Bible 2 India Mobile
[VER] : [KANNADA]     [PL]  [PB] 
 <<  Exodus 17 >> 

1ತರುವಾಯ ಇಸ್ರಾಯೇಲರ ಸಮೂಹವೆಲ್ಲಾ ಯೆಹೋವನ ಅಪ್ಪಣೆಯ ಮೇರೆಗೆ <<ಸೀನ್>> ಎಂಬ ಮರುಭೂಮಿಯಿಂದ ಹೊರಟು ಮುಂದೆ ಪ್ರಯಾಣ ಮಾಡಿ ರೆಫೀದೀಮಿನಲ್ಲಿ ಇಳಿದುಕೊಂಡರು. ಅಲ್ಲಿಯೂ ಜನರಿಗೆ ಕುಡಿಯುವುದಕ್ಕೆ ನೀರು ಇರಲಿಲ್ಲ.

2ಆದಕಾರಣ ಜನರು ಮೋಶೆಯ ಮೇಲೆ ಗುಣುಗುಟ್ಟುತ್ತಾ, <<ನಮಗೆ ಕುಡಿಯುವುದಕ್ಕೆ ನೀರು ದೊರಕಿಸಿಕೊಡಬೇಕು>> ಎಂದು ಗದ್ದಲವೆಬ್ಬಿಸಲು, ಮೋಶೆಯು ಅವರಿಗೆ, <<ನನ್ನ ಸಂಗಡ ಏಕೆ ಜಗಳವಾಡುತ್ತೀರಿ? ಯೆಹೋವನನ್ನು ಏಕೆ ಪರೀಕ್ಷಿಸುತ್ತೀರಿ?>> ಎಂದನು.

3ಅಲ್ಲಿ ಜನರು ಬಾಯಾರಿಕೆಯಿಂದ, ಮೋಶೆಗೆ ವಿರುದ್ಧವಾಗಿ ಗುಣುಗುಟ್ಟಿ, <<ನೀನು ನಮ್ಮನ್ನೂ, ನಮ್ಮ ಮಕ್ಕಳನ್ನೂ, ದನಗಳನ್ನೂ ಐಗುಪ್ತ ದೇಶದಿಂದ ಇಲ್ಲಿಗೆ ಕರೆದುತಂದು ಈಗ ನೀರಿಲ್ಲದೆ ಸಾಯುವ ಹಾಗೆ ಮಾಡಿದ್ದೇಕೆ?>> ಎಂದರು.

4ಆಗ ಮೋಶೆ ಯೆಹೋವನಿಗೆ ಮೊರೆಯಿಟ್ಟು, <<ಈ ಜನರಿಗಾಗಿ ನಾನೇನು ಮಾಡಲಿ? ಅವರು ನನ್ನನ್ನು ಕಲ್ಲೆಸೆದು ಕೊಲ್ಲುವ ಹಾಗಿದ್ದಾರಲ್ಲ>> ಎಂದನು.

5ಅದಕ್ಕೆ ಯೆಹೋವನು ಮೋಶೆಗೆ, <<ನೀನು ನೈಲ್ ನದಿಯನ್ನು ಹೊಡೆದ ಕೋಲನ್ನು ಕೈಯಲ್ಲಿ ಹಿಡಿದುಕೊಂಡು ಇಸ್ರಾಯೇಲರ ಹಿರಿಯರಲ್ಲಿ ಕೆಲವರನ್ನು ಕರೆದುಕೊಂಡು ಜನರ ಮುಂದೆ ಹೊರಟು, ನಾನು ತೋರಿಸುವ ಸ್ಥಳಕ್ಕೆ ಹೋಗು.

6ಅಲ್ಲಿ ಹೋರೇಬಿನಲ್ಲಿರುವ ಬಂಡೆಯ ಮೇಲೆ ನಾನೇ ನಿನಗೆದುರಾಗಿ ನಿಂತುಕೊಳ್ಳುವೆನು. ನೀನು ಆ ಬಂಡೆಯನ್ನು ಹೊಡೆದಾಗ, ಜನರು ಕುಡಿಯುವಂತೆ ನೀರು ಹೊರಗೆ ಬರುವುದು>> ಎಂದನು. ಮೋಶೆ ಇಸ್ರಾಯೇಲರ ಹಿರಿಯರ ಎದುರಿನಲ್ಲಿ ಹಾಗೆಯೇ ಮಾಡಿದನು.

7ಇಸ್ರಾಯೇಲರು, <<ಯೆಹೋವನು ನಮ್ಮ ಮಧ್ಯದಲ್ಲಿ ಇದ್ದಾನೋ ಇಲ್ಲವೋ?>> ಎಂದು ಯೆಹೋವನನ್ನು ಅಲ್ಲಿ ಪರೀಕ್ಷಿಸಿದ್ದರಿಂದ, ಮೋಶೆ ಆ ಸ್ಥಳಕ್ಕೆ ಮಸ್ಸಾ ಎಂತಲೂ ಅವರು ಗದ್ದಲ ಮಾಡಿದ್ದರಿಂದ ಅದಕ್ಕೆ ಮೆರೀಬಾ ಎಂತಲೂ ಹೆಸರಿಟ್ಟನು.

8ಅಮಾಲೇಕ್ಯರು ರೆಫೀದೀಮಿನಲ್ಲಿ ಇಸ್ರಾಯೇಲರ ಸಂಗಡ ಯುದ್ಧಮಾಡಿದರು.

9ಆಗ ಮೋಶೆಯು ಯೆಹೋಶುವನಿಗೆ, <<ನೀನು ನಮ್ಮ ಜನರಲ್ಲಿ ಕೆಲವರನ್ನು ಆರಿಸಿಕೊಂಡು ಅಮಾಲೇಕ್ಯರೊಡನೆ ಯುದ್ಧಮಾಡಬೇಕು. ನಾನು ನಾಳೆ ದೇವರ ಕೋಲನ್ನು ಕೈಯಲ್ಲಿ ಹಿಡಿದುಕೊಂಡು ಗುಡ್ಡದ ಮೇಲೆ ನಿಂತುಕೊಳ್ಳುವೆನು>> ಎಂದು ಹೇಳಿದನು.

10ಮೋಶೆಯ ಅಪ್ಪಣೆಯ ಮೇರೆಗೆ ಯೆಹೋಶುವನು ಅಮಾಲೇಕ್ಯರೊಡನೆ ಯುದ್ಧಮಾಡಿದನು. ಮೋಶೆಯೂ, ಆರೋನನೂ ಮತ್ತು ಹೂರನು ಗುಡ್ಡದ ಮೇಲೆ ಏರಿ ಹೋದರು.

11ಮೋಶೆಯು ತನ್ನ ಕೈಗಳನ್ನು ಮೇಲಕ್ಕೆ ಎತ್ತಿದಾಗ ಇಸ್ರಾಯೇಲರು ಬಲಗೊಳ್ಳುವರು. ಅವನು ತನ್ನ ಕೈಯನ್ನು ಇಳಿಸಿದಾಗ ಅಮಾಲೇಕ್ಯರು ಬಲಗೊಳ್ಳುವರು.

12ಮೋಶೆಯ ಕೈಗಳು ಭಾರವಾದಾಗ, ಆರೋನ ಮತ್ತು ಹೂರನು ಒಂದು ಕಲ್ಲನ್ನು ತಂದು ಇಟ್ಟರು. ಮೋಶೆಯು ಅದರ ಮೇಲೆ ಕುಳಿತುಕೊಂಡನು. ಆರೋನನು ಒಂದು ಕಡೆಯಲ್ಲಿಯೂ, ಹೂರನು ಇನ್ನೊಂದು ಕಡೆಯಲ್ಲಿಯೂ ನಿಂತುಕೊಂಡು ಮೋಶೆಯ ಕೈಗಳನ್ನು ಎತ್ತಿ ಹಿಡಿಯಲು ಸಹಾಯ ಮಾಡಿದರು. ಹೀಗೆ ಅವನ ಕೈಗಳು ಸೂರ್ಯನು ಮುಳುಗುವವರೆಗೆ ಕೆಳಗಿಳಿಸದೆ ಇದ್ದರು.

13ಯೆಹೋಶುವನು ಅಮಾಲೇಕ್ಯರನ್ನು ಮತ್ತು ಅವರ ಭಟರನ್ನು ಖಡ್ಗದಿಂದ ಸೋಲಿಸಿದನು.

14ಆಗ ಯೆಹೋವನು ಮೋಶೆಗೆ, <<ಇದನ್ನು ಜ್ಞಾಪಕಾರ್ಥಕವಾಗಿ ಒಂದು ಗ್ರಂಥದಲ್ಲಿ ಬರೆ. ಅದನ್ನು ಯೆಹೋಶುವನಿಗೆ ತಿಳಿಸು. ಏಕಂದರೆ ನಾನು ಅಮಾಲೇಕ್ಯರ ನೆನಪು ಭೂಮಿಯ ಮೇಲೆ ಇರದಂತೆ ಸಂಪೂರ್ಣವಾಗಿ ನಾಶಮಾಡಿ ಬಿಡುವೆನು>> ಎಂದು ಹೇಳಿದನು.

15ಆ ಸ್ಥಳದಲ್ಲಿ ಮೋಶೆಯು ಯಜ್ಞವೇದಿಯನ್ನು ಕಟ್ಟಿಸಿ ಅದಕ್ಕೆ <<ಯೆಹೋವ ನಿಸ್ಸಿ>> (ಜಯದ್ವಜ) ಎಂದು ಹೆಸರಿಟ್ಟನು.

16ಏಕೆಂದರೆ, <<ಯೆಹೋವನ ಸಿಂಹಾಸನದಾಣೆಗೂ ಅಮಾಲೇಕ್ಯರ ಮೇಲೆ ಯೆಹೋವನಿಗೆ ತಲತಲಾಂತರಗಳಲ್ಲಿ ಯುದ್ಧವಿರುವುದು>> ಎಂದನು.


  Share Facebook  |  Share Twitter

 <<  Exodus 17 >> 


Bible2india.com
© 2010-2024
Help
Dual Panel

Laporan Masalah/Saran