Bible 2 India Mobile
[VER] : [KANNADA]     [PL]  [PB] 
 <<  Philippians 1 >> 

1ಕ್ರಿಸ್ತ ಯೇಸುವಿನ ದಾಸರಾದ ಪೌಲ ಮತ್ತು ತಿಮೊಥೆಯರು, ಫಿಲಿಪ್ಪಿಯದಲ್ಲಿ ಕ್ರಿಸ್ತ ಯೇಸುವಿನ ಮೂಲಕ ದೇವಜನರಾಗಿರುವವರೆಲ್ಲರಿಗೂ ಮತ್ತು ಅವರೊಂದಿಗಿರುವ ಸಭಾಧ್ಯಕ್ಷರಿಗೂ ಹಾಗೂ ಸಭಾಸೇವಕರಿಗೂ ಬರೆಯುವುದೇನೆಂದರೆ,

2ನಮ್ಮ ತಂದೆಯಾದ ದೇವರಿಂದಲೂ, ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ, ಶಾಂತಿಯೂ ಲಭಿಸಲಿ.

3-4 ನಾನು ನಿಮ್ಮನ್ನು ನೆನಪಿಸಿಕೊಳ್ಳುವಾಗೆಲ್ಲಾ ನನ್ನ ದೇವರಿಗೆ ಸ್ತೋತ್ರಸಲ್ಲಿಸುತ್ತೇನೆ, ನಾನು ನಿಮಗಾಗಿ ದೇವರನ್ನು ಪ್ರಾರ್ಥಿಸುವ ಎಲ್ಲಾ ಸಮಯಗಳಲ್ಲಿಯೂ ಸಂತೋಷದಿಂದಲೇ ಪ್ರಾರ್ಥಿಸುವವನಾಗಿದ್ದೇನೆ.

5ನೀವು ಮೊದಲಿನಿಂದ ಇಂದಿನವರೆಗೂ ಸುವಾರ್ತಾಪ್ರಚಾರದಲ್ಲಿ ಸಹಕಾರಿಗಳಾಗಿದ್ದೀರೆಂದು ನನ್ನ ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇನೆ.

6ಈ ಒಳ್ಳೆಯ ಕೆಲಸವನ್ನು ನಿಮ್ಮಲ್ಲಿ ಪ್ರಾರಂಭಿಸಿದಾತನು ಅದನ್ನು ನಡಿಸಿಕೊಂಡು ಯೇಸು ಕ್ರಿಸ್ತನು ಬರುವ ದಿನದೊಳಗಾಗಿ ಪೂರ್ಣತೆಗೆ ತರುವನೆಂದು ನನಗೆ ಭರವಸವುಂಟು.

7ನಿಮ್ಮೆಲ್ಲರನ್ನು ಕುರಿತು ನನಗೆ ಹೀಗನ್ನಿಸುವುದು ಸೂಕ್ತವೇ ಸರಿ. ನಾನು ಬಂಧನದಲ್ಲಿರುವಾಗಲೂ, ಸುವಾರ್ತೆಯ ಕುರಿತಾದ ವಾದ-ಪ್ರತಿವಾದಗಳಲ್ಲಿಯು ನೀವೆಲ್ಲರೂ ನನ್ನೊಂದಿಗೆ ದೇವರ ಕೃಪೆಯಲ್ಲಿ ಪಾಲುಗಾರರಾಗಿದ್ದೀರೆಂದು ನಿಮ್ಮನ್ನು ನನ್ನ ಹೃದಯದಲ್ಲಿರಿಸಿಕೊಂಡಿದ್ದೇನೆ.

8ಕ್ರಿಸ್ತ ಯೇಸುವಿಗಿರುವಂಥ ಕನಿಕರದಿಂದ ನಿಮ್ಮೆಲ್ಲರಿಗೋಸ್ಕರ ಎಷ್ಟೋ ಹಂಬಲಿಸುತ್ತೇನೆ. ಇದಕ್ಕೆ ದೇವರೇ ಸಾಕ್ಷಿ.

9ಮತ್ತು ನಿಮ್ಮ ಪ್ರೀತಿಯು ಇನ್ನೂ ಅಧಿಕವಾಗಿ ಹೆಚ್ಚುತ್ತಾ ಪೂರ್ಣ ಜ್ಞಾನ ವಿವೇಕಗಳಿಂದ ಕೂಡಿರಬೇಕೆಂದು ನಾನು ನಿಮಗೋಸ್ಕರ ಪ್ರಾರ್ಥಿಸುತ್ತೇನೆ.

10ಹೀಗೆ ಉತ್ತಮ ಕಾರ್ಯಗಳು ಯಾವವೆಂಬುದನ್ನು ನೀವು ವಿವೇಚಿಸುವವರಾಗಬೇಕೆಂತಲೂ ಹಾಗೂ ಕ್ರಿಸ್ತನು ಬರುವ ದಿನದಲ್ಲಿ ನೀವು ಸರಳರಾಗಿಯೂ, ನಿರ್ಮಲರಾಗಿಯೂ,

11ಯೇಸು ಕ್ರಿಸ್ತನ ಮೂಲಕವಾಗಿರುವ ನೀತಿಯೆಂಬ ಫಲದಿಂದ ತುಂಬಿದವರಾಗಿಯೂ ಇರಬೇಕೆಂದು ದೇವರಿಗೆ ಘನತೆಯನ್ನೂ ಸ್ತೋತ್ರವನ್ನೂ ಸಲ್ಲಿಸಬೇಕೆಂತಲೂ ಬೇಡಿಕೊಳ್ಳುತ್ತೇನೆ.

12ಸಹೋದರರೇ, ನನಗೆ ಸಂಭವಿಸಿರುವಂಥವುಗಳೆಲ್ಲವೂ ಸುವಾರ್ತೆಯ ಪ್ರಸಾರಣೆಗೆ ಸಹಾಯವಾಯಿತೆಂದು ನೀವು ತಿಳಿಯಬೇಕೆಂಬುದಾಗಿ ಅಪೇಕ್ಷಿಸುತ್ತೇನೆ.

13ಹೇಗೆಂದರೆ ನನ್ನ ಸೆರೆವಾಸವು ಕ್ರಿಸ್ತನ ನಿಮಿತ್ತವೇ ಎಂದು ಅರಮನೆಯ ಕಾವಲುಗಾರರೆಲ್ಲರಿಗೂ ಹಾಗೂ ಉಳಿದವರೆಲ್ಲರಿಗೂ ತಿಳಿಯಲ್ಪಟ್ಟಿತು.

14ಇದಲ್ಲದೆ ಸಹೋದರರಲ್ಲಿ ಬಹಳ ಜನರು ನನ್ನ ಬಂಧನದಿಂದಲೇ ಕರ್ತನಲ್ಲಿ ಭರವಸವುಳ್ಳವರಾಗಿ ದೇವರ ವಾಕ್ಯವನ್ನು ನಿರ್ಭಯದಿಂದ ಹೇಳುವುದಕ್ಕೆ ಇನ್ನೂ ಹೆಚ್ಚು ಧೈರ್ಯಹೊಂದಿದ್ದಾರೆ.

15ಕೆಲವರು ಹೊಟ್ಟೆಕಿಚ್ಚುಪಟ್ಟು ಭೇದ ಹುಟ್ಟಿಸಬೇಕೆಂಬ ಮನಸ್ಸಿನಿಂದ ಮತ್ತು ಬೇರೆ ಕೆಲವರು ಒಳ್ಳೆಯ ಭಾವದಿಂದ ಕ್ರಿಸ್ತನನ್ನು ಪ್ರಚುರಪಡಿಸುತ್ತಾರೆ.

16ಇವರಂತೂ ನಾನು ಸುವಾರ್ತೆಯ ವಿಷಯದಲ್ಲಿ ಉತ್ತರ ಹೇಳುವುದಕ್ಕಾಗಿ ಇಲ್ಲಿ ಹಾಕಲ್ಪಟ್ಟಿದ್ದೆನೆಂದು ತಿಳಿದು ಪ್ರೀತಿಯಿಂದ ಪ್ರಸಿದ್ಧಿಪಡಿಸುತ್ತಿದ್ದಾರೆ.

17ಆ ಬೇರೆ ತರದವರಾದರೋ ನಾನು ಬೇಡಿಯಿಂದ ಬಂಧಿತನಾಗಿರುವಾಗಲೂ ನನಗೆ ಸಂಕಟವನ್ನು ಹೆಚ್ಚಿಸಬೇಕೆಂದು ಯೋಚಿಸಿ, ಪ್ರಾಮಾಣಿಕವಲ್ಲದ ಸ್ವಾರ್ಥ ಉದ್ದೇಶದಿಂದ ಕ್ರಿಸ್ತನನ್ನು ಪ್ರಸಿದ್ಧಿಪಡಿಸುತ್ತಾರೆ.

18ಹೇಗಾದರೇನು? ಯಾವ ರೀತಿಯಿಂದಾದರೂ ಸರಿಯೇ ಕಪಟದಿಂದಾಗಲಿ ಅಥವಾ ಸತ್ಯದಿಂದಾಗಲಿ ಕ್ರಿಸ್ತನನ್ನು ಪ್ರಸಿದ್ಧಿಪಡಿಸುವುದುಂಟು, ಇದಕ್ಕೆ ನಾನು ಸಂತೋಷಿಸುತ್ತೇನೆ, ಮುಂದೆಯೂ ಸಂತೋಷಿಸುವೆನು.

19ಯಾಕೆಂದರೆ ನಿಮ್ಮ ವಿಜ್ಞಾಪನೆಯಿಂದಲೂ ಮತ್ತು ಯೇಸುಕ್ರಿಸ್ತನ ಆತ್ಮನ ಸಹಾಯದಿಂದಲೂ ಇದು ನನ್ನ ಬಿಡುಗಡೆಗೆ ಅನುಕೂಲವಾಗುವುದೆಂದು ಬಲ್ಲೆನು.

20ಹೇಗೆಂದರೆ ನಾನು ಯಾವ ವಿಷಯದಲ್ಲಾದರೂ ನಾಚಿಕೆಪಡದೆ ಎಂದಿನಂತೆ ಈಗಲೂ ಸಹ ತುಂಬಾ ಧೈರ್ಯದಿಂದಿರುವುದರಿಂದ ಬದುಕಿದರೂ ಸರಿಯೇ ಅಥವಾ ಸತ್ತರೂ ಸರಿಯೇ ನನ್ನ ಶರೀರದ ಮೂಲಕ ಕ್ರಿಸ್ತನಿಗೆ ಮಹಿಮೆಯುಂಟಾಗಬೇಕೆಂದು ನನ್ನ ಬಹು ಅಭಿಲಾಷೆಯಾಗಿದೆ, ಹಾಗೆಯೇ ಆಗುವುದೆಂಬ ಭರವಸೆವುಂಟು.

21ನನಗಂತೂ ಬದುಕುವುದೆಂದರೆ ಕ್ರಿಸ್ತನೇ, ಸಾಯುವುದು ಲಾಭವೇ.

22ಶರೀರದಲ್ಲಿಯೇ ಬದುಕಬೇಕಾದ್ದಲ್ಲಿ ನನ್ನ ಕೆಲಸಮಾಡಿ ಫಲಹೊಂದಲು ನನಗೆ ಸಾಧ್ಯವಾಗುವುದು. ಹೀಗಿರಲಾಗಿ ನಾನು ಯಾವುದನ್ನಾರಿಸಿಕೊಳ್ಳಬೇಕೆನ್ನುವುದು ನನಗೆ ತಿಳಿಯದು.

23ಈ ಎರಡರ ನಡುವೆ ಸಿಕ್ಕಿಕೊಂಡಿದ್ದೇನೆ, ಇಲ್ಲಿಂದ ಹೊರಟು ಕ್ರಿಸ್ತನ ಜೊತೆಯಲ್ಲಿರಬೇಕೆಂಬುದೇ ನನ್ನ ಅಭಿಲಾಷೆ, ಅದು ಅತ್ಯುತ್ತಮವಾಗಿದೆ.

24ಆದರೆ ನಾನಿನ್ನೂ ಶರೀರದಲ್ಲಿ ವಾಸಮಾಡಿಕೊಂಡಿರುವುದು ನಿಮಗೋಸ್ಕರ ಬಹು ಅವಶ್ಯಕವಾಗಿದೆ.

25ಆದ್ದರಿಂದ ನಿಮಗೆ ಕ್ರಿಸ್ತನಂಬಿಕೆಯಲ್ಲಿ ಅಭಿವೃದ್ಧಿಯೂ ಆನಂದವೂ ಉಂಟಾಗುವುದಕ್ಕೋಸ್ಕರ ನಾನು ಜೀವದಿಂದುಳಿದು ನಿಮ್ಮೆಲ್ಲರ ಬಳಿಯಲ್ಲಿರುವೆನೆಂದು ದೃಢವಾಗಿ ನಂಬಿದ್ದೇನೆ.

26ಹೀಗೆ ನಾನು ತಿರುಗಿ ನಿಮ್ಮ ಬಳಿಗೆ ಬರುವುದರಿಂದ ನೀವು ಕ್ರಿಸ್ತ ಯೇಸುವಿನ ವಿಷಯವಾಗಿ ಉಲ್ಲಾಸಪಡುವುದಕ್ಕೆ ನನ್ನಿಂದ ಅಧಿಕ ಆಸ್ಪದವಿರುವುದು.

27ಹೇಗೂ ಕ್ರಿಸ್ತನ ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳಿರಿ. ಆಗ ನಾನು ಬಂದು ನಿಮ್ಮನ್ನು ನೋಡಿದರೂ ಸರಿಯೇ, ದೂರದಲ್ಲಿದ್ದು ನಿಮ್ಮ ಸುದ್ದಿಯನ್ನು ಕೇಳಿದರೂ ಸರಿಯೇ, ನೀವು ನಿಮ್ಮ ವಿರೋಧಿಗಳಿಗೆ ಯಾವ ವಿಷಯದಲ್ಲಾದರೂ ಹೆದರದೆ ಏಕಮನಸ್ಸಿನಿಂದ ದೃಢವಾಗಿ ನಿಂತು ಸುವಾರ್ತೆಯಲ್ಲಿಟ್ಟ ನಂಬಿಕೆಗೋಸ್ಕರ ಐಕಮತ್ಯದಿಂದ ಹೋರಾಡುವವರಾಗಿದ್ದೀರೆಂದು ನಾನು ತಿಳಿದುಕೊಳ್ಳುವೆನು.

28ನೀವು ಹೀಗಿರುವುದು ವಿರೋಧಿಗಳ ನಾಶನಕ್ಕೂ, ನಿಮ್ಮ ರಕ್ಷಣೆಗೂ ಒಂದು ಗುರುತಾಗಿದೆ. ಅದು ದೇವರಿಂದಾದ ಮುನ್ಸೂಚನೆಯಾಗಿದೆ.

29ಕ್ರಿಸ್ತನ ಮೇಲೆ ನಂಬಿಕೆಯಿಡುವುದು ಮಾತ್ರವಲ್ಲ ಆತನಿಗೋಸ್ಕರ ಬಾಧೆಯನ್ನನುಭವಿಸುವುದು ನಿಮಗೆ ವರವಾಗಿ ದೊರಕಿದೆ.

30ಹೀಗೆ ನೀವು ನನ್ನಲ್ಲಿ ಕಂಡಂಥ ಮತ್ತು ಈಗ ನನ್ನ ಕುರಿತಾಗಿ ಕೇಳುವಂಥ ಅದೇ ಹೋರಾಟವು ನಿಮಗೂ ಉಂಟು.


  Share Facebook  |  Share Twitter

 <<  Philippians 1 >> 


Bible2india.com
© 2010-2024
Help
Dual Panel

Laporan Masalah/Saran