Bible 2 India Mobile
[VER] : [KANNADA]     [PL]  [PB] 
 <<  Exodus 32 >> 

1ಮೋಶೆಯು ಬೆಟ್ಟದಿಂದ ಇಳಿದು ಬರುವುದರಲ್ಲಿ ತಡವಾದುದನ್ನು ಇಸ್ರಾಯೇಲರು ನೋಡಿ, ಆರೋನನ ಬಳಿಗೆ ಒಟ್ಟಾಗಿ ಸೇರಿ ಬಂದು ಆತನಿಗೆ, <<ಏಳು, ನಮ್ಮನ್ನು ಮುನ್ನಡೆಸಿಕೊಂಡು ಹೋಗುವುದಕ್ಕೆ ನಮಗೊಬ್ಬ ದೇವರನ್ನು ಮಾಡಿಕೊಡು ಏಕೆಂದರೆ ಐಗುಪ್ತದೇಶದಿಂದ ನಮ್ಮನ್ನು ಕರೆದುಕೊಂಡು ಬಂದ ಆ ಮೋಶೆಯು ಏನಾದನೋ ಗೊತ್ತಿಲ್ಲ>> ಎಂದು ಹೇಳಿದರು.

2ಅದಕ್ಕೆ ಆರೋನನು ಅವರಿಗೆ, <<ನಿಮ್ಮ ಹೆಂಡತಿಯರ ಹಾಗು ಗಂಡುಹೆಣ್ಣು ಮಕ್ಕಳ ಕಿವಿಯಲ್ಲಿ ಹಾಕಿಕೊಂಡಿರುವ ಚಿನ್ನದ ಓಲೆಗಳನ್ನು ಬಿಚ್ಚಿ ನನಗೆ ಒಪ್ಪಿಸಿರಿ>> ಎಂದು ಹೇಳಿದನು.

3ಅವರೆಲ್ಲರೂ ತಮ್ಮ ಕಿವಿಗಳಲ್ಲಿದ್ದ ಚಿನ್ನದ ಓಲೆಗಳನ್ನು ಬಿಚ್ಚಿ ಆರೋನನ ಬಳಿಗೆ ತಂದು ಕೊಟ್ಟರು.

4ಅವನು ಆ ಚಿನ್ನವನ್ನು ತನ್ನ ವಶಕ್ಕೆ ತೆಗೆದುಕೊಂಡು ಹೋರಿಕರುವಿನ ಆಕಾರವನ್ನು ಉಳಿಯಿಂದ ರೂಪಿಸಿ ಎರಕ ಹೊಯಿಸಿದನು. ಆಗ ಅವರು <<ಇಸ್ರಾಯೇಲರೇ ನೋಡಿರಿ, ಇದೇ ನಿಮ್ಮನ್ನು ಐಗುಪ್ತದೇಶದಿಂದ ಕರೆದುಕೊಂಡು ಬಂದ ದೇವರು>> ಎಂದು ಹೇಳಿದರು.

5ಆರೋನನು ಅದನ್ನು ನೋಡಿದಾಗ ಹೋರಿಕರುವಿಗೆ ಎದುರಾಗಿ ಒಂದು ಯಜ್ಞವೇದಿಯನ್ನು ಕಟ್ಟಿಸಿ, <<ನಾಳೆ ಯೆಹೋವನಿಗೆ ಹಬ್ಬವಾಗಬೇಕು>> ಎಂದು ಪ್ರಕಟಿಸಿದನು.

6ಆದುದರಿಂದ ಮರುದಿನದಲ್ಲಿ ಜನರು ಬೆಳಿಗ್ಗೆ ಎದ್ದು ದಹನಬಲಿಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸಿದರು.ಆನಂತರ ಜನರು ತಿನ್ನುವುದಕ್ಕೂ ಕುಡಿಯುವುದಕ್ಕೂ ಕುಳಿತುಕೊಂಡರು. ಆಮೇಲೆ ಕುಣಿದಾಡಲು ಎದ್ದರು.

7ಹೀಗಿರಲಾಗಿ ಯೆಹೋವನು ಮೋಶೆಗೆ, <<ನೀನು ಬೆಟ್ಟದಿಂದ ಇಳಿದುಹೋಗು ಐಗುಪ್ತದೇಶದಿಂದ ನೀನು ಕರೆದುಕೊಂಡು ಬಂದ ನಿನ್ನ ಜನರು ಕೆಟ್ಟುಹೋದರು.

8ನಾನು ಅವರಿಗೆ ಅಜ್ಞಾಪಿಸಿದ ಮಾರ್ಗವನ್ನು ಅವರು ಬೇಗನೇ ಬಿಟ್ಟು ಹೋಗಿ ತಮಗೆ ಎರಕ ಹೊಯ್ದ ಹೋರಿಕರುವನ್ನು ಮಾಡಿಸಿಕೊಂಡು ಅದಕ್ಕೆ ಅಡ್ಡಬಿದ್ದು ಯಜ್ಞಗಳನ್ನು ಅರ್ಪಿಸಿ, <ಇಸ್ರಾಯೇಲ್ಯರೇ ನೋಡಿರಿ ಇದೇ ನಿಮ್ಮನ್ನು ಐಗುಪ್ತದೇಶದಿಂದ ಕರೆದುಕೊಂಡು ಬಂದ ದೇವರು ಎಂದು ಹೇಳಿಕೊಳ್ಳುತ್ತಿದ್ದಾರೆ> >> ಎಂದು ಹೇಳಿದನು.

9ಅದಲ್ಲದೆ ಯೆಹೋವನು ಮೋಶೆಗೆ, <<ಈ ಜನರ ಸ್ವಭಾವವನ್ನು ನಾನು ನೋಡಿದ್ದೇನೆ. ಇವರು ಮೊಂಡುತನವುಳ್ಳ ಜನರಾಗಿದ್ದಾರೆ

10ಆದಕಾರಣ ನೀನು ನನ್ನನ್ನು ತಡೆಯಬೇಡ. ನನ್ನ ಕೋಪಾಗ್ನಿ ಉರಿಯಲಿ, ಅವರನ್ನು ಭಸ್ಮಮಾಡಿಬಿಡುವೆನು. ತರುವಾಯ ನಿನ್ನಿಂದಲೇ ಒಂದು ಮಹಾ ಜನಾಂಗವನ್ನು ಉಂಟುಮಾಡುವೆನು>> ಎಂದು ಹೇಳಿದನು.

11ಆಗ ಮೋಶೆ ತನ್ನ ದೇವರಾದ ಯೆಹೋವನನ್ನು ಬೇಡಿಕೊಂಡು, <<ಯೆಹೋವನೇ ನೀನು ಮಹಾ ಶಕ್ತಿಯಿಂದಲೂ, ಭುಜಬಲದಿಂದಲೂ ಐಗುಪ್ತ ದೇಶದಿಂದ ಹೊರಗೆ ಕರೆತಂದ ನಿನ್ನ ಪ್ರಜೆಗಳ ಮೇಲೆ ಕೋಪದಿಂದುರಿಯುವುದೇತಕೆ?

12ಐಗುಪ್ತ್ಯರು ನಿನ್ನ ವಿಷಯದಲ್ಲಿ, <ಯೆಹೋವನು ಕೇಡು ಮಾಡಬೇಕೆಂಬ ಅಭಿಪ್ರಾಯದಿಂದಲೇ ಇಸ್ರಾಯೇಲರನ್ನು ಇಲ್ಲಿಂದ ಕರೆದುಕೊಂಡು ಹೋದನಲ್ಲಾ. ಅವರನ್ನು ಬೆಟ್ಟಗಳಲ್ಲಿ ಸಾಯಿಸಲಿಕ್ಕೂ ಭೂಮಿಯಿಂದ ನಿರ್ಮೂಲ ಮಾಡುವುದಕ್ಕೂ ಅವರನ್ನು ಕರೆದುಕೊಂಡು ಹೋದನೆಂದು ಹೇಳಿಕೊಳ್ಳುವುದೇತಕ್ಕೆ?> ನೀನು ರೋಷಾಗ್ನಿಯನ್ನು ಬಿಟ್ಟು ನಿನ್ನ ಪ್ರಜೆಗಳಿಗೆ ಕೆಡುಕನ್ನು ಮಾಡದೆ ಮನಸ್ಸನ್ನು ಬದಲು ಮಾಡಿಕೋ.

13ನಿನ್ನ ಸೇವಕರಾದ ಅಬ್ರಹಾಮ್, ಇಸಾಕ್ ಹಾಗು ಯಾಕೋಬರನ್ನು ನೆನಪಿಗೆ ತಂದುಕೋ. ನೀನು ನಿನ್ನ ಜೀವದಾಣೆ ಪ್ರಮಾಣ ಮಾಡಿ ಅವರಿಗೆ, <ನಾನು ನಿಮ್ಮ ಸಂತತಿಯನ್ನು ಹೆಚ್ಚಿಸಿ ಆಕಾಶದ ನಕ್ಷತ್ರಗಳಷ್ಟು ಅಸಂಖ್ಯವಾಗಿ ಈ ಪ್ರದೇಶವನ್ನೆಲ್ಲಾ ನಿಮ್ಮ ಸಂತತಿಯವರಿಗೆ ಕೊಡುವೆನೆಂದೂ ಇಸ್ರಾಯೇಲರು ಈ ದೇಶವನ್ನು ಶಾಶ್ವತವಾಗಿ ಸ್ವಾಧೀನ ಮಾಡಿಕೊಳ್ಳುವರೆಂದೂ ಮಾತುಕೊಡಲಿಲ್ಲವೇ> >> ಅಂದನು.

14ಆಗ ಯೆಹೋವನು ತನ್ನ ಪ್ರಜೆಗಳಿಗೆ ಮಾಡುವೆನೆಂದು ತಾನು ಹೇಳಿದ ಕೇಡಿನ ವಿಷಯದಲ್ಲಿ ಮನಸ್ಸನ್ನು ಬದಲಾಯಿಸಿಕೊಂಡನು.

15ಆಜ್ಞಾಶಾಸನಗಳಾದ ಆ ಎರಡು ಕಲ್ಲಿನ ಹಲಿಗೆಗಳನ್ನು ಮೋಶೆಯು ಕೈಯಲ್ಲಿ ಹಿಡಿದುಕೊಂಡು ಬೆಟ್ಟದಿಂದ ಇಳಿದು ಬಂದನು. ಆ ಹಲಿಗೆಗಳ ಎರಡು ಪಕ್ಕಗಳಲ್ಲಿಯೂ ಅಕ್ಷರಗಳು ಬರೆದಿದ್ದವು. ಈ ಕಡೆಯೂ ಆ ಕಡೆಯೂ ಬರಹವಿತ್ತು.

16ಆ ಶಿಲಾಶಾಸನಗಳು ದೇವರ ಕೆಲಸವೇ ಆಗಿದ್ದು, ಅವುಗಳಲ್ಲಿ ಕೆತ್ತಿದ ಅಕ್ಷರಗಳು ದೇವರೇ ಬರೆದದ್ದಾಗಿತ್ತು.

17ಇಸ್ರಾಯೇಲರು ಉತ್ಸಾಹದಿಂದ ಕೂಗಾಡುತ್ತಾ ಇರಲಾಗಿ ಯೆಹೋಶುವನು ಆ ಶಬ್ದವನ್ನು ಕೇಳಿ, <<ಪಾಳೆಯದ ಕಡೆಯಿಂದ ಯುದ್ಧಧ್ವನಿ ಕೇಳಿಸುತ್ತದೆ>> ಎಂದು ಮೋಶೆಗೆ ಹೇಳಿದನು.

18ಅದಕ್ಕವನು, <<ನನಗೆ ಕೇಳಿಸುವುದು ಜಯ ಧ್ವನಿಯೂ ಅಲ್ಲ, ವಿಜಯಗೀತೆಯೂ ಅಲ್ಲ ಸೋತು ಗೋಳಾಡುವವರ ಧ್ವನಿಯೂ ಅಲ್ಲ, ಗಾನಮಾಡುವವರ ಉಲ್ಲಾಸದ ಧ್ವನಿಯೇ ಆಗಿದೆ>> ಅಂದನು.

19ಮೋಶೆಯು ಪಾಳೆಯದ ಹತ್ತಿರಕ್ಕೆ ಬಂದು ಆ ಹೋರಿಕರುವನ್ನೂ ಮತ್ತು ಜನರು ಕುಣಿದಾಡುವುದನ್ನೂ ಕಂಡಾಗ ಬಹು ಕೋಪಗೊಂಡು ಕೈಯಲ್ಲಿದ್ದ ಶಿಲಾಶಾಸನಗಳನ್ನು ಬೆಟ್ಟದ ತಗ್ಗಿನಲ್ಲಿ ನೆಲಕ್ಕೆ ಹಾಕಿ ಒಡೆದುಬಿಟ್ಟನು.

20ಜನರು ಮಾಡಿಸಿಕೊಂಡಿದ್ದ ಹೋರಿಕರುವನ್ನು ಅವನು ಬೆಂಕಿಯಿಂದ ಸುಟ್ಟು ಅರೆದು ಪುಡಿ ಪುಡಿ ಮಾಡಿ ನೀರಿನಲ್ಲಿ ಕಲೆಸಿ ಇಸ್ರಾಯೇಲರಿಗೆ ಆ ನೀರನ್ನು ಕುಡಿಸಿದನು.

21ಆಗ ಮೋಶೆ ಆರೋನನನ್ನು ಕುರಿತು, <<ನೀನು ಈ ಜನರಿಂದ ಮಹಾ ಅಪರಾಧವನ್ನು ಮಾಡಿಸಿದಿಯಲ್ಲಾ ಹೀಗೆ ಮಾಡಿಸುವುದಕ್ಕೆ ಇವರು ನಿನಗೇನು ಮಾಡಿದರು?>> ಎಂದು ವಿಚಾರಿಸಲು,

22ಆರೋನನು, <<ಸ್ವಾಮಿಯವರು, ರೋಷಗೊಳ್ಳಬಾರದು ಈ ಜನರು ದುಷ್ಟಸ್ವಭಾದವರು, ಹಠಮಾರಿಗಳು ಎಂಬುವುದು ನಿನಗೆ ಗೊತ್ತಿಲ್ಲವೇ?

23ಅವರು ನನ್ನ ಬಳಿಗೆ ಬಂದು, <ನಮ್ಮನ್ನು ಮುನ್ನಡೆಸಿಕೊಂಡು ಹೋಗುವುದಕ್ಕೆ ಒಬ್ಬ ದೇವರನ್ನು ಮಾಡಿಸಿಕೊಡು, ಐಗುಪ್ತ ದೇಶದಿಂದ ನಮ್ಮನ್ನು ಕರೆದುಕೊಂಡು ಬಂದ ಮೋಶೆಗೆ ಏನಾಯಿತೋ ಗೊತ್ತಿಲ್ಲ> ಅಂದರು.

24ಅದಕ್ಕೆ ನಾನು <ಯಾರಲ್ಲಿ ಚಿನ್ನದ ಒಡವೆಯಿದೆಯೋ ಅವರೆಲ್ಲರೂ ಅದನ್ನು ಬಿಚ್ಚಿ ನನಗೆ ಕೊಡಬೇಕು> ಅಂದೆನು. ಅವರು ಹಾಗೆ ಕೊಡಲಾಗಿ ನಾನು ಆ ಚಿನ್ನವನ್ನು ಬೆಂಕಿಯಲ್ಲಿ ಹಾಕಿದಾಗ ಈ ಹೋರಿಕರುವಿನ ರೂಪವು ಉಂಟಾಯಿತು>> ಅಂದನು.

25ಮೋಶೆಯು ಜನರು ಅಂಕೆ ತಪ್ಪಿ ತಮ್ಮ ಇಷ್ಟಬಂದಂತೆ ಮಾಡುವುದಕ್ಕೆ ಆರೋನನು ಅವರನ್ನು ಸಡಿಲವಾಗಿ ಬಿಟ್ಟಿದ್ದರಿಂದ ಅವನ ವಿರೋಧಿಗಳು ಅಪಹಾಸ್ಯಮಾಡುವುದಕ್ಕೆ ಆಸ್ಪದವಾಯಿತು,

26ಅವರು ಕ್ರಮವಿಲ್ಲದೆ ಸ್ವೇಚ್ಛೆಯಾಗಿ ನಡೆದುಕೊಳ್ಳುವುದನ್ನು ನೋಡಿ ಪಾಳೆಯದ ಬಾಗಿಲಲ್ಲಿ ನಿಂತುಕೊಂಡು, <<ಯೆಹೋವನ ಪಕ್ಷದವರೆಲ್ಲರೂ ನನ್ನ ಬಳಿಗೆ ಬರಬೇಕು>> ಎಂದು ಹೇಳಿದನು. ಆಗ ಲೇವಿಯ ಕುಲದವರೆಲ್ಲರೂ ಅವನ ಬಳಿಗೆ ಸೇರಿ ಬಂದರು.

27ಮೋಶೆ ಅವರಿಗೆ, <<ಇಸ್ರಾಯೇಲರ ದೇವರಾದ ಯೆಹೋವನು ಅಪ್ಪಣೆಮಾಡುವುದೇನೆಂದರೆ, <ನಿಮ್ಮಲ್ಲಿ ಪ್ರತಿಯೊಬ್ಬನೂ ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಂಡು ಪಾಳೆಯದ ಮಧ್ಯದಲ್ಲಿ ಒಂದು ಬಾಗಿಲಿನಿಂದ ಮತ್ತೊಂದು ಬಾಗಿಲಿನ ವರೆಗೂ ಹೋಗುತ್ತಾ ಬರುತ್ತಾ ತಮ್ಮತಮ್ಮ ಸಹೋದರ, ಗೆಳೆಯ ಮತ್ತು ನೆರೆಯವ ಎಂದು ಲಕ್ಷಿಸದೆ ಜನರನ್ನು ಸಂಹರಿಸಬೇಕು> >> ಎಂದು ಹೇಳಿದನು.

28ಲೇವಿಯ ಕುಲದವರು ಮೋಶೆಯ ಆಜ್ಞೆಯ ಪ್ರಕಾರವೇಮಾಡಿದರು. ಆ ದಿನದಲ್ಲಿ ಜನರೊಳಗೆ ಹೆಚ್ಚು ಕಡಿಮೆ ಮೂರು ಸಾವಿರ ಮಂದಿ ಹತರಾದರು.

29ಮೋಶೆಯು ಲೇವಿಯರಿಗೆ, <<ಈ ಹೊತ್ತು ನಿಮ್ಮಲ್ಲಿ ಪ್ರತಿಯೊಬ್ಬನು ಮಗನನ್ನಾದರೂ ಸಹೋದರರನ್ನಾದರೂ ಲಕ್ಷ್ಯಕ್ಕೆ ತೆಗೆದುಕೊಳ್ಳದೇ ನಿಮ್ಮನ್ನು ಯೆಹೋವನ ಸೇವೆಗೇ ಪ್ರತಿಷ್ಠಿಸಿಕೊಂಡಿದ್ದೀರಿ. ಆದುದರಿಂದ ಆತನು ಈ ದಿನ ನಿಮ್ಮನ್ನು ಆಶೀರ್ವದಿಸುವನು>> ಎಂದು ಹೇಳಿದನು.

30ಮರುದಿನದಲ್ಲಿ ಮೋಶೆಯು ಜನರಿಗೆ, <<ನೀವು ಮಹಾ ಪಾಪವನ್ನು ಮಾಡಿರುವಿರಿ. ಆದರೂ ನಾನು ಬೆಟ್ಟವನ್ನು ಹತ್ತಿ ಯೆಹೋವನ ಸನ್ನಿಧಿಗೆ ಹೋಗುವೆನು. ಒಂದು ವೇಳೆ ನೀವು ಮಾಡಿದ ಪಾಪಕೃತ್ಯಕ್ಕೆ ಪ್ರಾಯಶ್ಚಿತ್ತವನ್ನು ನಾನು ಮಾಡಬಹುದೇನೋ>> ಎಂದು ಹೇಳಿದನು.

31ಆಗ ಮೋಶೆ ಯೆಹೋವನ ಬಳಿಗೆ ತಿರುಗಿ ಹೋಗಿ, <<ಅಯ್ಯೋ! ಈ ಜನರು ಮಹಾ ಪಾಪವನ್ನು ಮಾಡಿದ್ದಾರೆ. ಚಿನ್ನದ ಹೋರಿಕರುವನ್ನು ಮಾಡಿ ದೇವರೆಂದುಕೊಂಡಿದ್ದಾರೆ.

32ಆದರೂ ನೀನು ಕರುಣೆಯಿಟ್ಟು ಅವರ ಪಾಪವನ್ನು ಕ್ಷಮಿಸಬೇಕು. ಇಲ್ಲವಾದರೆ ನೀನು ಬರೆದಿರುವ ಜೀವಿತರ ಪುಸ್ತಕದಿಂದ ನನ್ನ ಹೆಸರನ್ನೂ ಅಳಿಸಿಬಿಡಬೇಕೆಂದು ಕೇಳಿಕೊಳ್ಳುತ್ತೇನೆ>> ಎಂದು ಪ್ರಾರ್ಥಿಸಿದನು.

33ಅದಕ್ಕೆ ಯೆಹೋವನು ಮೋಶೆಗೆ, <<ಯಾರು ನನ್ನ ಮಾತನ್ನು ಮೀರಿ ಪಾಪಮಾಡಿದರೋ ಅವರ ಹೆಸರುಗಳನ್ನೇ ನನ್ನ ಬಳಿಯಲ್ಲಿರುವ ಪುಸ್ತಕದಿಂದ ನಾನು ಅಳಿಸಿಬಿಡುವೆನು.

34ನೀನು ಇಲ್ಲಿಂದ ಹೊರಟು ನಾನು ನಿನಗೆ ಹೇಳಿದ ದೇಶಕ್ಕೆ ಈ ಜನರನ್ನು ನಡೆಸಿಕೊಂಡು ಹೋಗು. ನೋಡು, ನನ್ನ ದೂತನು ನಿನ್ನ ಮುಂದೆ ನಡೆದು ಮುನ್ನಡೆಸುವನು, ಆದರೂ ನನ್ನ ನ್ಯಾಯತೀರ್ಪಿನ ದಿನದಲ್ಲಿ ನಾನು ಅವರ ಪಾಪಕ್ಕೆ ತಕ್ಕಂತೆ ಅವರನ್ನು ದಂಡಿಸುವೆನು.>>

35ಇಸ್ರಾಯೇಲರು ಆರೋನನ ಕೈಯಿಂದ ಆ ಹೋರಿಕರುವನ್ನು ಮಾಡಿಸಿಕೊಂಡಿದ್ದರಿಂದ ಯೆಹೋವನು ಅವರನ್ನು ದಂಡಿಸಿದನು.


  Share Facebook  |  Share Twitter

 <<  Exodus 32 >> 


Bible2india.com
© 2010-2024
Help
Dual Panel

Laporan Masalah/Saran