Bible 2 India Mobile
[VER] : [KANNADA]     [PL]  [PB] 
 <<  Psalms 10 >> 

1ಯೆಹೋವನೇ, ನೀನು ಏಕೆ ದೂರವಾಗಿ ನಿಂತಿದ್ದೀ? ಕಷ್ಟಕಾಲದಲ್ಲಿ ಏಕೆ ಮರೆಯಾಗುತ್ತೀ?

2ದುಷ್ಟರು ಅಹಂಕಾರದಿಂದ ದೀನರನ್ನು ಬಹಳವಾಗಿ ಹಿಂಸಿಸುತ್ತಾರೆ; ಅವರು ಕಲ್ಪಿಸಿದ ಕುಯುಕ್ತಿಯಲ್ಲಿ ತಾವೇ ಸಿಕ್ಕಿ ಬೀಳಲಿ.

3ದುಷ್ಟನು ತನ್ನ ಹೃದಯದ ಸಂಕಲ್ಪಗಳು ನೆರವೇರಿತೆಂದು ಕೊಚ್ಚಿಕೊಳ್ಳುತ್ತಾನೆ; ಪರರ ಸೊತ್ತನ್ನು ಅಪಹರಿಸಿದವನು ಯೆಹೋವನನ್ನು ಅಲ್ಲಗಳೆದು ಬಿಟ್ಟುಬಿಡುತ್ತಾನೆ.

4ದುಷ್ಟನು ಸೊಕ್ಕಿನ ಮುಖದಿಂದ, <<ಯೆಹೋವನನ್ನು ವಿಚಾರಿಸುವುದಿಲ್ಲ>> ಎಂದು ಹೇಳಿಕೊಂಡು, ದೇವರಿಲ್ಲ ಎಂಬುದಾಗಿ ಸದಾ ಯೋಚಿಸುತ್ತಾನೆ.

5ಅವನ ಪ್ರಯತ್ನಗಳು ಯಾವಾಗಲೂ ಕೈಗೂಡುತ್ತವೆ; ಆದರೆ ನಿನ್ನ ನ್ಯಾಯತೀರ್ಪು ಮಹೋನ್ನತವಾಗಿರುವುದರಿಂದ ಅದು ಅವನ ಗ್ರಹಿಕೆಗೆ ಬರುವುದಿಲ್ಲ; ವೈರಿಗಳ ಗುಂಪನ್ನಾದರೋ ತಾತ್ಸಾರಮಾಡುತ್ತಾನೆ.

6ಅವನು, <<ನಾನು ಕದಲುವುದೇ ಇಲ್ಲ; ನನಗೆ ವಿಪತ್ತು ಎಂದೆಂದಿಗೂ ಸಂಭವಿಸುವುದಿಲ್ಲ>> ಅಂದುಕೊಂಡಿದ್ದಾನೆ.

7ಅವನ ಬಾಯಿಯು ಶಾಪ, ಬಲಾತ್ಕಾರ ಮತ್ತು ವಂಚನೆಗಳಿಂದ ತುಂಬಿದೆ; ಅವನ ನಾಲಿಗೆಯ ಕೆಳಗೆ ಹಾನಿಯೂ, ನಾಶನವೂ ಇವೆ.

8ಅವನು ಗ್ರಾಮಗಳ ಸಂದುಗೊಂದುಗಳಲ್ಲಿ ಹೊಂಚಿಕೊಂಡಿದ್ದು, ಮರೆಯಾದ ಸ್ಥಳಗಳಲ್ಲಿ ನಿರಪರಾಧಿಗಳನ್ನು ಕೊಲ್ಲುತ್ತಾನೆ. ಅವನು ಗತಿಹೀನನನ್ನು ಹಿಡಿಯುವುದಕ್ಕೆ ಸಮಯ ನೋಡುತ್ತಾನೆ.

9ಗವಿಯಲ್ಲಿ ಅಡಗಿಕೊಂಡಿರುವ ಸಿಂಹದಂತೆ ಅವನು ಮರೆಯಾಗಿ ಹೊಂಚಿಕೊಂಡಿರುವನು. ಅವನು ಬಲೆಯೊಡ್ಡಿ ಕಾದಿದ್ದು, ಕುಗ್ಗಿದವನನ್ನು ಹಿಡಿದು ಎಳೆದುಕೊಂಡು ಹೋಗುತ್ತಾನೆ.

10ಕುಗ್ಗಿದವನು ಜಜ್ಜಲ್ಪಟ್ಟು ಉರುಳಿಕೊಳ್ಳುತ್ತಾನೆ, ಗತಿಯಿಲ್ಲದವನು ಅವನ ಬಲಾತ್ಕಾರದಿಂದ ಬಿದ್ದು ಹೋಗುತ್ತಾನೆ.

11ಆ ದುಷ್ಟನು ತನ್ನೊಳಗೆ, <<ದೇವರು ಇವನನ್ನು ಬಿಟ್ಟು ವಿಮುಖನಾಗಿದ್ದಾನೆ; ಆತನು ನೋಡುವುದೇ ಇಲ್ಲ>> ಅಂದುಕೊಳ್ಳುತ್ತಾನೆ.

12ಯೆಹೋವನೇ, ಏಳು; ದೇವರೇ, ಕುಗ್ಗಿದವನನ್ನು ಮರೆಯಬೇಡ; ಅವನನ್ನು ರಕ್ಷಿಸುವುದಕ್ಕೆ ಕೈಚಾಚು.

13<<ದೇವರು ವಿಚಾರಿಸುವುದೇ ಇಲ್ಲ>> ಎಂದು ಹೇಳುತ್ತಾ, ದುಷ್ಟನು ನಿನ್ನನ್ನು ಏಕೆ ಅಲಕ್ಷ್ಯಮಾಡಬೇಕು?

14ನೀನು ಅವರ ಅನ್ಯಾಯ ಹಾಗು ಬಲಾತ್ಕಾರಗಳನ್ನು ನೋಡಿದ್ದಿ; ಅವುಗಳನ್ನು ವಿಚಾರಿಸುತ್ತೀ, ಗತಿಯಿಲ್ಲದವನು ತನ್ನನ್ನು ನಿನಗೇ ಒಪ್ಪಿಸುವನು; ದಿಕ್ಕಿಲ್ಲದವನಿಗೆ ನೀನೇ ದಿಕ್ಕು.

15ದುಷ್ಟನ ಭುಜಬಲವನ್ನು ಮುರಿದುಹಾಕು, ಕೆಡುಕನ ದುಷ್ಟತ್ವವನ್ನು ಶೋಧಿಸಿ ನಿರ್ಮೂಲಮಾಡಿಬಿಡು.

16ಯೆಹೋವನು ಯುಗಯುಗಾಂತರಗಳಲ್ಲಿಯೂ ಅರಸನಾಗಿರುವನು; ಆತನ ದೇಶದಲ್ಲಿ ಅನ್ಯಜನಗಳು ನಿಶ್ಶೇಷರಾದರು.

17ಯೆಹೋವನೇ, ನೀನು ದೀನರ ಕೋರಿಕೆಯನ್ನು ನೆರವೇರಿಸುವವನೇ ಆಗಿದ್ದಿ; ಅವರ ಹೃದಯವನ್ನು ಧೈರ್ಯಪಡಿಸುತ್ತಿ; ಅವರ ಮೊರೆಗೆ ಕಿವಿಗೊಡುತ್ತಿ.

18ನೀನು ದಿಕ್ಕಿಲ್ಲದವರ ಮತ್ತು ಕುಗ್ಗಿದವರ ನ್ಯಾಯವನ್ನು ವಿಚಾರಿಸುತ್ತಿ. ಹೀಗಿರುವಲ್ಲಿ ಇನ್ನು ಮುಂದೆ ಮಣ್ಣಿನಿಂದಾದ ಮನುಷ್ಯರಿಂದ ಅವರಿಗೆ ಹೆದರಿಕೆ ಉಂಟಾಗುವುದಿಲ್ಲ.


  Share Facebook  |  Share Twitter

 <<  Psalms 10 >> 


Bible2india.com
© 2010-2024
Help
Dual Panel

Laporan Masalah/Saran