Bible 2 India Mobile
[VER] : [KANNADA]     [PL]  [PB] 
 <<  Colossians 1 >> 

1ದೇವರ ಚಿತ್ತಾನುಸಾರವಾಗಿ ಕ್ರಿಸ್ತಯೇಸುವಿನ ಅಪೊಸ್ತಲನಾಗಿರುವ ಪೌಲನೂ ಮತ್ತು ಸಹೋದರನಾದ ತಿಮೊಥೆಯನು,

2ಕೊಲೊಸ್ಸೆಯಲ್ಲಿರುವ ದೇವಜನರಿಗೆ ಹಾಗು ಕ್ರಿಸ್ತನಲ್ಲಿ ನಂಬಿಗಸ್ತರಾದ ಸಹೋದರರಿಗೆ ಬರೆಯುವುದೇನೆಂದರೆ, ನಮ್ಮ ತಂದೆಯಾದ ದೇವರಿಂದ ನಿಮಗೆ ಕೃಪೆಯೂ ಮತ್ತು ಶಾಂತಿಯೂ ಉಂಟಾಗಲಿ.

3ನಿಮಗೋಸ್ಕರ ನಾವು ಪ್ರಾರ್ಥಿಸುವಾಗಲೆಲ್ಲಾ ನಿಮ್ಮ ನಿಮಿತ್ತವಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯಾಗಿರುವ ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ.

4ನೀವು ಕ್ರಿಸ್ತಯೇಸುವಿನಲ್ಲಿ ಇಟ್ಟಿರುವ ನಂಬಿಕೆ ಹಾಗು ದೇವಜನರೆಲ್ಲರಲ್ಲಿ ನೀವು ಇಟ್ಟಿರುವ ಪ್ರೀತಿಯ ಬಗ್ಗೆ ನಾವು ಕೇಳಿದ್ದೇವೆ.

5ಪರಲೋಕದಲ್ಲಿ ನಿಮಗೋಸ್ಕರ ಕಾದಿರಿಸಿರುವ ನಿರೀಕ್ಷೆಯನ್ನು ಕುರಿತು ಸುವಾರ್ತೆಯ ಸತ್ಯವಾಕ್ಯದಿಂದ ನೀವು ಮೊದಲೇ ಕೇಳಿದ್ದಿರಿ.

6ನೀವು ಸತ್ಯದಲ್ಲಿ ದೇವರ ಕೃಪೆಯನ್ನು ಕೇಳಿ ತಿಳಿದುಕೊಂಡ ದಿವಸದಿಂದ ನಿಮ್ಮ ಬಳಿಗೆ ಬಂದ ಆ ಸುವಾರ್ತೆಯು ನಿಮ್ಮಲ್ಲಿ ಫಲಕೊಟ್ಟಂತೆ ಲೋಕದಲ್ಲೆಲ್ಲಾ ಫಲಕೊಟ್ಟು ವೃದ್ಧಿಯಾಗುತ್ತಿದೆ.

7ಈ ಸುವಾರ್ತೆಯನ್ನು ಕ್ರಿಸ್ತನ ನಂಬಿಗಸ್ತ ಸೇವಕನೂ, ನಮ್ಮ ಪ್ರಿಯ ಜೊತೆಸೇವಕನೂ ಆದ ಎಪಫ್ರನಿಂದ ನೀವು ಕಲಿತುಕೊಂಡಿದ್ದೀರಿ.

8ಪವಿತ್ರಾತ್ಮಪ್ರೇರಿತವಾದ ನಿಮ್ಮ ಪ್ರೀತಿಯ ವಿಷಯವನ್ನು ನನಗೆ ತಿಳಿಸಿದವನು ಆತನೇ.

9ಹೀಗಿರುವುದ್ದರಿಂದ ಈ ನಿಮ್ಮ ಪ್ರೀತಿಯ ಕುರಿತು ನಾವು ಕೇಳಿದ ದಿನದಿಂದ ನಿಮಗೋಸ್ಕರ ಪ್ರಾರ್ಥಿಸುವುದನ್ನು ನಿಲ್ಲಿಸದೆ, ನೀವು ಸಕಲ ಆತ್ಮಿಕ ಗ್ರಹಿಕೆಯಿಂದಲೂ ಜ್ಞಾನದಿಂದಲೂ ದೇವರ ಚಿತ್ತದ ತಿಳುವಳಿಕೆಯ ಕುರಿತು ಸಂಪೂರ್ಣರಾಗಬೇಕೆಂತಲೂ,

10ಕರ್ತನಿಗೆ ಮೆಚ್ಚಿಕೆಯಾಗುವ ರೀತಿಯಲ್ಲಿ ನೀವು ಯೋಗ್ಯರಾಗಿ ಜೀವಿಸಬೇಕೆಂತಲೂ, ಸಕಲ ಸತ್ಕಾರ್ಯಗಳಲ್ಲಿ ಫಲವನ್ನು ಕೊಡುತ್ತಾ ದೈವಜ್ಞಾನದಲ್ಲಿ ವೃದ್ಧಿಯಾಗಬೇಕೆಂತಲೂ,

11ಆತನ ಮಹಿಮಾ ಶಕ್ತಿಯ ಪ್ರಕಾರ ಎಲ್ಲಾ ಸಾಮರ್ಥ್ಯದಲ್ಲಿ ಬಲಹೊಂದಿ, ಎಲ್ಲವನ್ನೂ ತಾಳ್ಮೆಯಿಂದಲೂ, ದೀರ್ಘಶಾಂತಿಯಿಂದಲೂ ಸಹಿಸಿಕೊಳ್ಳುವವರಾಗಿರಬೇಕೆಂತಲೂ,

12ದೇವಭಕ್ತರಿಗಾಗಿ ಬೆಳಕಿನಲ್ಲಿರುವ ಬಾಧ್ಯತೆಯಲ್ಲಿ ಪಾಲುಗಾರರಾಗುವುದಕ್ಕೆ ನಮ್ಮನ್ನು ಯೋಗ್ಯರನ್ನಾಗಿ ಮಾಡಿದ ತಂದೆಯಾದ ದೇವರಿಗೆ ಆನಂದಪೂರ್ವಕವಾಗಿ ಕೃತಜ್ಞತಾಸ್ತುತಿಯನ್ನು ಸಲ್ಲಿಸುವವರಾಗಬೇಕೆಂತಲೂ ದೇವರನ್ನು ಬೇಡಿಕೊಳ್ಳುತ್ತೇನೆ.

13ದೇವರು ನಮ್ಮನ್ನು ಅಂಧಕಾರದ ಅಧಿಪತ್ಯದಿಂದ ಬಿಡಿಸಿ ತನ್ನ ಪ್ರಿಯ ಕುಮಾರನ ಸಾಮ್ರಾಜ್ಯಕ್ಕೆ ಸೇರಿಸಿದನು.

14ಈ ಕುಮಾರನಲ್ಲಿ ನಮ್ಮ ಪಾಪಗಳು ಕ್ಷಮಿಸಲ್ಪಟ್ಟು ನಮಗೆ ವಿಮೋಚನೆಯಾಯಿತು.

15ಕ್ರಿಸ್ತನು ಅದೃಶ್ಯನಾದ ದೇವರ ಪ್ರತಿರೂಪನೂ, ಸೃಷ್ಟಿಗೆಲ್ಲಾ ಜೇಷ್ಠಪುತ್ರನೂ ಆಗಿದ್ದಾನೆ.

16ಭೂಪರಲೋಕಗಳಲ್ಲಿರುವ ದೃಶ್ಯ ಅದೃಶ್ಯವಾದವುಗಳೆಲ್ಲವೂ, ಸಿಂಹಾಸನಗಳಾಗಲಿ, ಪ್ರಭುತ್ವಗಳಾಗಲಿ, ದೊರೆತನಗಳಾಗಲಿ, ಅಧಿಕಾರಗಳಾಗಲಿ ಆತನಿಂದ ಸೃಷ್ಟಿಸಲ್ಪಟ್ಟವು. ಸರ್ವವೂ ಆತನ ಮುಖಾಂತರವಾಗಿ ಆತನಿಗೋಸ್ಕರವಾಗಿ ಸೃಷ್ಟಿಸಲ್ಪಟ್ಟಿತು.

17ಆತನು ಎಲ್ಲಕ್ಕೂ ಮೊದಲು ಇದ್ದಾತನು, ಆತನಲ್ಲಿ ಸಮಸ್ತವು ಒಂದಾಗಿ ನೆಲೆಗೊಂಡಿದ್ದೆ.

18ಸಭೆಯೆಂಬ ದೇಹಕ್ಕೆ ಆತನು ತಲೆಯಾಗಿದ್ದಾನೆ, ಆತನೇ ಆದಿಸಂಭೂತನು, ಎಲ್ಲಾದರಲ್ಲಿ ಆತನು ಮೊದಲಿಗನಾಗುವುದಕ್ಕಾಗಿ ಸತ್ತವರೊಳಗಿಂದ ಮೊದಲು ಎದ್ದು ಬಂದವನು ಆತನೇ.

19ಏಕೆಂದರೆ ಆತನಲ್ಲಿಯೇ ತನ್ನ ಸರ್ವಸಂಪೂರ್ಣತೆಯು ವಾಸವಾಗಿರಬೇಕೆಂತಲೂ,

20ಮತ್ತು ಆತನು ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ ತಾನು ಸಮಾಧಾನವನ್ನುಂಟುಮಾಡಿ, ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ತನ್ನ ಕುಮಾರನ ಮೂಲಕ ತನಗೆ ಸಂಧಾನಪಡಿಸಿಕೊಳ್ಳಬೇಕೆಂತಲೂ ತಂದೆಯಾದ ದೇವರು ಇಚ್ಛಿಸಿದನು.

21ಇದಲ್ಲದೆ ನೀವು ಪೂರ್ವದಲ್ಲಿ ಅನ್ಯರು ನಿಮ್ಮ ದುಷ್ಕೃತ್ಯಗಳಿಂದಲೂ ದ್ವೇಷಮನಸ್ಸುಳ್ಳವರಾಗಿ ಆತನಿಗೆ ವಿರೋಧಿಗಳೂ ಆಗಿದ್ದಿರಿ.

22ಈಗಲಾದರೋ ದೇವರು ನಿಮ್ಮನ್ನು ಯೇಸುಕ್ರಿಸ್ತನ ಶಾರೀರಿಕ ಮರಣದ ಮೂಲಕವಾಗಿ ಸಂಧಾನಪಡಿಸಿಕೊಂಡಿದ್ದಾನೆ. ದೇವರು ತನ್ನ ಸನ್ನಿಧಿಯಲ್ಲಿ ನಿಮ್ಮನ್ನು ಪರಿಶುದ್ಧರನ್ನಾಗಿಯೂ, ನಿರ್ದೋಷಿಗಳನ್ನಾಗಿಯೂ, ನಿರಪರಾಧಿಗಳನ್ನಾಗಿಯೂ ನಿಲ್ಲಿಸಬೇಕೆಂದು ಹೀಗೆ ಮಾಡಿದ್ದಾನೆ.

23ಆಕಾಶದ ಕೆಳಗಿರುವ ಸರ್ವ ಸೃಷ್ಟಿಗೂ ಸಾರಲ್ಪಟ್ಟಂತಹ ಮತ್ತು ನೀವು ಕೇಳಿದಂತಹ ಸುವಾರ್ತೆಯಿಂದ ಉಂಟಾದ ನಿರೀಕ್ಷೆಯಿಂದ ಕದಲಿಹೋಗದಂತೆ ನಂಬಿಕೆಯಲ್ಲಿ ನೆಲೆಗೊಳ್ಳುವುದಾದರೆ, ನೀವು ಅಡಿಪಾಯವುಳ್ಳವರೂ ಮತ್ತು ಸ್ಥಿರತೆಯುಳ್ಳವರೂ ಆಗುವಿರಿ. ಇದೇ ಸುವಾರ್ತೆಗೆ ಪೌಲನೆಂಬ ನಾನು ಸೇವಕನಾಗಿದ್ದೇನೆ.

24ನಾನು ಈಗ ನಿಮಗೋಸ್ಕರ ಅನುಭವಿಸುತ್ತಿರುವ ಬಾಧೆಗಳಲ್ಲಿ ನನಗೆ ಸಂತೋಷವಿದೆ. ಕ್ರಿಸ್ತನ ಯಾತನೆಗಳಲ್ಲಿ ಕೊರತೆಯಾಗಿರುವುದನ್ನು ಆತನ ಸಭೆಯೆಂಬ ದೇಹಕೋಸ್ಕರ ನಾನು ನನ್ನ ದೇಹದಲ್ಲಿ ಅನುಭವಿಸಿ ತೀರಿಸುತ್ತೇನೆ.

25ದೇವರ ಸಂಕಲ್ಪದ ಮೇರೆಗೆ ನಿಮ್ಮ ಪ್ರಯೋಜನಕ್ಕೋಸ್ಕರವಾಗಿ ನಾನು ಸಭೆಗೆ ಸೇವಕನಾದೆನು. ದೇವರು ತನ್ನ ವಾಕ್ಯವನ್ನು ಸಂಪೂರ್ಣವಾಗಿ ತಿಳಿಸುವ ಕಾರ್ಯವನ್ನು ನನಗೆ ದಯಪಾಲಿಸಿದನು.

26ಈ ರಹಸ್ಯವಾದ ಸತ್ಯವಾಕ್ಯವು ಹಿಂದಿನ ಯುಗಯುಗಗಳಿಂದಲೂ, ತಲತಲಾಂತರಗಳಿಂದಲೂ ಮರೆಯಾಗಿತ್ತು, ಆದರೆ ಈಗ ದೇವರು ಅದನ್ನು ತನ್ನ ದೇವಜನರಿಗೆ ಪ್ರಕಟಿಸಿದ್ದಾನೆ.

27ಈ ಮರ್ಮದ ಮಹಿಮಾತಿಶಯವು ಎಷ್ಟೆಂಬುದನ್ನು ಅನ್ಯಜನಗಳಿಗೂ ತಿಳಿಸಲಿಕ್ಕೆ ದೇವರು ಇಚ್ಛಿಸಿದನು. ಈ ಮರ್ಮವು ಏನೆಂದರೆ ಮಹಿಮೆಯ ನಿರೀಕ್ಷೆಗೆ ಆಧಾರನಾಗಿರುವ ಕ್ರಿಸ್ತನು ನಿಮ್ಮಲ್ಲಿದ್ದಾನೆಂಬುದೇ.

28ನಾವು ಆತನನ್ನು ಸಾರುತ್ತಲಿದ್ದೇವೆ, ಸಕಲರಿಗೂ ಬುದ್ಧಿ ಹೇಳುತ್ತಾ, ಸರ್ವರಿಗೂ ಪೂರ್ಣಜ್ಞಾನವನ್ನು ಉಪದೇಶಿಸುತ್ತಾ, ದೇವರ ಮುಂದೆ ಎಲ್ಲರನ್ನೂ ಕ್ರಿಸ್ತನಲ್ಲಿ ಪ್ರವೀಣರನ್ನಾಗಿ ನಿಲ್ಲಿಸುವುದಕ್ಕೆ ಪ್ರಯತ್ನಿಸುತ್ತಿದ್ದೇವೆ.

29ನನ್ನಲ್ಲಿ ಕಾರ್ಯಸಾಧಿಸುವ ದೇವರ ಬಲದಿಂದ ಇದಕ್ಕೊಸ್ಕರವೇ ಶ್ರಮಿಸಿ ಹೋರಾಡುತ್ತೇನೆ.


  Share Facebook  |  Share Twitter

 <<  Colossians 1 >> 


Bible2india.com
© 2010-2024
Help
Dual Panel

Laporan Masalah/Saran