಾಡುತ್ತಾನೆ.

7ಯೆಹೋವನ ಗರ್ಜನೆಗೆ ಮಿಂಚುಗಳು ಥಳಥಳನೆ ಹೊಳೆಯುತ್ತವೆ.

8ಯೆಹೋವನ ಗರ್ಜನೆಗೆ ಕಾಡು ಹೊರಳಾಡುತ್ತದೆ; ಕಾದೇಶ್ ಅರಣ್ಯವು ಕಂಪಿಸುತ್ತದೆ.

9ಯೆಹೋವನ ಗರ್ಜನೆಗೆ ಗರ್ಭದ ಜಿಂಕೆಗಳು ಈಯುತ್ತವೆ; ಕಾಡಿನ ಮರಗಳು ಬರಿದಾಗುತ್ತವೆ. ಆಗ ಆತನ ಮಂದಿರದಲ್ಲಿರುವವರೆಲ್ಲರು, <<ಎಷ್ಟೋ ಪ್ರಭಾವ!>> ಎನ್ನುತ್ತಾರೆ.

10ಯೆಹೋವನು ಜಲಪ್ರಳಯದಲ್ಲಿ ಆಸೀನನಾಗಿರುವನು; ಆತನು ಸದಾಕಾಲವೂ ಅರಸನಾಗಿ ಕುಳಿತಿರುವನು.

11ಯೆಹೋವನು ತನ್ನ ಜನರಿಗೆ ಬಲವನ್ನು ಅನುಗ್ರಹಿಸುವನು; ಆತನು ತನ್ನ ಪ್ರಜೆಗೆ ಸುಕ್ಷೇಮವನ್ನು ದಯಪಾಲಿಸುವನು.


  Share Facebook  |  Share Twitter

 <<  Psalms 29 >> 


Bible2india.com
© 2010-2024
Help
Dual Panel

Laporan Masalah/Saran