Bible 2 India Mobile
[VER] : [KANNADA]     [PL]  [PB] 
 <<  Genesis 8 >> 

1ತರುವಾಯ ದೇವರು ನೋಹನನ್ನೂ ಅವನ ಸಂಗಡ ನಾವೆಯಲ್ಲಿದ್ದ ಎಲ್ಲಾ ಮೃಗಪಶುಗಳನ್ನೂ ನೆನಪಿಗೆ ತಂದುಕೊಂಡು ಭೂಲೋಕದ ಮೇಲೆ ಗಾಳಿ ಬೀಸುವಂತೆ ಮಾಡಲಾಗಿ ನೀರು ತಗ್ಗಿತು.

2ಭೂಮಿಯ ಅಡಿಯಲ್ಲಿದ್ದ ಸಾಗರದ ಸೆಲೆಗಳೂ ಆಕಾಶದ ತೂಬುಗಳೂ ಮುಚ್ಚಿಹೋದವು. ಆಕಾಶದಿಂದ ಸುರಿಯುತ್ತಿದ್ದ ಮಳೆ ನಿಂತು ಹೋಯಿತು. ಭೂಮಿಯ ಮೇಲಿದ್ದ ನೀರು ಕ್ರಮೇಣವಾಗಿ ತಗ್ಗುತ್ತಾ ಬಂತು.

3ಹೀಗೆ ನೂರೈವತ್ತು ದಿನಗಳಾದ ಮೇಲೆ ನೀರು ಕಡಿಮೆಯಾಯಿತು.

4ಏಳನೆಯ ತಿಂಗಳಿನ ಹದಿನೇಳನೆಯ ದಿನದಲ್ಲಿ ನಾವೆಯು ಅರಾರಾಟ್ ಬೆಟ್ಟದಲ್ಲಿ ನಿಂತಿತ್ತು.

5ಹತ್ತನೆಯ ತಿಂಗಳಿನವರೆಗೂ ನೀರು ಕಡಿಮೆಯಾಗುತ್ತಾ ಬಂದಿತು. ಹತ್ತನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಬೆಟ್ಟಗಳ ಶಿಖರಗಳು ಕಾಣಿಸಲಾರಂಭಿಸಿದವು.

6ನಲ್ವತ್ತು ದಿನಗಳಾದ ಮೇಲೆ ನೋಹನು ತಾನು ಮಾಡಿದ ನಾವೆಯ ಕಿಟಕಿಯನ್ನು ತೆರೆದು ಕಾಗೆಯೊಂದನ್ನು ಹೊರಕ್ಕೆ ಬಿಟ್ಟನು.

7ಭೂಮಿಯ ಮೇಲಿದ್ದ ನೀರು ಒಣಗುವ ತನಕ ಆ ಕಾಗೆ ಹೋಗುತ್ತಾ ಬರುತ್ತಾ ಇತ್ತು.

8ಹೀಗಿರಲಾಗಿ ನೀರು ಕಡಿಮೆ ಆಯಿತೋ ಇಲ್ಲವೋ ಎಂದು ತಿಳಿದುಕೊಳ್ಳುವುದಕ್ಕೆ ನೋಹನು ಪಾರಿವಾಳವೊಂದನ್ನು ಹೊರಕ್ಕೆ ಬಿಟ್ಟನು.

9ಆದರೆ ನೀರು ಭೂಮಿಯ ಮೇಲೆಲ್ಲಾ ಇದ್ದುದರಿಂದ ಪಾರಿವಾಳವು ಕಾಲಿಡುವುದಕ್ಕೆ ಸ್ಥಳ ಕಾಣದೆ ತಿರುಗಿ ನಾವೆಗೆ ಬಂದಿತು. ನೋಹನು ಕೈಚಾಚಿ ಅದನ್ನು ಹಿಡಿದು ನಾವೆಯಲ್ಲಿ ತನ್ನ ಬಳಿಗೆ ತೆಗೆದುಕೊಂಡನು.

10ಅವನು ಇನ್ನೂ ಏಳು ದಿನಗಳ ನಂತರ ಪಾರಿವಾಳವನ್ನು ತಿರುಗಿ ಹೊರಕ್ಕೆ ಬಿಟ್ಟನು.

11ಸಂಜೆಯಲ್ಲಿ ಆ ಪಾರಿವಾಳವು ಅವನ ಬಳಿಗೆ ಹಿಂತಿರುಗಿ ಬರಲು, ಆಹಾ, ಅದರ ಬಾಯಲ್ಲಿ ಎಣ್ಣೆ ಮರದ ಹೊಸ ಚಿಗುರು ಇತ್ತು. ನೋಹನು ಅದನ್ನು ನೋಡಿ ನೀರು ಭೂಮಿಯ ಮೇಲಿಂದ ಇಳಿದು ಹೋಯಿತೆಂದು ತಿಳಿದುಕೊಂಡನು.

12ಮತ್ತೆ ಏಳು ದಿವಸದ ಮೇಲೆ ಪಾರಿವಾಳವನ್ನು ಬಿಡಲು ಅದು ಅವನ ಬಳಿಗೆ ಹಿಂತಿರುಗಿ ಬರಲೇ ಇಲ್ಲ.

13ಆರುನೂರ ಒಂದನೆಯ ವರುಷದ ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಭೂಮಿಯ ಮೇಲಿದ್ದ ನೀರು ಇಳಿದಿತ್ತು. ನೋಹನು ನಾವೆಯ ಗವಾಕ್ಷಿಯನ್ನು ತೆಗೆದು ನೋಡಲಾಗಿ, ಆಹಾ, ಭೂಮಿಯು ಪೂರ್ಣವಾಗಿ ಒಣಗಿತು .

14ಎರಡನೆಯ ತಿಂಗಳಿನ ಇಪ್ಪತ್ತೇಳನೆಯ ದಿನದಲ್ಲಿ ಭೂಮಿ ಒಣಗಿತ್ತು.

15ಆಗ ದೇವರು ನೋಹನಿಗೆ,

16<<ನೀನು, ನಿನ್ನ ಹೆಂಡತಿ, ಮಕ್ಕಳು, ಸೊಸೆಯರ ಸಹಿತವಾಗಿ ನಾವೆಯನ್ನು ಬಿಟ್ಟು ಹೊರಗೆ ಬಾ;

17ನಿನ್ನ ಬಳಿಯಲ್ಲಿರುವ ಪಶು, ಪಕ್ಷಿ, ಕ್ರಿಮಿಕೀಟ ಮುಂತಾದ ಎಲ್ಲಾ ಜೀವಿಗಳೂ ಹೊರಗೆ ಬರಲಿ; ಅವುಗಳಿಗೆ ಭೂಮಿಯ ಮೇಲೆ ಬಹು ಸಂತಾನವಾಗಲಿ; ಅವು ಅಭಿವೃದ್ಧಿಯಾಗಿ ಹೆಚ್ಚಲಿ>> ಎಂದು ಹೇಳಿದನು.

18ನೋಹನು ಹೆಂಡತಿ ಮಕ್ಕಳು ಸೊಸೆಯರು ಸಹಿತವಾಗಿ ಹೊರಗೆ ಬಂದನು.

19ಎಲ್ಲಾ ಮೃಗಗಳು, ಪಶು ಪಕ್ಷಿಗಳು, ಕ್ರಿಮಿಕೀಟಗಳ ಸಹಿತವಾಗಿ ತಮ್ಮತಮ್ಮ ಜಾತಿಗನುಸಾರವಾಗಿ ನಾವೆಯಿಂದ ಹೊರಗೆ ಬಂದವು.

20ಆಗ ನೋಹನು ಯೆಹೋವನಿಗೋಸ್ಕರ ಯಜ್ಞವೇದಿಯನ್ನು ಕಟ್ಟಿ, ಅದರ ಮೇಲೆ ಶುದ್ಧವಾದ ಪ್ರತಿ ಪಶು ಪಕ್ಷಿಗಳಿಂದ ಆಯ್ದುಕೊಂಡು ಸರ್ವಾಂಗಹೋಮ ಮಾಡಿದನು.

21ಅದರ ಸುವಾಸನೆಯು ಯೆಹೋವನಿಗೆ ಗಮಗಮಿಸಲು ಆತನು ಹೃದಯದೊಳಗೆ, <<ಮನುಷ್ಯರ ಹೃದಯದ ಆಲೋಚನೆ ಚಿಕ್ಕಂದಿನಿಂದಲೇ ಕೆಟ್ಟದ್ದು, ಆದರೂ ನಾನು ಇನ್ನು ಮೇಲೆ ಅವರ ನಿಮಿತ್ತವಾಗಿ ಭೂಮಿಯನ್ನು ಶಪಿಸುವುದಿಲ್ಲ. ನಾನು ಎಲ್ಲಾ ಜೀವಿಗಳನ್ನೂ ಈಗ ನಾಶಮಾಡಿದಂತೆ ಇನ್ನು ಮೇಲೆ ನಾಶ ಮಾಡುವುದಿಲ್ಲ.

22ಭೂಮಿಯು ಇರುವವರೆಗೆ ಬಿತ್ತುವ ಕಾಲವೂ ಕೊಯ್ಯುವ ಕಾಲವೂ ಚಳಿಯೂ, ಮಳೆಯೂ, ಬೇಸಿಗೆ ಕಾಲವೂ, ಹಿಮಕಾಲವೂ, ಹಗಲೂ, ಇರುಳೂ ಇವುಗಳ ಕ್ರಮ ನಿಂತುಹೋಗುವುದಿಲ್ಲ>> ಎಂದನು.


  Share Facebook  |  Share Twitter

 <<  Genesis 8 >> 


Bible2india.com
© 2010-2024
Help
Dual Panel

Laporan Masalah/Saran