Bible 2 India Mobile
[VER] : [KANNADA]     [PL]  [PB] 
 <<  Genesis 16 >> 

1ಅಬ್ರಾಮನ ಹೆಂಡತಿಯಾದ ಸಾರಯಳಿಗೆ ಮಕ್ಕಳಿರಲಿಲ್ಲ. ಆಕೆಗೆ ಐಗುಪ್ತ ದೇಶದವಳಾದ ಹಾಗರಳೆಂಬ ದಾಸಿಯಿದ್ದಳು.

2ಹೀಗಿರಲಾಗಿ ಸಾರಯಳು ಅಬ್ರಾಮನಿಗೆ, <<ಯೆಹೋವನು ನನಗೆ ಮಕ್ಕಳನ್ನು ಕೊಡಲಿಲ್ಲವಲ್ಲಾ; ನೀನು ನನ್ನ ದಾಸಿಯಾದ ಹಾಗರಳ ಬಳಿಗೆ ಹೋಗಬೇಕು; ಒಂದು ವೇಳೆ ಅವಳ ಮೂಲಕ ನನಗೆ ಸಂತಾನವಾದೀತು>> ಎಂದು ಹೇಳಲು ಅಬ್ರಾಮನು ಆಕೆಯ ಮಾತಿಗೆ ಸಮ್ಮತಿಸಿದನು.

3ಅಬ್ರಾಮನು ಹತ್ತು ವರುಷಗಳ ಕಾಲ ಕಾನಾನ್ ದೇಶದಲ್ಲಿ ವಾಸಿಸಿದ ಮೇಲೆ ಅವನ ಹೆಂಡತಿಯಾದ ಸಾರಯಳು ಐಗುಪ್ತಳಾದ ಹಾಗರಳೆಂಬ ದಾಸಿಯನ್ನು ಕರೆದು ತನ್ನ ಗಂಡನಿಗೆ ಹೆಂಡತಿಯಾಗಿ ಒಪ್ಪಿಸಿದಳು.

4ಅವನು ಹಾಗರಳನ್ನು ಸಂಗಮಿಸಲು ಆಕೆಯು ಬಸುರಾದಳು. ತಾನು ಬಸುರಾದೆನೆಂದು ತಿಳಿದುಕೊಂಡಾಗ ಅವಳು ತನ್ನ ಯಜಮಾನಿಯನ್ನು ತಾತ್ಸಾರ ಮಾಡತೊಡಗಿದಳು.

5ಆಗ ಸಾರಯಳು ಅಬ್ರಾಮನಿಗೆ, <<ನನ್ನ ಗೋಳು ನಿನಗೆ ತಟ್ಟಲಿ; ನನ್ನ ದಾಸಿಯನ್ನು ನಿನಗೆ ಹೆಂಡತಿಯಾಗಿ ಒಪ್ಪಿಸಿದೆನಷ್ಟೆ; ಅವಳು ತಾನು ಬಸುರಾದೆನೆಂದು ತಿಳಿದು ನನ್ನನ್ನು ತಾತ್ಸಾರಮಾಡುತ್ತಿದ್ದಾಳೆ; ನಿನಗೂ ನನಗೂ ನಡುವೆ ಯೆಹೋವನೇ ನ್ಯಾಯತೀರಿಸಲಿ>> ಎಂದು ಹೇಳಿದಳು

6ಆಗ ಅಬ್ರಾಮನು, <<ನಿನ್ನ ದಾಸಿಯು ನಿನ್ನ ಕೈಯಲ್ಲೇ ಇದ್ದಾಳಲ್ಲಾ; ನಿನ್ನಗೆ ಮನಸ್ಸು ಬಂದಂತೆ ಮಾಡು>> ಎಂದನು. ಆಗ ಸಾರಯಳು ಅವಳನ್ನು ಬಾಧಿಸಲು ಅವಳು ಓಡಿಹೋದಳು.

7ಅವಳು ಮರಳುಗಾಡಿನಲ್ಲಿ ಶೂರಿನ ಮಾರ್ಗದ ನೀರಿನ ಬುಗ್ಗೆಯ ಹತ್ತಿರ ಇರುವಾಗ ಯೆಹೋವನ ದೂತನು ಅವಳನ್ನು ಕಂಡು,

8<<ಸಾರಯಳ ದಾಸಿಯಾದ ಹಾಗರಳೇ, ಎಲ್ಲಿಂದ ಬಂದಿ? ಎಲ್ಲಿಗೆ ಹೋಗುತ್ತೀ?>> ಎಂದು ಕೇಳಲು ಅವಳು, <<ನನ್ನ ಯಜಮಾನಿಯಾದ ಸಾರಯಳ ಬಳಿಯಿಂದ ಓಡಿಹೋಗುತ್ತಾ ಇದ್ದೇನೆ>> ಎಂದಳು.

9ಅದಕ್ಕೆ ಯೆಹೋವನ ದೂತನು, <<ನೀನು ಯಜಮಾನಿಯ ಬಳಿಗೆ ಹಿಂದಿರುಗಿ ಹೋಗಿ ಅವಳಿಗೆ ಅಧೀನಳಾಗಿ ನಡೆದುಕೋ>> ಎಂದನು.

10ಅದಲ್ಲದೆ ಯೆಹೋವನ ದೂತನು ಅವಳಿಗೆ, <<ನಿನಗೆ ಬಹುಸಂತಾನವಾಗುವಂತೆ ಮಾಡುವೆನು; ನಿನ್ನ ಸಂತತಿಯು ಲೆಕ್ಕಿಸಲಾಗದಷ್ಟು ಹೆಚ್ಚಾಗುವುದು>> ಎಂದು ಹೇಳಿದನು

11ಮತ್ತು ಯೆಹೋವನ ದೂತನು ಅವಳಿಗೆ, <<ನೀನು ಬಸುರಾಗಿದ್ದೀಯಷ್ಟೆ; ನಿನಗೆ ಮಗನು ಹುಟ್ಟುವನು; ಯೆಹೋವನು ನಿನ್ನ ಕಷ್ಟದ ಕೂಗಿಗೆ ಕಿವಿಗೊಟ್ಟಿದ್ದರಿಂದ ಆ ಮಗನಿಗೆ <ಇಷ್ಮಾಯೇಲ್> (ದೇವರು ಕೇಳುವನು) ಎಂದು ಹೆಸರಿಡಬೇಕು.

12ಆ ಮನುಷ್ಯ ಕಾಡು ಕತ್ತೆಯಂತೆ ಇರುವನು. ಅವನು ಎಲ್ಲರ ಮೇಲೆ ಕೈಯೆತ್ತುವನು; ಹಾಗೆಯೇ ಅವನ ಮೇಲೆ ಎಲ್ಲರೂ ಕೈಯೆತ್ತುವರು. ತನ್ನ ಅಣ್ಣತಮ್ಮಂದಿರಿಗೆ ಎದುರಾಗಿ ವಾಸವಾಗಿರುವನು>> ಎಂದು ಹೇಳಿ ಹೋದನು.

13ಆಮೇಲೆ ಆಕೆಯು ತನ್ನ ಸಂಗಡ ಮಾತನಾಡಿದ ಯೆಹೋವನಿಗೆ, <<ನೀನು ನನ್ನನ್ನು ನೋಡುವ ದೇವರು>>ಎಂದು ಹೆಸರಿಟ್ಟಳು: ಏಕೆಂದರೆ, <<ನನ್ನನ್ನು ನೋಡುವಾತನನ್ನು ನಾನು ಇಲ್ಲಿಯೂ ನೋಡುವಂತಾಯಿತಲ್ಲಾ>> ಎಂದು ಕೊಂಡಳು

14ಈ ಸಂಗತಿಯಿಂದ ಅಲ್ಲಿರುವ ಬಾವಿಗೆ <<ಬೆರ್ ಲಹೈರೋಯಿ>> (ನನ್ನನ್ನು ನೋಡುವ ಜಿವಸ್ವರೂಪನ ಬಾವಿ) ಎಂದು ಹೆಸರಾಯಿತು. ಅದು ಕಾದೇಶ್ ಗೂ ಬೆರೆದಿಗೂ ಮದ್ಯದಲ್ಲಿ ಇದೆ.

15ಹಾಗರಳು ಅಬ್ರಾಮನಿಂದ ಒಬ್ಬ ಮಗನನ್ನು ಹೆತ್ತಳು. ಅಬ್ರಾಮನು ಅವನಿಗೆ ಇಷ್ಮಾಯೇಲ್ ಎಂದು ಹೆಸರಿಟ್ಟನು.

16ಹಾಗರಳು ಇಷ್ಮಾಯೇಲನನ್ನು ಹೆತ್ತಾಗ ಅಬ್ರಾಮನು ಎಂಭತ್ತಾರು ವರುಷದವನಾಗಿದ್ದನು.


  Share Facebook  |  Share Twitter

 <<  Genesis 16 >> 


Bible2india.com
© 2010-2024
Help
Dual Panel

Laporan Masalah/Saran