Bible 2 India Mobile
[VER] : [KANNADA]     [PL]  [PB] 
 <<  Micah 5 >> 

1ಚಿಯೋನ್ ನಗರವೇ ನಿನ್ನ ಸೇನಾವ್ಯೂಹಗಳನ್ನು ಈಗ ಒಟ್ಟುಗೂಡಿಸು. ಆಹಾ ಶತ್ರುಗಳು ನಮಗೆ ಮುತ್ತಿಗೆ ಹಾಕಿದ್ದಾರೆ. ಇಸ್ರಾಯೇಲಿನ ಅಧಿಪತಿಯ ಕೆನ್ನೆಗೆ ಕೋಲಿನಿಂದ ಹೊಡೆಯುವರು.

2ಎಫ್ರಾತದ ಬೇತ್ಲೆಹೇಮೇ, ನೀನು ಯೆಹೂದದ ಗ್ರಾಮಗಳಲ್ಲಿ ಚಿಕ್ಕದ್ದಾಗಿದ್ದರೂ ಇಸ್ರಾಯೇಲನ್ನು ಆಳತಕ್ಕವನು ನಿನ್ನೊಳಗಿಂದ ನನಗಾಗಿ ಹೊರಡುವನು. ಆತನ ಕುಲದ ಮೂಲವು ಪುರಾತನವೂ ಮತ್ತು ಆನಾದಿಯೂ ಆದದ್ದು.

3ಹೀಗಿರಲು ಪ್ರಸವವೇದನೆ ಪಡತಕ್ಕವಳು ಮಗನನ್ನು ಹೆರುವವರೆಗೂ ನನ್ನ ಜನರು ಶತ್ರುವಶವಾಗಿರುವಂತೆ ಮಾಡುವೆನು. ಅನಂತರ ಆ ಮಗನ ಸಹೋದರರಲ್ಲಿ ಉಳಿದವರು ಇಸ್ರಾಯೇಲರೊಂದಿಗೆ ಹಿಂದಿರುಗುವರು

4ಆತನು ಯೆಹೋವನ ಬಲವನ್ನೂ, ತನ್ನ ದೇವರಾದ ಯೆಹೋವನ ನಾಮದ ಮಹಿಮೆಯನ್ನೂ ಹೊಂದಿದವನಾಗಿ ನಿಂತು ತನ್ನ ಹಿಂಡನ್ನು ಮೇಯಿಸುವನು. ಆ ಹಿಂಡು ನೆಮ್ಮದಿಯಾಗಿ ನೆಲೆಗೊಂಡಿರುವುದು. ಆತನು ಭೂಮಿಯ ಕಟ್ಟಕಡೆಯವರೆಗೂ ಪ್ರಬಲನಾಗಿರುವನು.

5ಆತನೇ ನಮಗೆ ಸಮಾಧಾನಪ್ರದನು. ಅಶ್ಯೂರ್ಯರು ನಮ್ಮ ದೇಶದಲ್ಲಿ ನುಗ್ಗಿ, ನಮ್ಮ ಅರಮನೆಗಳನ್ನು ತುಳಿದುಹಾಕುವಾಗ, ನಾವು ಅವರಿಗೆ ವಿರುದ್ಧವಾಗಿ ಏಳು ಪಾಲಕರನ್ನು ಹೌದು ಎಂಟು ಪುರುಷಶ್ರೇಷ್ಟರನ್ನು ನೇಮಿಸುವೆವು.

6ಅವರ ಶಸ್ತ್ರಾಸ್ತ್ರಗಳು ಅಶ್ಯೂರ ದೇಶವನ್ನು ದ್ವಂಸಮಾಡುವುದು. ನಿಮ್ರೋದ್ ಸೀಮೆಯ ಪ್ರವೇಶಸ್ಥಾನಗಳು ಅವರ ಖಡ್ಗಕ್ಕೆ ತುತ್ತಾಗುವವು. ಅಶ್ಯೂರ್ಯರು ನಮ್ಮ ದೇಶದಲ್ಲಿ ನುಗ್ಗಿ, ನಮ್ಮ ಪ್ರಾಂತ್ಯವನ್ನು ತುಳಿದುಹಾಕುವಾಗ ಆ ಸಮಾಧಾನಪ್ರದನು ನಮ್ಮನ್ನು ಅವರ ಕೈಯೊಳಗಿಂದ ಉದ್ದರಿಸುವನು.

7ಯೆಹೋವನ ವರವಾದ ಇಬ್ಬನಿಯೂ ಮತ್ತು ಹುಲ್ಲನ್ನು ಬೆಳೆಯಿಸುವ ಹದಮಳೆಗಳು ಹೇಗೆ ಮಾನವರ ಪ್ರಯತ್ನವಿಲ್ಲದೆ ಸಂಮೃದ್ಧಿಯಾಗಿ ಬೆಳೆಯುವವು, ಮಾನವರನೆರವನ್ನು ನಿರೀಕ್ಷಿಸದೆ ಹಿತಕರವಾಗಿರುವವೋ, ಹಾಗೆಯೇ ಯಾಕೋಬಿನ ಜನಶೇಷವು ಬಹು ಜನಾಂಗಗಳ ಮಧ್ಯದಲ್ಲಿ ಹಿತಕರವಾಗಿರುವುದು.

8ಇದಲ್ಲದೆ ಸಿಂಹವು ಕಾಡುಮೃಗಗಳನ್ನು, ಪ್ರಾಯದ ಸಿಂಹವು ಕುರಿಹಿಂಡುಗಳನ್ನು ಹಾದುಹೋಗುವಾಗೆಲ್ಲಾ ಅವುಗಳನ್ನು ಯಾರೂ ರಕ್ಷಿಸಲಾರದಂತೆ ತುಳಿದು, ಸೀಳಿಹಾಕುವ ಹಾಗೆ ಯಾಕೋಬಿನ ಜನಶೇಷವು ದೇಶದೇಶಗಳ, ಬಹು ಜನಾಂಗಗಳ ಮಧ್ಯದಲ್ಲಿ ನಾಶಕರವಾಗಿರುವುರು.

9ಯಾಕೋಬೇ, ನಿನ್ನ ಕೈ ನಿನ್ನ ವಿರೋಧಿಗಳ ಮೇಲೆ ಎತ್ತಲ್ಪಡಲಿ. ನಿನ್ನ ವೈರಿಗಳೆಲ್ಲಾ ನಿರ್ಮೂಲವಾಗಲಿ.

10ಯೆಹೋವನು ಇಂತೆನ್ನುತ್ತಾನೆ, <<ಆ ದಿನಗಳಲ್ಲಿ ನಿನ್ನ ಕುದುರೆಗಳನ್ನು ನಿನ್ನೊಳಗಿಂದ ಕಡಿದುಬಿಡುವೆನು. ನಿನ್ನ ರಥಗಳನ್ನು ನಾಶಗೊಳಿಸುವೆನು.

11ನಿನ್ನ ದೇಶದ ಪಟ್ಟಣಗಳನ್ನು ಹಾಳುಮಾಡಿ, ನಿನ್ನ ಕೋಟೆಗಳನ್ನೆಲ್ಲಾ ಕೆಡವಿಹಾಕುವೆನು.

12ನಿನ್ನ ಕೈಯಲ್ಲಿನ ಮಂತ್ರತಂತ್ರಗಳನ್ನು ನಿಲ್ಲಿಸಿಬಿಡುವೆನು. ನಿನ್ನಲ್ಲಿ ಕಣಿಯವರು ಇರುವುದಿಲ್ಲ.

13ನಿನ್ನ ಮೂರ್ತಿಗಳನ್ನು, ಕಲ್ಲುಕಂಬಗಳನ್ನು ನಿನ್ನಲ್ಲಿ ನಿಲ್ಲದಂತೆ ಒಡೆದುಹಾಕುವೆನು. ನಿನ್ನ ಕೈರೂಪಿಸಿದ್ದನ್ನು ಇನ್ನು ಪೂಜಿಸದಂತೆ ಮಾಡುವೆ.

14ನಿನ್ನ ಅಶೇರವೆಂಬ ವಿಗ್ರಹಸ್ತಂಭಗಳನ್ನು ನಿನ್ನ ಮಧ್ಯದೊಳಗಿಂದ ಕಿತ್ತುಬಿಟ್ಟು, ನಿನ್ನ ಪಟ್ಟಣಗಳನ್ನು ನಿರ್ಮೂಲಮಾಡುವೆನು.

15ಅವಿಧೇಯ ಜನಾಂಗಗಳಿಗೆ ಉಗ್ರಕೋಪದಿಂದ ಮುಯ್ಯಿ ತೀರಿಸುವೆನು.>>


  Share Facebook  |  Share Twitter

 <<  Micah 5 >> 


Bible2india.com
© 2010-2024
Help
Dual Panel

Laporan Masalah/Saran