Bible 2 India Mobile
[VER] : [KANNADA]     [PL]  [PB] 
 <<  Daniel 7 >> 

1ಬಾಬೆಲಿನ ಅರಸನಾದ ಬೇಲ್ಶಚ್ಚರನ ಆಳ್ವಿಕೆಯ ಮೊದಲನೆಯ ವರುಷದಲ್ಲಿ ದಾನಿಯೇಲನು ಮಲಗಿದ್ದಾಗ ಒಂದು ಸ್ವಪ್ನವಾಯಿತು. ಕೂಡಲೆ ಅವನು ಆ ಕನಸನ್ನೂ ಅದರ ಮುಖ್ಯಾಂಶಗಳನ್ನೂ ಬರೆದು ಇಟ್ಟನು.

2ದಾನಿಯೇಲನು ಆ ಪ್ರಸ್ತಾಪವನ್ನೆತ್ತಿ ಇಂತೆಂದನು, <<ನಾನು ರಾತ್ರಿ ಕಂಡ ಕನಸಿನಲ್ಲಿ ಆಹಾ, ಚತುರ್ದಿಕ್ಕಿನ ಗಾಳಿಗಳೂ ಮಹಾಸಾಗರದ ಮೇಲೆ ರಭಸವಾಗಿ ಬೀಸಿ ಬಡಿಯುತ್ತಿದ್ದವು.

3ಒಂದಕ್ಕಿoತ ಒಂದು ವಿಲಕ್ಷಣವಾದ ನಾಲ್ಕು ದೊಡ್ಡ ಮೃಗಗಳು ಸಾಗರದೊಳಗಿಂದ ಬಂದವು.

4ಮೊದಲು ಕಾಣಿಸಿದ ಮೃಗವು ಸಿಂಹದ ಹಾಗಿತ್ತು, ಅದಕ್ಕೆ ಹದ್ದಿನಂತೆ ರೆಕ್ಕೆಗಳಿದ್ದವು; ನಾನು ನೋಡುತ್ತಿರುವಾಗಲೇ ಆ ರೆಕ್ಕೆಗಳು ಕೀಳಲ್ಪಟ್ಟವು; ಅದು ನೆಲದಿಂದ ಎತ್ತಲ್ಪಟ್ಟು ಮನುಷ್ಯನ ಹಾಗೆ ಎರಡು ಕಾಲುಗಳ ಮೇಲೆ ನಿಲ್ಲಿಸಲ್ಪಟ್ಟಿತು, ಅದಕ್ಕೆ ಮನುಷ್ಯನ ಹೃದಯವನ್ನು ಕೊಡಲ್ಪಟ್ಟಿತು.

5ಆಹಾ, ಇನ್ನೊಂದು ಮೃಗ ಎರಡನೆಯದು; ಅದು ಕರಡಿಯ ಹಾಗಿತ್ತು, ಒಂದು ಹೆಗಲನ್ನು ಮೇಲಕ್ಕೆ ಎತ್ತಿಕೊಂಡಿತ್ತು. ತನ್ನ ಬಾಯಲ್ಲಿ ಹಲ್ಲುಗಳ ನಡುವೆ ಮೂರು ಪಕ್ಕೆಲುಬುಗಳನ್ನು ಕಚ್ಚಿಕೊಂಡಿತ್ತು; ನೀನೆದ್ದು ಬೇಕಾದಷ್ಟು ಮಾಂಸವನ್ನು ತಿನ್ನು ಎಂದು ಅದಕ್ಕೆ ಹೇಳೋಣವಾಯಿತು.

6ಅನಂತರ ನಾನು ನೋಡುತ್ತಿರುವಲ್ಲಿ ಇಗೋ, ಚಿರತೆಯ ಹಾಗಿರುವ ಮತ್ತೊಂದು ಮೃಗವು ಕಾಣಿಸಿತು; ಅದರ ಪಕ್ಕಗಳಲ್ಲಿ ಪಕ್ಷಿಯ ರೆಕ್ಕೆಯಂತಿರುವ ನಾಲ್ಕು ರೆಕ್ಕೆಗಳಿದ್ದವು; ಆ ಮೃಗಕ್ಕೆ ನಾಲ್ಕು ತಲೆಗಳಿದ್ದವು, ಅದಕ್ಕೆ ದೊರೆತನವು ಕೊಡಲ್ಪಟ್ಟಿತು.

7ನಾನು ರಾತ್ರಿ ಕಂಡ ಕನಸಿನಲ್ಲಿ ಸ್ವಲ್ಪ ಹೊತ್ತಿನ ಮೇಲೆ ಆಹಾ, ನಾಲ್ಕನೆಯ ಮೃಗವು ಕಾಣಿಸಿತು; ಅದು ಭಯಂಕರವಾಗಿತ್ತು, ಹೆದರಿಸುವಂಥದಾಗಿತ್ತು, ಅಧಿಕ ಬಲವುಳ್ಳದ್ದಾಗಿತ್ತು. ಅದಕ್ಕೆ ಕಬ್ಬಿಣದ ದೊಡ್ಡ ಹಲ್ಲುಗಳಿದ್ದವು. ಅದು ನುಂಗುತ್ತಾ, ಚೂರುಚೂರು ಮಾಡುತ್ತಾ ಉಳಿದದ್ದನ್ನು ಕಾಲುಗಳಿಂದ ತುಳಿಯುತ್ತಾ ಇತ್ತು. ಅದು ಹಿಂದಿನ ಎಲ್ಲಾ ಮೃಗಗಳಿಗಿಂತ ವಿಲಕ್ಷಣವಾಗಿತ್ತು. ಅದಕ್ಕೆ ಹತ್ತು ಕೊಂಬುಗಳಿದ್ದವು.

8ನಾನು ಆ ಕೊಂಬುಗಳನ್ನು ನೋಡುತ್ತಿರುವಾಗಲೆ ಇಗೋ, ಅವುಗಳ ನಡುವೆ ಇನ್ನೊಂದು ಚಿಕ್ಕ ಕೊಂಬು ಮೊಳೆಯಿತು; ಅದಕ್ಕೆ ಎಡೆಮಾಡಿ ಕೊಡಲು ಮೊದಲಿನ ಕೊಂಬುಗಳಲ್ಲಿ ಮೂರು ಬೇರು ಸಹಿತ ಕೀಳಲ್ಪಟ್ಟವು. ಆಹಾ, ಈ ಕೊಂಬಿನಲ್ಲಿ ಮನುಷ್ಯನ ಕಣ್ಣುಗಳಂತಿರುವ ಕಣ್ಣುಗಳೂ, ಬಡಾಯಿ ಕೊಚ್ಚಿಕೊಳ್ಳುವ ಬಾಯಿಯೂ ಇದ್ದವು.

9<<ನಾನು ನೋಡುತ್ತಿದ್ದ ಹಾಗೆ ನ್ಯಾಯಾಸನಗಳು ಹಾಕಲ್ಪಟ್ಟವು, ಮಹಾವೃದ್ಧನೊಬ್ಬನು ಆಸೀನನಾದನು; ಆತನ ಉಡುಪು ಹಿಮದಂತೆ ಶುಭ್ರವಾಗಿತ್ತು. ಆತನ ತಲೆಯ ಕೂದಲು ನಿರ್ಮಲವಾದ ಬಿಳಿಯ ಉಣ್ಣೆಯಂತಿತ್ತು, ಆತನ ನ್ಯಾಯಾಸನವು ಅಗ್ನಿಜ್ವಾಲೆಗಳು, ಅದರ ಚಕ್ರಗಳು ಧಗಧಗಿಸುವ ಬೆಂಕಿಯೇ.

10ನ್ಯಾಯಾಸನದ ಮುಂದೆ ಉರಿಯ ಪ್ರವಾಹವು ಉಕ್ಕಿ ಹರಿದು ಬಂದಿತು. ಲಕ್ಷೋಪಲಕ್ಷ ದೂತರು ಆತನ ಸೇವೆಗೆ ಸಿದ್ಧರಾಗಿದ್ದರು. ಕೋಟ್ಯಾನುಕೋಟಿ ಕಿಂಕರರು ಆತನ ಮುಂದೆ ನಿಂತುಕೊಂಡಿದ್ದರು. ನ್ಯಾಯಸಭೆಯವರು ಕುಳಿತುಕೊಂಡರು, ಪುಸ್ತಕಗಳು ತೆರೆಯಲ್ಪಟ್ಟವು.

11ಆಗ ನಾನು ನೋಡುತ್ತಿರಲು ಇಗೋ, ಕೊಂಬು ಬಡಾಯಿ ಕೊಚ್ಚಿಕೊಂಡ ನಿಮಿತ್ತ ಆ ಕೊಂಬಿನ ಮೃಗವನ್ನು ಕೊಂದು, ಅದರ ಹೆಣವನ್ನು ಉರಿಯುವ ಬೆಂಕಿಗೆ ಹಾಕಿ ನಾಶಮಾಡಿದರು.

12ಉಳಿದ ಮೃಗಗಳ ದೊರೆತನವನ್ನು ತೆಗೆದುಬಿಟ್ಟರು. ಆದರೆ ಕೆಲವು ಕಾಲದ ಮಟ್ಟಿಗೆ, ತಕ್ಕ ಸಮಯ ಬರುವ ತನಕ, ಅವುಗಳ ಜೀವವನ್ನು ಉಳಿಸಿದರು.

13ನಾನು ಕಂಡ ರಾತ್ರಿಯ ಕನಸಿನಲ್ಲಿ ಇಗೋ, ಮನುಷ್ಯ ಕುಮಾರನಂತಿರುವವನು ಆಕಾಶದ ಮೇಘಗಳೊಂದಿಗೆ ಬಂದು ಆ ಮಹಾವೃದ್ಧನನ್ನು ಸಮೀಪಿಸಿದನು. ಅವನನ್ನು ಆತನ ಬಳಿಗೆ ತಂದರು.

14ಸಕಲ, ಜನಾಂಗ, ಕುಲ, ಭಾಷೆಗಳವರು ಅವನ ಸೇವೆ ಮಾಡಲೆಂದು ಅವನಿಗೆ ದೊರೆತನವೂ, ಘನತೆಯೂ, ರಾಜ್ಯವೂ ಕೊಡಲಾಯಿತು. ಅವನ ಆಳ್ವಿಕೆಯು ಅಂತ್ಯವಿಲ್ಲದ್ದು. ಶಾಶ್ವತವಾದದ್ದು, ಅವನ ರಾಜ್ಯವು ಎಂದಿಗೂ ಅಳಿಯದು.

15<<ದಾನಿಯೇಲನಾದ ನನ್ನ ಆತ್ಮವು ನನ್ನ ಶರೀರದೊಳಗೆ ವ್ಯಥೆಗೊಂಡಿತು, ನನ್ನ ಮನಸ್ಸಿನಲ್ಲಿ ಬಿದ್ದ ಕನಸುಗಳು ನನ್ನನ್ನು ಕಳವಳಪಡಿಸಿದವು.

16ನಾನು ಹತ್ತಿರ ನಿಂತಿದ್ದವರಲ್ಲಿ ಒಬ್ಬನ ಬಳಿಗೆ ಹೋಗಿ ಇವುಗಳ ಸತ್ಯಾರ್ಥವೇನೆಂದು ವಿಚಾರಿಸಲು ಅವನು ನನಗೆ,

17<ಆ ನಾಲ್ಕು ದೊಡ್ಡ ಮೃಗಗಳು ಲೋಕಸಾಗರದೊಳಗಿಂದ ಏರತಕ್ಕ ನಾಲ್ಕು ರಾಜ್ಯಗಳು.

18ಆದರೆ ರಾಜ್ಯವು ಪರಾತ್ಪರನ ಭಕ್ತರಿಗೆ ಲಭಿಸುವುದು, ಅವರೇ ಅದನ್ನು ತಲತಲಾಂತರಕ್ಕೂ ಶಾಶ್ವತವಾಗಿ ಅನುಭವಿಸುವರು> ಎಂದು ಆ ವಿಷಯಗಳ ತಾತ್ಪರ್ಯವನ್ನು ವಿವರಿಸಿ ತಿಳಿಸಿದನು.

19ಆ ಮೇಲೆ ಕಬ್ಬಿಣದ ಹಲ್ಲು, ತಾಮ್ರದ ಉಗುರು, ಉಳ್ಳಮೃಗವು ಕೆಲವನ್ನು ನುಂಗಿ ಕೆಲವನ್ನು ಚೂರುಚೂರು ಮಾಡಿ ಉಳಿದದ್ದನ್ನು ಕಾಲುಗಳಿಂದ ತುಳಿದು, ಇತರ ಮೃಗಗಳಿಗಿಂತ ವಿಲಕ್ಷಣವಾಗಿ ಅತಿ ಭಯಂಕರವಾಗಿತ್ತು.

20ಈ ನಾಲ್ಕನೆಯ ಮೃಗದ ವಿಷಯವಾಗಿಯೂ, ಅದರ ತಲೆಯ ಮೇಲಣ ಹತ್ತು ಕೊಂಬುಗಳ ವಿಷಯವಾಗಿಯೂ

21ನಾನು ನೋಡುತ್ತಿದ್ದ ಹಾಗೆ ಯಾವ ಕೊಂಬು ಮೊಳೆತು ಮೂರು ಕೊಂಬುಗಳನ್ನು ಬೀಳಿಸಿ,

22ದೇವಭಕ್ತರೊಂದಿಗೆ ಯುದ್ಧಮಾಡಿ, ಮಹಾವೃದ್ಧನು ಬಂದು ಪರಾತ್ಪರನ ಭಕ್ತರಿಗಾಗಿ ನ್ಯಾಯತೀರಿಸಿ ಅವರಿಗೆ ರಾಜ್ಯವನ್ನು ದೊರಕಿಸುವ ತನಕ ಅವರನ್ನು ಗೆಲ್ಲುತ್ತಾ ಬಂದಿತ್ತು.>>

23ಆಗ ಅವನು ನನಗೆ, <<ಆ ನಾಲ್ಕನೆಯ ಮೃಗವು ಲೋಕದಲ್ಲಿ ಉಂಟಾಗುವ ನಾಲ್ಕನೆಯ ರಾಜ್ಯ; ಅದು ಉಳಿದ ರಾಜ್ಯಗಳಿಗಿಂತ ವಿಲಕ್ಷಣವಾಗಿ ಲೋಕವನ್ನೆಲ್ಲಾ ನುಂಗಿ ತುಳಿದು ಚೂರುಚೂರು ಮಾಡುವುದು.

24ಆ ಹತ್ತು ಕೊಂಬುಗಳ ವಿಷಯವೇನೆಂದರೆ ಆ ರಾಜ್ಯದಲ್ಲಿ ಹತ್ತು ಮಂದಿ ಅರಸರು ಉಂಟಾಗುವರು, ಅವರ ತರುವಾಯ ಮತ್ತೊಬ್ಬನು ತಲೆದೋರುವನು. ಅವನು ಮೊದಲಿನ ಅರಸರಿಗಿಂತ ವಿಲಕ್ಷಣನಾಗಿ ಮೂವರು ಅರಸರನ್ನು ಸದೆಬಡೆಯುವನು.

25ಪರಾತ್ಪರನಿಗೆ ವಿರುದ್ಧವಾಗಿ ಕೊಚ್ಚಿಕೊಂಡು ಪರಾತ್ಪರನ ಭಕ್ತರನ್ನು ಬಾಧಿಸಿ ಕಟ್ಟಳೆಯ ಕಾಲಗಳನ್ನೂ, ಧರ್ಮವಿಧಿಗಳನ್ನೂ ಮಾರ್ಪಡಿಸಲು ಮನಸ್ಸು ಮಾಡುವನು; ಆ ಭಕ್ತರು ಒಂದುಕಾಲ, ಎರಡುಕಾಲ, ಅರ್ಧಕಾಲ ಅವನ ಕೈವಶವಾಗಿರುವರು.

26ಆ ಮೇಲೆ ನ್ಯಾಯಸಭೆಯು ಕುಳಿತು ಅವನ ದೊರೆತನವನ್ನು ಕಿತ್ತು ತೀರಾ ಧ್ವಂಸಮಾಡಿ ಕೊನೆಗಾಣಿಸಿ ಬಿಡುವುದು.

27ಆಗ ಅವನ ರಾಜ್ಯ, ಪ್ರಭುತ್ವಗಳೂ ಸಮಸ್ತ ಭೂಮಂಡಲದಲ್ಲಿನ ರಾಜ್ಯಗಳ ಮಹಿಮೆಯೂ ಪರಾತ್ಪರನ ಭಕ್ತ ಜನರಿಗೆ ಕೊಡಲ್ಪಡುವುದು; ಆತನ ರಾಜ್ಯವು ಶಾಶ್ವತ ರಾಜ್ಯ; ಸಕಲ ದೇಶಾಧಿಪತಿಗಳು ಆತನಿಗೆ ಅಧೀನರಾಗಿ ಸೇವೆಮಾಡುವರು>> ಎಂದು ಹೇಳಿದನು.

28ಈ ಕನಸಿನ ಪ್ರಸ್ತಾಪವು ಇಲ್ಲಿಗೆ ಮುಗಿಯಿತು. ದಾನಿಯೇಲನಾದ ನಾನು ನನ್ನ ಯೋಚನೆಗಳಿಂದ ಬಹು ಕಳವಳಗೊಂಡೆ. ನನ್ನ ಮುಖವು ಕಳೆಗುಂದಿತು. ಆದರೂ ನಡೆದ ಸಂಗತಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡೆ.


  Share Facebook  |  Share Twitter

 <<  Daniel 7 >> 


Bible2india.com
© 2010-2024
Help
Dual Panel

Laporan Masalah/Saran