Bible 2 India Mobile
[VER] : [KANNADA]     [PL]  [PB] 
 <<  Judges 18 >> 

1ಆ ಕಾಲದಲ್ಲಿ ಇಸ್ರಾಯೇಲರೊಳಗೆ ಅರಸನಿರಲಿಲ್ಲ. ದಾನ್‌ ಕುಲದವರಿಗೆ ಆ ವರೆಗೂ ಇಸ್ರಾಯೇಲರಲ್ಲಿ ಸ್ವಾಸ್ತ್ಯವು ದೊರಕಿರಲಿಲ್ಲ, ಅವರು ತಮಗೋಸ್ಕರ ವಾಸಸ್ಥಳವನ್ನು ಹುಡುಕುತ್ತಿದ್ದರು.

2ಅವರು ಚೊರ್ಗಾ, ಎಷ್ಟಾವೋಲ್ ಎಂಬ ಊರುಗಳಿಂದ ತಮ್ಮ ಕುಲದಲ್ಲಿ ಐದು ಮಂದಿ ಪರಾಕ್ರಮಶಾಲಿಗಳಾದ ಗೂಢಚಾರರನ್ನು ಆರಿಸಿ ಅವರಿಗೆ, <<ನೀವು ಹೋಗಿ ಲಯಿಷ್ ದೇಶವನ್ನು ಸಂಚರಿಸಿ ನೋಡಿರಿ>> ಎಂದು ಆಜ್ಞಾಪಿಸಿ ಕಳುಹಿಸಿದರು. ಇವರು ಪ್ರಯಾಣಮಾಡುತ್ತಾ ಎಫ್ರಾಯಿಮ್ ಬೆಟ್ಟದ ಸೀಮೆಯಲ್ಲಿದ್ದ ಮೀಕನ ಮನೆಗೆ ಬಂದು ಇಳಿದುಕೊಂಡರು.

3ಇವರು ಮೀಕನ ಮನೆಯ ಹತ್ತಿರದಲ್ಲಿ ಆ ಯೌವನಸ್ಥನಾದ ಲೇವಿಯನು ಮಾತನಾಡುವುದನ್ನು ಕೇಳಿ, ಗುರುತುಹಿಡಿದು, ಅವನ ಬಳಿಗೆ ಹೋಗಿ, <<ನಿನ್ನನ್ನು ಇಲ್ಲಿಗೆ ಕರೆತಂದವರಾರು? ಇಲ್ಲಿ ಏನು ಕೆಲಸ ಮಾಡುತ್ತೀ? ಏನು ಸಿಕ್ಕುತ್ತದೆ>> ಎಂದು ಅವನನ್ನು ಕೇಳಲು ಅವನು,

4ಮೀಕನು ತನಗೆ ಇಂಥಿಂಥವುಗಳನ್ನು ಸಂಬಳವಾಗಿ ಕೊಡುತ್ತಾನೆಂದೂ, ತಾನು ಅವನ ಯಾಜಕನಾಗಿದ್ದೇನೆಂದೂ ಹೇಳಿದನು.

5ಆಗ ಅವರು ಅವನಿಗೆ, <<ದಯವಿಟ್ಟು ನಮ್ಮ ಪ್ರಯಾಣವು ಸಫಲವಾಗುವುದೋ ಇಲ್ಲವೋ ಎಂಬುದನ್ನು ದೇವರ ಸನ್ನಿಧಿಯಲ್ಲಿ ವಿಚಾರಿಸು>> ಎಂದು ಬೇಡಿಕೊಳ್ಳಲು

6ಅವನು, <<ಸಮಾಧಾನದಿಂದ ಹೋಗಿರಿ; ಯೆಹೋವನು ನಿಮ್ಮ ಪ್ರಯಾಣವನ್ನು ಕಟಾಕ್ಷಿಸುವನು>> ಅಂದನು.

7ಆ ಐದು ಮಂದಿ ಹೊರಟು ಲಯಿಷಿಗೆ ಬಂದು, ಅಲ್ಲಿನ ಜನರು ನಿರ್ಭೀತರಾಗಿ ಚೀದೋನ್ಯರಂತೆ ಸುಖ ಸಮಾಧಾನಗಳಿಂದ ಜೀವಿಸುತ್ತಾರೆ; ಅವರನ್ನು ತಗ್ಗಿಸುವ ಅಧಿಕಾರಿಗಳು ದೇಶದಲ್ಲಿಲ್ಲ; ಅವರು ಚೀದೋನ್ಯರಿಗೆ ದೂರವಾಗಿದ್ದು ಯಾರೊಡನೆಯೂ ಒಡನಾಟವಿಲ್ಲದವರು ಎಂಬುದನ್ನು ತಿಳಿದುಕೊಂಡು

8ಹಿಂದಿರುಗಿ ಚೊರ್ಗಾ, ಎಷ್ಟಾವೋಲ್ ಎಂಬ ಊರುಗಳಲ್ಲಿರುವ ತಮ್ಮ ಬಂಧುಗಳ ಬಳಿಗೆ ಬಂದರು. ಅವರ ಬಂಧುಗಳು, <<ನೀವು ಯಾವ ವರ್ತಮಾನ ತಂದಿದ್ದೀರಿ>> ಎಂದು ಅವರನ್ನು ಕೇಳಲು

9ಅವರು, <<ಏಳಿರಿ, ಅವರಿಗೆ ವಿರೋಧವಾಗಿ ಯುದ್ಧಕ್ಕೆ ಹೋಗೋಣ. ನಾವು ಆ ದೇಶವನ್ನು ನೋಡಿದೆವು; ಅದು ಬಹು ಉತ್ತಮದೇಶ. ನೀವು ಸುಮ್ಮನೆ ಕುಳಿತುಕೊಳ್ಳುವುದೇಕೆ? ತಡಮಾಡದೆ ಹೊರಡಿರಿ; ಆ ದೇಶವನ್ನು ಸ್ವಾದಿನಪಡಿಸಿಕೊಳ್ಳೋಣ.

10ನೀವು ಅಲ್ಲಿಗೆ ಹೋಗುವುದಾದರೆ ಅಲ್ಲಿನ ಜನರು ನಿರ್ಭಯದಿಂದ ಜೀವಿಸುವವರೆಂದೂ, ಅವರ ದೇಶವು ಬಹು ವಿಸ್ತಾರವಾಗಿದೆ ಎಂದೂ ತಿಳಿದುಕೊಳ್ಳುವಿರಿ. ದೇವರು ಅದನ್ನು ನಿಮ್ಮ ಕೈಗೆ ಒಪ್ಪಿಸಿದ್ದಾನೆ; ಅದರಲ್ಲಿ ದೊರಕದಿರುವ ಪದಾರ್ಥಗಳು ಲೋಕದಲ್ಲಿ ಸಿಕ್ಕುವುದಿಲ್ಲ>> ಅಂದರು.

11ಆಗ ಚೊರ್ಗಾ ಎಷ್ಟಾವೋಲ್ ಊರುಗಳಿಂದ ಆರುನೂರು ಮಂದಿ ದಾನ್‌ಕುಲದವರು ಯುದ್ಧ ಸನ್ನದ್ಧರಾಗಿ ಹೊರಟು,

12ಗಟ್ಟಾಹತ್ತಿ ಯೆಹೂದದ ಕಿರ್ಯತ್ಯಾರೀಮಿನ ಬಳಿಯಲ್ಲಿ ಇಳಿದುಕೊಂಡರು. ಆದುದರಿಂದ ಆ ಸ್ಥಳಕ್ಕೆ ಇಂದಿನವರೆಗೂ ದಾನ್ಯರ ಪಾಳೆಯವೆಂಬ ಹೆಸರಿದೆ; ಅದು ಕಿರ್ಯತ್ಯಾರೀಮಿನ ಪಶ್ಚಿಮದಲ್ಲಿರುತ್ತದೆ.

13ಅವರು ಅಲ್ಲಿಂದ ಮುಂದೆ ಪ್ರಯಾಣಮಾಡಿ ಎಫ್ರಾಯಿಮ್ ಪರ್ವತಪ್ರದೇಶದಲ್ಲಿದ್ದ ಮೀಕನ ಮನೆಯ ಹತ್ತಿರ ಬಂದರು.

14ಆಗ ಲಯಿಷ್ ದೇಶವನ್ನು ಸಂಚರಿಸಿ ನೋಡುವುದಕ್ಕೆ ಹೋಗಿದ್ದ ಐದು ಮಂದಿ ತಮ್ಮ ಬಂಧುಗಳಿಗೆ, <<ಈ ಗ್ರಾಮದಲ್ಲಿ ಒಂದು ಏಫೋದೂ, ದೇವತಾಪ್ರತಿಮೆಗಳೂ, ಕೆತ್ತನೆಯ ಮತ್ತು ಎರಕದ ವಿಗ್ರಹಗಳೂ ಇರುತ್ತವೆಂಬುದು ನಿಮಗೆ ಗೊತ್ತುಂಟೋ?

15ಈ ವಿಷಯದಲ್ಲಿ ಏನು ಮಾಡಬೇಕೆಂಬುದನ್ನು ಆಲೋಚಿಸಿರಿ>> ಎಂದು ಹೇಳಿ ತಾವು ಅಲ್ಲಿಂದ ಮೀಕನ ಮನೆಯಲ್ಲಿದ್ದ ಆ ಯೌವನಸ್ಥನಾದ ಲೇವಿಯನ ಬಳಿಗೆ ಬಂದು ಅವನ ಕ್ಷೇಮಸಮಾಚಾರವನ್ನು ವಿಚಾರಿಸ ತೊಡಗಿದರು.

16ಇಷ್ಟರಲ್ಲಿ ಯುದ್ಧಸನ್ನದ್ಧರಾದ ಆರುನೂರು ಮಂದಿ ದಾನ್ಯರು ಬಂದು ಬಾಗಿಲಲ್ಲಿ ನಿಂತರು.

17ಯಾಜಕನೂ ಬಂದು ಇವರೊಡನೆ ಬಾಗಿಲಲ್ಲಿ ನಿಂತಿದ್ದಾಗ, ಆ ಐದು ಮಂದಿ ಮನೆಯನ್ನು ಹೊಕ್ಕು, ಕೆತ್ತನೆಯ ಮತ್ತು ಎರಕದ ವಿಗ್ರಹಗಳನ್ನೂ, ಏಫೋದನ್ನೂ, ದೇವತಾಪ್ರತಿಮೆಗಳನ್ನೂ ತೆಗೆದುಕೊಂಡರು.

18ಅವರು ಮೀಕನ ಮನೆಯನ್ನು ಹೊಕ್ಕು ಅವುಗಳನ್ನು ತೆಗೆದುಕೊಂಡು ಬರುವಾಗ ಯಾಜಕನು ಅದನ್ನು ಕಂಡು ಅವರಿಗೆ, <<ನೀವು ಮಾಡಿದ್ದೇನು>> ಅಂದನು.

19ಅವರು ಅವನಿಗೆ, <<ಸುಮ್ಮನಿರು; ಬಾಯಿ ಮುಚ್ಚಿಕೊಂಡು; ನಮ್ಮ ಜೊತೆಯಲ್ಲಿ ಬಂದು ನಮಗೆ ತಂದೆಯೂ, ಯಾಜಕನೂ ಆಗಿರು. ಒಂದು ಮನೆಗೆ ಯಾಜಕನಾಗಿರುವುದು ಉತ್ತಮವೋ ಅಥವಾ ಇಸ್ರಾಯೇಲ್ಯರ ಒಂದು ಕುಲಕ್ಕೂ, ಗೋತ್ರಕ್ಕೂ ಯಾಜಕನಾಗಿರುವುದು ಉತ್ತಮವೋ?>> ಎಂದು ಕೇಳಿದರು.

20ಯಾಜಕನು ಈ ಮಾತನ್ನು ಕೇಳಿ ಸಂತೋಷಪಟ್ಟು ಏಫೋದನ್ನೂ ದೇವತಾಪ್ರತಿಮೆಗಳನ್ನೂ, ಕೆತ್ತನೆಯ ವಿಗ್ರಹವನ್ನೂ, ತೆಗೆದುಕೊಂಡು ಅವರ ಬಳಿಗೆ ಬಂದನು.

21ತರುವಾಯ ಅವರು ತಮ್ಮ ಹೆಂಡತಿ ಮಕ್ಕಳನ್ನೂ, ಕುರಿದನ ಮೊದಲಾದ ಸೊತ್ತನ್ನೂ ಮುಂದಾಗಿ ಕಳುಹಿಸಿ ತಾವು ಹಿಂದಿನಿಂದ ಹೊರಟರು.

22ಅವರು ಮೀಕನ ಮನೆಯಿಂದ ದೂರವಾದ ಮೇಲೆ ಮೀಕನೂ ಅವನ ನೆರೆಹೊರೆಯವರೆಲ್ಲರೂ ದಾನ್ಯರನ್ನು ಹಿಂದಟ್ಟಿ

23ಅವರ ಸಮೀಪಕ್ಕೆ ಹೋಗಿ ಅವರನ್ನು ಕೂಗಿದರು. ದಾನ್ಯರು ಹಿಂದಿರುಗಿ ನೋಡಿ ಮೀಕನಿಗೆ, <<ನಿನಗೇನಾಯಿತು? ಗುಂಪನ್ನು ಕೂಡಿಸಿಕೊಂಡು ಬಂದದ್ದೇಕೆ>> ಎಂದು ಕೇಳಲು

24ಅವನು, <<ನೀವು ಯಾಜಕನನ್ನೂ ನಾವು ಮಾಡಿಸಿಕೊಂಡ ದೇವರುಗಳನ್ನೂ ಅಪಹರಿಸಿಕೊಂಡಿದ್ದೀರಿ, ನನಗೆ ಇನ್ನೇನಿದೆ; ಹೀಗಿರಲಾಗಿ ನಿನಗೇನಾಯಿತೆಂದು ನೀವು ನನ್ನನ್ನು ಕೇಳುವುದು ಹೇಗೆ?>> ಅಂದನು.

25ದಾನ್ಯರು ಅವನಿಗೆ, <<ನಮ್ಮಲ್ಲಿ ಕೆಲವರು ತುಂಬಾ ಕೊಪಿಸಿಕೊಳ್ಳುವವರಿದ್ದಾರೆ; ಅವರು ನಿಮ್ಮ ಮೇಲೆ ಬಿದ್ದರೆ ನೀನೂ, ನಿನ್ನ ಮನೆಯವರೂ ಪ್ರಾಣವನ್ನು ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಬಾಯಿಮುಚ್ಚಿಕೊಂಡು ಹೋಗು>> ಎಂದು ಹೇಳಿ ಮುಂದೆ ನಡೆದರು.

26ಅವರು ತನಗಿಂತ ಬಲಿಷ್ಠರೆಂದು ತಿಳಿದುಕೊಂಡು ಮೀಕನು ಹಿಂದಿರುಗಿ ಮನೆಗೆ ಹೋದನು.

27ದಾನ್ಯರು ಮೀಕನು ಮಾಡಿಸಿದ್ದ ವಿಗ್ರಹಗಳನ್ನೂ ಅವನ ಯಾಜಕನನ್ನೂ ಅಪಹರಿಸಿಕೊಂಡು ಲಯಿಷಿಗೆ ಹೋಗಿ ಸುಖದಿಂದಲೂ, ನಿರ್ಭಯದಿಂದಲೂ ವಾಸವಾಗಿದ್ದ ಅಲ್ಲಿನ ಜನರ ಮೇಲೆ ಬಿದ್ದು, ಅವರನ್ನು ಕತ್ತಿಯಿಂದ ಸಂಹರಿಸಿ, ಅವರ ಪಟ್ಟಣವನ್ನು ಸುಟ್ಟುಬಿಟ್ಟರು.

28ಆ ಪಟ್ಟಣವು ಚೀದೋನಿಗೆ ದೂರವಾಗಿದ್ದುದರಿಂದಲೂ, ಸಮೀಪದಲ್ಲಿ ಪರಿಚಯಸ್ಥರು ಯಾರು ಇಲ್ಲದೆ ಇದ್ದುದರಿಂದಲೂ, ಅವರಿಗೆ ಸಹಾಯದೊರಕಲಿಲ್ಲ. ಬೇತ್‌ರೆಹೋಬಿನ ತಗ್ಗಿನಲ್ಲಿದ್ದ ಈ ಪಟ್ಟಣವನ್ನು ದಾನ್ಯರು ಪುನಃ ಕಟ್ಟಿಸಿ ಅದರಲ್ಲಿ ವಾಸಿಸಿದರು.

29ಮೊದಲು ಲಯಿಷ್ ಎಂಬ ಹೆಸರಿದ್ದ ಆ ಪಟ್ಟಣಕ್ಕೆ ಈಗ ದಾನ್ ಎಂದು ಹೆಸರಿಟ್ಟರು. ದಾನ್ ಎಂಬುದು ಇವರ ಮೂಲಪುರುಷನೂ ಇಸ್ರಾಯೇಲನ ಮಗನೂ ಆದ ದಾನನ ಹೆಸರು.

30ಇದಲ್ಲದೆ ದಾನ್ಯರು ಆ ವಿಗ್ರಹವನ್ನು ತಮ್ಮ ಪಟ್ಟಣದಲ್ಲಿಟ್ಟರು. ಇಸ್ರಾಯೇಲರು ಸೆರೆಗೆ ಹೋಗುವವರೆಗೆ ಮೋಶೆಯ ಮೊಮ್ಮಗನೂ, ಗೇರ್ಷೋಮನ ಮಗನೂ ಆದ ಯೋನಾತಾನನೂ ಅವನ ವಂಶದವರೂ ದಾನ್ಯರಿಗೆ ಯಾಜಕರಾಗಿದ್ದರು.

31ಶೀಲೋವಿನಲ್ಲಿ ದೇವಾಲಯವಿದ್ದ ಕಾಲದಲ್ಲೆಲ್ಲಾ ದಾನ್ಯರಲ್ಲಿ ಮೀಕನು ಮಾಡಿಸಿದ ವಿಗ್ರಹವಿತ್ತು.


  Share Facebook  |  Share Twitter

 <<  Judges 18 >> 


Bible2india.com
© 2010-2024
Help
Dual Panel

Laporan Masalah/Saran