Bible 2 India Mobile
[VER] : [KANNADA]     [PL]  [PB] 
 <<  Exodus 26 >> 

1ನನ್ನ ನಿವಾಸಕ್ಕಾಗಿ ಒಂದು ಗುಡಾರವನ್ನು ಹತ್ತು ಪರದೆಗಳಿಂದ ಮಾಡಿಸಬೇಕು. ಅವು ನಯವಾಗಿ ಹೊಸೆದ ನಾರಿನ ಬಟ್ಟೆಗಳಾಗಿರಬೇಕು. ಅವುಗಳಲ್ಲಿ ನೀಲಿ, ನೇರಳೆ ಮತ್ತು ಕಡುಗೆಂಪು ವರ್ಣಗಳ ದಾರದಿಂದ ಕೆರೂಬಿಗಳನ್ನು ನೇಯ್ಗೆಯಿಂದ ಕಸೂತಿ ಹಾಕಿಸಬೇಕು.

2ಪ್ರತಿಯೊಂದು ಬಟ್ಟೆಯೂ ಇಪ್ಪತ್ತೆಂಟು ಮೊಳ ಉದ್ದವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇರಬೇಕು. ಎಲ್ಲಾ ಪರದೆಗಳು ಒಂದೇ ಅಳತೆಯಾಗಿರಬೇಕು.

3ಐದೈದು ಬಟ್ಟೆಯ ಪರದೆಗಳನ್ನು ಒಂದೊಂದಾಗಿ ಜೋಡಿಸಬೇಕು.

4ಈ ಎರಡು ಜೋಡಣೆಗಳಲ್ಲಿ ಒಂದೊಂದರ ಕೊನೆಯ ಪರದೆಯ ಅಂಚಿನಲ್ಲಿ ನೀಲಿ ದಾರದಿಂದ ಕುಣಿಕೆಗಳನ್ನು ಮಾಡಿಸಬೇಕು.

5ಆ ಕುಣಿಕೆಗಳು ಐವತ್ತೈವತ್ತರ ಮೇರೆಗೆ ಒಂದಕ್ಕೊಂದು ಎದುರುಬದುರಾಗಿರಬೇಕು.

6ಅದಲ್ಲದೆ ಐವತ್ತು ಚಿನ್ನದ ಕೊಂಡಿಗಳನ್ನು ಮಾಡಿಸಿ ಆ ಪರದೆಗಳನ್ನು ಒಂದಕ್ಕೊಂದು ಹೆಣೆದು ಒಂದೇ ಗುಡಾರವಾಗುವಂತೆ ಜೋಡಿಸಬೇಕು.

7ಈ ಗುಡಾರದ ಮೇಲೆ ಹೊದಿಸುವುದಕ್ಕಾಗಿ ಆಡಿನ ರೋಮದಿಂದ ಹನ್ನೊಂದು ಪರದೆಗಳನ್ನು ಮಾಡಿಸಬೇಕು.

8ಒಂದೊಂದು ಪರದೆಯು ಮೂವತ್ತು ಮೊಳ ಉದ್ದವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇರಬೇಕು. ಎಲ್ಲಾ ಪರದೆಗಳು ಒಂದೇ ಅಳತೆಯಾಗಿರಬೇಕು.

9ಐದು ಪರದೆಗಳನ್ನು ಒಂದಾಗಿ ಜೋಡಿಸಿ ಮಿಕ್ಕ ಆರು ಪರದೆಗಳನ್ನು ಒಂದಾಗಿ ಜೋಡಿಸಿ ಆರನೆಯ ಪರದೆಯನ್ನು ಗುಡಾರದ ಮುಂಭಾಗದಲ್ಲಿ ಮಡಿಚಿ ಇರಿಸಬೇಕು.

10ಹೀಗೆ ಜೋಡಿಸಿ ಹೆಣೆದ ಪರದೆಗಳ ಅಂಚಿನಲ್ಲಿ ಐವತ್ತೈವತ್ತು ಕುಣಿಕೆಗಳನ್ನು ಮಾಡಿಸಬೇಕು.

11ತಾಮ್ರದ ಐವತ್ತು ಕೊಂಡಿಗಳನ್ನು ಮಾಡಿಸಿ ಆ ಕೊಂಡಿಗಳನ್ನು ಕುಣಿಕೆಗಳಲ್ಲಿ ಸಿಕ್ಕಿಸಿ ಸಮಸ್ತವು ಸೇರಿ ಒಂದೇ ಗುಡಾರವಾಗುವಂತೆ ಜೋಡಿಸಬೇಕು.

12ಹೊದಿಕೆಯ ಪರದೆಗಳಲ್ಲಿ ಅರ್ಧ ಪರದೆ ಹೆಚ್ಚಾಗಿರುವುದು, ಆ ಹೆಚ್ಚಿನ ಭಾಗವು ಗುಡಾರದ ಹಿಂಭಾಗದಲ್ಲಿ ಮಡಿಸಿ ತೂಗಾಡುವಂತೆ ಬಿಡಬೇಕು.

13ಹೊದಿಕೆಯ ಪರದೆಗಳ ಉದ್ದದಲ್ಲಿ ಈ ಕಡೆ ಒಂದು ಮೊಳವೂ, ಆ ಕಡೆ ಒಂದು ಮೊಳವೂ ಹೆಚ್ಚಾಗಿರುವುದು. ಅದು ಒಳಗಣ ಗುಡಾರವನ್ನು ಮುಚ್ಚುವಂತೆ ಈ ಕಡೆಯೂ ಆ ಕಡೆಯೂ ತುಗಾಡುವಂತಿರಬೇಕು.

14ಈ ಹೊದಿಕೆಗೆ ಹೊದಿಸುವುದಕ್ಕಾಗಿ ಹದಮಾಡಿರುವ ಕೆಂಪುಬಣ್ಣದ ಟಗರಿನ ತೊಗಲುಗಳಿಂದ ಒಂದು ಮೇಲ್ಹೊದಿಕೆಯನ್ನು ಕಡಲುಪ್ರಾಣಿಯ ತೊಗಲುಗಳಿಂದ ಮತ್ತೊಂದು ಮೇಲ್ಹೊದಿಕೆಯನ್ನು ಮಾಡಿಸಬೇಕು.

15ಗುಡಾರಕ್ಕೆ ಬೇಕಾದ ಚೌಕಟ್ಟುಗಳನ್ನು ಜಾಲೀಮರದಿಂದ ಮಾಡಿಸಬೇಕು.

16ಪ್ರತಿಯೊಂದು ಚೌಕಟ್ಟು ಹತ್ತು ಮೊಳ ಉದ್ದವಾಗಿಯೂ ಮತ್ತು ಒಂದೂವರೆ ಮೊಳ ಅಗಲವಾಗಿಯೂ ಇರಬೇಕು.

17ಪ್ರತಿಯೊಂದು ಚೌಕಟ್ಟು ಅಡ್ಡಪಟ್ಟಿಗಳಿಂದ ಜೋಡಿಸಲ್ಪಟ್ಟ ಎರಡು ನಿಲುವು ಪಟ್ಟಿಗಳುಳ್ಳದ್ದಾಗಿರಬೇಕು. ಗುಡಾರದ ಎಲ್ಲಾ ಚೌಕಟ್ಟುಗಳನ್ನೂ ಹಾಗೆಯೇ ಮಾಡಿಸಬೇಕು.

18ಗುಡಾರದ ದಕ್ಷಿಣದಿಕ್ಕಿನಲ್ಲಿ ಇಪ್ಪತ್ತು ಚೌಕಟ್ಟುಗಳನ್ನು ನಿಲ್ಲಿಸಬೇಕು.

19ನಾಲ್ವತ್ತು ಬೆಳ್ಳಿಯ ಗದ್ದಿಗೆ ಕಲ್ಲುಗಳನ್ನು (ಅಡಿಗಲ್ಲು) ಮಾಡಿಸಿ ಆ ಇಪ್ಪತ್ತು ಚೌಕಟ್ಟುಗಳ ಕೆಳಗೆ ಇಡಬೇಕು. ಒಂದೊಂದು ಚೌಕಟ್ಟಿನಲ್ಲಿರುವ ಎರಡು ಪಟ್ಟಿಗಳಿಗೆ ಒಂದೊಂದು ಗದ್ದಿಗೆ ಕಲ್ಲು ಇರಬೇಕು.

20ಹಾಗೆಯೇ ಗುಡಾರದ ಉತ್ತರದಿಕ್ಕಿನಲ್ಲಿಯೂ ಇಪ್ಪತ್ತು ಚೌಕಟ್ಟುಗಳು,

21ಮತ್ತು ಪ್ರತಿಯೊಂದು ಚೌಕಟ್ಟಿಗೆ ಎರಡೆರಡು ಬೆಳ್ಳಿಯ ಗದ್ದಿಗೆ ಕಲ್ಲುಗಳು ಇರಬೇಕು.

22ಗುಡಾರದ ಹಿಂಭಾಗಕ್ಕೆ ಅಂದರೆ ಪಶ್ಚಿಮ ದಿಕ್ಕಿನಲ್ಲಿ ಆರು ಚೌಕಟ್ಟುಗಳನ್ನು ಮಾಡಿಸಬೇಕು.

23ಗುಡಾರದ ಹಿಂಭಾಗದ ಎರಡು ಮೂಲೆಗಳಿಗೆ ಬೇರೆ ಎರಡು ಚೌಕಟ್ಟುಗಳನ್ನು ಮಾಡಿಸಬೇಕು.

24ಅವುಗಳನ್ನು ಅಡಿಯಿಂದ ತುದಿಯವರೆಗೂ ಜೋಡಿಸಿರಬೇಕು. ಮೇಲ್ಭಾಗದಲ್ಲಿಯೂ ಒಂದೇ ಬಳೆಗೆ ಜೋಡಿಸಿರಬೇಕು. ಹಾಗೆ ಎರಡು ಮೂಲೆಗಳಿಗೂ ಮಾಡಿಸಬೇಕು.

25ಹೀಗೆ ಹಿಂಭಾಗದಲ್ಲಿ ಎಂಟು ಚೌಕಟ್ಟುಗಳೂ ಮತ್ತು ಪ್ರತಿಯೊಂದು ಚೌಕಟ್ಟಿಗೆ ಬೆಳ್ಳಿಯ ಗದ್ದಿಗೆ ಕಲ್ಲುಗಳೂ ಅಂತೂ ಹದಿನಾರು ಗದ್ದಿಗೆ ಕಲ್ಲುಗಳು ಇರಬೇಕು.

26ಜಾಲೀಮರದಿಂದ ಅಗುಳಿಗಳನ್ನು ಮಾಡಿಸಬೇಕು. ಗುಡಾರದ ಎರಡು ಕಡೆಯ ಚೌಕಟ್ಟುಗಳಿಗೂ,

27ಅದರ ಹಿಂದುಗಡೆಯ ಅಂದರೆ ಪಶ್ಚಿಮ ಕಡೆಯ ಚೌಕಟ್ಟುಗಳಿಗೂ ಐದೈದು ಅಗುಳಿಗಳನ್ನು ಮಾಡಿಸಬೇಕು.

28ಚೌಕಟ್ಟುಗಳ ಮಧ್ಯದಲ್ಲಿರುವ ಅಗುಳಿಯು ಒಂದು ಕೊನೆಯಿಂದ ಮತ್ತೊಂದು ಕೊನೆಯವರೆಗೂ ತಲುಪುವಂತಿರಬೇಕು.

29ಆ ಚೌಕಟ್ಟುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿ ಅವುಗಳಲ್ಲಿ ಆ ಅಗುಳಿಗಳಿಗಾಗಿ ಚಿನ್ನದ ಬಳೆಗಳನ್ನು ಮಾಡಿಸಬೇಕು. ಆ ಅಗುಳಿಗಳನ್ನೂ ಚಿನ್ನದ ತಗಡುಗಳಿಂದ ಹೊದಿಸಬೇಕು.

30ನಾನು ಬೆಟ್ಟದಲ್ಲಿ ನಿನಗೆ ತೋರಿಸಿಕೊಟ್ಟ ರೀತಿಯಲ್ಲೇ ಗುಡಾರವನ್ನು ಬಿಡಿಸಬೇಕು.

31ನೀಲಿ, ನೆರಳೆ, ಕಡುಗೆಂಪು ವರ್ಣಗಳು ಹಾಗೂ ನಯವಾಗಿ ಹೊಸೆದ ಹತ್ತಿಯ ನೂಲಿನಿಂದ ಪರದೆಯನ್ನು ಮಾಡಿಸಿ, ಅದಕ್ಕೆ ಕೆರೂಬಿಗಳಿಗಾಗಿ ಕೌಶಲ್ಯಪೂರ್ಣವಾಗಿ ಕಸೂತಿ ಹಾಕಿಸಬೇಕು.

32ಜಾಲೀಮರದಿಂದ ನಾಲ್ಕು ಕಂಭಗಳನ್ನು ಮಾಡಿಸಿ, ಚಿನ್ನದ ತಗಡುಗಳನ್ನು ಹೊದಿಸಿ, ನಾಲ್ಕು ಬೆಳ್ಳಿಯ ಗದ್ದಿಗೆ ಕಲ್ಲುಗಳನ್ನು ಮೇಲೆ ನಿಲ್ಲಿಸಿ ಚಿನ್ನದ ಕೊಂಡಿಗಳಿಂದ ಆ ಪರದೆಯನ್ನು ಆ ನಾಲ್ಕು ಕಂಭಗಳಿಗೆ ಸಿಕ್ಕಿಸಬೇಕು.

33ಆ ಪರದೆಯನ್ನು ಕೊಂಡಿಗಳಿಗೆ ಸಿಕ್ಕಿಸಿದಾಗ ಅದರೊಳಗೆ ಆಜ್ಞಾಶಾಸನಗಳ ಮಂಜೂಷವನ್ನು ತರಿಸಿಡಬೇಕು. ಆ ಪರದೆಯು ಪವಿತ್ರಸ್ಥಾನವೆಂಬುದನ್ನೂ ಮತ್ತು ಮಹಾಪವಿತ್ರಸ್ಥಾನವನ್ನೂ ವಿಂಗಡಿಸುವುದು.

34ಮಹಾಪವಿತ್ರಸ್ಥಾನದಲ್ಲಿ ಆಜ್ಞಾಶಾಸನಗಳ ಮಂಜೂಷದ ಮೇಲೆ ಕೃಪಾಸನವನ್ನು ತಂದಿರಿಸಬೇಕು.

35ಪರದೆಯ ಹೊರಗಡೆಯಲ್ಲಿ ಮೇಜನ್ನೂ ಮೇಜಿಗೆ ಎದುರಾಗಿ ಗುಡಾರದ ದಕ್ಷಿಣ ದಿಕ್ಕಿನಲ್ಲಿ ದೀಪಸ್ತಂಭವನ್ನೂ ಇರಿಸಬೇಕು. ಮೇಜು ಉತ್ತರ ಭಾಗದಲ್ಲಿರಬೇಕು.

36ಗುಡಾರದ ಬಾಗಿಲಿಗೆ ಮರೆಯಾಗಿ ನಯವಾಗಿ ಹೊಸೆದ ನಾರಿನ ಪರದೆಯಲ್ಲಿ ನೀಲಿ, ನೆರಳೆ, ಕಡುಗೆಂಪು ವರ್ಣಗಳುಳ್ಳ ದಾರಗಳಿಂದ ಕಸೂತಿ ಹಾಕಿಸಬೇಕು.

37ಆ ಪರದೆ ತೂಗಿಸುವುದಕ್ಕಾಗಿ ಜಾಲೀಮರದಿಂದ ಐದು ಕಂಬಗಳನ್ನು ಮಾಡಿಸಿ ಚಿನ್ನದ ತಗಡುಗಳನ್ನುಹೊದಿಸಬೇಕು. ಅವುಗಳ ಕೊಂಡಿಗಳನ್ನು ಚಿನ್ನದಿಂದ ಮಾಡಿಸಿ ಅವುಗಳಿಗಾಗಿ ಐದು ತಾಮ್ರದ ಗದ್ದಿಗೆ ಕಲ್ಲುಗಳನ್ನು ಮಾಡಿಸಬೇಕು.


  Share Facebook  |  Share Twitter

 <<  Exodus 26 >> 


Bible2india.com
© 2010-2024
Help
Dual Panel

Laporan Masalah/Saran