Bible 2 India Mobile
[VER] : [KANNADA]     [PL]  [PB] 
 <<  Hosea 14 >> 

1ಇಸ್ರಾಯೇಲೇ, ನೀನು ಹಿಂದಿರುಗಿ ನಿನ್ನ ದೇವರಾದ ಯೆಹೋವನ ಕಡೆಗೆ ತಿರುಗಿಕೋ; ನಿನ್ನ ಅಪರಾಧದಿಂದಲೇ, ನೀನು ಮುಗ್ಗರಿಸಿ ಬಿದ್ದಿ.

2ಪಶ್ಚಾತ್ತಾಪದ ಮಾತುಗಳಿಂದ ಯೆಹೋವನ ಬಳಿಗೆ ಹಿಂದಿರುಗಿ ಬಂದು ಆತನಿಗೆ, <<ನಮ್ಮ ಅಪರಾಧವನ್ನು ಸಂಪೂರ್ಣವಾಗಿ ನಿವಾರಣೆಮಾಡಿ, ನಮ್ಮಲ್ಲಿನ ಒಳ್ಳೆಯದನ್ನು ಅಂಗೀಕರಿಸು; ನಮ್ಮ ಸ್ತೋತ್ರಗಳೆಂಬ ಹೋರಿಗಳನ್ನು ಅರ್ಪಿಸುವೆವು.

3ಅಶ್ಶೂರವು ನಮ್ಮನ್ನು ರಕ್ಷಿಸುವುದೆಂದು ನಂಬುವುದಿಲ್ಲ, ಐಗುಪ್ತದ ಕುದುರೆಗಳನ್ನು ಹತ್ತುವುದಿಲ್ಲ, ನಮ್ಮ ಕೈಕೆಲಸದ ಬೊಂಬೆಗಳಿಗೆ, <ನೀವು ನಮ್ಮ ದೇವರುಗಳು> ಎಂದು ಇನ್ನು ಹೇಳುವುದಿಲ್ಲ; ನೀನೇ ದಿಕ್ಕಿಲ್ಲದ ಈ ಅನಾಥರನ್ನು ಕರುಣಿಸುವವನು>> ಎಂಬುದಾಗಿ ಅರಿಕೆಮಾಡಿಕೊಳ್ಳಿರಿ.

4ನಾನು ನನ್ನ ಜನರ ಭ್ರಷ್ಟತ್ವವನ್ನು ಪರಿಹರಿಸಿ ಅವರನ್ನು ಮನಃಪೂರ್ವಕವಾಗಿ ಪ್ರೀತಿಸುವೆನು; ನನ್ನ ಕೋಪವು ಅವರಿಂದ ತೊಲಗಿಹೋಯಿತು.

5ನಾನು ಇಸ್ರಾಯೇಲಿಗೆ ಇಬ್ಬನಿಯಂತಾಗುವೆನು; ಅದು ತಾವರೆಯಂತೆ ಅರಳುವುದು; ಲೆಬನೋನಿನ ದೇವದಾರು ಮರಗಳ ಹಾಗೆ ಬೇರು ಬಿಟ್ಟುಕೊಳ್ಳುವುದು.

6ಅದರ ರೆಂಬೆಗಳು ಹರಡುವವು, ಅದರ ಅಂದವು ಒಲೀವ ಮರದಂತೆ ಕಂಗೊಳಿಸುವುದು, ಅದರ ಪರಿಮಳವು ಲೆಬನೋನಿನ ಹಾಗೆ ಮನೋಹರವಾಗಿರುವುದು.

7ಅದರ ನೆರಳನ್ನು ಆಶ್ರಯಿಸಿರುವವರು ಹಿಂದಿರುಗಿ ಬೆಳೆಯನ್ನು ಬೆಳೆದು ದ್ರಾಕ್ಷೆಯಂತೆ ಫಲಪ್ರದರಾಗಿ ಫಲ ಕೊಡುವರು; ಅದರ ಕೀರ್ತಿಯು ಲೆಬನೋನಿನ ದ್ರಾಕ್ಷಾರಸದ ಹಾಗೆ ಸ್ವಾರಸ್ಯವಾಗಿರುವುದು.

8ಎಫ್ರಾಯೀಮು, <<ವಿಗ್ರಹಗಳ ಗೊಡವೆ ನನಗೆ ಇನ್ನೇಕೆ?>> ಎಂದು ಅವುಗಳನ್ನು ತ್ಯಜಿಸುವುದು; ನಾನು ಅದಕ್ಕೆ ಒಲಿದು ಕಟಾಕ್ಷಿಸುವೆನು; ನಾನು ಸೊಂಪಾದ ತುರಾಯಿ ಮರದಂತಿದ್ದೇನೆ; ನನ್ನಿಂದಲೇ ನೀನು ಫಲಿಸುವಿ.

9ಜ್ಞಾನಿಗಳು ಈ ಸಂಗತಿಗಳನ್ನು ಗ್ರಹಿಸುವರು; ವಿವೇಕಿಗಳು ಅವುಗಳನ್ನು ತಿಳಿದುಕೊಳ್ಳುವರು. ಯೆಹೋವನ ಮಾರ್ಗಗಳು ಸತ್ಯವಾದವುಗಳು; ಅವುಗಳಲ್ಲಿ ಸನ್ಮಾರ್ಗಿಗಳು ನಡೆಯುವರು, ದುರ್ಮಾರ್ಗಿಗಳು ಅವುಗಳನ್ನು ಬಿಟ್ಟು ಎಡವಿ ಬೀಳುವರು.


  Share Facebook  |  Share Twitter

 <<  Hosea 14 >> 


Bible2india.com
© 2010-2024
Help
Dual Panel

Laporan Masalah/Saran