Bible 2 India Mobile
[VER] : [KANNADA]     [PL]  [PB] 
 <<  Matthew 8 >> 

1ಯೇಸು ಬೆಟ್ಟದಿಂದ ಕೆಳಗೆ ಇಳಿದು ಬರುವಾಗ ಜನರು ದೊಡ್ಡಗುಂಪು ಆತನ ಹಿಂದೆ ಹೋದರು.

2ಆಗ ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದು ಆತನಿಗೆ ಅಡ್ಡಬಿದ್ದು, <<ಕರ್ತನೇ, ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ>> ಅಂದನು.

3ಆತನು ಕೈಚಾಚಿ ಆತನನ್ನು ಮುಟ್ಟಿ, <<ನನಗೆ ಮನಸ್ಸುಂಟು; ಶುದ್ಧವಾಗು>> ಅಂದನು. ಕೂಡಲೆ ಅವನು ಕುಷ್ಠದಿಂದ ಶುದ್ಧನಾದನು.

4ಆಗ ಯೇಸು ಅವನಿಗೆ; <<ನೋಡು, ಯಾರಿಗೂ ಹೇಳಬೇಡ; ಆದರೆ ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ಮೋಶೆ ನೇಮಿಸಿದ ಕಾಣಿಕೆಯನ್ನು ಕೊಡು;>> ಅದು ಅವರಿಗೆ ಸಾಕ್ಷಿಯಾಗಲಿ ಎಂದು ಹೇಳಿದನು.

5ಯೇಸು ಕಪೆರ್ನೌಮಿಗೆ ಬಂದಾಗ ಒಬ್ಬ ದಂಡಿನ ಶತಾಧಿಪತಿಯು ಆತನ ಬಳಿಗೆ ಬಂದು,

6<<ಕರ್ತನೇ, ನನ್ನ ಆಳು ಪಾರ್ಶ್ವವಾಯುವಿನ ನಿಮಿತ್ತ ತೀವ್ರವಾದ ನೋವಿನಿಂದ ಮನೆಯಲ್ಲಿ ಮಲಗಿ ನರಳುತ್ತಿದ್ದಾನೆ>> ಎಂದು ಹೇಳಿದನು.

7ಯೇಸು ಅವನಿಗೆ, <<ನಾನು ಬಂದು ಅವನನ್ನು ವಾಸಿ ಮಾಡುತ್ತೇನೆ>> ಎಂದು ಹೇಳಲು,

8ಆ ಶತಾಧಿಪತಿಯು, <<ಕರ್ತನೇ, ನೀನು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನ್ನಲ್ಲಿಲ್ಲ; ನೀನು ಒಂದು ಮಾತು ಹೇಳಿದರೆ ಸಾಕು, ನನ್ನ ಆಳಿಗೆ ಗುಣವಾಗುವುದು.

9ನಾನು ಸಹ ಅಧಿಕಾರದ ಕೆಳಗಿರುವ ಮನುಷ್ಯನು; ನನ್ನ ಕೈಕೆಳಗೆ ಸಿಪಾಯಿಗಳಿದ್ದಾರೆ; ನಾನು ಅವರಲ್ಲಿ ಒಬ್ಬನಿಗೆ <ಹೋಗು> ಎಂದು ಹೇಳಿದರೆ ಹೋಗುತ್ತಾನೆ; ಮತ್ತೊಬ್ಬನಿಗೆ <ಬಾ> ಎಂದು ಹೇಳಿದರೆ ಬರುತ್ತಾನೆ; <ನನ್ನ ಆಳಿಗೆ ಇಂಥಿಂಥದ್ದನ್ನು ಮಾಡು> ಎಂದು ಹೇಳಿದರೆ ಮಾಡುತ್ತಾನೆ>> ಅಂದನು.

10ಯೇಸು ಇದನ್ನು ಕೇಳಿ ಆಶ್ಚರ್ಯಚಕಿತನಾದನು, ತನ್ನ ಹಿಂದೆ ಬರುತ್ತಿದ್ದವರಿಗೆ, <<ನಾನು ಇಂಥಾ ಮಹತ್ತರವಾದ ನಂಬಿಕೆಯನ್ನು ಇಸ್ರಾಯೇಲ್ ಜನರಲ್ಲಿಯೂ ಕಾಣಲಿಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅಂದನು.

11ಇದಲ್ಲದೆ ನಿಮಗೆ ಹೇಳುವುದೇನಂದರೆ ಪೂರ್ವ ಪಶ್ಚಿಮ ದಿಕ್ಕುಗಳಿಂದ ಬಹಳ ಜನ ಬಂದು ಪರಲೋಕ ರಾಜ್ಯದಲ್ಲಿ ಅಬ್ರಹಾಮ, ಇಸಾಕ, ಯಾಕೋಬ ಎಂಬುವವರ ಸಂಗಡ ಊಟಕ್ಕೆ ಕುಳಿತುಕೊಳ್ಳುವರು;

12ಆದರೆ ರಾಜ್ಯದ ಮಕ್ಕಳು ಹೊರಗೆ ಕತ್ತಲೆಗೆ ಎಸೆಯಲ್ಪಡುವರು; ಅಲ್ಲಿ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು>> ಎಂದು ಹೇಳಿದನು.

13ಬಳಿಕ ಯೇಸು ಆ ಶತಾಧಿಪತಿಗೆ, <<ನೀನು ನಂಬಿದಂತೆ ನಿನಗಾಗಲಿ, ಹೋಗು>> ಎಂದು ಹೇಳಿದನು. ಅದೇ ಗಳಿಗೆಯಲ್ಲಿ ಅವನ ಆಳಿಗೆ ಗುಣವಾಯಿತು.

14ತರುವಾಯ ಯೇಸು ಪೇತ್ರನ ಮನೆಗೆ ಬಂದಾಗ, ಪೇತ್ರನ ಅತ್ತೆ ಜ್ವರದಲ್ಲಿ ಮಲಗಿರುವುದನ್ನು ಕಂಡು, ಆತನು ಆಕೆಯ ಕೈಯನ್ನು ಮುಟ್ಟಿದನು ತಕ್ಷಣವೇ

15ಜ್ವರವು ಆಕೆಯನ್ನು ಬಿಟ್ಟುಹೋಯಿತು; ಆಕೆ ಎದ್ದು ಆತನಿಗೆ ಉಪಚಾರಮಾಡಿದಳು.

16ಸಂಜೆಯಾಗಲು ದೆವ್ವಹಿಡಿದ ಬಹಳ ಜನರನ್ನು ಆತನ ಬಳಿಗೆ ಕರೆತಂದರು; ಆತನು ಮಾತು ಮಾತ್ರದಿಂದಲೇ ದೆವ್ವಗಳನ್ನು ಬಿಡಿಸಿದ್ದಲ್ಲದೆ ಅಸ್ವಸ್ಥರಾದವರೆಲ್ಲರನ್ನು ವಾಸಿಮಾಡಿದನು.

17ಇದರಿಂದ <<ನಮ್ಮ ಬೇನೆಗಳನ್ನು ತಾನೇ ತೆಗೆದುಕೊಂಡು ನಮ್ಮ ರೋಗಗಳನ್ನು ಹೊತ್ತುಕೊಂಡನು>> ಎಂದು ಯೆಶಾಯನೆಂಬ ಪ್ರವಾದಿ ನುಡಿದಂತಹ ಮಾತು ಹೀಗೆ ನೆರವೇರಿತು.

18ಯೇಸು ತನ್ನ ಸುತ್ತಲಿದ್ದ ಜನಗಳ ದೊಡ್ಡ ಗುಂಪುಗಳನ್ನು ಕಂಡು ಗಲಿಲಾಯ ಸಮುದ್ರದ ಆಚೆ ಭಾಗಕ್ಕೆ ಹೊರಟು ಹೋಗಬೇಕೆಂದು ಅಪ್ಪಣೆ ಕೊಟ್ಟನು.

19ಆಗ ಒಬ್ಬ ಶಾಸ್ತ್ರಿಯು ಹತ್ತಿರಕ್ಕೆ ಬಂದು ಆತನಿಗೆ, <<ಗುರುವೇ, ನೀನು ಎಲ್ಲಿಗೆ ಹೋದರೂ ನಾನು ನಿನ್ನನ್ನು ಹಿಂಬಾಲಿಸುತ್ತೇನೆ>> ಎಂದು ಹೇಳಲು,

20ಯೇಸು ಅವನಿಗೆ, <<ನರಿಗಳಿಗೆ ಗುದ್ದುಗಳಿವೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆ ಗೂಡುಗಳಿವೆ; ಆದರೆ ಮನುಷ್ಯಕುಮಾರನಿಗೆ ತಲೆಯಿಡುವಷ್ಟು ಸ್ಥಳವೂ ಇಲ್ಲ>> ಎಂದು ಹೇಳಿದನು.

21ಶಿಷ್ಯರಲ್ಲಿ ಬೇರೊಬ್ಬನು, <<ಕರ್ತನೇ, ನಾನು ಮೊದಲು ಹೋಗಿ ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮಾಡಿ ಬರುವಂತೆ ನನಗೆ ಅಪ್ಪಣೆಯಾಗಬೇಕು>> ಅನ್ನಲಾಗಿ,

22ಯೇಸು ಅವನಿಗೆ, <<ನನ್ನನ್ನು ಹಿಂಬಾಲಿಸು, ಸತ್ತವರೇ ತಮ್ಮವರಲ್ಲಿ ಸತ್ತುಹೋದವರ ಉತ್ತರಕ್ರಿಯೆಗಳನ್ನು ಮಾಡಲಿ>> ಎಂದು ಹೇಳಿದನು.

23ಯೇಸು ದೋಣಿಯನ್ನು ಹತ್ತಿದಾಗ ಆತನ ಶಿಷ್ಯರು ಆತನನ್ನು ಹಿಂಬಾಲಿಸಿದರು.

24ಅವರು ಹೋಗುತ್ತಿರುವಾಗ ಸಮುದ್ರವು ಅಲ್ಲೋಲಕಲ್ಲೋಲವಾಗಿ ದೋಣಿಯು ಅಲೆಗಳಿಂದ ಮುಚ್ಚುವಂತ್ತೆ ಆಯಿತು; ಆದರೆ ಯೇಸು ನಿದ್ರಿಸುತ್ತಿದ್ದನು.

25ಆಗ ಶಿಷ್ಯರು ಆತನ ಹತ್ತಿರ ಬಂದು ಆತನನ್ನು ಎಬ್ಬಿಸಿ, <<ಕರ್ತನೇ, ನಮ್ಮನ್ನು ಕಾಪಾಡು, ಸಾಯುತ್ತಿದ್ದೇವೆ>> ಎಂದರು.

26ಆತನು ಅವರಿಗೆ, <<ಅಲ್ಪ ವಿಶ್ವಾಸಿಗಳೇ, ಏಕೆ ಹೆದರುತ್ತೀರಿ?>> ಎಂದು ಹೇಳಿ, ಎದ್ದು ಗಾಳಿಯನ್ನೂ ಸಮುದ್ರವನ್ನೂ ಗದರಿಸಿದನು; ಆಗ ಅಲ್ಲಿ ಸಂಪೂರ್ಣವಾಗಿ ಶಾಂತವಾಯಿತು.

27ಆ ಜನರು ಬೆರಗಾಗಿ, <<ಈತನು ಎಂಥವನಾಗಿರಬಹುದು! ಗಾಳಿಯೂ ಸಮುದ್ರವೂ ಸಹ ಈತನಿಗೆ ವಿಧೇಯವಾಗುತ್ತವಲ್ಲಾ>> ಅಂದರು.

28ಆ ಮೇಲೆ ಆತನು ಆಚೇದಡಕ್ಕೆ ಗದರೇನರ ಸೀಮೆಗೆ ಬಂದಾಗ ದೆವ್ವಹಿಡಿದವರಿಬ್ಬರು ಸಮಾಧಿಯ ಗವಿಗಳೊಳಗಿಂದ ಹೊರಟು ಆತನೆದುರಿಗೆ ಬಂದರು. ಅವರು ಮಹಾಕ್ರುರಿಗಳಾಗಿದ್ದುದರಿಂದ ಆ ದಾರಿಯಲ್ಲಿ ಯಾರೂ ತಿರುಗಾಡುತ್ತಿರಲಿಲ್ಲ.

29ಅವರು, <<ದೇವರ ಕುಮಾರನೇ, ನಮ್ಮ ಗೊಡವೆ ನಿನಗೇಕೆ? ಕಾಲ ಬರುವುದಕ್ಕಿಂತ ಮೊದಲೇ ನಮ್ಮನ್ನು ದಂಡಿಸುವುದಕ್ಕೆ ಇಲ್ಲಿಗೆ ಬಂದಿರುವೆಯಾ>> ಎಂದು ಕೂಗಿದರು.

30ಅವರಿಂದ ಸ್ವಲ್ಪ ದೂರದಲ್ಲಿ ಬಹಳ ಹಂದಿಗಳ ಒಂದು ಹಿಂಡು ಮೇಯುತ್ತಿತ್ತು.

31ಆ ದೆವ್ವಗಳು, <<ನೀನು ನಮ್ಮನ್ನು ಇವರೊಳಗಿಂದ ಹೊರಡಿಸುವುದಾದರೆ ಆ ಹಂದಿಯ ಗುಂಪಿನೊಳಗೆ ನಮ್ಮನ್ನು ಕಳುಹಿಸಿಕೊಡು>> ಎಂದು ಬೇಡಿಕೊಂಡವು.

32ಆತನು ಅವುಗಳಿಗೆ, <<ಹೋಗಿರಿ>> ಅನ್ನಲು ಅವು ಹೊರಗೆ ಬಂದು ಹಂದಿಗಳೊಳಗೆ ಹೊಕ್ಕವು; ಅ ಕ್ಷಣವೇ ಆ ಗುಂಪೆಲ್ಲಾ ಓಡಿ ಕಡಿದಾದ ಸ್ಥಳದಿಂದ ಸಮುದ್ರದೊಳಗೆ ಬಿದ್ದು ನೀರಿನಲ್ಲಿ ಮುಳುಗಿ ಸತ್ತು ಹೋದವು.

33ಹಂದಿಗಳನ್ನು ಮೇಯಿಸುವವರು ಊರೊಳಕ್ಕೆ ಓಡಿಹೋಗಿ ಇದೆಲ್ಲವನ್ನು ದೆವ್ವಹಿಡಿದವರ ಸಂಗತಿ ಸಹಿತವಾಗಿ ತಿಳಿಸಲು;

34ಆಗ ಊರಿನವರೆಲ್ಲರೂ ಯೇಸುವನ್ನು ಸಂಧಿಸಲು ಹೊರಟುಬಂದು ಆತನನ್ನು ಕಂಡು ತಮ್ಮ ಸೀಮೆಯನ್ನು ಬಿಟ್ಟು ಹೋಗಬೇಕೆಂದು ಬೇಡಿಕೊಂಡರು.


  Share Facebook  |  Share Twitter

 <<  Matthew 8 >> 


Bible2india.com
© 2010-2024
Help
Dual Panel

Laporan Masalah/Saran