Bible 2 India Mobile
[VER] : [KANNADA]     [PL]  [PB] 
 <<  Exodus 7 >> 

1ಆಗ ಯೆಹೋವನು ಮೋಶೆಗೆ ಇಂತೆಂದನು, <<ನಿನ್ನನ್ನು ಫರೋಹನಿಗೆ ದೇವರ ಸ್ಥಾನದಲ್ಲಿ ನೇಮಿಸಿದ್ದೇನೆ. ನೋಡು, ನಿನ್ನ ಅಣ್ಣನಾದ ಆರೋನನು ನಿನಗೋಸ್ಕರ ಪ್ರವಾದಿಯಾಗಿರುವನು.

2ನಾನು ನಿನಗೆ ಆಜ್ಞಾಪಿಸುವುದ್ದನ್ನೆಲ್ಲಾ ನೀನು ಹೇಳಬೇಕು. ಇಸ್ರಾಯೇಲರು ದೇಶದಿಂದ ಹೊರಟುಹೋಗುವುದಕ್ಕೆ ಅಪ್ಪಣೆಕೊಡಬೇಕೆಂಬದಾಗಿ ನಿನ್ನ ಅಣ್ಣನಾದ ಆರೋನನೇ ಫರೋಹನ ಮುಂದೆ ಮಾತನಾಡಬೇಕು.

3ಆದರೂ ನಾನು ಫರೋಹನ ಮನಸ್ಸಿನಲ್ಲಿ ಹಠವನ್ನು ಹುಟ್ಟಿಸಿ, ಐಗುಪ್ತದೇಶದಲ್ಲಿ ಅನೇಕ ಸೂಚಕಕಾರ್ಯಗಳನ್ನೂ ಮತ್ತು ಅದ್ಬುತಕಾರ್ಯಗಳನ್ನೂ ಮಾಡಿ ನನ್ನ ಶಕ್ತಿಯನ್ನು ತೋರಿಸುವೆನು.

4ಫರೋಹನು ನಿಮ್ಮ ಮಾತನ್ನು ಕೇಳುವುದಿಲ್ಲ. ಆಗ ನಾನು ಐಗುಪ್ತದೇಶದವರನ್ನು ಬಾಧಿಸಿ, ಅವರಿಗೆ ಮಹಾಶಿಕ್ಷೆಗಳನ್ನು ವಿಧಿಸಿ, ನನ್ನ ಜನರಾಗಿರುವ ಇಸ್ರಾಯೇಲರ ಸೈನ್ಯವನ್ನೆಲ್ಲಾ ಐಗುಪ್ತದೇಶದಿಂದ ಹೊರತರುವೆನು.

5ನಾನು ಐಗುಪ್ತ್ಯರಿಗೆ ವಿರೋಧವಾಗಿ ಕೈಚಾಚಿ ಅವರ ಮಧ್ಯದಿಂದ ಇಸ್ರಾಯೇಲರನ್ನು ಹೊರತಂದಾಗ ನಾನು ಯೆಹೋವನು ಎಂಬುವುದನ್ನು ಐಗುಪ್ತ್ಯರು ತಿಳಿದುಕೊಳ್ಳುವರು>> ಅಂದನು.

6ಯೆಹೋವನ ಆಜ್ಞೆಯಂತೆಯೇ ಮೋಶೆ ಮತ್ತು ಆರೋನರು ಮಾಡಿದರು.

7ಅವರು ಫರೋಹನ ಹತ್ತಿರ ಮಾತನಾಡಿದ ಕಾಲದಲ್ಲಿ ಮೋಶೆ ಎಂಬತ್ತು ವರುಷದವನೂ ಮತ್ತು ಆರೋನನು ಎಂಭತ್ತಮೂರು ವರುಷದವನೂ ಆಗಿದ್ದರು.

8ಯೆಹೋವನು ಮೋಶೆ ಹಾಗೂ ಆರೋನರ ಸಂಗಡ ಮಾತನಾಡಿ,

9<<ಫರೋಹನು ನಿಮಗೆ <ನಾನು ನಿಮ್ಮ ಮಾತನ್ನು ನಂಬುವಂತೆ ನೀವು ಮಹತ್ಕಾರ್ಯವನ್ನು ನನ್ನ ಮುಂದೆ ಮಾಡಬೇಕು> ಎಂದು ಹೇಳಿದರೆ ಮೋಶೆಯು ಆರೋನನಿಗೆ, <ನಿನ್ನ ಕೈಯಲ್ಲಿರುವ ಕೋಲನ್ನು ಫರೋಹನ ಮುಂದೆ ನೆಲದಲ್ಲಿ ಹಾಕು> ಎಂದು ಹೇಳಬೇಕು. ಅದು ಸರ್ಪವಾಗುವುದು>> ಎಂದು ಆಜ್ಞಾಪಿಸಿದನು.

10ಮೋಶೆ ಆರೋನರು ಫರೋಹನ ಬಳಿಗೆ ಹೋಗಿ ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಆರೋನನು ತನ್ನ ಕೋಲನ್ನು ಫರೋಹನ ಮತ್ತು ಅವನ ಪರಿವಾರದವರ ಮುಂದೆ ನೆಲದಲ್ಲಿ ಹಾಕಿದಾಗ ಅದು ಸರ್ಪವಾಯಿತು.

11ಫರೋಹನು ಐಗುಪ್ತದೇಶದ ವಿದ್ವಾಂಸರನ್ನೂ ಮತ್ತು ಮಂತ್ರವಾದಿಗಳನ್ನೂ ಕರೆಯಿಸಿದಾಗ ಆ ಮಾಂತ್ರಿಕರು ತಮ್ಮ ಮಂತ್ರವಿದ್ಯೆಗಳಿಂದ ಅದೇ ರೀತಿಯಾಗಿ ಮಾಡಿದರು.

12ಅವರು ತಮ್ಮ ತಮ್ಮ ಕೋಲುಗಳನ್ನು ನೆಲಕ್ಕೆ ಹಾಕಲು ಅವು ಸರ್ಪಗಳಾದವು. ಆದರೆ ಆರೋನನ ಕೋಲು ಅವರ ಕೋಲುಗಳನ್ನು ನುಂಗಿಬಿಟ್ಟಿತು.

13ಯೆಹೋವನು ಮೊದಲು ಹೇಳಿದಂತೆಯೇ ಫರೋಹನ ಹೃದಯವು ಕಠಿಣವಾಯಿತು. ಅವನು ಅವರ ಮಾತಿಗೆ ಕಿವಿಗೊಡದೆ ಹೋದನು.

14ಆಗ ಯೆಹೋವನು ಮೋಶೆಗೆ, <<ಫರೋಹನ ಹೃದಯವು ಕಠಿಣವಾಗಿದೆ, ತಾನು ಜನರಿಗೆ ಹೋಗುವುದಕ್ಕೆ ಅಪ್ಪಣೆಕೊಡುವುದಿಲ್ಲ ಎನ್ನುತ್ತಾನೆ.

15ನೀನು ಬೆಳಿಗ್ಗೆ ಫರೋಹನ ಬಳಿಗೆ ಹೋಗು, ಅವನು ನೀರಿನ ಬಳಿಗೆ ಇಳಿದು ಬರುತ್ತಾನಲ್ಲಾ. ಸರ್ಪವಾಗಿ ಮಾರ್ಪಾಟುಮಾಡಿದ ಆ ಕೋಲನ್ನು ನಿನ್ನ ಕೈಯಲ್ಲಿ ತೆಗೆದುಕೊಂಡು ಅವನನ್ನು ಎದುರುಗೊಳ್ಳುವುದಕ್ಕೆ ನೈಲ್ ನದಿ ತೀರದಲ್ಲಿ ನಿಂತುಕೊಂಡು ಅವನಿಗೆ ಹೀಗನ್ನಬೇಕು,

16<ಇಬ್ರಿಯರ ದೇವರಾದ ಯೆಹೋವನು ನನ್ನನ್ನು ನಿನ್ನ ಬಳಿಗೆ ಕಳುಹಿಸಿ, ಅರಣ್ಯದಲ್ಲಿ ತನ್ನನ್ನು ಆರಾಧಿಸುವಂತೆ ತನ್ನ ಜನರಿಗೆ ಅಪ್ಪಣೆಕೊಡಬೇಕೆಂದು ನಿನಗೆ ಆಜ್ಞಾಪಿಸಿದ್ದಾನಷ್ಟೇ. ಈ ವರೆಗೂ ನೀನು ಅದನ್ನು ಲಕ್ಷಕ್ಕೆ ತರಲಿಲ್ಲ.

17ಆದುದರಿಂದ ಯೆಹೋವನು ಹೇಳುವುದೇನೆಂದರೆ, ನೀನು ನನ್ನನ್ನು ಯೆಹೋವನೆಂದು ತಿಳಿದುಕೊಳ್ಳುವುದಕ್ಕಾಗಿ ನನ್ನ ಸೇವಕನ ಕೈಯಲ್ಲಿರುವ ಕೋಲಿನಿಂದ ನೈಲ್ ನದಿಯ ನೀರನ್ನು ಹೊಡೆಸುವೆನು. ಆಗ ಅದು ರಕ್ತವಾಗುವುದು.

18ನದಿಯಲ್ಲಿರುವ ಮೀನುಗಳು ಸಾಯುವವು. ನದಿಯು ಹೊಲಸಾಗಿ ನಾರುವುದು. ಅದನ್ನು ಕುಡಿಯುವುದಕ್ಕೆ ಐಗುಪ್ತರಿಗೆ ಹೇಸಿಗೆಯಾಗುವುದು> ಎಂದು ಹೇಳಬೇಕು>> ಅಂದನು.

19ಯೆಹೋವನು ಮೋಶೆಯ ಸಂಗಡ ಮಾತನಾಡಿ, <<ನೀನು ಆರೋನನಿಗೆ <ನಿನ್ನ ಕೋಲನ್ನು ತೆಗೆದುಕೊಂಡು ಐಗುಪ್ತದೇಶದಲ್ಲಿರುವ ಹೊಳೆ, ಕಾಲುವೆ, ಕೆರೆ, ಕೊಳ ಮೊದಲಾದ ನೀರಿರುವ ಎಲ್ಲಾ ಸ್ಥಳಗಳ ಮೇಲೆ ಅದನ್ನು ಚಾಚು> ಎಂದು ಹೇಳಬೇಕು. ಅವನು ಚಾಚುವಾಗ ಆ ನೀರೆಲ್ಲಾ ರಕ್ತವಾಗುವುದು. ಐಗುಪ್ತದೇಶದಲ್ಲೆಲ್ಲಾ ಮರದ ಪಾತ್ರೆಗಳಲ್ಲಿಯೂ, ಕಲ್ಲಿನ ಪಾತ್ರೆಗಳಲ್ಲಿಯೂ ಇರುವ ನೀರು ರಕ್ತವಾಗುವುದು>> ಅಂದನು.

20ಮೋಶೆ ಮತ್ತು ಆರೋನರು ಯೆಹೋವನು ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಆರೋನನು ಫರೋಹನ ಮತ್ತು ಅವನ ಪರಿವಾರದ ಮುಂದೆ ಕೋಲನ್ನು ಎತ್ತಿ, ನೈಲ್ ನದಿಯಲ್ಲಿರುವ ನೀರನ್ನು ಹೊಡೆಯಲು ಅದೆಲ್ಲಾ ರಕ್ತವಾಯಿತು.

21ಅದರಲ್ಲಿದ್ದ ಮೀನುಗಳು ಸತ್ತುಹೋದವು. ನದಿಯು ದುರ್ವಾಸನೆಗೊಂಡಿದ್ದರಿಂದ ಐಗುಪ್ತರು ನೈಲ್ ನದಿಯ ನೀರನ್ನು ಕುಡಿಯಲಾರದೆ ಹೋದರು. ಐಗುಪ್ತ ದೇಶದಲ್ಲೆಲ್ಲಾ ರಕ್ತವೇ ಕಾಣುತಿತ್ತು.

22ಆದರೆ ಐಗುಪ್ತ್ಯ ದೇಶದ ಮಾಂತ್ರಿಕರು ತಮ್ಮ ಮಂತ್ರವಿದ್ಯೆಗಳಿಂದ ಅದೇ ರೀತಿಯಾಗಿ ಮಾಡಿದ್ದರಿಂದ ಫರೋಹನ ಹೃದಯವು ಇನ್ನೂ ಕಠಿಣವಾಯಿತು. ಯೆಹೋವನು ಹೇಳಿದಂತೆಯೇ ಅವನು ಮೋಶೆ ಮತ್ತು ಆರೋನರ ಮಾತನ್ನು ಕೇಳದೆ ಹೋದನು.

23ಫರೋಹನು ಆ ಮಾಹತ್ಕಾರ್ಯವನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ ತನ್ನ ಮನೆಗೆ ಹೊರಟುಹೋದನು.

24ಐಗುಪ್ತ್ಯರೆಲ್ಲರೂ ನದಿಯ ನೀರನ್ನು ಕುಡಿಯಲಾರದೆ ಕುಡಿಯುವ ನೀರಿಗಾಗಿ ನದಿಯ ಸುತ್ತಲೂ ಗುಂಡಿಗಳನ್ನು ತೆಗೆದರು.

25ಯೆಹೋವನು ನೈಲ್ ನದಿಯನ್ನು ಹೊಡೆದ ಮೇಲೆ ಏಳು ದಿನಗಳು ತುಂಬಿದವು.


  Share Facebook  |  Share Twitter

 <<  Exodus 7 >> 


Bible2india.com
© 2010-2024
Help
Dual Panel

Laporan Masalah/Saran