Bible 2 India Mobile
[VER] : [KANNADA]     [PL]  [PB] 
 <<  Haggai 2 >> 

1ಏಳನೆಯ ತಿಂಗಳಿನ ಇಪ್ಪತ್ತೊಂದನೆಯ ದಿನದಲ್ಲಿ ಯೆಹೋವನು ಪ್ರವಾದಿಯಾದ ಹಗ್ಗಾಯನ ಮೂಲಕ ಈ ವಾಕ್ಯವನ್ನು ಕೊಟ್ಟು,

2<<ಶೆಯಲ್ತೀಯೇಲನಿಗೆ ಹುಟ್ಟಿದ ಯೆಹೂದ ದೇಶಾಧಿಪತಿಯಾದ ಜೆರುಬ್ಬಾಬೆಲ್, ಯೆಹೋಚಾದಾಕನಿಗೆ ಹುಟ್ಟಿದ ಮಹಾಯಾಜಕನಾದ ಯೆಹೋಶುವ, ನೆರೆದಿದ್ದ ಜನರನ್ನು ಕೂಡಿಸಿ,

3<ಈ ಆಲಯದ ಪೂರ್ವ ವೈಭವವನ್ನು ನೋಡಿದವರು, ನಿಮ್ಮಲ್ಲಿ ಎಷ್ಟು ಮಂದಿ ಉಳಿದಿದ್ದೀರಿ? ಇದರ ಈಗಿನ ಸ್ಥಿತಿಯು ನಿಮಗೆ ಹೇಗೆ ತೋರುತ್ತದೆ? ನಿಮ್ಮ ದೃಷ್ಟಿಗೆ ಏನೂ ಇಲ್ಲವಾಗಿ ತೋರುತ್ತಿದೆಯೇಲ್ಲವೇ?>

4ಯೆಹೋವನು ಇಂತೆನ್ನುತ್ತಾನೆ, <ಜೆರುಬ್ಬಾಬೆಲನೇ ಈಗ ಧೈರ್ಯವಾಗಿರು; ಯೆಹೋಚಾದಾಕನಿಗೆ ಹುಟ್ಟಿದ ಮಹಾಯಾಜಕನಾದ ಯೆಹೋಶುವನೇ, ಧೈರ್ಯವಾಗಿರು; ದೇಶೀಯರೇ, ನೀವೆಲ್ಲರೂ ಧೈರ್ಯಗೊಂಡು ಕೆಲಸನಡಿಸಿರಿ> ಇದು ಯೆಹೋವನ ನುಡಿ; <ನಾನು ನಿಮ್ಮೊಂದಿಗೆ ಇದ್ದೇನೆ> ಎಂದು ಸೇನಾಧೀಶ್ವರ ಯೆಹೋವನು ನುಡಿಯುತ್ತಾನೆ.

5<ನೀವು ಐಗುಪ್ತದಿಂದ ಪಾರಾಗಿ ಬಂದಾಗ, ನಾನು ನಿಮಗೆ ವಾಗ್ದಾನವಾಗಿ ಕೊಟ್ಟ ಮಾತನ್ನು ನೆರವೇರಿಸುದೆನು; ನನ್ನ ಆತ್ಮನು ನಿಮ್ಮ ಮಧ್ಯದಲ್ಲಿ ನೆಲೆಗೊಂಡಿರುವನು; ಹೆದರಬೇಡಿರಿ.>

6ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, <ಸ್ವಲ್ಪ ಕಾಲದ ಮೇಲೆ, ನಾನು ಇನ್ನೊಂದೇ ಸಾರಿ ಆಕಾಶವನ್ನೂ, ಭೂಮಿಯನ್ನೂ, ಸಮುದ್ರವನ್ನೂ, ಒಣನೆಲವನ್ನೂ ಅದುರಿಸಿ ಸಕಲಜನಾಂಗಗಳನ್ನು ನಡುಗಿಸುವೆನು;

7ಆಗ ಸಮಸ್ತ ಜನಾಂಗಗಳ ಇಷ್ಟವಸ್ತುಗಳು ಬಂದು ಒದಗಲು, ಈ ಆಲಯವನ್ನು ವೈಭವದಿಂದ ತುಂಬಿಸುವೆನು> ಇದು ಸೇನಾಧೀಶ್ವರನಾದ ಯೆಹೋವನ ನುಡಿ.

8<ಬೆಳ್ಳಿಯೆಲ್ಲಾ ನನ್ನದು, ಬಂಗಾರವೆಲ್ಲಾ ನನ್ನದು> ಇದು ಸೇನಾಧೀಶ್ವರನಾದ ಯೆಹೋವನ ನುಡಿ.

9<ಈ ಆಲಯದ ಮುಂದಿನ ವೈಭವವು ಹಿಂದಿನ ವೈಭವವಕ್ಕಿಂತ ವಿಶೇಷವಾಗಿರುವುದು> ಇದು ಸೇನಾಧೀಶ್ವರನಾದ ಯೆಹೋವನ ನುಡಿ. <ಈ ಸ್ಥಳದಲ್ಲಿ ಸಮಾಧಾನವನ್ನು ಅನುಗ್ರಹಿಸುವೆನು> >> ಇದು ಸೇನಾಧೀಶ್ವರನಾದ ಯೆಹೋವನ ನುಡಿ.

10ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರುಷದ ಒಂಭತ್ತನೆಯ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಯೆಹೋವನು ಪ್ರವಾದಿಯಾದ ಹಗ್ಗಾಯನ ಮೂಲಕ ಈ ವಾಕ್ಯವನ್ನು ದಯಪಾಲಿಸಿದನು.

11ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, <<ನೀನು ಯಾಜಕರ ಹತ್ತಿರ ಹೋಗಿ,

12ಒಬ್ಬನು ತನ್ನ ವಸ್ತ್ರದ ಸೆರಗಿನಲ್ಲಿ ಮೀಸಲಿನ ಮಾಂಸವನ್ನು ಇಟ್ಟುಕೊಂಡು ಬರುತ್ತಿರುವಾಗ ಆ ಸೆರಗು ರೊಟ್ಟಿಯನ್ನಾಗಲಿ ಇಲ್ಲವೆ ಗುಗ್ಗರಿಯನ್ನಾಗಲಿ ಅಥವಾ ದ್ರಾಕ್ಷಾರಸವನ್ನಾಗಲಿ ಇಲ್ಲವೆ ಎಣ್ಣೆಯನ್ನು ಅಥವಾ ಯಾವ ಆಹಾರ ಪದಾರ್ಥವನ್ನಾಗಲಿ ಸೋಕಿದರೆ ಅವು ಪರಿಶುದ್ಧವಾಗುವುದೋ? ಎಂದು ಧರ್ಮವಿಧಿಯನ್ನು ವಿಚಾರಿಸು>> ಪ್ರವಾದಿಯು ಹಾಗೆ ವಿಚಾರಿಸಲು ಯಾಜಕರು <<ಇಲ್ಲ>> ಎಂದು ಉತ್ತರಕೊಟ್ಟರು.

13ಆ ಮೇಲೆ ಹಗ್ಗಾಯನು, <<ಹೆಣವನ್ನು ಮುಟ್ಟಿ ಅಶುದ್ಧನಾದವನು ಇವುಗಳಲ್ಲಿ ಯಾವುದನ್ನಾದರು ಸೋಕಿದರೆ ಅದು ಅಶುದ್ಧವಾಗುವುದೋ?>> ಎಂದು ಕೇಳಿದ್ದಕ್ಕೆ ಯಾಜಕರು, <<ಅಶುದ್ಧವೇ ಆಗುವುದು>> ಎಂದು ಉತ್ತರಕೊಟ್ಟರು.

14ಆಗ ಹಗ್ಗಾಯನು ಆ ಪ್ರಸ್ತಾಪವೆತ್ತಿ ಜನರಿಗೆ ಹೀಗೆಂದನು, <<ಯೆಹೋವನು ಇಂತೆನ್ನುತ್ತಾನೆ, ಅದರಂತೆ ಈ ಪ್ರಜೆಗಳು, ಅದರಂತೆ ಈ ಜನಾಂಗವು, ಅದರಂತೆಯೇ, ಇವರು ಕೈಹಾಕಿದ ಎಲ್ಲಾ ಕೆಲಸವು, ಅವರು ತರುವ ಕಾಣಿಕೆ, ನೈವೇದ್ಯ ಎಲ್ಲವೂ ನನಗೆ ಅಶುದ್ದವಾಗಿ ಕಾಣುತ್ತಿದ್ದೆ.

15<<ಯೆಹೋವನ ಆಲಯದ ನಿವೇಶನದಲ್ಲಿ ಕಲ್ಲಿನ ಮೇಲೆ ಕಲ್ಲಿಡುವ ಈ ಮೊದಲ ದಿನದ ಹಿಂದಿನ ಕಾಲವನ್ನು ನೆನಪಿಗೆ ತಂದುಕೊಳ್ಳಿರಿ;

16ಆ ಕಾಲದಲ್ಲೆಲ್ಲಾ ಒಬ್ಬನು ಇಪ್ಪತ್ತು ಸೇರಿನ ರಾಶಿಗೆ ಬಂದಾಗ ಹತ್ತು ಸೇರು ಧಾನ್ಯ ಮಾತ್ರ ಸಿಕ್ಕುತ್ತಿತ್ತಲ್ಲವೇ; ಐವತ್ತು ಸೇರು ದ್ರಾಕ್ಷಾರಸವನ್ನು ಮೊಗೆಯಬೇಕೆಂದು ತೊಟ್ಟಿಗೆ ಬಂದಾಗ ಇಪ್ಪತ್ತು ಮಾತ್ರ ದೊರೆಯುತ್ತಿತ್ತು.

17ನಾನು ನಿಮ್ಮ ದುಡಿತದ ಫಲವನ್ನೆಲ್ಲಾ ಆನೆಕಲ್ಲು ಮಳೆಯಿಂದಲೂ, ಬಿಸಿಗಾಳಿಗೂ ಹಾಳುಮಾಡಿ ನಿಮ್ಮನ್ನು ಬಾಧಿಸಿದರೂ, ನೀವು ನನ್ನ ಕಡೆಗೆ ತಿರುಗಿಕೊಳ್ಳಲಿಲ್ಲ>> ಇದು ಯೆಹೋವನ ನುಡಿ.

18<<ಜ್ಞಾಪಕಮಾಡಿಕೊಳ್ಳಿರಿ, ಯೆಹೋವನ ಆಲಯಕ್ಕೆ ಅಸ್ತಿವಾರ ಹಾಕಿದ ಈ ದಿನದ ಹಿಂದಿನ ಕಾಲವನ್ನು, ಅಂದರೆ ಒಂಭತ್ತನೆಯ ತಿಂಗಳಿನ ಇಪ್ಪತ್ತನಾಲ್ಕನೆಯ ಈ ದಿನದ ಹಿಂದಿನ ಕಾಲವನ್ನು ನೆನಪಿಗೆ ತಂದುಕೊಳ್ಳಿರಿ.

19ಕಣಜದಲ್ಲಿ ಕಾಳು ಇನ್ನು ಇದೆಯೋ? ದ್ರಾಕ್ಷೆ, ಅಂಜೂರ, ದಾಳಿಂಬೆ, ಒಲೀವ ಈ ಗಿಡಗಳು ಫಲಿಸಲಿಲ್ಲವಲ್ಲಾ . ಇದೇ ದಿನ ಮೊದಲುಗೊಂಡು ನಿಮ್ಮನ್ನು ಆಶೀರ್ವದಿಸುವೆನು.>>

20ಒಂಭತ್ತನೆಯ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಯೆಹೋವನು ಹಗ್ಗಾಯನಿಗೆ ಈ ಎರಡನೆಯ ವಾಕ್ಯವನ್ನು ದಯಪಾಲಿಸಿ,

21<<ಯೆಹೂದ ದೇಶಾಧಿಪತಿಯಾದ ಜೆರುಬ್ಬಾಬೆಲನಿಗೆ ಹೀಗೆ ನುಡಿ, ನಾನು ಭೂಮ್ಯಾಕಾಶಗಳನ್ನು ಅದುರಿಸಿ,

22ರಾಜ್ಯಗಳ ಸಿಂಹಾಸನವನ್ನು ಕೆಡವಿ, ಜನಾಂಗಗಳ ಸಂಸ್ಥಾನಬಲವನ್ನು ಧ್ವಂಸಮಾಡಿ ರಥಗಳನ್ನೂ ಮತ್ತು ಅದರ ಸವಾರರನ್ನು ದೊಬ್ಬಿಬಿಡುವೆನು; ಕುದುರೆಗಳೂ ಹಾಗೂ ರಾಹುತರೂ ಬಿದ್ದುಹೋಗುವರು, ಪ್ರತಿಯೊಬ್ಬನೂ ತನ್ನ ಕಡೆಯವನ ಕತ್ತಿಯಿಂದ ಹತನಾಗುವನು.>>

23ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, <<ಶೆಯಲ್ತೀಯೇಲನ ಮಗನೂ, ನನ್ನ ಸೇವಕನಾದ ಜೆರುಬ್ಬಾಬೆಲನೇ, ಆ ದಿನದಲ್ಲಿ ನಾನು ನಿನ್ನನ್ನು ತೆಗೆದುಕೊಂಡು ಮುದ್ರೆಯುಂಗುರವನ್ನಾಗಿ ಮಾಡಿಕೊಳ್ಳುವೆನು, ಇದಕ್ಕೇ ನಿನ್ನನ್ನು ಆರಿಸಿಕೊಂಡಿದ್ದೇನೆ>> ಇದು ಸೇನಾಧೀಶ್ವರ ಯೆಹೋವನ ನುಡಿ.


  Share Facebook  |  Share Twitter

 <<  Haggai 2 >> 


Bible2india.com
© 2010-2024
Help
Dual Panel

Laporan Masalah/Saran